ದೀಪಾ ಶಾಟ್‌ಪುಟರ್‌ ಮಾತ್ರವಲ್ಲ…. ಸ್ವಿಮ್ಮರ್‌, ಬೈಕರ್‌, ಜ್ಯಾವಲಿನ್‌  ಡಿಸ್ಕಸ್‌ ಥ್ರೋವರ್‌ ಕೂಡ! ಪ್ಯಾರಾಲಿಂಪಿಕ್‌ ಕ್ರೀಡೆಗಳಲ್ಲಿ ಆಕೆಯದು ಉಲ್ಲೇಖನೀಯ ಹೆಸರು. ಹೀಗಾಗಿ ಆಕೆಗೆ ಭಾರತ ಸರ್ಕಾರ ಅರ್ಜುನ ಪ್ರಶಸ್ತಿ ನೀಡಿ ಸನ್ಮಾನಿಸಿತು, ಈ ವರ್ಷ ಆಕೆಗೆ ಪದ್ಮಶ್ರೀ ಪ್ರಶಸ್ತಿ ಸಹ ಲಭಿಸಿತು.

ಇಂಥ ವಿಕಲಚೇತನರನ್ನು ನೋಡಿ ಅಯ್ಯೋ ಪಾಪ ಎನ್ನುವ ಈ ಸಮಾಜದ ಧೋರಣೆಯನ್ನು ತಮ್ಮ ಧೈರ್ಯ, ಇಚ್ಛಾಶಕ್ತಿಗಳ ಆಧಾರದಿಂದ ಬದಲಾಯಿಸಿದ ದೇಶದ ಪ್ರಥಮ ಮಹಿಳಾ ಪ್ಯಾರಾಲಿಂಪಿಕ್‌ ಮೆಡಲಿಸ್ಟ್ ದೀಪಾ ಮಲಿಕ್‌ರ ಜೀವನ ಅನೇಕ  ಸವಾಲುಗಳಿಂದ ಕೂಡಿತ್ತು. ಈಕೆ ರಿಯೋದಲ್ಲಿ ಡಿಸ್ಕಸ್‌ ಥ್ರೋ ಸ್ಪರ್ಧೆಯಲ್ಲಿ ರಜತ ಪದಕ ಗಳಿಸಿದ ನಂತರ ಹೊಸ ಇತಿಹಾಸ ಸೃಷ್ಟಿಸಿದರು. ಈ ರೀತಿ ಈಕೆ ಪ್ಯಾರಾಲಿಂಪಿಕ್‌ ಪದಕ ಗಳಿಸಿದ ದೇಶದ ಪ್ರಥಮ ಮಹಿಳಾ ಕ್ರೀಡಾಪಟು ಎನಿಸಿದರು. ದೀಪಾ ಸ್ಪೈನಲ್ ಟ್ಯೂಮರ್‌ ಜೊತೆ ಹೋರಾಡಿ ಯಶಸ್ವಿ ಎನಿಸಿದರು, ಕ್ರೀಡಾ ಲೋಕದಲ್ಲಂತೂ ಪದಕಗಳ ರಾಶಿಯನ್ನೇ ಪಡೆದರು. ಅವರೊಂದಿಗೆ ನಡೆಸಿದ ಸಂವಾದದ ಮುಖ್ಯಾಂಶ :

ನಿಮ್ಮನ್ನು ನೀವು ಗಮನಿಸಿಕೊಳ್ಳುವುದರ ಜೊತೆಗೆ ಇಬ್ಬರು ಹೆಣ್ಣುಮಕ್ಕಳನ್ನೂ ಸಂಭಾಳಿಸುತ್ತಾ ಕ್ರೀಡಾ ತಾರೆಯಾಗಿ ಮಿಂಚಲು ಆಂತರಿಕ ಶಕ್ತಿ ಹೇಗೆ ಲಭಿಸಿತು?

ನಾನು ಈ ರೀತಿ ಏನಾದರೂ ಸಾಧಿಸಿದ್ದಿದ್ದರೆ ಅದು ಕೇವಲ 3 ವಿಷಯಗಳಿಂದ. ಮೊದಲು, ನನ್ನತ್ತ ಸಮಾಜ ತೋರುತ್ತಿದ್ದ ನಕಾರಾತ್ಮಕ ದೃಷ್ಟಿಕೋನ ಬದಲಿಸಬೇಕಿತ್ತು. ಅದರಲ್ಲಿ ಯಾವಾಗಲೂ ನನ್ನತ್ತ `ಅಯ್ಯೋ ಪಾಪ’ ಎಂಬ ಮರುಕವೇ ತುಂಬಿರುತ್ತಿತ್ತು. ಈ ರೀತಿ ಅಂಗವಿಕಲೆ ಆಗಲು ನನ್ನದೇನೂ ದೋಷವಿಲ್ಲ, ನಾನು ಅದರೊಂದಿಗೆ ಜೀವಿಸಿ ಗೆಲ್ಲಬೇಕಿದೆ ಎಂದು ಸಾಧಿಸಿ ತೋರಿಸಿದೆ. ನಮ್ಮಂಥ ಜನ ಕೂಡ ಬಹಳಷ್ಟು ಸಾಧಿಸಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟೆ. ಆತ್ಮವಿಶ್ವಾಸದ ಮುಂದೆ ಇದೇನೂ ಹಿರಿದಲ್ಲ ಎಂದು ನಿರೂಪಿಸಿದೆ.

ಎರಡನೆಯದು, ನನ್ನ ಇಬ್ಬರು ಹೆಣ್ಣುಮಕ್ಕಳೇ ನನ್ನ ನಿಜವಾದ ತಾಕತ್ತು! ಅವರನ್ನು ಸಂಭಾಳಿಸುವುದೇ ನನ್ನ ಜೀವನದ ಧೀಶಕ್ತಿ. ನಮ್ಮಮ್ಮ ಅಸಹಾಯಕಳು ಎಂಬ ಭಾವನೆ ಅವರಿಗೆ ಬರದಂತೆ ಸಾಕಿದ್ದೇನೆ. ಮೂರನೆಯದು, ಕ್ರೀಡೆಗಳತ್ತ ನನಗಿದ್ದ ಅತಿ ಉತ್ಸಾಹ! ಈ ಸ್ಥಿತಿಯಲ್ಲಿ ಹೋರಾಡಲು ಅದು ನನಗೆ ಅನಂತ ಶಕ್ತಿ ತುಂಬಿತು.

ನಿಮ್ಮ ಪಾಲಕರ ಸಪೋರ್ಟ್‌ ಹೇಗಿತ್ತು?

ಇಂದು ಅವರ ಬೆಂಬಲದಿಂದಲೇ ನಾನು ಈ ಮಟ್ಟ ತಲುಪಿದ್ದೇನೆ. ನಾನು 2 ವರ್ಷದವಳಾಗಿದ್ದಾಗ ಮೊದಲ ಸಲ ನನಗೆ ಟ್ಯೂಮರ್‌ ಕಾಣಿಸಿಕೊಂಡಿತ್ತು. ಇದನ್ನು ಮೊದಲು ಪತ್ತೆಹಚ್ಚಿದ್ದು ಅಪ್ಪಾಜಿ. ನಾನು ಮನೆಯಲ್ಲಿ ಸದಾ ನಿರುತ್ಸಾಹದಿಂದ ಕುಳಿತಿರುವುದನ್ನು ಕಂಡು ಅವರು ಕೂಡಲೇ ನನ್ನನ್ನು ಚೈಲ್ಡ್ ಮನೋವೈಜ್ಞಾನಿಕರ ಬಳಿ ಕರೆದೊಯ್ದರು. ನನ್ನ ರೋಗದ ಬಗ್ಗೆ ಗೊತ್ತಾದಾಗ ಪುಣೆ ಆರ್ಮಿ ಕಮಾಂಡ್‌ ಹಾಸ್ಪಿಟಲ್‌ನಲ್ಲಿ ನನಗೆ ಚಿಕಿತ್ಸೆ ಕೊಡಿಸಿದರು. ನಾನು ಹಾಸಿಗೆಯಲ್ಲಿ ಇದ್ದಷ್ಟು ದಿನ ಅಪ್ಪಾಜಿ ನನ್ನ ಬಳಿಯೇ ಕೂತಿರುತ್ತಿದ್ದರು. ಅವರ ಹೆಸರು ಬಿ.ಕೆ. ನಾಗಪಾಲ್‌, ಆರ್ಮಿ ಕರ್ನಲ್. ನಮ್ಮಮ್ಮ ಸಹ ಆ ಕಾಲದಲ್ಲೇ ರೈಫಲ್ ಶೂಟರ್‌ ಎನಿಸಿದ್ದರು. ಮದುವೆ ನಂತರ 1999ರಲ್ಲಿ ಎರಡನೇ ಸಲ ನನ್ನ ಸ್ಪೈನಲ್ ಕಾರ್ಡ್‌ ಟ್ಯೂಮರ್‌ನ ಸರ್ಜರಿ ನಡೆದಾಗಲೂ ಅಪ್ಪಾಜಿ ನನ್ನ ಬೆಂಗಾವಲಿಗೆ ನಿಂತಿದ್ದರು.

ನೀವು ನಿಮ್ಮ ಕುಟುಂಬವನ್ನು ಹೇಗೆ ಸಂಭಾಳಿಸುತ್ತೀರಿ?

ನನ್ನ ಪತಿ ಸಹ ಆರ್ಮಿ ಕರ್ನಲ್. ನನ್ನ ದೊಡ್ಡ ಮಗಳು ದೇವಿಕಾ 2 ವರ್ಷದವಳಾಗಿದ್ದಾಗ ಅವಳಿಗೆ ಆ್ಯಕ್ಸಿಡೆಂಟ್‌ ಆಯ್ತು. ಹ್ಯಾಂಡ್‌ ಇಂಜುರಿ ಕಾರಣ ಅವಳ ಬಲ ಭಾಗ ಪೂರ್ತಿ ನಿಷ್ಕ್ರಿಯವಾಯಿತು. ಇದನ್ನು ನೋಡಿ ನಾನು ಎದೆಗುಂದಲಿಲ್ಲ. ನಾನೇ ಅವಳನ್ನು ನೋಡಿಕೊಂಡೆ, ಫಿಸಿಯೋಥೆರಪಿ ನೀಡುತ್ತಿದ್ದೆ, ಇಂದು ಅವಳು ಸಂಪೂರ್ಣ ಗುಣಮುಖಳಾಗಿ ಲಂಡನ್ನಿನಲ್ಲಿ ಪಿಜಿ ಮಾಡುತ್ತಿದ್ದಾಳೆ.

ಎರಡನೇ ಮಗಳು ದೀಪಿಕಾ ಸಹ ಪ್ಯಾರಲೈಸ್‌ ಆದವಳು. ಅವಳನ್ನೂ ಹೀಗೆ ಕಾಪಾಡಿಕೊಂಡೆ. ಇಂದು ಅವಳು ವಿದೇಶದಲ್ಲಿ ಗಗನಸಖಿ ಆಗಿ ವಿಶ್ವವೆಲ್ಲ ಸುತ್ತಾಡುತ್ತಿದ್ದಾಳೆ. ನಾನು ಇಬ್ಬರು ಮಕ್ಕಳನ್ನು ಹೊತ್ತು ಹೆತ್ತು ಸಾಕಿ ಸಲಹಿದ್ದಲ್ಲದೆ, ವಿದ್ಯಾಬುದ್ಧಿ ಕಲಿಸಿ ಸಾಯುತ್ತಿದ್ದವರನ್ನು ಬದುಕಿಸಿಕೊಂಡಿದ್ದೇನೆ. 3ನೇ ಸರ್ಜರಿ ನಂತರ ನಾನು ಶಾಶ್ವತ ವೀಲ್‌ಚೇರ್‌ ಹಿಡಿದೆ, ಆದರೆ  ಎದೆಗುಂದಲಿಲ್ಲ.

ನಿಮಗೆ ಕ್ರೀಡಾಸಕ್ತಿ ಬಂದದ್ದು ಹೇಗೆ?

ಬಾಲ್ಯದಿಂದಲೇ ನನಗೆ ಆಟೋಟಗಳಲ್ಲಿ ಅಪಾರ ಆಸಕ್ತಿ. ಆದರೆ 2006ರ ನಂತರ ನಾನು ಹಿಂದಿರುಗಿ ನೋಡುವ ಪ್ರಮೇಯ ಬರಲಿಲ್ಲ. ಸರ್ಕಾರದೆದುರು ನನ್ನ ಹಕ್ಕುಗಳಿಗಾಗಿ ಹೋರಾಡಿದೆ. ನನಗಾಗಿ ಹೊಸ ನಿಯಮಗಳನ್ನು ಸ್ಯಾಂಕ್ಷನ್‌ ಮಾಡಿಸಿಕೊಂಡೆ. ನಾನು ಮೊದಲು ಮಹಾರಾಷ್ಟ್ರ ರಾಜ್ಯದ ಪರವಾಗಿ ಆಡುತ್ತಿದ್ದೆ. 2006ರಲ್ಲಿ ಒಬ್ಬ ಸಮರ್ಥ ಈಜುಪಟು ಎಂದು ನನಗೆ  ಮೊದಲ ಪದಕ ಸಿಕ್ಕಿತು. ಆಗ ಭಾರತದ ಪರವಾಗಿ ನಾನೊಬ್ಬಳೇ ವಿಕಲಚೇತನ ಮಹಿಳಾ ಕ್ರೀಡಾಪಟು ಎನಿಸಿದೆ.

– ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ