- ರಾಘವೇಂದ್ರ ಅಡಿಗ ಎಚ್ಚೆನ್.
ಬ್ಲಾಕ್ ಬಸ್ಟರ್ ಹಿಟ್ ಆದ ‘ಹನುಮಾನ್’ ಸಿನಿಮಾದ ನಿರ್ದೇಶಕ ಪ್ರಶಾಂತ್ ವರ್ಮಾ ಅವರಿಗೆ ಭರ್ಜರಿ ಬೇಡಿಕೆ ಸೃಷ್ಟಿ ಆಗಿದೆ. ಈಗ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ‘ಜೈ ಹನುಮಾನ್’ ಸಿನಿಮಾದ ಕೆಲಸಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ಅಲ್ಲದೇ, ಬಾಲಯ್ಯ ಪುತ್ರ ಮೋಕ್ಷಜ್ಞರನ್ನು ಸಿನಿಮಾ ರಂಗಕ್ಕೆ ಪರಿಚಯಿಸುವ ಜವಾಬ್ದಾರಿಯನ್ನು ಪ್ರಶಾಂತ್ ವರ್ಮಾ ಹೊತ್ತುಕೊಂಡಿದ್ದಾರೆ. ಇದರ ಜೊತೆಗೆ ಸೂಪರ್ ಹೀರೋ ಯೂನಿವರ್ಸ್‌ನ 3ನೇ ಸಿನಿಮಾ ಘೋಷಣೆ ಮಾಡಿದ್ದಾರೆ. ಇದು ಮಹಿಳಾ ಸೂಪರ್ ಹೀರೋ ಕಥೆ ಹೊಂದಿರಲಿದೆ ಎಂಬುದು ವಿಶೇಷ. ಈ ಸಿನಿಮಾಗೆ ‘ಮಹಾಕಾಳಿ’ ಎಂದು ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗಿದೆ. ನಟಿ ಭೂಮಿ ಶೆಟ್ಟಿ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.

ಪ್ರಶಾಂತ್ ವರ್ಮಾ ಅವರು ತೆಲುಗು ನಿರ್ದೇಶಕ. ‘ಹನುಮಾನ್’ ಯಶಸ್ಸಿನ ಬಳಿಕ ಅವರು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಈಗ ಅವರು ‘ಮಹಾಕಾಳಿ’ ಸಿನಿಮಾಗೆ ಕಥೆ ಬರೆದಿದ್ದಾರೆ. ಈ ಸಿನಿಮಾದಲ್ಲಿ ಕನ್ನಡದ ನಟಿ ಭೂಮಿ ಶೆಟ್ಟಿ ಅವರು ನಟಿಸುತ್ತಿರುವುದು ವಿಶೇಷ. ಕುಂದಾಪುರದ ಹುಡುಗಿ, ಬಿಗ್ ಬಾಸ್ ಮಾಜಿ ಸ್ಪರ್ಧಿ ಭೂಮಿ ಶೆಟ್ಟಿ ಅವರು ಈ ಚಿತ್ರದಲ್ಲಿ ಮಹಾಕಾಳಿ ಅವತಾರ ಎತ್ತುತ್ತಿದ್ದಾರೆ. ಮಹಾಕಾಳಿ’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ನಲ್ಲಿ ಭೂಮಿ ಶೆಟ್ಟಿ ಅವರ ಮುಖವನ್ನು ಕೆಂಪು ಮತ್ತು ಬಂಗಾರದ ಬಣ್ಣದಿಂದ ಅಲಂಕಾರಗೊಳಿಸಲಾಗಿದೆ. ಸಾಂಪ್ರದಾಯಿಕ ಆಭರಣಗಳನ್ನು ಧರಿಸಿ ದೈವಿಕ ಅನುಭವ ನೀಡುವ ಗೆಟಪ್ನಲ್ಲಿ ಭೂಮಿ ಶೆಟ್ಟಿ ಅವರು ಕಾಣಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ‘ಮಹಾಕಾಳಿ’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ವೈರಲ್ ಆಗಿದೆ.

ಡೈರೆಕ್ಟರ್ ಪ್ರಶಾಂತ್ ವರ್ಮಾ ಅವರು ‘ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್’ ಅಡಿಯಲ್ಲಿ ಮಹಾಕಾಳಿ ಸಿನಿಮಾವನ್ನು ಮಾಡುತ್ತಿದ್ದಾರೆ. ‘ಮಹಾಕಾಳಿ’ ಸಿನಿಮಾಗೆ ಪ್ರಶಾಂತ್ ಕಥೆ ಬರೆದಿದ್ದು, ಲೇಡಿ ಡೈರೆಕ್ಟರ್ ಪೂಜಾ ಅಪರ್ಣಾ ಕೊಲ್ಲೂರು ಅವರು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಈ ಮೊದಲು ‘ಮಾರ್ಟಿನ್ ಲೂಥರ್ ಕಿಂಗ್’ ಚಿತ್ರವನ್ನು ಅವರು ನಿರ್ದೇಶಿಸಿದ್ದರು
ಮಹಾಕಾಳಿ’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ನೋಡಿದ ಬಳಿಕ ಕಥೆಯ ಬಗ್ಗೆ ಸಿನಿಪ್ರಿಯರಿಗೆ ಕೌತುಕ ಮೂಡಿದೆ.

ಪಶ್ಚಿಮ ಬಂಗಾಳದ ಜನಪ್ರಿಯ ದೇವಿ ಆಗಿರುವ ಕಾಳಿಯ ಹಿನ್ನೆಲೆಯಲ್ಲಿ ಅಲ್ಲಿನ ನೆಲದ ಸಂಸ್ಕೃತಿಯನ್ನು ಸಿನಿಮಾ ರೂಪದಲ್ಲಿ ಕಟ್ಟಿಕೊಡಲಾಗುತ್ತದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ‘ಆರ್‌ಕೆಎಂಡಿ ಸ್ಟುಡಿಯೋಸ್’ ಮೂಲಕ ರಿಜ್ವಾನ್ ರಮೇಶ್ ದುಗ್ಗಲ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಆರ್.ಕೆ. ದುಗ್ಗಲ್ ಅವರು ಸಿನಿಮಾವನ್ನು ಪ್ರೆಸೆಂಟ್ ಮಾಡುತ್ತಿದ್ದಾರೆ. ಸ್ಮರಣ್ ಸಾಯಿ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.





