ದಂತ ವೈದ್ಯಕೀಯ ಕ್ಷೇತ್ರಕ್ಕೆ ಅತ್ಯುತ್ತಮ ಭವಿಷ್ಯವಿದೆ. ಇದರಿಂದ ಸಾಕಷ್ಟು ಜನರಿಗೆ ಉತ್ತಮ ದಂತ ಆರೋಗ್ಯ ಸೇವೆ ನೀಡಬಹುದು. ಆದರೆ ಗ್ರಾಮೀಣ ಭಾಗದಲ್ಲಿ ಅದರಲ್ಲೂ ಹಳ್ಳಿಗಳಲ್ಲಿ ಈ ಕ್ಷೇತ್ರ ಹೆಚ್ಚು ತಲುಪದಿರುವುದು ಆತಂಕದ ವಿಷಯ. ಈ ನಿಟ್ಟಿನಲ್ಲಿ ಸರ್ಕಾರ ಮುಂದಿನ ದಿನಗಳಲ್ಲಿ ಉತ್ತಮ ಯೋಜನೆ ರೂಪಿಸಲಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಆರ್ ಪಾಟೀಲ್ ತಿಳಿಸಿದ್ದಾರೆ
ಸರ್ಕಾರಿ ದಂತ ವೈದ್ಯಕೀಯ ಕಾಲೇಜಿನ ಆವರಣದ ಡಾ. ಎಸ್. ರಾಮಚಂದ್ರ ಆಡಿಟೋರಿಯಂನಲ್ಲಿ ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಆಯೋಜಿಸಿದ ಡೆಂಟಿಸ್ಟ್ ಶೃಂಗಸಭೆ-2025 ರಲ್ಲಿ ಸಚಿವರು ಮಾತನಾಡಿದರು. ದಂತವೈದ್ಯಕೀಯ ಎನ್ನುವುದು ಅತ್ಯಂತ ಸೂಕ್ಷ್ಮ ಮತ್ತು ನಿಖರತೆ ಹೆಚ್ಚು ಕೋರುವ ವಿಷಯವಾಗಿದೆ. ದಂತ ಆರೋಗ್ಯದ ಬಗ್ಗೆ ಜನಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ಹಲ್ಲು ನೋವು ಬಂದರೆ ಅದನ್ನು ತಡೆದುಕೊಳ್ಳಲು ಸಾಧ್ಯವಿಲ್ಲ. ಇದು ಎಲ್ಲರಿಗೂ ಅನುಭವಕ್ಕೆ ಬಂದಿರಬಹುದು. ಇದಕ್ಕೆ ಚಿಕಿತ್ಸೆ ನೀಡುವ ದಂತ ವೈದ್ಯರು ಎಂದಿಗೂ ಸದಾ ಸ್ಮರಣೀಯರು ಎಂದರು.
ನಗರ, ಜಿಲ್ಲಾ, ತಾಲೂಕು ಮಟ್ಟದಲ್ಲಿ ದಂತ ವೈದ್ಯ ಸೇವೆ ಲಭ್ಯವಾಗುತ್ತಿದೆ. ಆದರೆ ಹಳ್ಳಿಗಳಲ್ಲಿ ಇದು ತಲುಪುತ್ತಿಲ್ಲ. ಹಲ್ಲು, ಒಸಡಿನ ಆರೋಗ್ಯ ಕಾಪಾಡಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಿ ದಂತ ವೈದ್ಯ ಸೇವೆಯನ್ನು ಹಳ್ಳಿ ಹಳ್ಳಿಗೂ ಕೊಂಡೊಯ್ಯಬೇಕಾಗಿದೆ ಎಂದು ಡಾ. ಪಾಟೀಲ್ ವಿವರಿಸಿದರು.
ಯುವ ದಂತ ವೈದ್ಯರ ಮೇಲೆ ಈ ಜವಾಬ್ದಾರಿ ಹೆಚ್ಚಾಗಿದೆ. ಈಗ ತಾನೇ ಕಾಲೇಜಿನಿಂದ ದಂತ ವೈದ್ಯ ಎಂಬ ಬಿರುದು ಪಡೆದು ಹೋಗುವವರು ಎಲ್ಲ ವರ್ಗದ ಜನರಿಗೆ ಇದನ್ನು ತಲುಪಿಸಬೇಕಾಗಿದೆ. ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ನಮ್ಮ ಸರ್ಕಾರ ಕೂಡ ಈ ನಿಟ್ಟಿನಲ್ಲಿ ಕೆಲವು ಮಹತ್ವದ ಯೋಜನೆ ರೂಪಿಸುತ್ತಿದೆ. ಹೊಸ ಡೆಂಟಲ್ ಕೌನ್ಸಿಲ್ ರಚನೆ ಮಾಡಲು ಚಿಂತನೆ ನಡೆದಿದಿದೆ. ರಾಷ್ಟ್ರೀಯ ದಂತ ಆಯೋಗ ಮಾರ್ಗಸೂಚಿಯಡಿ ರಾಜ್ಯದ ಡೆಂಟಲ್ ಕೌನ್ಸಿಲ್ ಕಾರ್ಯ ನಿರ್ವಹಿಸಲಿದೆ ಎಂದರು.