ಗ್ರಾಮೀಣ ಪ್ರದೇಶಗಳ ಗೃಹಬಳಕೆ ಎಲ್ಪಿಜಿ ಗ್ರಾಹಕರಿಗೆ ಕೇಂದ್ರ ಸರಕಾರ ಶುಭ ಸುದ್ದಿ ನೀಡಿದೆ.
ದೇಶೀಯ ಎಲ್ಪಿಜಿ ಸಿಲಿಂಡರ್ ರೀ ಫಿಲ್ಲಿಂಗ್ ಬುಕಿಂಗ್ಗಾಗಿ ಗ್ರಾಮೀಣ ಭಾಗದಲ್ಲಿಇದ್ದ ಕಡ್ಡಾಯ ಕಾಯುವ ಅವಧಿಯನ್ನು 45 ದಿನಗಳಿಂದ 25 ದಿನಕ್ಕೆ ಇಳಿಸಿ ಸರಕಾರ ಆದೇಶ ಹೊರಡಿಸಿದೆ.
ಇನ್ನು ಮುಂದೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿಒಂದೇ ಬಗೆಯ ಅಂದರೆ 25 ದಿನಗಳ ಅಂತರದಲ್ಲಿಎಲ್ಪಿಜಿ ರೀಫಿಲ್ ಬುಕ್ ಮಾಡಬಹುದಾಗಿದೆ. ಕೇಂದ್ರ ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಪ್ರವಾಸೋದ್ಯಮ ಖಾತೆ ಸಹಾಯಕ ಸಚಿವ ಸುರೇಶ್ ಗೋಪಿ ಈ ಮಾಹಿತಿಯನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ.
”ಈ ಬದಲಾವಣೆಯನ್ನು ತಕ್ಷಣದಿಂದಲೇ ಜಾರಿಗೆ ತರುವಂತೆ ಸರಕಾರವು ತೈಲ ಮಾರಾಟ ಕಂಪನಿಗಳಿಗೆ ಸೂಚಿಸಿದೆ,” ಎಂದು ಹೇಳಿದ್ದಾರೆ.
ಮಧ್ಯಪ್ರಾಚ್ಯ ಬಿಕ್ಕಟ್ಟಿನ ಸಂದರ್ಭದಲ್ಲಿಎಲ್ಪಿಜಿ ಪೂರೈಕೆ ಮೇಲೆ ಒತ್ತಡ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ರೀಫಿಲ್ ಬುಕಿಂಗ್ ಸಮಯದ ಅಂತರವನ್ನು ನಗರ ಪ್ರದೇಶಗಳಲ್ಲಿ 25 ದಿನ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನ ಎಂದು ನಿಗದಿಪಡಿಸಲಾಗಿತ್ತು. ಪ್ರಸ್ತುತ ಎಲ್ಪಿಜಿ ಪೂರೈಕೆ ಪರಿಸ್ಥಿತಿ ಸುಧಾರಿಸಿದ್ದು, ಕೇಂದ್ರ ಸರಕಾರ ಈ ನಿರ್ಬಂಧವನ್ನು ತೆರವುಗೊಳಿಸಿದೆ.
ಪಶ್ಚಿಮ ಏಷ್ಯಾ ಭಾಗದಲ್ಲಿ ಉಂಟಾಗಿದ್ದ ರಾಜಕೀಯ ಅಸ್ಥಿರತೆ ಮತ್ತು ಬಿಕ್ಕಟ್ಟಿನಿಂದಾಗಿ ಜಾಗತಿಕ ಮಟ್ಟದಲ್ಲಿ ಎಲ್ಪಿಜಿ ಆಮದು ಹಾಗೂ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿತ್ತು. ಆ ಸಂದರ್ಭದಲ್ಲಿ ಸಿಲಿಂಡರ್ ಕೊರತೆ ಉಂಟಾಗದಂತೆ ತಡೆಯಲು ಮತ್ತು ಜನರು ಆತಂಕದಿಂದ ಮುಗಿಬಿದ್ದು ಸಿಲಿಂಡರ್ ಬುಕ್ ಮಾಡುವುದನ್ನು ತಪ್ಪಿಸಲು ಸರ್ಕಾರ ತಾತ್ಕಾಲಿಕ ನಿಯಮ ಜಾರಿಗೆ ತಂದಿತ್ತು.
ಇದರಿಂದಾಗಿ ನಗರ ಮತ್ತು ಗ್ರಾಮೀಣ ಪ್ರದೇಶ ಎಂಬ ಬೇಧವಿಲ್ಲದೆ, ಇಡೀ ದೇಶಾದ್ಯಂತ ಎಲ್ಲಾ ಗೃಹಬಳಕೆದಾರರಿಗೂ 25 ದಿನಗಳ ಏಕರೂಪದ ಬುಕಿಂಗ್ ನಿಯಮ ಅನ್ವಯವಾಗಲಿದೆ. ಗ್ರಾಮೀಣ ಭಾಗದ ಅವಿಭಕ್ತ ಹಾಗೂ ಹೆಚ್ಚು ಸದಸ್ಯರಿರುವ ಕುಟುಂಬಗಳಲ್ಲಿ ಗ್ಯಾಸ್ ಬೇಗ ಖಾಲಿಯಾಗುತ್ತಿತ್ತು. ಅಂಥವರಿಗೆ 45 ದಿನಗಳವರೆಗೆ ಕಾಯುವ ತೊಂದರೆ ತಪ್ಪಲಿದೆ.
ಗ್ರಾಹಕರು ಸಿಲಿಂಡರ್ ಪಡೆದ ದಿನಾಂಕದಿಂದ 25 ದಿನ ಪೂರ್ಣಗೊಂಡಿದ್ದರೆ ಸಾಕು, ಯಾವುದೇ ಅಡೆತಡೆಯಿಲ್ಲದೆ ಮುಂದಿನ ಸಿಲಿಂಡರ್ ಅನ್ನು ಸರಳವಾಗಿ ಬುಕ್ ಮಾಡಿಕೊಳ್ಳಬಹುದು.





