ಕನ್ನಡಿಗರ ಅಚ್ಚುಮೆಚ್ಚಿನ ಹಬ್ಬ ಯುಗಾದಿಯನ್ನು ನಮ್ಮ ಸಿನಿಮಾ ತಾರೆಯರು ಅದ್ಧೂರಿಯಾಗಿ ಹೇಗೆ ಆಚರಿಸುತ್ತಿದ್ದಾರೆ ಎಂದು ತಿಳಿಯೋಣವೇ......?
ಯುಗಾದಿ ಹಿಂದೂಗಳಿಗೆ ವರ್ಷಾರಂಭದ ಹಬ್ಬ. ಎಲ್ಲರ ಮನೆಯಲ್ಲಿ ಸಂಭ್ರಮದ ವಾತಾವರಣ. ನಮ್ಮ ಸಿನಿರಂಗದ ತಾರೆಯರಂತೂ ಅದ್ಧೂರಿಯಾಗಿ ತಮ್ಮ ತಮ್ಮ ಮನೆಯ ಸಂಪ್ರದಾಯದಂತೆ ಆಚರಿಸುವ ರೂಢಿ ಇಟ್ಟುಕೊಂಡಿರುತ್ತಾರೆ.
`ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ,' ಹಾಡಂತೂ ಇಡೀ ದಿನ ಟಿವಿ, ರೇಡಿಯೋಗಳಲ್ಲಿ ತೇಲಿ ಬರುತ್ತಿರುತ್ತದೆ. ಈ ಸಂಭ್ರಮದ ಹಬ್ಬವನ್ನು ನಮ್ಮ ನಟಿಮಣಿಗಳು ಹೇಗೆ ಆಚರಿಸುತ್ತಾರೆ ನೋಡೋಣ :
ಸಾಕ್ಷಿ ಮೇಘನಾ
ಈಗಾಗಲೇ ಸಾಕಷ್ಟು ಕನ್ನಡ ಚಿತ್ರಗಳಲ್ಲಿ ನಟಿಸಿ ಸೋಶಿಯಲ್ ಮೀಡಿಯಾದಲ್ಲೂ ಚೂಟಿಯಾಗಿರುವ ಮೇಘನಾ, ಪದ್ಮಾವತಿ ಚಿತ್ರದಲ್ಲಿ ವಿಕ್ರಮ್ ಆರ್ಯಾ ಜೊತೆ ನಟಿಸಿ ಉತ್ತಮ ಹೆಸರು ಪಡೆದಳು. ನಂತರ `ಬೆಸ್ಟ್ ಫ್ರೆಂಡ್ಸ್, ಲೋಫರ್ಸ್' ಚಿತ್ರದಲ್ಲೂ ಭಾರಿ ಮಿಂಚಿದ್ದಾಳೆ. ಮುಂದೆ ಈಕೆ ತಿಲಕ್ ಶೇಖರ್ ಜೊತೆ `ವರ್ಣಾಂತರಂಗ' ಥ್ರಿಲ್ಲರ್ ಚಿತ್ರ ಶೂಟಿಂಗ್ ನಲ್ಲಿ ಬಿಝಿಯಾಗಿದ್ದಾಳೆ.
ಯುಗಾದಿ ಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸುತ್ತಾಳೆ. ಹೌದು ನಾನು ವಾರಕ್ಕೆ ಎರಡು ದಿನ ಉಪವಾಸ ಮಾಡ್ತೀನಿ. ಯುಗಾದಿ ಹಬ್ಬದ ದಿನ ಸಾಮಾನ್ಯವಾಗಿ ಎಲ್ಲರೂ ಹೊಟ್ಟೆ ತುಂಬಾ ತಿಂದರೆ, ನಾನು ಮಾತ್ರ ಪೂಜೆ ಮಾಡುವವರೆಗೂ ನೀರು ಕೂಡ ಕುಡಿಯೋದಿಲ್ಲ. ಪೂಜೆ ಮುಗಿದ ಮೇಲೆ ಊಟ ಮಾಡುವಾಗ ಅನ್ನ ತಿನ್ನುವುದಿಲ್ಲ, ಇತರೆ ತಿಂಡಿ ಸೇವಿಸುತ್ತೇನೆ. ಬಹಳ ವರ್ಷಗಳಿಂದ ಇದು ಅಭ್ಯಾಸವಾಗಿದೆ. ಆ ದೇವರಲ್ಲಿ ನಾನು ಬೇಡಿಕೊಳ್ಳೋದು, ಎಲ್ಲರನ್ನೂ ಚೆನ್ನಾಗಿ ಇಟ್ಟಿರಲಿ ಅಂತ. ನಾನು ದರ್ಶನ್ ಅವರ ಅಭಿಮಾನಿ. ಹಾಗಾಗಿ ಅವರ ಜೊತೆ ನಟಿಸುವ ಅವಕಾಶ ಕೂಡಿಬರಲಿ ಎಂದಷ್ಟೇ ದೇವರಲ್ಲಿ ಬೇಡಿಕೊಳ್ತೀನಿ. ಎಲ್ಲರ ಜೀವನದಲ್ಲೂ ಬೇವು ಬೆಲ್ಲ ಸಮಾನವಾಗಿರಲಿ!
ಸ್ವಾತಿ
ಮೂಲತಃ ಹೈದಾರಾಬಾದ್ ನಗರಕ್ಕೆ ಸೇರಿದ ಈಕೆ ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲೂ ನಟಿಸಿ, ನಂತರ ಕನ್ನಡದಲ್ಲಿ ಹೆಸರು ಪಡೆದಳು. `ಆಟ ಹುಡುಗಾಟ, ತಂಗಿಯ ಮನೆ, ಯಜಮಾನ' ಮುಂತಾದ ಕನ್ನಡ ಚಿತ್ರಗಳಲ್ಲಿ ಖ್ಯಾತಿ ಪಡೆದ ಸ್ವಾತಿ, ಹೆಚ್ಚಾಗಿ ಕೀರ್ತಿ ಗಳಿಸಿದ್ದು ತಮಿಳು, ತೆಲುಗು ಚಿತ್ರಗಳಲ್ಲಿ.
ಯುಗಾದಿ ಎಂದರೆ ನನಗೆ ಮೆಚ್ಚಿನ ಹಬ್ಬವಿದು. ಹೊಸ ಹೊಸದು ತರುವ ಯುಗಾದಿಯನ್ನು ಸಂಭ್ರಮದಿಂದ ಬರಮಾಡಿಕೊಳ್ತೀನಿ. ಅಮ್ಮ ಅಡುಗೆಮನೆ ಕೆಲಸ ನೋಡಿಕೊಂಡರೆ, ನಾನು ಮನೆಯನ್ನು ಅಲಂಕರಿಸುವಲ್ಲಿ ಹೆಚ್ಚು ಬಿಝಿ. ಹೊಸ ಬದುಕಿಗೆ ಕಾಲಿಟ್ಟಿರುವ ನಾನು ನನ್ನ ಪತಿಯೊಂದಿಗೆ ಸಡಗರದಿಂದ ಯುಗಾದಿ ಹಬ್ಬ ಆಚರಿಸುತ್ತೇನೆ. ಹೋಳಿಗೆ ಊಟ ಸವಿದು ನಮ್ಮ ಕಾರ್ಯಕ್ರಮಗಳನ್ನು ಟಿವಿಯಲ್ಲಿ ನೋಡುತ್ತೇವೆ. ಧಾರಾವಾಹಿಗಳಲ್ಲಿ ಬಿಝಿಯಾಗಿರುವ ನಾನು ಈ ಹಬ್ಬದ ದಿನ ಕೇವಲ ಮನೆಯವರೊಂದಿಗೆ ಮಾತ್ರ ಸಮಯ ಕಳೆಯ ಬಯಸುತ್ತೇನೆ. ಬೇವು ಬೆಲ್ಲ ಬದುಕಿನಲಿ ಸಮಾನವಾಗಿರಲಿ ಎಂದು ಎಲ್ಲ ಕನ್ನಡ ಪ್ರೇಕ್ಷಕರಿಗೂ ಹಾರೈಸುತ್ತೇನೆ.

ರಾಧಿಕಾ ಚೇತನ್
ಅಪ್ಪಟ ಕನ್ನಡ ಪ್ರತಿಭೆ ರಾಧಿಕಾ ಚೇತನ್ ಳ ತವರೂರು ಉಡುಪಿ. ಎಂಜಿನಿಯರಿಂಗ್ ಗ್ರಾಜುಯೇಟ್ ಆದ ರಾಧಿಕಾ, `ಅಸತೋಮಾ ಸದ್ಗಮಯ, ಕಾಫಿ ತೋಟ, ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಮುಂತಾದ ಚಿತ್ರಗಳಲ್ಲಿ ಹೆಸರು ಗಳಿಸಿದ್ದಾಳೆ.




 
  
         
    





 
                
                
                
                
               