ಸುಸಂಸ್ಕೃತ ಸ್ವಭಾವದ ಸುಜಾತಾ, ಜೀವನದ ಏಳುಬೀಳುಗಳನ್ನು ದಾಟಿ, ಕೊನೆಗೆ ವೃದ್ಧಾಶ್ರಮ ಸೇರುವಂತಾಯಿತು. ಅಲ್ಲಿ ಅನಿರೀಕ್ಷಿತವಾಗಿ ಹಳೆಯ ಪರಿಚಿತ ವ್ಯಕ್ತಿಯನ್ನು ಗುರುತಿಸಿದಾಗ, ಮುಂದೆ ನಡೆದದ್ದು ಏನು…..?
ಆಕರ್ಷಕ ವ್ಯಕ್ತಿತ್ವದ ಅರವತ್ತೇಳರ ಸುಜಾತಾ, ಶ್ರೀ ಅಂಬಾಳ್ ವೃದ್ಧಾಶ್ರಮಕ್ಕೆ ಕಳೆದ ಮೂರು ವರ್ಷಗಳ ಹಿಂದೆ ಸ್ವಯಂ ಪ್ರೇರಿತಳಾಗಿ ಬಂದು ಸೇರಿದ್ದಳು.
ಬದುಕಿನ ಚಿತ್ರ ವಿಚಿತ್ರ ಏರಿಳಿತಗಳನ್ನು ಕಂಡು, ಅನುಭವಿಸಿ ಮಾಗಿತ್ತು ಅವಳ ಜೀವ. ಶಾಂತ ಸ್ವರೂಪದ ಸುಜಾತಾ ಮೃದು ಹೃದಯಿ, ಕರುಣಾಮಯಿ, ಸ್ನೇಹ ಜೀವಿ. ಚಿತ್ರಕಲೆ, ಗಾಯನ, ಕಸೂತಿ ಮೊದಲುಗೊಂಡು ವೈವಿಧ್ಯಮಯ ಪಾಕ ತಯಾರಿಸುವುದರಲ್ಲಂತೂ ಅವಳದು ಎತ್ತಿದ ಕೈ. ಹೀಗಾಗಿ ಸುಜಾತಾ ಆ ವೃದ್ಧಾಶ್ರಮಕ್ಕೆ ಸೇರ್ಪಡೆ ಆದಾಗಿನಿಂದಲೂ ಅದಕ್ಕೊಂದು ಹೊಸ ಮೆರುಗು ಬಂದಿದ್ದು ಸುಳ್ಳಲ್ಲ.
ಬೆಳಗಿನ ಪ್ರಾರ್ಥನೆ ನಂತರ ಅವರಿವರೆನ್ನದೇ ಎಲ್ಲ ಆಶ್ರಮ ವಾಸಿಗಳ ಬಳಿ ಹೋಗಿ ನಗು ಮೊಗದಿಂದ ಆತ್ಮೀಯವಾಗಿ ಅವರುಗಳ ಕ್ಷೇಮ ಸಮಾಚಾರ ವಿಚಾರಿಸುವುದರ ಜೊತೆಗೆ, ಅವರ ಸಣ್ಣ ಪುಟ್ಟ ಸಮಸ್ಯೆಗಳನ್ನೂ ಬಗೆಹರಿಸುತ್ತಿದ್ದಳು. ಇವಳ ಈ ಕಾಯಕ ಕೇವಲ ಆಶ್ರಮ ವಾಸಿಗಳಿಗಷ್ಟೇ ಸೀಮಿತವಾಗಿರದೇ, ಅಲ್ಲಿನ ಕಛೇರಿ ಸಿಬ್ಬಂದಿ, ಅಡುಗೆಯವರು, ತೋಟದ ನಿರ್ವಹಣೆ ಮಾಡುವವರನ್ನೂ ಒಳಗೊಂಡಿತ್ತು. ಇದರಿಂದಾಗಿ ಎಲ್ಲರ ಅಚ್ಚುಮೆಚ್ಚಿನ ಸುಜಾತಾ ಅವರೆಲ್ಲರ ಬಾಯಿಯಲ್ಲಿ `ಸುಜಕ್ಕಾ’ ಎಂದೇ ಪ್ರಸಿದ್ಧಳಾಗಿದ್ದಳು. ಈ ಸುಜಕ್ಕಾ, ತನ್ನ ನಿತ್ಯದ ಕೆಲಸದೊಂದಿಗೆ ಆ ಆಶ್ರಮಕ್ಕೆ ಯಾರಾದರೂ ಹೊಸತಾಗಿ ಸೇರ್ಪಡೆಯಾದವರ ವಿವರ ಪಡೆದು, ಖುದ್ದಾಗಿ ಪರಿಚಯಿಸಿಕೊಂಡು, ಆತ್ಮೀಯತೆಯಿಂದ ಅವರ ವ್ಯಥೆಯ ಕಥೆಗೆ ಕಿವಿಯಾಗಿ, ಮನೋಬಲ ತುಂಬುವಲ್ಲಿ ಯಶಸ್ವಿಯಾಗಿದ್ದಳು. ಹೀಗಾಗಿ ಜೀವನದಲ್ಲಿ ನೊಂದು ಬೆಂದು ಅಲ್ಲಿಗೆ ಪ್ರವೇಶ ಪಡೆದರು ಅತಿ ಶೀಘ್ರದಲ್ಲೇ ಆಶ್ರಮದ ಪರಿಸರಕ್ಕೆ ಹೊಂದಿಕೊಂಡು ಹೋಗುವಂತಾಗಿತ್ತು.
ಚತುರಮತಿ ಸುಜಾತಾ, ತನ್ನ ಇಪ್ಪತ್ತನೇ ವಯಸ್ಸಿನಲ್ಲೇ ಉತ್ತಮ ಅಂಕಗಳೊಂದಿಗೆ ಪದವಿ ಪಡೆದು, ಮರು ವರ್ಷವೇ ಕೈ ತುಂಬ ಸಂಬಳ ದೊರೆಯುವಂತಹ ಕೆಲಸಕ್ಕೆ ಸೇರಿದ್ದಳು. ಅಲ್ಲಿ ಸೇರಿ ಒಂದು ವರ್ಷದ ಅವಧಿಯೊಳಗೆ ಅದೇ ಕಛೇರಿಯಲ್ಲಿ ಅವಳಷ್ಟೇ ಪ್ರಾಯದ ಸ್ಛುರದ್ರೂಪಿ ಮೇನೇಜರ್ ಆನಂದ್ ನ ಪರಿಚಯವಾಗಿ, ಕ್ರಮೇಣ ಅದು ಪ್ರೀತಿಯತ್ತ ವಾಲಿತ್ತಾದರೂ ಯಾವುದೇ ಸಂದರ್ಭದಲ್ಲಿ ಎಲ್ಲೇ ಮೀರಿರಲಿಲ್ಲ. ಇವರ ಅನ್ಯೋನ್ಯ ಪ್ರೀತಿಯ ಪಯಣ, ಎರಡನೇ ವರ್ಷಕ್ಕೆ ಕಾಲಿಡುತ್ತಿದ್ದಂತೆ, ಸುಜಾತಾ ತನ್ನ ತಾಯಿ ತಂದೆ ನೋಡಿ, ಸೂಚಿಸಿದ ನಗರದ ಪ್ರತಿಷ್ಠಿತ ಉದ್ಯಮಿಯನ್ನು ವಿವಾಹವಾಗಿ ಸಂಸಾರ ಎಂಬ ನೂತನ ಪ್ರಪಂಚಕ್ಕೆ ಸೇರ್ಪಡೆಯಾಗಿದ್ದಳು.
ಇದರಿಂದಾಗಿ ಆನಂದನೊಂದಿಗಿನ ಪ್ರೀತಿ ಪ್ರೇಮಗಳ ಪರಿಧಿಯಿಂದ ಆಚೆ ಬಂದು ಕಾಲು ಕ್ರಮೇಣ ಎಲ್ಲವನ್ನೂ ಮರೆತಿದ್ದಳು. ಕೈ ಹಿಡಿದ ಪತಿಗೆ ಸಾಕಷ್ಟು ಆಸ್ತಿ ಅಂತಸ್ತು ಇದ್ದು ಇವಳ ಸಂಸಾರ ಇತರರಿಗೆ ಕಿಚ್ಚು ಹತ್ತುವಂತಿತ್ತು. ಸುಜಾತಾ ಮೂವತ್ತೆರಡರ ಗಡಿ ತಲುಪುವ ಹೊತ್ತಿಗೆ ಎರಡು ಗಂಡು ಮಕ್ಕಳ ತಾಯಿಯಾದ ಸಂತೃಪ್ತಿ ಅವಳಲಿತ್ತು. ಅವಳ ಇಬ್ಬರೂ ಮಕ್ಕಳು ಚೆನ್ನಾಗಿ ವಿದ್ಯಾಭ್ಯಾಸ ಪೂರೈಸಿ ಒಂದು ಹಂತದ ಹೊಸ್ತಿಲಿನಲ್ಲಿದ್ದಾಗ, ವಿಧಿಯ ಆಟದಂತೆ ಪತಿಯನ್ನು ಕಳೆದುಕೊಂಡಿದ್ದಳು.
ಸುಶಿಕ್ಷಿತೆ ಸುಜಾತಾ ಯಾವುದಕ್ಕೂ ಧೃತಿಗೆಡದೇ ಧೈರ್ಯದಿಂದ ಸಂಸಾರದ ನೊಗ ಹೊತ್ತು, ಮಕ್ಕಳನ್ನು ಓದಿಸಿ, ಮುಂದೆ ಅವರು ಕಾಲ ಮೇಲೆ ನಿಲ್ಲುವೆತೆ ಮಾಡುವಲ್ಲಿ ಯಶಸ್ವಿಯಾದಳು. ಅಂತೂ ತನ್ನ ಇಬ್ಬರೂ ಮಕ್ಕಳಿಗೆ ಅನುಕೂಲಸ್ಥ ಕುಟುಂಬದಿಂದ ಹೆಣ್ಣು ತಂದು ಅತ್ತೆಯ ಪಟ್ಟ ಏರಿದ್ದಳು. ಎಲ್ಲರೂ ಒಗ್ಗಟ್ಟಿನಿಂದ ಸಂಸಾರ ಸಾಗಿಸುತ್ತಿರುವಷ್ಟರಲ್ಲಿ ಅನಿರೀಕ್ಷಿತವಾಗಿ ಎದ್ದ ಬಿರುಗಾಳಿಯ ಹೊಡೆತಕ್ಕೆ ಸಿಲುಕಿ ಇಬ್ಬರು ಮಕ್ಕಳೂ ಪ್ರತ್ಯೇಕವಾಗಿ ವಾಸಿಸುವ ಹಂತ ತಲುಪಿತ್ತು. ತಾನು ಬಾಳಿ ಬದುಕಿದ ಸಮಾಜದ ಎದುರು ತನ್ನ ಸಂಸಾರ ಹೀಗಾಗಬಾರದೆಂದು ಸುಜಾತಾ ಎಷ್ಟೇ ಪ್ರಯತ್ನಿಸಿದರೂ ಅದರಲ್ಲಿ ಅವಳು ಸೋತು ಹೋಗಿದ್ದಳು. ಅಂತಿಮವಾಗಿ ದೇವನ ಆಟದಂತೆ ಏನೇನು ನಡೆಯಬೇಕೋ ಅದು ನಡೆದು ತೀರಲಿ ಎಂಬ ದೃಢ ನಿರ್ಧಾರಕ್ಕೆ ಬಂದು ನೋವುಗಳೆಲ್ಲವನ್ನೂ ನುಂಗಿ, ತನ್ನ ಭವಿಷ್ಯದ ಬಾಳನ್ನು ಸಮಾಜದ ಅಸಹಾಯಕ ವೃದ್ಧರೊಂದಿಗೆ ಕಳೆದು, ಕೈಲಾದಷ್ಟು ಸೇವೆ ಮಾಡಿ ನೆಮ್ಮದಿಯಿಂದ ಬದುಕಬೇಕೆಂಬ ಇರಾದೆಯಿಂದ, ಇಬ್ಬರು ಮಕ್ಕಳಿಗೂ ಯಾವುದೇ ರೀತಿ ಅನ್ಯಾಯ ಮಾಡದಂತೆ ಆಸ್ತಿ ಸಮಪಾಲು ಮಾಡಿಕೊಟ್ಟು, ಸ್ವಯಂ ಪ್ರೇರಿತಳಾಗಿ ಈ ಶ್ರೀ ಅಂಬಾಳ್ ವೃದ್ಧಾಶ್ರಮಕ್ಕೆ ತನ್ನಲ್ಲಿದ್ದ ಒಂದಿಷ್ಟು ಮೊತ್ತವನ್ನು ದಾನವಾಗಿ ನೀಡಿ, ತನ್ನ ಉಳಿದ ಬಾಳು ಕಳೆಯಲು ಬಂದು ಸೇರಿದ್ದಳು. ಸುಮಾರು ನಲವತ್ತು ವರ್ಷಗಳ ಕಾಲ ಸಿರಿತನ ಅನುಭವಿಸ್ದಿದರೂ ಸಹ ಸುಜಾತಾ, ಅಲ್ಲಿನ ನಿಸ್ಸಹಾಯಕ ವೃದ್ಧರ ಮನೋಸ್ಥಿತಿ ಅರಿತು, ಅವರೊಂದಿಗೆ ಇರತೊಡಗಿದ್ದಳು. ತಾನು ಸಬಲವಾದ ಆರ್ಥಿಕ ಹಿನ್ನೆಲೆಯಿಂದ ಬಂದಿದ್ದೇನೆ, ಅಲ್ಲಿ ತನಗೆ ವಿಶಿಷ್ಟ ಸ್ಥಾನಮಾನ, ಅನುಕೂಲಗಳು ಬೇಕೆಂಬ ಬಯಕೆಗಳನ್ನು ಬುಡ ಸಮೇತ ಕಿತ್ತು, ಅಲ್ಲಿಗೆ ಬಂದ ಇನ್ನಿತರೇ ಆಶ್ರಮ ವಾಸಿಗಳೊಂದಿಗೆ ತಾನೂ ಒಬ್ಬಳಾಗಿ ಬೆರೆತು ನೆಮ್ಮದಿಯಿಂದ ಕಾಲ ನೂಕುತ್ತಿದ್ದಳು.
ಅದೊಂದು ದಿನ ಆಶ್ರಮಕ್ಕೆ ಹೊಸತಾಗಿ ಸೇರಿದ ಸುಮಾರು ಎಪ್ಪತ್ತು ವರ್ಷದ ಪ್ರಾಯದವರು ಕಳೆದ ಎರಡು ದಿನಗಳಿಂದ ಪ್ರಾರ್ಥನೆ, ತಿಂಡಿ, ಊಟ, ಪ್ರವಚನಗಳಿಗೆ ಮಾತ್ರ ಹಾಜರಿದ್ದು, ಯಾರೊಂದಿಗೂ ಹೆಚ್ಚು ಬೆರೆಯದೇ ತಮ್ಮ ಕೋಣೆಗೆ ಸೇರಿ ಬಿಡುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಿದ ಸುಜಾತಾ, ಅಂದು ಸಂಜೆಯ ಕಾಫಿ ಕಾರ್ಯಕ್ರಮದ ನಂತರ ಅವರ ರೂಮಿನತ್ತ ಹೆಜ್ಜೆ ಹಾಕಿದಳು.
ರೂಮಿನ ಬಾಗಿಲು ಅರೆಬರೆ ತೆಗೆದಿತ್ತು. ಒಳಗೆ ಇಣುಕಿದಳು. ಫ್ಯಾನಿನ ಕೆಳಗೆ ಆರಾಮ ಕುರ್ಚಿ ಮೇಲೆ ಆ ವ್ಯಕ್ತಿ ಯಾವುದೋ ಪುಸ್ತಕ ಓದುವುದರಲ್ಲಿ ತಲ್ಲೀನರಾಗಿದ್ದರು.
`ಟಕ್… ಟಕ್’ ಎಂದು ಬಾಗಿಲ ಬಳಿಯಿಂದ ಬಂದ ಶಬ್ದ ಆಲಿಸಿದರು ಪುಸ್ತಕ ಮಡಿಸಿ, ಕನ್ನಡಕ ಸರಿ ಮಾಡಿಕೊಳ್ಳುತ್ತಾ, “ಬನ್ನಿ…. ಬನ್ನಿ….” ಎಂದು ನಗುಮೊಗದಿಂದ ಸ್ವಾಗತಿಸಿದರು. ಒಳಕ್ಕೆ ಬಂದ ಸುಜಾತಾ ಅಲ್ಲಿದ್ದ ಮಂಚದ ತುದಿಗೆ ಕುಳಿತು ತನ್ನನ್ನು ಪರಿಚಯಿಸಿಕೊಂಡಳು.
ಆ ಒಂದು ಸಂದರ್ಭದಲ್ಲಿ ಆ ವ್ಯಕ್ತಿ ತಮ್ಮ ಕೈಲಿದ್ದ ಪುಸ್ತಕವನ್ನು ಪಕ್ಕದ ಟೇಬಲ್ ಮೇಲೆ ಇಡಲು ಮುಂದಾದಾಗ ಅದರೊಳಗಿದ್ದ ಅಂಗೈ ಅಗಲದ ಬ್ಲಾಕ್ ಅಂಡ್ ವೈಟ್ ಫೋಟೋ ಜಾರಿ ಸುಜಾತಾಳ ಪಾದದ ಬಳಿ ಬಿದ್ದಿತು. ಅವಳು ಅದನ್ನೆತ್ತಿ ಅವರಿಗೆ ಕೊಡುವಾಗ ಆ ಫೋಟೋ ಹಿಂಬದಿ, `ಆಸು.. ಪ್ರೀತಿ ಅಮರ’ ಎಂದಿಷ್ಟೇ ಬರೆದ ಅಕ್ಷರಗಳು ಕಣ್ಣಿಗೆ ಬಿದ್ದ ಮರುಕ್ಷಣವೇ ಅವಳ ಆಂತರ್ಯದಲ್ಲಿ ಮಾಸಿ ಮಣ್ಣಾಗಿದ್ದ ಯಾವುದೋ ಅವ್ಯಕ್ತ ಭಾವನೆ ಪುಟಿದೆದ್ದಿತು. ತಡವರಿಸುತ್ತಾ, “ಆನಂದ್…. ನೀವು….” ಎಂದು ಗದ್ಗತಿಳಾದಳು.
ಆಗ ಆ ವ್ಯಕ್ತಿ ಕೂಡ ಅಷ್ಟೇ ಭಾವುಕರಾಗಿ, “ಹ್ಞಾಂ…. ಹೌದು ನಾನೇ ಆನಂದ್!” ಎಂದು ಹೇಳುತ್ತಾ ಹತ್ತಾರು ವರ್ಷಗಳ ಹಿಂದೆ ತಾವು ಸೇವೆಯಿಂದ ನಿವೃತ್ತರಾಗಿದ್ದು, ಈಗ ಎರಡು ವರ್ಷಗಳ ಹಿಂದೆ ಪುತ್ರ ಸಂತಾನವಿಲ್ಲದ ತಮ್ಮ ಪತ್ನಿ ಹೃದಯಾಘಾತದಿಂದ ಮರಣಹೊಂದಿ ತಮ್ಮನ್ನು ಒಂಟಿಯಾಗಿ ಮಾಡಿದ್ದು…. ಒಂಟಿ ಜೀವನದಿಂದ ಬೇಸತ್ತು ತಾವು ಸ್ವಯಂ ಪ್ರೇರಿತರಾಗಿ ಈ ಆಶ್ರಮಕ್ಕೆ ಸೇರಿಕೊಂಡೆ ಎಂದು ಎಲ್ಲವನ್ನೂ ವಿವರಿಸುತ್ತಾ, “ನೀನು ಅದೇ ಸುಜಾತಾ… ಅಲ್ವಾ….” ಎಂದು ಕೇಳಿದರು.
ಇದರಿಂದ ದುಃಖತಪ್ತಳಾದ ಸುಜಾತಾ, “ದಯವಿಟ್ಟು ಏಕವಚನ ಬೇಡ ಆನಂದ್,” ಎಂದು ಹೇಳಿ, ಈ ತನಕ ತಾನು ನಡೆದು ಬಂದ ಜೀವನ ಕಥೆಯನ್ನು ಎಳೆ ಎಳೆಯಾಗಿ ಬಿಡಿಸಿ ಹೇಳುತ್ತಿದ್ದಂತೆ ಈರ್ವರ ಕಣ್ಣಲ್ಲಿ ಸುರಿದು ಬಂದ ಕಂಬನಿ ಅವರ ಅನಿರೀಕ್ಷಿತ ಭೇಟಿಗೆ ಮೂಕ ಸಾಕ್ಷಿಯಾಗಿತ್ತು.