ವೇಗದ ರೈಲುಗಳ ನಿರ್ಮಾಣಕ್ಕೆ ಖ್ಯಾತಿ ಪಡೆದಿರುವ ಚೀನಾ ಇದೀಗ ಮತ್ತೊಂದು ವಿಶ್ವ ದಾಖಲೆ ನಿರ್ಮಿಸಿದ್ದು, ಕೇವಲ 2 ಸೆಕೆಂಡ್ ನಲ್ಲಿ ರೈಲೊಂದು 700 Kmph ವೇಗ ತಲಪುವ ಮೂಲಕ ಜಾಗತಿಕ ದಾಖಲೆ ನಿರ್ಮಿಸಿದೆ.

ಚೀನಾದ ರಾಷ್ಟ್ರೀಯ ರಕ್ಷಣಾ ತಂತ್ರಜ್ಞಾನ ವಿಶ್ವವಿದ್ಯಾಲಯವು ವಿಶ್ವದ ಅತ್ಯಂತ ವೇಗದ ಮ್ಯಾಗ್ಲೆವ್ ರೈಲನ್ನು ನಿರ್ಮಿಸಿದ್ದು, ಕೇವಲ 2 ಸೆಕೆಂಡುಗಳಲ್ಲಿ ಗಂಟೆಗೆ 700 ಕಿ.ಮೀ ವೇಗ ತಲುಪುವ ಸಾಮರ್ಥ್ಯ ಹೊಂದಿದೆ.

ಈ ಅಲ್ಟ್ರಾ-ಹೈ-ಸ್ಪೀಡ್ ತಂತ್ರಜ್ಞಾನವು ಭವಿಷ್ಯದ ಪ್ರಯಾಣ, ಹೈಪರ್‌ಲೂಪ್ ವ್ಯವಸ್ಥೆಗಳು ಮತ್ತು ದೂರದ ನಗರಗಳನ್ನು ನಿಮಿಷಗಳಲ್ಲಿ ಸಂಪರ್ಕಿಸುವ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ.

ಚೀನಾದ ರಾಷ್ಟ್ರೀಯ ರಕ್ಷಣಾ ತಂತ್ರಜ್ಞಾನ ವಿಶ್ವವಿದ್ಯಾಲಯದ (NUDT) ಸಂಶೋಧಕರು ವಿಶ್ವದ ಅತೀ ವೇಗದ ರೈಲು ಸಂಶೋಧನೆಯಲ್ಲಿ ಯಶಸ್ಸು ಸಾಧಿಸಿದ್ದು, ಈ ಯೋಜನೆಯು ಕಠಿಣ ಪರೀಕ್ಷೆ ಮತ್ತು 10 ವರ್ಷಗಳ ಸಂಶೋಧನೆಯನ್ನು ಒಳಗೊಂಡಿತ್ತು. ಕೇವಲ ಎರಡು ಸೆಕೆಂಡುಗಳಲ್ಲಿ ಒಂದು ಟನ್ ತೂಕದ ರೈಲನ್ನು ಗಂಟೆಗೆ 700 ಕಿ.ಮೀ ವೇಗದಲ್ಲಿ ಸಂಚರಿಸುವಂತೆ ಮಾಡಿದ್ದಾರೆ. 400 ಮೀಟರ್ ಉದ್ದದ ಮ್ಯಾಗ್ನೆಟಿಕ್ ಲೆವಿಟೇಶನ್ (ಮ್ಯಾಗ್ಲೆವ್) ಪರೀಕ್ಷಾ ಹಳಿಯಲ್ಲಿ ಈ ದಾಖಲೆ ಸಾಧಿಸಲಾಯಿತು. ರೈಲನ್ನು ಸಹ ಈ ವೇಗದಲ್ಲಿ ಸುರಕ್ಷಿತವಾಗಿ ನಿಲ್ಲಿಸಲಾಯಿತು.

NUDT ಪ್ರಾಧ್ಯಾಪಕ ಲಿ ಜಿ ಈ ಕುರಿತು ಮಾತನಾಡಿದ್ದು, “ಈ ಯಶಸ್ಸು ಚೀನಾದ ಅಲ್ಟ್ರಾ-ಹೈ-ಸ್ಪೀಡ್ ಮ್ಯಾಗ್ಲೆವ್ ಸಾರಿಗೆ ವ್ಯವಸ್ಥೆಗಳ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಗಮನಾರ್ಹವಾಗಿ ವೇಗಗೊಳಿಸುತ್ತದೆ. ಅಂತೆಯೇ ತಮ್ಮ ಭವಿಷ್ಯದ ಗಮನವು ಹೈ-ಸ್ಪೀಡ್ ಮ್ಯಾಗ್ಲೆವ್ ಪೈಪ್‌ಲೈನ್ ಸಾರಿಗೆ, ಏರೋಸ್ಪೇಸ್ ಉಪಕರಣಗಳ ಪರೀಕ್ಷೆ ಮತ್ತು ವಿದ್ಯುತ್ಕಾಂತೀಯ ಉಡಾವಣಾ ತಂತ್ರಜ್ಞಾನದಂತಹ ಹೊಸ ತಂತ್ರಜ್ಞಾನಗಳ ಮೇಲೆ ಇರುತ್ತದೆ” ಎಂದು ಹೇಳಿದ್ದಾರೆ.

ಮ್ಯಾಗ್ನೆಟಿಕ್ ಲೆವಿಟೇಶನ್ : ಮ್ಯಾಗ್ನೆಟಿಕ್ ಲೆವಿಟೇಶನ್ ಎಂಬುದು ಚಕ್ರಗಳ ಬದಲಿಗೆ ಆಯಸ್ಕಾಂತಗಳನ್ನು ಬಳಸಿಕೊಂಡು ಹಳಿಯ ಮೇಲೆ ಸ್ವಲ್ಪ ದೂರ ತೇಲುತ್ತಿರುವ ಒಂದು ತಂತ್ರಜ್ಞಾನವಾಗಿದೆ. ರೈಲು ಮತ್ತು ಹಳಿಯಲ್ಲಿ ಹುದುಗಿರುವ ಆಯಸ್ಕಾಂತಗಳು ಪರಸ್ಪರ ವಿರುದ್ಧವಾಗಿ ತಳ್ಳುತ್ತವೆ. ಆ ಮೂಲಕ ರೈಲನ್ನು ಮುಂದಕ್ಕೆ ಚಲಿಸುತ್ತವೆ. ಇದು ಬಹುತೇಕ ತಡೆಯಲಾಗದ ಚಲನೆಗೆ ಅನುವು ಮಾಡಿಕೊಡುತ್ತದೆ.

ಸಂಶೋಧಕರ ಪ್ರಕಾರ, ಈ ಹೊಸ ವೇಗವು ಅಲ್ಟ್ರಾ-ಹೈ-ಸ್ಪೀಡ್ ಮ್ಯಾಗ್ಲೆವ್ ತಂತ್ರಜ್ಞಾನದಲ್ಲಿ ಅಂತರರಾಷ್ಟ್ರೀಯವಾಗಿ ಪ್ರಮುಖ ರಾಷ್ಟ್ರಗಳಲ್ಲಿ ಚೀನಾವನ್ನು ಇರಿಸಿದೆ. ಇದು ನಿರ್ವಾತ-ಟ್ಯೂಬ್ ಸಾರಿಗೆಯಂತಹ ಭವಿಷ್ಯದ ತಂತ್ರಜ್ಞಾನಗಳಿಗೆ ದಾರಿ ಮಾಡಿಕೊಡುತ್ತದೆ ಎನ್ನಲಾಗಿದೆ.

10 ವರ್ಷಗಳ ಸಂಶೋಧನೆ: ಪ್ರೊಫೆಸರ್ ಲಿ ಪ್ರಕಾರ, ತಂಡವು ಕಳೆದ 10 ವರ್ಷಗಳಿಂದ ಈ ಅಲ್ಟ್ರಾ-ಹೈ-ಸ್ಪೀಡ್ ಮ್ಯಾಗ್ಲೆವ್ ರೈಲು ಯೋಜನೆಯಲ್ಲಿ ಕೆಲಸ ಮಾಡಿದೆ. ಜನವರಿ 2025 ರಲ್ಲಿ, ರೈಲು ಮೊದಲು ಈ ಟ್ರ್ಯಾಕ್‌ನಲ್ಲಿ ಗಂಟೆಗೆ 648 ಕಿಲೋಮೀಟರ್ ವೇಗವನ್ನು ತಲುಪಿತು.

ಸುಮಾರು ಮೂರು ದಶಕಗಳ ಹಿಂದೆ, ಇದೇ ವಿಶ್ವವಿದ್ಯಾಲಯವು ಚೀನಾದ ಮೊದಲ ಮಾನವಸಹಿತ ಸಿಂಗಲ್-ಬೋಗಿ ಮ್ಯಾಗ್ಲೆವ್ ರೈಲನ್ನು ಅಭಿವೃದ್ಧಿಪಡಿಸಿತು. ಈ ಸಾಧನೆಯೊಂದಿಗೆ, ಚೀನಾ ಈ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡ ವಿಶ್ವದ ಮೂರನೇ ದೇಶವಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ