ಬಾಲ್ಯದಿಂದಲೂ ತಾಯಿಯ ಟ್ರಂಕಿನ ಬಗ್ಗೆ ಅತೀ ಕುತೂಹಲವಿರಿಸಿಕೊಂಡಿದ್ದ ಶಾರದಾ, ಎಂಜಿನಿಯರಿಂಗ್ ಮುಗಿಸಿದ ನಂತರ ಅಮ್ಮನ ಆಸೆಯಂತೆ ಅದನ್ನು ತೆರೆದು ನೋಡಬಲ್ಲವಳಾಗಿದ್ದಳು. ಅಂತೂ ಅವಳು ಅಮ್ಮನ ಟ್ರಂಕ್ ತೆರೆದು ನೋಡಿದಾಗ ಏನೆಲ್ಲಾ ಗಮನಿಸಿದಳು....?
ಮಲಗಲು ಹೊರಟ ಮಗಳನ್ನು ನೋಡಿ ವಸಂತ್, ``ಶಾರೀ.... ಮುಂದಿನ ವಾರ ನಿನ್ನ ಬರ್ತ್ ಡೇ ಇದೆಯಲ್ವಾ......? ನಾಳೆ ಕಾಲೇಜು ಮುಗಿದ ನಂತರ ಅಲ್ಲೇ ಇರು. ನಾನು ಅಷ್ಟು ಹೊತ್ತಿಗೆ ಅಲ್ಲಿಗೆ ಬರುತ್ತೇನೆ. ನಿನಗೆ ಹೊಸ ಡ್ರೆಸ್ ತಗೊಂಡು ಬರೋಣ,'' ಎಂದರು.
ವಸಂತನ ಕುಟುಂಬ ಇರುವುದು ಐವತ್ತು ಅರವತ್ತು ಮನೆಗಳಿರುವ ಹಳ್ಳಿ. ಆತ ಹಳ್ಳಿಯಲ್ಲಿಯೇ ಜಮೀನು ನೋಡಿಕೊಂಡಿದ್ದರು.
ಆ ಹಳ್ಳಿಯ ಮಕ್ಕಳು ಹೈಸ್ಕೂಲ್ ತನಕ ಈ ಊರಿನಲ್ಲೇ ಓದಬಹುದಿತ್ತು. ನಂತರ ಕಾಲೇಜಿಗೆ ಹೋಗಬೇಕು ಎಂದರೆ ಹತ್ತು ಕಿಲೋಮೀಟರ್ ದೂರದ ಜಿಲ್ಲಾ ಕೇಂದ್ರಕ್ಕೆ ಹೋಗಬೇಕಿತ್ತು. ಎಲ್ಲಾ ಮಕ್ಕಳ ಹಾಗೇ ಶಾರದಾ ದಿನ ಬಸ್ಸಿನಲ್ಲಿ ಹೋಗಿ ಬಂದು ಪಿಯುಸಿಯನ್ನು ನಗರದಲ್ಲಿ ಓದಿದಳು. ಮುಂದೆ ಎಂಜಿನಿಯರಿಂಗ್ ಓದಲು ಅದೇ ನಗರದ ಕಾಲೇಜಿನಲ್ಲಿ ಸೀಟು ಸಿಕ್ಕಿತು. ಮನೆಯಿಂದ ದೂರ ಹೋಗಿ ಹಾಸ್ಟೆಲ್ ನಲ್ಲಿ ಇರುವುದು ತಪ್ಪಿತು. ದಿನಾ ಬಸ್ಸಿನಲ್ಲೇ ಕಾಲೇಜಿಗೆ ಹೋಗಿ ಬಂದು ಮಾಡುತ್ತಿದ್ದಳು. ದೂರದ ಕಾಲೇಜು ಆಗಿದ್ದರೆ ಅಜ್ಜಿ ಕಳುಹಿಸುತ್ತಿರಲಿಲ್ಲ. ಎಂಜಿನಿಯರಿಂಗೇ ಏಕೆ, ಬೇರೆ ಏನಾದರೂ ಓದು ಎಂದು ಹಠ ಮಾಡುತ್ತಿದ್ದರು. ಹೆಣ್ಣು ಮಕ್ಕಳು ಜಾಸ್ತಿ ಓದುವುದು ಅವರಿಗೆ ಇಷ್ಟವಾಗುತ್ತಿರಲಿಲ್ಲ.
``ಅಪ್ಪಾ.... ನೀನು ಯಾಕೆ ಹತ್ತು ಕಿಲೇಮೀಟರ್ ದೂರ ಗಾಡಿ ಓಡಿಸಿಕೊಂಡು ಬರುತ್ತೀಯಾ....? ನೀನು ಬರುವುದು ಬೇಡ. ನನಗೆ ಹಣ ಕೊಡು, ನಾನು ನನ್ನ ಫ್ರೆಂಡ್ ನೈನಾ ಜೊತೆ ಹೋಗಿ ಹೊಸ ಡ್ರೆಸ್ ತೆಗೆದುಕೊಂಡು ಬರುತ್ತೇನೆ,'' ಎಂದಳು ಶಾರದಾ.
``ಸರಿ ಶಾರೂ, ಹಾಗೇ ಮಾಡುತ್ತೇನೆ. ನನ್ನ ಮಗಳು ಎಷ್ಟು ದೊಡ್ಡವಳಾದಳು! ನೋಡು ನೋಡುತ್ತಿದ್ದಂತೆ ಇಪ್ಪತ್ತೆರಡು ವರ್ಷ ಕಳೆದದ್ದೇ ತಿಳಿಯಲಿಲ್ಲ,'' ಎನ್ನುತ್ತಾ ಮಗಳ ತಲೆ ನೇರಿಸಿದರು ವಸಂತ್, ``ಬೆಳಗ್ಗೆ ನೆನಪಿಸುವ ಹಣ ಕೊಡುತ್ತೇನೆ,'' ಎಂದರು.
``ಅಪ್ಪಾ.... ಈ ಬರ್ತ್ ಡೇ ದಿನವಾದರೂ ನನಗೆ ಅಮ್ಮನ ಟ್ರಂಕಿನ ಬೀಗ ಕೊಡುತ್ತೀರಲ್ವಾ.....? ನಾನಂತೂ ತುಂಬ ಎಗ್ಸೈಟ್ ಆಗಿದ್ದೀನಿ,'' ಎನ್ನುತ್ತಾ ಶಾರದಾ ತಂದೆಯ ಕೈ ಹಿಡಿದುಕೊಂಡು ಎರಡು ಸುತ್ತು ತಿರುಗಿದಳು.
``ಶಾರೀ.... ನೀನು ಇನ್ನೂ ಎಳೆ ಮಗುವೇ....? ಹೌದು ಅಂದು ನಿನ್ನ ಮಾವ ಬೀಗವನ್ನು ತಂದು ಕೊಡುತ್ತಾರೆ,'' ಎಂದರು ವಸಂತ್.
``ಹ್ಞೂಂ.... ನೀನು ಮುದ್ದು ಮಾಡಿ ಹಾಳು ಮಾಡಿಬಿಟ್ಟೆ. ಹೆಣ್ಣು ಹುಡುಗಿ ಒಂದು ಕೆಲಸ ಕಾರ್ಯ ಬರುವುದಿಲ್ಲ. ಓದು ಕಾಲೇಜು ಅಂತ ತಿರುಗುವುದೇ ಆಯಿತು,'' ಎಂದು ಸಿಡಿಮಿಡಿಗುಟ್ಟುತ್ತಾ ಅಜ್ಜಿ ಪಾರ್ವತಮ್ಮ ಹಾಲಿನ ಲೋಟ ಹಿಡಿದು ಬಂದರು.
``ಅಜ್ಜಿ, ನನ್ನನ್ನ ಬೈಯದಿದ್ದರೆ ನಿನಗೆ ಸಮಾಧಾನ ಆಗಲ್ಲಾ ಅಲ್ವಾ.....'' ಎನ್ನುತ್ತಾ ಅಜ್ಜಿ ಕೊಟ್ಟ ಹಾಲು ಕುಡಿದು, ಲೋಟವನ್ನು ಸಿಂಕಿನಲ್ಲಿ ಹಾಕಿ ತನ್ನ ರೂಮಿಗೆ ಓಡಿದಳು ಶಾರದಾ.