ಮೈಸೂರು ಅರಮನೆ ಬಳಿ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೃತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ಸ್ಪೋಟ ನಡೆದಾಗ ಗಂಭೀರವಾಗಿ ಗಾಯಗೊಂಡಿದ್ದ ಲಕ್ಷ್ಮಿ ಅವರನ್ನು ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಲಕ್ಷ್ಮಿ ಮೃತಪಟ್ಟಿದ್ದಾರೆ.
ಲಕ್ಷ್ಮೀ ಅವರು ಬೆಂಗಳೂರಿನ ಕಾಮಾಕ್ಷಿಪಾಳ್ಯ ನಿವಾಸಿ ರಾಜೇಶ್ ಅವರ ಪತ್ನಿ. ಮೂಲತಃ ಮಂಡ್ಯದ ಹೊಸಹಳ್ಳಿ ಗ್ರಾಮದ ನಿವಾಸಿ. ರಾಜೇಶ್ ಬೆಂಗಳೂರಿನಲ್ಲಿ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದರು.
ಮೈಸೂರಿನ ಬೆಳವಾಡಿಯ ಸಂಬಂಧಿಕರ ಮನೆಗೆ ಬಂದಿದ್ದ ಕುಟುಂಬ, ಈ ವೇಳೆ ಅರಮನೆ ನೋಡಲೆಂದು ಬಂದಿದ್ದರು. ಸ್ಪೋಟದ ವೇಳೆ ಲಕ್ಷ್ಮಿ ಅವರ ಹೊಟ್ಟೆಯಿಂದ ಕರುಳಿನ ಭಾಗ ಕಿತ್ತು ಬಂದಿತ್ತು. ತಲೆ, ಕೈ , ಕಾಲಿನ ಭಾಗ ಕೂಡ ಛಿದ್ರವಾಗಿತ್ತು ಎನ್ನಲಾಗಿದೆ.
ಘೋರ ದುರಂತ: ಕ್ರಿಸ್‌ಮಸ್ ರಜೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ವ್ಯಾಪಾರ ಕೂಡಾ ಜೋರಾಗಿತ್ತು. ಅದರಂತೆ ಗುರುವಾರ ರಾತ್ರಿ 8.30 ರ ಸಮಯದಲ್ಲಿ ಉತ್ತರ ಪ್ರದೇಶ ಮೂಲದ ಸಲೀಂ, ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಹೀಲಿಯಂ ಬಲೂನ್ ಮಾರಾಟ ಮಾಡುತ್ತಿದ್ದ. ಬಲೂನ್‌ಗೆ ಗ್ಯಾಸ್ ತುಂಬಿಸುತ್ತಿದ್ದ ವೇಳೆ ಏಕಾಏಕಿ ಸಿಲಿಂಡರ್ ಸ್ಫೋಟವಾಗಿದ್ದು, ಸಲೀಂ ಅಲ್ಲೇ ಪ್ರಾಣ ಬಿಟ್ಟಿದ್ದ. ನಾಲ್ಕೈದು ಜನ ಗಾಯಗೊಂಡು ಆಸ್ಪತ್ರೆ ಸೇರಿದ್ದರು.
ಸ್ಫೋಟದ ತೀವ್ರತೆಗೆ ಸಲೀಂ ಸ್ಥಳದಲ್ಲೇ ಮೃತಪಟ್ಟರೆ, ನಂಜನಗೂಡಿನ ಮಂಜುಳ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಮೈಸೂರಿನಲ್ಲಿ ಹೂವು ಮಾರಾಟ ಮಾಡುತ್ತಿದ್ದ ಮಂಜುಳ ವ್ಯಾಪಾರ ಮುಗಿಸಿಕೊಂಡು ಬಸ್ ಹತ್ತಲು ಹೋಗುತ್ತಿದ್ದರು. ಹೀಗೆ ಹೋಗುವಾಗಲೇ ಸಿಲಿಂಡ್ ಸ್ಫೋಟಕ್ಕೆ ಬಲಿಯಾಗಿದ್ದಾರೆ.
ಸ್ಫೋಟದ ಹಿಂದೆ ಬಿದ್ದ ಎನ್ಐಎ!: ಸ್ಫೋಟಕ್ಕೆ ಬಲಿಯಾಗಿರುವ ಸಲೀಂ 15 ದಿನಗಳ ಹಿಂದಷ್ಟೇ ಮೈಸೂರಿಗೆ ಬಂದಿದ್ದ. ಲಷ್ಕರ್ ಮೊಹಲ್ಲಾದ ಷರೀಫ್ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದ. ಮೂರು ಜನ ಸ್ನೇಹಿತರು ಜತೆಗೆ ಬಲೂನ್ ಮಾರಾಟ ಮಾಡುತ್ತಿದ್ದರು. ಆದರೆ ಗುರುವಾರ ರಾತ್ರಿ ಸಲೀಂ ಒಬ್ಬನೇ ಬಂದು ಮಾರಾಟ ಮಾಡಿರುವುದು ಅನುಮಾನ ಮೂಡಿಸಿದೆ.
ಎನ್‌ಐಎ ಕೂಡಾ ಪೊಲೀಸ್ ಆಯುಕ್ತರಿಂದ ಮಾಹಿತಿ ಪಡೆದಿದೆ. ಇನ್ನು ಸಲೀಂ ಜತೆಗಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.





