ರಾಷ್ಟ್ರಪತಿ ದ್ರೌಪದಿ ಮುರ್ಮು ಇದೇ ಮೊದಲಬಾರಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕದಂಬ ನೌಕಾನೆಲೆಗೆ ಆಗಮಿಸಿ ಅರಬ್ಬಿ ಸಮುದ್ರದಲ್ಲಿ ಐಎನ್ಎಸ್ ವಾಗ್ಶೀರ್ ಸಬ್ ಮರೀನ್ ನಲ್ಲಿ ಪ್ರಯಾಣಿಸಿದರು.
ಈ ಮೂಲಕ ಸಬ್ಮರೀನ್ನಲ್ಲಿ ಪ್ರಯಾಣಿಸಿದ 2 ನೇ ರಾಷ್ಟಪತಿ ಎಂಬ ದಾಖಲೆ ಬರೆದಿದ್ದಾರೆ. ಕಾರವಾರದ ಕದಂಬ ನೌಕಾನೆಲೆಗೆ ಆಗಮಿಸಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಬರಮಾಡಿಕೊಂಡರು.
ಏಷ್ಯದ ಅತೀ ದೊಡ್ಡ ನೌಕಾ ನೆಲೆಯಾಗಿರುವ ಕಾರವಾರದ ಕದಂಬ ನೌಕಾನೆಲೆ ಫೇಸ್ -2 ಕಾಮಗಾರಿ ಸಹ ಮುಕ್ತಾಯವಾಗಿದ್ದು ಯುದ್ದ ಹಡಗುಗಳು, ಸಬ್ ಮರೀನ್ಗಳ ನಿಲ್ದಾಣದ ತಾಣವಾಗಿದೆ. ರಿಪೇರಿ ಯಾರ್ಡ್ ಸಹ ಇದೇ ಭಾಗದಲ್ಲಿ ನಿರ್ಮಾಣವಾಗುತ್ತಿದೆ. ಇದೀಗ ರಾಷ್ಟ್ರಪತಿ ಮುರ್ಮು ಭೇಟಿ ನೀಡಿ, ಸಬ್ ಮರೀನ್ನಲ್ಲಿ ಒಂದು ಗಂಟೆಗಳ ಐತಿಹಾಸಿಕ ಪ್ರಯಾಣ ನಡೆಸಿದರು.
ಈ ಸಂದರ್ಭ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ, ಚೀಫ್ ಆಫ್ ನೇವಲ್ ಸ್ಟಾಪ್ ಮತ್ತು ರಿಯರ್ ಅಡ್ಮಿರಲ್ ವಿಕ್ರಂ ಮೆನನ್ , ಪ್ಲಾಬ್ ಆಫೀಸರ್ ಕರ್ನಾಟಕ ನೇವಲ್ ಏರಿಯ ಅಧಿಕಾರಿಗಳು ಸಾಥ್ ನೀಡಿದರು.
ಗೋವಾ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಕದಂಬ ನೌಕಾನೆಲೆಗೆ ಆಗಮಿಸಿದ ದ್ರೌಪದಿ ಮುರ್ಮು ಅವರನ್ನು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಸ್ವಾಗತಿಸಿದರು. ಮೀನುಗಾರಿಕೆ ಸಚಿವ ಮಂಕಾಳ ವೈದ್ಯ, ಪ್ರಾದೇಶಿಕ ಆಯುಕ್ತೆ ಜಾನಕಿ, ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಎಡಿಜಿಪಿ ಹಿತೇಂದ್ರ, ಐಜಿಪಿ ಅಮಿತ್ ಸಿಂಗ್, ಎಸ್ಪಿ ದೀಪನ್ ಎಂ. ಎನ್ ಉಪಸ್ಥಿತರಿದ್ದರು.





