ದಿನ ಬೆಳಗಾದರೆ ಮುಂಜಾನೆ ವಾಕಿಂಗ್‌. ನಂತರ ತರಕಾರಿಗಾಗಿ ಸ್ಟಾರ್‌ ಬಜಾರಿಗೆ ಹೋಗುವುದು. ಅಲ್ಲಿದ್ದ ರಾಶಿ ರಾಶಿ ತರಕಾರಿಗಳಲ್ಲಿ ಪ್ರತಿಯೊಬ್ಬರೂ ಚೆನ್ನಾಗಿರುವ ತಾಜಾ ತರಕಾರಿಗಳನ್ನು ಆರಿಸಿ ತೆಗೆದುಕೊಳ್ಳುತ್ತಾರೆ. ಒಂದಿಷ್ಟು ಮಾಸಿದ್ದರೂ ಯಾರೂ ಅದನ್ನು ಮುಟ್ಟುವುದಿಲ್ಲ. ಹೀಗಾಗಿ ಯಾರೂ ತೆಗೆದುಕೊಳ್ಳದ, ಖರೀದಿ ಮಾಡದ ಒಂದಷ್ಟು ತರಕಾರಿ ಅಲ್ಲಿ ಉಳಿಯುತ್ತದೆ. ಅದೇನು ಪೂರ್ಣವಾಗಿ ಹಾಳಾಗಿರುವುದಿಲ್ಲ. ಹೀಗಾಗಿ ಸ್ವಲ್ಪ ಚೆನ್ನಾಗಿ ಹಸನು ಮಾಡಿದಾಗ ಅದನ್ನೂ ಸಹ ಬಳಸಬಹುದು. ಇಷ್ಟೊಂದು ತರಕಾರಿ ವೇಸ್ಟ್ ಆಗಿಬಿಡುತ್ತದೆ ಎನ್ನುವ ಭಾವ. ಆದರೆ ಏನೂ ಮಾಡಲಾಗದ ಅಸಹಾಯಕತೆ, ಒಟ್ಟಾರೆ ಬೇಸರ ಮಾಡಿಕೊಂಡು ಸುಮ್ಮನಾಗಿ ಬಿಡುವುದಾಗುತ್ತಿತ್ತು. ಅನೇಕ ಬಾರಿ ಇದನ್ನು ಅಗತ್ಯವಿರುವವರಿಗೆ ಕೊಟ್ಟರೆ ಉಪಯೋಗಿಸುತ್ತಾರೇನೋ ಎಂದೂ ಸಹ ಅನ್ನಿಸಿದ್ದು ಉಂಟು. ಆದರೆ ಈ ಕೆಲಸ ಮಾಡುವವರು ಯಾರು ಎನ್ನುವುದೂ ಒಂದು ಪ್ರಶ್ನೆಯಾಗಿಯೇ ಉಳಿಯುತ್ತಿತ್ತು.

ಅಂತಹ ಒಂದು ಒಳ್ಳೆಯ ಕಾರ್ಯವನ್ನು ಮೆಹೆರ್‌ ದೊಸಂದಿ ಮಾಡುತ್ತಿದ್ದಾರೆ. ಇವರು ಮಾಡುವ ಕೆಲಸವೇನೆಂದರೆ ಬೇಯಿಸದಿರುವಂತಹ ಆಹಾರ ಪದಾರ್ಥ ಅಂದರೆ ತರಕಾರಿ. ಹಣ್ಣು ಅಥವಾ ದಿನಸಿ ಕಾಳುಗಳು, ಮಸಾಲೆಗಳು, ಬೇಳೆ, ಎಣ್ಣೆ ಅಕ್ಕಿಯಂತಹ ಆಹಾರ ಪದಾರ್ಥಗಳಿರಬಹುದು. ಅವುಗಳನ್ನು ಶೇಖರಿಸಿ ಅಗತ್ಯವಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ನೀಡುವುದು, ಅಲ್ಲಿನ ನಿವಾಸಿಗಳ ಊಟ ಉಪಾಹಾರಗಳಿಗೆ ಈ ಪದಾರ್ಥಗಳನ್ನು ಬಳಸಿಕೊಳ್ಳಲಾಗುತ್ತದೆ.

ಅನೇಕ ತರಕಾರಿ ಅಥವಾ ದಿನಸಿ ಅಂಗಡಿ ಇರಬಹುದು ಅಥವಾ ಹಣ್ಣುಗಳಿರಬಹುದು. ಈ ಎಲ್ಲವನ್ನೂ ವ್ಯಾಪಾರ ಮಾಡುವ ಸಂಸ್ಥೆಗಳಲ್ಲಿ ಒಂದಷ್ಟು ತರಕಾರಿ, ಹಣ್ಣು ಅಥವಾ ದಿನಸಿ ಪದಾರ್ಥಗಳು ಮಾರಾಟಕ್ಕೆ ಯೋಗ್ಯವಲ್ಲದಿರಬಹುದು, ಆದರೆ ಅದನ್ನು ಬಳಸಲು ಸಾಧ್ಯವಿರುತ್ತದೆ. ಅಗತ್ಯವಿರುವವರು ಖಂಡಿತ ಅವುಗಳನ್ನು ಬಳಸಬಹುದು. ಆದರೆ ಅವುಗಳನ್ನು ಅವರ ತನಕ ತಲುಪಿಸುವವರು ಬೇಕಲ್ಲವೇ? ಆ ಕಾರ್ಯವನ್ನು ಮೆಹೆರ್‌ ದೊಸಂದಿ ತಮ್ಮ ಬೆಂಗಳೂರು ಫುಡ್‌ ಬ್ಯಾಂಕಿನ ಮೂಲಕ ಮಾಡುತ್ತಿದ್ದಾರೆ. ಇವರ ಜೊತೆಗೆ ಅನೇಕ ಸಂಸ್ಥೆಗಳು ಕೈಗೂಡಿಸಿದ್ದಾರೆ.

ಇವರು ಮೂಲತಃ ಮುಂಬೈ ನಿವಾಸಿ. ಆತಿಥ್ಯ ಉದ್ಯಮದಲ್ಲಿ ಶೆಫ್‌ ಆಗಿ ಕಾರ್ಯ ನಿರ್ವಹಿಸಿದರು. ಮುಂಬೈ ಸೋಫಿಯಾ ಪಾಲಿಟೆಕ್ನಿಕ್‌ನಲ್ಲಿ ಅಧ್ಯಾಪಕಿಯಾಗಿ 2-3 ವರ್ಷ ಸೇವೆ ಸಲ್ಲಿಸಿದ್ದಾರೆ. ಹ್ಯಾಫ್ತ್ ಹಾಸ್ಪಿಟ್ಯಾಲಿಟಿ ಕೋರ್ಸ್‌ನ ಮುಖ್ಯ ಸಿಬ್ಬಂದಿಯಾಗಿ ಕಾರ್ಯ ನಿರ್ಹಿಸಿದ್ದಾರೆ. ಹತ್ತು ವರ್ಷ ಈ ವಿಭಾಗದ ಮುಖ್ಯಸ್ಥರಾಗಿದ್ದು, ಅಲ್ಲಿನ ವಿದ್ಯಾರ್ಥಿಗಳಿಗೆ ಅವರು ಅಂತಾರಾಷ್ಟ್ರೀಯ ಪಾಕಶಾಸ್ತ್ರವನ್ನು ಬೋಧಿಸುತ್ತಿದ್ದರು. ನಾಲ್ಕು ವರ್ಷಗಳ ಹಿಂದೆ ತಮ್ಮ ಪತಿಯ ಉದ್ಯೋಗದ ಸಲುವಾಗಿ ಬೆಂಗಳೂರಿಗೆ ಬಂದು ನೆಲೆಸಿದರು. ಅವರ ಪತಿ ಗಿಫ್ಟ್ಸ್ ಫುಡ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯಲ್ಲಿ ಮಾರಾಟ ವಿಭಾಗದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಟ್ಟಾರೆ ದಂಪತಿಗಳಿಬ್ಬರೂ ಆಹಾರ ಸಂಬಂಧಿ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವುದರಿಂದ ಇವರಿಗೆ ಆಹಾರದ ಬೆಲೆ ಗೊತ್ತಿದೆ.

`ನಾನು ಬೆಂಗಳೂರಿಗೆ ಬಂದಾಗ ಯಾರ ಪರಿಚಯ ಇರಲಿಲ್ಲ. ನಾನು ಮುಂದೆ ಮಾಡಬೇಕಾದ ಕೆಲಸಕ್ಕೆ ಬೇಕಾದ ಮಾಹಿತಿಯ ಸಂಗ್ರಹವನ್ನು ಮಾಡಲು ಆರಂಭಿಸಿದೆ. ಈ ನಿಟ್ಟಿನಲ್ಲಿ ನನಗೆ ಅನೇಕ ಕಾಲೇಜುಗಳ ಅಂದರೆ ಮೌಂಟ್‌ ಕಾರ್ಮೆಲ್‌, ಸೇಂಟ್‌ಜೋಸೆಫ್ಸ್, ಕ್ರೈಸ್ಟ್ ಕಾಲೇಜಿನ ವಿದ್ಯಾರ್ಥಿಗಳು ಸಹಕಾರ ನೀಡಿದರು. ನಂತರ ಒಂದಷ್ಟು ಎನ್‌.ಜಿ.ಓ.ಗಳ ಪರಿಚಯವಾಯಿತು,’ ಎನ್ನುತ್ತಾರೆ ಮೆಹೆರ್‌.

ಪ್ರಸ್ತುತ ಈಗ ಅವರು 60 ಎನ್‌.ಜಿ.ಓ.ಗಳ ಸಂಪರ್ಕ ಹೊಂದಿದ್ದಾರೆ. ವಿವಿಧ ಸಂಸ್ಥೆಗಳ ಮೂಲಕ ಸಂಗ್ರಹ ಮಾಡಿದ ಆಹಾರ ಪದಾರ್ಥಗಳನ್ನು ಅವರಿಗೆ ತಲುಪಿಸುವ ಕಾರ್ಯವನ್ನು ಕೈಗೊಂಡಿದ್ದಾರೆ. ಹದಿನೈದು ಸಾವಿರ ನಿವಾಸಿಗಳು ಇವರ ಪ್ರಯೋಜನ ಪಡೆಯುತ್ತಿದ್ದಾರೆ. ಅನೇಕ ಆಹಾರ ನಿಗಮಗಳು ಸದ್ಯಕ್ಕೆ ಹಾಳಾಗಲಿರುವ ದಿನಸಿಗಳನ್ನು ಅಂದರೆ ಬೇಯಿಸದಿರುವ ಎಲ್ಲ ಆಹಾರದ ಪದಾರ್ಥಗಳು, ತರಕಾರಿ, ಹಣ್ಣು ಮತ್ತು ಅಕ್ಕಿ, ಬೇಳೆ, ಎಣ್ಣೆ, ಮಸಾಲೆ ಪದಾರ್ಥಗಳನ್ನು ಪಡೆಯಲು ಸಹಕಾರ ನೀಡುತ್ತಿದ್ದಾರೆ. ಇದೇ ರೀತಿ ಎಲ್ಲರೂ ಅಂದರೆ ಸಾರ್ವಜನಿಕರು ಮತ್ತು ಸಂಸ್ಥೆಗಳು ಕೈಗೂಡಿಸಿದಾಗ ಈ ಲೋಕೋಪಕಾರಕ್ಕೆ ಬಲ ಬಂದೀತು.

ಒಟ್ಟಾರೆ ಇವರ ಉದ್ದೇಶವಂತೂ ನಿಚ್ಚಳವಾದುದು. ಆಹಾರ ವ್ಯರ್ಥ ಆಗಬಾರದು. ಅಗತ್ಯವಿರುವವರಿಗೆ ಅದು ತಲುಪಬೇಕು. ಇವರ ಬೆಂಗಳೂರು ಫುಡ್‌ ಬ್ಯಾಂಕ್‌ ಸಂಸ್ಥೆ ಮಾಡುತ್ತಿರುವ ಕೆಲಸಕ್ಕೆ ಎಲ್ಲರ ಸಹಕಾರ ಅತ್ಯಗತ್ಯ. ಹಸಿದ ಹೊಟ್ಟೆಯಲ್ಲಿ ಏನೂ ಮಾಡಲಾಗುವುದಿಲ್ಲ ಎನ್ನುವುದು ಸತ್ಯವಾದ ಮಾತು. ಆದ್ದರಿಂದ ಹಸಿದವರ ಹೊಟ್ಟೆ ತುಂಬಿದಾಗ ಅವರು ಆರೋಗ್ಯ, ಶಿಕ್ಷಣ ಮುಂತಾದ ವಿಷಯಗಳಿಗೆ ಗಮನ ಕೊಡಲು ಸಾಧ್ಯವಾಗಬಹುದು ಅಲ್ಲವೇ?

ಯಾವುದೇ ಒಂದು ಪದಾರ್ಥವಾಗಲೀ ಅದನ್ನು ಬೆಳೆಯಲು ಮತ್ತು ಬೀಜವಾಗಿರುವುದು ಹೂ ಕಾಯಿ ಹಣ್ಣಾಗಿ ಪರಿವರ್ತನೆಯಾಗುವ ನಿಟ್ಟಿನಲ್ಲಿ ಬಹಳಷ್ಟು ಮಾನವ ಸಂಪನ್ಮೂಲ, ಶ್ರಮ, ನಿಸರ್ಗ ಸಂಪತ್ತನ್ನು ಉಪಯೋಗಿಸಲಾಗುತ್ತದೆ. ಆದ್ದರಿಂದ ಯಾವುದೇ ಪದಾರ್ಥವನ್ನು ನಾವು ಹಣದಿಂದ ಅಳೆಯಲಾಗುವುದಿಲ್ಲ. ಆದ್ದರಿಂದ ಇಷ್ಟೊಂದು ಶ್ರಮದಿಂದ ನಮ್ಮವರೆಗೆ ತಲುಪಿದ ಪದಾರ್ಥಗಳ ಸೂಕ್ತ ಉಪಯೋಗವಾಗುವಂತೆ ಮಾಡುವುದು ಮಾನವರಾಗಿ ಹುಟ್ಟಿದ ನಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಇವರ ಕಾರ್ಯ ನಿಜಕ್ಕೂ ಶ್ಲಾಘನೀಯ. ಇದೇ ರೀತಿಯಲ್ಲಿ ಸಾರ್ವಜನಿಕರಾಗಲೀ ಅಥವಾ ಸಂಸ್ಥೆಗಳಾಗಲೀ ಯೋಚಿಸಿದಾಗ ಮತ್ತು ಆ ಆಲೋಚನೆಯನ್ನು ಕಾರ್ಯರೂಪಕ್ಕೆ ತಂದಾಗ ನಿಜಕ್ಕೂ ಹಸಿವಿನ ಸಮಸ್ಯೆ ಸಾಕಷ್ಟು ಕಡಿಮೆಯಾಗಬಹುದು. ಒಂದು ಕಾಸನ್ನು ವ್ಯರ್ಥ ಮಾಡದಿದ್ದಾಗ ಅದನ್ನು ಸಂಪಾದಿಸಿದಂತೆಯೇ ಎನ್ನುವುದು ತಿಳಿದವರ ಮಾತು. ಅಂತೆಯೇ ಆಹಾರಗಳೂ ಸಹಾ. ನಮ್ಮ ದೇಶ ವಿವಿಧತೆಯನ್ನು ಹೊಂದಿದೆ. ಜೊತೆಗೆ ವೈಪರೀತ್ಯಗಳನ್ನೂ ಸಹಾ. ಒಂದೆಡೆ ಆಹಾರ ಪೋಲಾಗುತ್ತಿದ್ದರೆ ಮತ್ತೊಂದೆಡೆ ಒಂದು ಅಗುಳು ಅನ್ನಕ್ಕೂ ಬಾಯಿ ಬಿಡುವವರಿದ್ದಾರೆ. ಆದರೆ ಮೆಹೆರ್‌ ದೊಸಂದಿ ಅಂತಹವರ ಅಗತ್ಯ ನಮ್ಮ ಸಮಾಜಕ್ಕಿದೆ. ಮತ್ತಷ್ಟು ಫುಡ್‌ ಬ್ಯಾಂಕ್‌ಗಳು ಹುಟ್ಟಿಕೊಳ್ಳಬೇಕು. ಆಗ ನಮ್ಮ ದೇಶದ ಸ್ಥಿತಿ ಮತ್ತಷ್ಟು ಉತ್ತಮ ಆಗಬಹುದೇನೋ ಅಲ್ಲವೇ?

– ಮಂಜುಳಾ ರಾಜ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ