ಕಥೆ - ಡಾ. ದೀಪಾ ಹಿರೇಮಠ್
ಮೊದಲಿನಿಂದಲೂ ಬಡತನದ ಬೇಗೆಯಲ್ಲಿ ಬೆಂದಿದ್ದ ಪಾರ್ವತಿ, ಹುಟ್ಟಿದ ಮನೆಯಿಂದ ಮೆಟ್ಟಿದ ಮನೆಗೆ ಬಂದರೂ ಕಷ್ಟ ಕಾರ್ಪಣ್ಯ ತಪ್ಪಲಿಲ್ಲ. ಕುಡುಕ ಗಂಡನ ಕಾಟದೊಂದಿಗೆ ಸಂಸಾರದ ನೊಗ ಎಳೆಯುತ್ತಾ ಪಾರ್ವತಿ ಮಕ್ಕಳನ್ನು ಓದಿಸಿ ಬೆಳೆಸಿದಳು. ಮುಂದೆ ಅವಳ ಬದುಕಿನ ಜಟಕಾ ಬಂಡಿ ಎತ್ತ ಸಾಗಿತು......?
ಜವರಾಯ ಬಂದರೆ ಬರಿ ಕೈಲಿ ಬರಲಿಲ್ಲ ಕುಡುಗೋಲು ಕೊಡಲಿ ಹೆಗಲಲ್ಲಿ ಇಟುಗೊಂಡು ಒಳ್ಳೊಳ್ಳೆ ಮರ ಕಡಿದು ಬಂದ ಅಲ್ವಾ ಹಾಗೂ ದೊಡ್ಡ ದಿನ ರಾತ್ರಿ ರಾಗಿ ಬೀಸುವಾಗ ಹಾಡುತ್ತಿದ್ದ ಅನೇಕ ಜನಪದ ಗೀತೆಗಳಲ್ಲಿ ಇದೂ ಒಂದು. ಜವರಾಯ ಯಾವಾಗಲೂ ಹಾಗೆ, ಅವನಿಗೆ ಒಳ್ಳೆಯವರ ಮೇಲೆ ಕಣ್ಣು. ಬದುಕು ಬೇಡವೆನಿಸಿ ಸಾವಿಗಾಗಿ ಹಂಬಲಿಸುವ ವೃದ್ಧರ ಬಳಿ ಅವನು ಸುಳಿಯುವುದೇ ಇಲ್ಲ. ಬಾಳಬೇಕಾದ ಮಕ್ಕಳು, ಸಾಧಿಸಬೇಕಾದ ಯುವಜನತೆ ಅವನಿಗೆ ಬಲು ಪ್ರೀತಿ ಎಂದು ಕಾಣುತ್ತದೆ.
ಕಲ್ಯಾಣಪುರ ನಗರದಿಂದ ಒಂದೆರಡು ಕಿಲೋಮೀಟರ್ ದೂರದಲ್ಲಿರುವ ಸುಂದರ ಪುಟ್ಟ ಹಳ್ಳಿ. ಇತ್ತೀಚೆಗೆ ನಗರದ ಪ್ರಭಾವದಿಂದ ಅದೂ ಬೆಳೆಯುತ್ತಿದೆ. ಇಲ್ಲಿನ ಜನರು ನಗರಕ್ಕೆ ಹೋಗಿ ಹಾಲು ಮಾರಿ ಬರುತ್ತಾರೆ. ಸೊಪ್ಪು, ತರಕಾರಿ, ಸೌತೆಕಾಯಿ, ಹೂವು ಮೊದಲಾದವುಗಳನ್ನು ಬೆಳೆದು ಮಾರಿ ಹಣ ಸಂಪಾದಿಸುತ್ತಾರೆ. ಕೂಲಿ ಕಾರ್ಮಿಕರು ಸಹ ಗಾರೆ ಕೆಲಸಕ್ಕೆ ಹೋಗಿ ಸಾಕಷ್ಟು ಚೆನ್ನಾಗಿಯೇ ಬದುಕುತ್ತಿದ್ದಾರೆ. ಆದರೆ ಕೆಂಚ ಮಾತ್ರ ಯಾವ ರೀತಿಯಿಂದಲೂ ಬದಲಾಗಲಾರ.
ಕೆಂಚನ ಮನೆ ಮುಂದೆ ಜನ ಸೇರಿದ್ದಾರೆ. ಗುಂಪು ಗುಂಪಾಗಿ ನಿಂತು ಮಾತನಾಡಿಕೊಳ್ಳುತ್ತಿದ್ದಾರೆ. ಕೆಲವರು ಮೌನಕ್ಕೆ ಶರಣಾಗಿದ್ದಾರೆ. ದುಂಡು ಮುಖದ ಗೋಧಿ ಮೈ ಬಣ್ಣದ, ಸದಾ ನಗು ನಗುತ್ತಿದ್ದ ಕೆಂಚನ ಹಿರಿಮಗಳು ಲಕ್ಷ್ಮಿ ಇಂದು ಹೆಣವಾಗಿ ಮಲಗಿದ್ದಾಳೆ. ಜಗುಲಿಯ ಮೇಲೆ ಲಕ್ಷ್ಮಿಯ ದೇಹವನ್ನು ಇಟ್ಟು ಮುಖ ಮಾತ್ರ ಕಾಣುವಂತೆ ಮೈ ತುಂಬಾ ಬಟ್ಟೆ ಹೊದಿಸಿದ್ದಾರೆ. ಊದಿಕೊಂಡ ಮುಖ, ಕೆಂಪಾದ ಕಣ್ಣು ಗುಡ್ಡೆಗಳು, ಮೂಗಿನಲ್ಲಿ ಹತ್ತಿ..... ಒಟ್ಟಿನಲ್ಲಿ ಲಕ್ಷ್ಮಿ ವಿಕಾರವಾಗಿ ಕಾಣುತ್ತಿದ್ದಾಳೆ.
ಅವಳ ತಲೆಯ ಬಳಿ ಕೆಂಚನ ಹೆಂಡತಿ ಪಾರ್ವತಿ ಎದೆ ಎದೆ ಬಡಿದುಕೊಂಡು ಗೋಳಾಡುತ್ತಿದ್ದಾಳೆ. ತಲೆಗೂದಲನ್ನು ಕಿತ್ತುಕೊಳ್ಳುತ್ತಾಳೆ. ಅವಳು ಒಂದು ವಾರದಿಂದ ಲಕ್ಷ್ಮಿಯನ್ನು ಉಳಿಸಿಕೊಳ್ಳಲು ಮಾಡಿದ ಪ್ರಯತ್ನವೆಲ್ಲ ವ್ಯರ್ಥವಾಗಿದೆ. ಅವಳು ಹರಕೆ ಹೊತ್ತ ದೇವರುಗಳಾವು ಲಕ್ಷ್ಮಿಯನ್ನು ಅವಳ ಪಾಲಿಗೆ ಉಳಿಸಿಕೊಡಲಿಲ್ಲ. ನಿದ್ದೆಯಿಲ್ಲದ ಕಣ್ಣುಗಳು, ಊಟವಿಲ್ಲದೆ ಬಳಲಿದ ದೇಹ, ಲಕ್ಷ್ಮಿಯನ್ನು ನೋಡಲು ಬಂದ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳನ್ನು ನೋಡಿ ಅವಳ ದುಃಖ ಇನ್ನಷ್ಟು ಹೆಚ್ಚಾಯಿತು.
ಹರಿದ ಸೀರೆ ಸೆರಗಿನ ಪರಿವೆಯು ಇಲ್ಲದ ಪಾರ್ವತಿ, ನೋಡಿ ಸ್ವಾಮಿ ನನ್ನ ಮಗಳು ಹೆಂಗೆ ಮಲಗವಳೆ, ನೀವಾದ್ರೂ ಅವಳನ್ನು ಉಳಿಸಿಕೊಡಿ ಎಂದು ಗೋಗರೆಯುತ್ತಾಳೆ. ಉಪನ್ಯಾಸಕರ ಕಾಲು ಹಿಡಿಯಲು ಹೋಗುತ್ತಾಳೆ. ಕುಡುಕ ಗಂಡನೊಡನೆ ಬಾಳ್ವೆ ಮಾಡುತ್ತಾ ಹದಿನೇಳು ವರ್ಷಗಳು ಕಣ್ಣ ರೆಪ್ಪೆಯಂತೆ ಕಾಪಾಡಿದ್ದ ಮಗಳ ಉಸಿರು, ಕಣ್ಮುಚ್ಚಿ ಕಣ್ಣು ಬಿಡುವುದರೊಳಗೆ ನಿಂತುಹೋಗಿತ್ತು. ಇದನ್ನು ತಾಯಿಯ ಹೃದಯ ಹೇಗೆ ಸಹಿಸಬಲ್ಲದು? ಪಾರ್ವತಿಯ ಸಂಕಟವನ್ನು ನೋಡಿ ಎಲ್ಲರ ಕಣ್ಣಲ್ಲೂ ನೀರು. ಅಲ್ಲಿದ್ದವರೆಲ್ಲ ಅವಳನ್ನು ನೋಡಿ ಮರಗುವವರೆ.