ಭಾರತೀಯ ಮಹಿಳಾ ಹಾಕಿ ತಂಡದ ಫಾರ್ವರ್ಡ್ ಆಟಗಾರ್ತಿ ದೀಪಿಕಾ ಪ್ರತಿಷ್ಠಿತ ಪಾಲಿಗ್ರಾಸ್ ಮ್ಯಾಜಿಕ್ ಸ್ಕಿಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಳೆದ ಋತುವಿನ ಎಫ್‌ಐಎಚ್ ಹಾಕಿ ಪ್ರೊ ಲೀಗ್‌ನಲ್ಲಿ ನೆದರ್ ಲ್ಯಾಂಡ್ಸ್ ವಿರುದ್ಧ ಏಕಾಂಗಿಯಾಗಿ ಬಾರಿಸಿದ ಅಮೋಘ ಫೀಲ್ಡ್ ಗೋಲ್‌ಗಾಗಿ ಅವರಿಗೆ ಈ ಪ್ರಶಸ್ತಿ ಲಭಿಸಿದೆ.21 ವರ್ಷದ ದೀಪಿಕಾ ಭುವನೇಶ್ವರದಲ್ಲಿ ನಡೆದ ವಿಶ್ವದ ನಂಬರ್ ಒನ್ ತಂಡ ನೆದರ್ ಲ್ಯಾಂಡ್ಸ್ ವಿರುದ್ಧದ ಪಂದ್ಯದ 35ನೇ ನಿಮಿಷದಲ್ಲಿ ಆ ಅಮೋಘ ಗೋಲನ್ನು ಬಾರಿಸಿದ್ದರು. ನಿಗದಿತ ಅವಧಿಯಲ್ಲಿ 2-2ರಲ್ಲಿ ಡ್ರಾ ಆಗಿತ್ತು. ಬಳಿಕ ನಡೆದ ಶೂಟೌಟ್‌ನಲ್ಲಿ ನೆದರ್ ಲ್ಯಾಂಡ್ಸ್ ಜಯ ಗಳಿಸಿತು. ಆದರೂ ಅವರ ಆ ಗೋಲು ಎಲ್ಲರ ನೆನಪಿನಲ್ಲಿ ಉಳಿಯುವಂತೆ ಮಾಡಿತ್ತು.
ಭಾರತವು 0-2ರಿಂದ ಹಿನ್ನಡೆಯಲ್ಲಿದ್ದಾಗ, ದೀಪಿಕಾ 35ನೇ ನಿಮಿಷದಲ್ಲಿ ಎದುರಾಳಿ ತಂಡದ ರಕ್ಷಣಾ ವ್ಯೆಹವನ್ನು ಭೇದಿಸಿ ಆ ಅಮೋಘ ಗೋಲನ್ನು ಬಾರಿಸಿದ್ದರು. ಎಫ್‌ಐಎಚ್ ಹಾಕಿ ಪ್ರೊ ಲೀಗ್‌ನಲ್ಲಿ ಬಾರಿಸಲಾಗುವ ಅತ್ಯಂತ ಸೃಜನಾತ್ಮಕ ಮತ್ತು ಕೌಶಲಭರಿತ ಗೋಲಿಗಾಗಿ ಪಾಲಿಗ್ರಾಸ್ ಮ್ಯಾಜಿಕ್ ಸ್ಕಿಲ್ ಪ್ರಶಸ್ತಿಯನ್ನು ನೀಡಲಾಗುತ್ತದೆ. ಅದನ್ನು ಜಗತ್ತಿನಾದ್ಯಂತವಿರುವ ಹಾಕಿ ಅಭಿಮಾನಿಗಳು ಮತದಾನದ ಮೂಲಕ ನಿರ್ಧರಿಸುತ್ತಾರೆ.