ಕ್ಯಾಲಿಫೋರ್ನಿಯಾದ ಸ್ಯಾನ್‌ ಫ್ರಾನ್ಸಿಸ್ಕೋನ ಬೇ ಏರಿಯಾದಲ್ಲಿರುವ ಫ್ರೀಮಾಂಟ್‌ ನಗರವನ್ನು ಒಂದು ಪುಟ್ಟ ಭಾರತವೆನ್ನಬಹುದು. ಇಲ್ಲಿ ಅಮೆರಿಕನ್ನರೇ ವಿರಳ. ಎಲ್ಲಿ ನೋಡಿದರೂ ಭಾರತೀಯರೇ. ಎಡವಿದರೆ, ತಡವಿದರೆ ಎಲ್ಲೆಲ್ಲೂ ಅವರೇ! ಹೀಗಾಗಿ ನಮಗೆ ಭಾರತದಿಂದ ಹೊರಗಿದ್ದೇವೆ ಎಂದು ಎನಿಸುವುದೇ ಇಲ್ಲ. ಇಲ್ಲಿನ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವವರಲ್ಲಿ ಹೆಚ್ಚು ಭಾರತೀಯರು ಮತ್ತು ಅಲ್ಲಿ ನಿರ್ವಹಣೆ ಮಾಡುವವರು ಬಿಳಿಯರೇ. ಇಲ್ಲಿನ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಇಳಿದು ಈಜುವವರು ಭಾರತೀಯರಾದರೆ ಅದನ್ನು ಸ್ವಚ್ಛ ಮಾಡುವವರು ಬಿಳಿಯರೇ.

ಅನೇಕ ಬಾರಿ ನನಗೆ ಉಪೇಂದ್ರರ  ದೃಶ್ಯಗಳು ನೆನಪಿಗೆ ಬರುತ್ತವೆ. ಅಂತೆಯೇ ಅಲ್ಲಿ ಜುಲೈ ನಾಲ್ಕರಂದು ನಡೆಯುವ ಅಮೆರಿಕಾದ ಸ್ವಾತಂತ್ರ್ಯ ದಿನಾಚರಣೆಯಷ್ಟೇ ಅದ್ಧೂರಿಯಾಗಿ ಅಥವಾ ಇನ್ನೂ ಹೆಚ್ಚು ವೈಭಯುತವಾಗಿ ಭಾರತದ ಸ್ವಾತಂತ್ರ್ಯ ದಿನಾಚರಣೆಯನ್ನು ಆಗಸ್ಟ್ ಹದಿನೈದರಂದು ಆಚರಿಸಲಾಗುತ್ತದೆ. ಆದರೆ ಅಲ್ಲಿ ಕೆಲಸ ಮಾಡುವವರಿಗೆ ರಜಾ ಇಲ್ಲದಿರುವುದರಿಂದ ಅದು ವೀಕ್‌ ಎಂಡ್‌ಗೆ ವರ್ಗಾವಣೆ ಆಗುತ್ತದೆ. ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯಂದು ಫ್ರೀಮಾಂಟ್‌ನಲ್ಲಿರುವ ಮಗನ ಮನೆಯಲ್ಲಿ ಇದ್ದುದರಿಂದ ಇಲ್ಲಿ ನಮ್ಮ ಭಾರತದ ಸ್ವಾತಂತ್ರ್ಯ ದಿನಾಚರಣೆಯನ್ನು ಸವಿಯುವ ಭಾಗ್ಯ ನನ್ನದಾಯಿತು.

ಬೆಳಗ್ಗೆ ಹತ್ತು ಗಂಟೆಗೆ ಪೆರೇಡ್‌ ಆರಂಭವಾಯಿತು. ಭಾರತದ ವಿವಿಧ ರಾಜ್ಯಗಳ ಸ್ತಬ್ಧ ಚಿತ್ರಗಳ (ಟ್ಯಾಬ್ಲೋಸ್) ಮೆರವಣಿಗೆ ನಡೆಯಿತು. ಎಲ್ಲಾ ಏರಿಯಾಗಳ ವಿಶೇಷತೆಯನ್ನು ಪ್ರತಿಬಿಂಬಿಸುವ, ಅಂತೆಯೇ ಅಲಂಕರಣಗೊಂಡ ಸ್ತಬ್ಧ ಚಿತ್ರಗಳ ವ್ಯಾನುಗಳು ಸಾಗುತ್ತವೆ. ಹರಿಯಾಣದ ವ್ಯಾನಿನ ಹಿಂದೆ ಅಲ್ಲಿನ ನೃತ್ಯವನ್ನು ಮಾಡಿಕೊಂಡು ಲಲನೆಯರು ಸಾಗುತ್ತಿದ್ದರು. ಅಂತೆಯೇ ನಮ್ಮ ಕರ್ನಾಟಕವನ್ನು ಪ್ರತಿನಿಧಿಸುವ ವಾಹನದಲ್ಲಿ ಹಂಪೆಯ ರಥ ಅಲಂಕರಣಗೊಂಡು ಸಾಗುತ್ತಿದ್ದರೆ ಅದರ ಹಿಂದೆ ಕೊಡವ ಮತ್ತು ಮೈಸೂರು ಪಂಚೆಯನ್ನುಟ್ಟ ಸ್ತ್ರೀ ಪುರುಷರು ಮುಂದೆ ಸಾಗುತ್ತಿದ್ದರು.

ಭಾರತದ ಬಾವುಟವನ್ನು ತನ್ನ ಸುತ್ತ ಮೈದುಂಬಿಸಿಕೊಂಡು, ಕೈಮಗ್ಗದ ಪ್ರಾತಿನಿಧ್ಯತೆಯನ್ನು ತಮ್ಮ  ಸ್ತಬ್ಧ ಚಿತ್ರದ ಮೂಲಕ ವಿವರಿಸುವ ವಾಹನ. ಶ್ರೀಕೃಷ್ಣ ಅರ್ಜುನನಿಗೆ ಭಗದ್ಗೀತೆಯನ್ನು ವಿವರಿಸುವ ಚಿತ್ರ, ಬಿಳಿಯ ಉಡುಪನ್ನು ಧರಿಸಿ ರಾಜಯೋಗವನ್ನು ಪ್ರತಿನಿಧಿಸುವ ಬ್ರಹ್ಮಕುಮಾರಿ ಸಂಘದ ಮಹಿಳೆಯರು, ಸಿಂಧಿ ಜನಾಂಗದವರ ಚಿತ್ರ.  ಆ ವಾಹನಗಳು ಜೊತೆಯಲ್ಲಿ ಅವರ ರಾಜ್ಯದ ಪ್ರಾದೇಶಿಕ ಉಡುಗೆ ತೊಡುಗೆಯನ್ನು ಧರಿಸಿದ ಮಹಿಳೆಯರು ಮತ್ತು ಪುರುಷರು.

ನಂತರ ದೊಡ್ಡ ವೇದಿಕೆಯಲ್ಲಿ ನೃತ್ಯ ಕಾರ್ಯಕ್ರಮ, ಹಾಡುಗಳ ಸ್ಪರ್ಧೆ ಮತ್ತು ದೇಶಭಕ್ತಿ ಗೀತೆಗಳ ಗಾಯನ ನಡೆಯುತ್ತಿತ್ತು. ಅಲ್ಲಿಂದ ಮುಂದೆ ಸಾಗಿದರೆ ಪೂರ್ಣ ಭಾರತದ ರುಚಿ ರುಚಿ ಮಸಾಲಾ ಆಹಾರದ ಮಳಿಗೆಗಳು, ಒಟ್ಟಿನಲ್ಲಿ ಭಾರತೀಯರ ಸಾಮ್ರಾಜ್ಯವೇ ಅಲ್ಲಿ ಕಂಗೊಳಿಸುತ್ತಿತ್ತು.

ಮಕ್ಕಳಿಗೆ ಆಟವಾಡಲು ಅನುಕೂಲ. ಮೊಬೈಲ್‌, ಶೌಚಾಲಯಗಳು, ದಂಡು ದಂಡು ಭಾರತೀಯ ಜನರು ಅಲ್ಲಿದ್ದರು. ನೋಡಿದರೆ ಇದು ಅಮೆರಿಕಾ ದೇಶವೇ ಎಂದು ಅಚ್ಚರಿಪಡುವಷ್ಟು ಭಾರತೀಯತೆ ಅಲ್ಲಿತ್ತು. ನಮ್ಮ ದೇಶದ ಹೆಚ್ಚುಗಾರಿಕೆಯೇ ಇಲ್ಲಿನ ವಿವಿಧತೆ. ಅಂತೆಯೇ ವಿಭಿನ್ನ ರಂಗು ರಂಗಿನ ವಸ್ತ್ರಗಳ ನೋಟ, ಹೇಳಬೇಕೆಂದರೆ ಅಮೆರಿಕಾದ ಸ್ವಾತಂತ್ರ್ಯ ದಿನಾಚರಣೆಯಲ್ಲೂ ನಾನು ಇಲ್ಲೇ ಇದ್ದೆ. ನಮ್ಮ ಆಚರಣೆಯಲ್ಲಿ ಇನ್ನೂ ಅಬ್ಬರ ಮತ್ತು ವೈಭವ ಹೆಚ್ಚೆನಿಸಿತು. ಮನೆಯ ಹತ್ತಿರವೇ ಇರುವ ಪಾರ್ಕ್‌ನಲ್ಲಿ ನಡೆಯುವ ಲಾಫ್ಟರ್‌ ಕ್ಲಬ್‌ನವರೆಲ್ಲರೂ ಭಾರತೀಯರೆ. ಅಲ್ಲೂ ಸಹ ಭಾರತೀಯ ಧ್ವಜಾರೋಹಣ ಮತ್ತು ದೇಶಭಕ್ತಿ ಗೀತೆಗಳ ಗಾಯನ ನಡೆಯಿತು. ಒಟ್ಟಿನಲ್ಲಿ ನಮ್ಮ ಭಾರತದಿಂದ ಬಂದಿರುವ ಭಾರತೀಯರು ಯಾವುದಕ್ಕೂ ಕೊರತೆ ಇಲ್ಲದ ಪುಟ್ಟ ಭಾರತವನ್ನೇ ಇಲ್ಲಿ ಸೃಷ್ಟಿ ಮಾಡಿಬಿಟ್ಟಿದ್ದಾರೆ. ಇಲ್ಲಿ ಎಲ್ಲಾ ಭಾರತೀಯ ದೇವಸ್ಥಾನಗಳಿವೆ. ಗುರುದ್ವಾರದಿಂದ ಹಿಡಿದು, ಲಕ್ಷ್ಮಿ, ಹನುಮ, ರಾಮ, ಇಸ್ಕಾನ್‌, ಸ್ವಾಮಿ ನಾರಾಯಣ ಮಂದಿರ, ಜೈನ ಮಂದಿರ ಎಲ್ಲ ಇವೆ. ನಾವು ಭಾರತದಲ್ಲಿ ಮಾಡುವುದಕ್ಕಿಂತಲೂ ಇನ್ನೂ ಅಚ್ಚುಕಟ್ಟಾಗಿ ಭಾರತೀಯ ಹಬ್ಬಗಳನ್ನು ಆಚರಿಸುತ್ತಾರೆ.

ಒಟ್ಟಿನಲ್ಲಿ ನಮ್ಮ ಸ್ವಾತಂತ್ರ್ಯ ದಿನಾಚರಣೆಯಂತೂ ನಿಜಕ್ಕೂ ಬಹಳ ಸಂತಸವನ್ನು ನೀಡಿತು. ನೋಡುವ ಕಣ್ಣಿಗೆ ಹಬ್ಬವೆನಿಸಿತು. ಸಾವಿರಾರು ಮೈಲುಗಳಾಚೆ ಇದ್ದ ಮಾತ್ರಕ್ಕೆ ಭಾರತೀಯತೆ ಎಲ್ಲಿ ಹೋದೀತು? `ಆರಂಕುಶಮಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ’ ಎನ್ನುವಂತೆ ಎಷ್ಟು ದೂರ ಹೋದರೂ ನಮ್ಮತನ, ನಮ್ಮನ್ನು ಖಂಡಿತಾ ಬಿಟ್ಟುಹೋಗದು ಅಲ್ಲವೇ? ಜೈ ಭಾರತ ಮಾತೆ!

– ಮಂಜುಳಾ ರಾಜ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ