ಸೋಮವಾರ ಮುಂಜಾನೆ ದೆಹಲಿಯ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (AQI) 637 ರ ಅಪಾಯಕಾರಿ ಮಟ್ಟ ದಾಖಲಿಸಿದೆ. ಇನ್ನು ಆತಂಕಕಾರಿ ವಿಷಯವೆಂದರೆ, ತಡರಾತ್ರಿ 1.30ರ ಸುಮಾರಿಗೆ ಮಾಲಿನ್ಯದ ಮಟ್ಟ 1,331 ಕ್ಕೆ ಏರಿಕೆ ಕಂಡು ಅತ್ಯಂತ ಕರಾಳ ಸ್ಥಿತಿಗೆ ತಲುಪಿತ್ತು.

ಬೆಳಗಿನ ವೇಳೆಯಲ್ಲೇ ಶೇಕಡಾ 69ರಷ್ಟು ಹೆಚ್ಚಾಗಿರುವುದು ಹಬ್ಬದ ಬಳಿಕ ದೆಹಲಿಯ ವಾಯುಮಾಲಿನ್ಯ ಪರಿಸ್ಥಿತಿ ಬಹಳಷ್ಟು ಹದಗೆಟ್ಟಿದೆ.

ಪಟಾಕಿ ಸಿಡಿಸುವ ಬಗ್ಗೆ ನಿರ್ಬಂಧಗಳಿದ್ದರೂ ಭಾನುವಾರ ಸಂಜೆ ರಾಷ್ಟ್ರ ರಾಜಧಾನಿಯ ಹಲವು ಪ್ರದೇಶಗಳಲ್ಲಿ ಜನರು ನಿರಂತರವಾಗಿ ಪಟಾಕಿ ಸಿಡಿಸಿದ್ದಾರೆ. ಇದರಿಂದ ಈಗಾಗಲೇ ಕಲುಷಿತಗೊಂಡಿದ್ದ ವಾತಾವರಣಕ್ಕೆ ಮತ್ತಷ್ಟು ಹೊಗೆ ಹಾಗೂ ಸೂಕ್ಷ್ಮ ಧೂಳಿನ ಕಣಗಳು ಸೇರಿಕೊಂಡಿವೆ.

ದೆಹಲಿಯ ವಿವಿಧ ವಾಯು ಗುಣಮಟ್ಟ ಮೇಲ್ವಿಚಾರಣಾ ಕೇಂದ್ರಗಳಲ್ಲೂ ಇದೇ ರೀತಿಯ ಭಾರೀ ಮಾಲಿನ್ಯ ದಾಖಲಾಗಿದೆ. ನಗರದಾದ್ಯಂತ ದಟ್ಟವಾದ ಬೂದು ಹೊಗೆ ಆವರಿಸಿದ್ದು, ರಸ್ತೆಗಳು ಹಾಗೂ ಎತ್ತರದ ಕಟ್ಟಡಗಳು ಮಂಜಿನ ಪದರದ ಹಿಂದೆ ಮರೆಯಾಗಿವೆ. ಇದರಿಂದ ವಾಹನ ಸವಾರರಿಗೆ ಮಾರ್ಗದ ಗೋಚರತೆಯೂ ಕಡಿಮೆಯಾಗಿದೆ.ಸುಪ್ರೀಂಕೋರ್ಟ್ ಸಾಂಪ್ರದಾಯಿಕ ಪಟಾಕಿಗಳ ಬಳಕೆಗೆ ನಿರ್ಬಂಧ ವಿಧಿಸಿತ್ತು. ನಿಗದಿತ ಷರತ್ತುಗಳೊಂದಿಗೆ ಶನಿವಾರ ಮತ್ತು ಭಾನುವಾರ ಮೂರು ಗಂಟೆಗಳ ಅವಧಿಯಲ್ಲಿ ಅನುಮೋದಿತ ಹಸಿರು ಪಟಾಕಿಗಳನ್ನು ಸಿಡಿಸಲು ಅವಕಾಶ ನೀಡಿತ್ತು.

ಸಾಮಾನ್ಯ ಪಟಾಕಿಗಳಿಗೆ ಹೋಲಿಸಿದರೆ ಹಸಿರು ಪಟಾಕಿಗಳಿಂದ ಹೊರಸೂಸುವ ಮಾಲಿನ್ಯ ಕಡಿಮೆಯಿದ್ದರೂ ಅವು ಸಂಪೂರ್ಣವಾಗಿ ಮಾಲಿನ್ಯರಹಿತವಲ್ಲ. ಅವುಗಳಿಂದಲೂ ಸೂಕ್ಷ್ಮ ಧೂಳಿನ ಕಣಗಳು ಸೇರಿದಂತೆ ವಿವಿಧ ಮಾಲಿನ್ಯಕಾರಕಗಳು ವಾತಾವರಣ ಸೇರುತ್ತವೆ.

ರಾಷ್ಟ್ರೀಯ ರಾಜಧಾನಿ ವಲಯದಲ್ಲಿ ಚಳಿಗಾಲದ ತಿಂಗಳುಗಳಲ್ಲಿ ವಾಯುಮಾಲಿನ್ಯ ತೀವ್ರಗೊಳ್ಳುವುದು ಪ್ರತಿವರ್ಷದ ಸಮಸ್ಯೆ. ದೀಪಾವಳಿ ಪಟಾಕಿಗಳು, ವಾಹನಗಳ ಹೊಗೆ, ಕೈಗಾರಿಕಾ ಚಟುವಟಿಕೆಗಳು, ನಿರ್ಮಾಣ ಕಾಮಗಾರಿಗಳ ಧೂಳು ಹಾಗೂ ನೆರೆಯ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯ ಸುಡುವುದು ಇದಕ್ಕೆ ಪ್ರಮುಖ ಕಾರಣ.

ಅಕ್ಟೋಬರ್ ಮತ್ತು ನವೆಂಬರ್​ನಲ್ಲಿ ತಾಪಮಾನ ಕುಸಿತ, ಗಾಳಿಯ ವೇಗ ಕಡಿಮೆಯಾಗುವುದು ಹಾಗೂ ವಾತಾವರಣದಲ್ಲಿ ಗಾಳಿಯ ಚಲನೆ ಸ್ಥಗಿತಗೊಳ್ಳುವುದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುತ್ತದೆ. ಇದರಿಂದ ಮಾಲಿನ್ಯಕಾರಕಗಳು ವಾತಾವರಣದಿಂದ ಹೊರಹೋಗದೆ ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಟ್ಟ ಹೊಗೆಯ ಪದರ ಹಲವು ದಿನಗಳ ಕಾಲ ಉಳಿಯುತ್ತದೆ.

ಮಾಲಿನ್ಯ ನಿಯಂತ್ರಣಕ್ಕಾಗಿ ಅಧಿಕಾರಿಗಳು ನಿರ್ಮಾಣ ಚಟುವಟಿಕೆಗಳ ಮೇಲೆ ನಿರ್ಬಂಧ, ಡೀಸೆಲ್ ಜನರೇಟರ್‌ಗಳ ಬಳಕೆಗೆ ಕಡಿವಾಣ ಹಾಗೂ ಪಟಾಕಿ ಸಿಡಿಸುವುದರ ಮೇಲೆ ನಿಯಂತ್ರಣ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಆದರೂ ಪ್ರತಿವರ್ಷ ಚಳಿಗಾಲದಲ್ಲಿ ಉಂಟಾಗುವ ತೀವ್ರ ವಾಯುಮಾಲಿನ್ಯವನ್ನು ತಡೆಯಲು ಈ ಕ್ರಮಗಳು ಪರಿಣಾಮಕಾರಿಯಾಗಿಲ್ಲ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ