ಅನಿತಾಳಿಗೆ ಮೊದಲಿನಿಂದಲೂ ತಾನು ಬರೆದ ಲೇಖನ ಕಾದಂಬರಿಗಳನ್ನು ಪುಸ್ತಕವಾಗಿ ಪ್ರಕಟಿಸಬೇಕೆಂದು ಬಲು ಮಹತ್ವಾಕಾಂಕ್ಷೆ ಇತ್ತು. ಆದರೆ ಹಳ್ಳಿಯಲ್ಲಿದ್ದ ಅವಳ ಬದುಕು, ಆರ್ಥಿಕ ಸೌಲಭ್ಯ ಇದಕ್ಕೆ ಅವಕಾಶ ಕೊಟ್ಟಿರಲಿಲ್ಲ. ಮುಂದೆ ತನ್ನ ಆಸೆಯನ್ನು ಮಗಳಾದರೂ ನೆರವೇರಿಸಲಿ ಎಂದು ಅವಳು 22 ವರ್ಷದವಳಾದಗಾ ಉನ್ನತ ವ್ಯಾಸಂಗ ಮುಗಿಸಿ ನಂತರ ತನ್ನ ಟ್ರಂಕ್‌ ನ್ನು ತೆರೆದು ನೋಡಬೇಕೆಂದು ಗಂಡನಿಂದ ವಚನ ಪಡೆದು ತೀರಿಕೊಂಡಿದ್ದಳು. ಬಾಲ್ಯದಿಂದಲೂ ಆ ಟ್ರಂಕಿನ ಮೇಲೆ ಗಮನವಿರಿಸಿದ್ದ ಮಗಳು ಶಾರದಾ ಮುಂದೆ ಅದನ್ನು ತೆರೆದು ನೋಡಿ ತಾಯಿಯ ಅಭಿಲಾಷೆಯನ್ನು ಅರಿತಳೇ….? ತಾಯಿಯ ಕನಸನ್ನು ನನಸಾಗಿಸುವಲ್ಲಿ ಯಶಸ್ವಿಯಾದಳೆ….?

ಮುಂದೆ ಓದಿ……

ತಾಯಿಯ ಆಸೆಯಂತೆ ಉನ್ನತ ವ್ಯಾಸಂಗ ಮುಗಿಸಿ, ಅಮ್ಮನ ಟ್ರಂಕಿನ ಕೀಲಿ ಕೈ ಪಡೆದು ಅದರಲ್ಲಿ ಇದ್ದುದನ್ನು ಶಾರದಾ ಗಮನಿಸಿ ಮೂಕವಿಸ್ಮಿತಳಾದಳು. ಮುಂದೆ ಅವಳು ತನ್ನ ತಾಯಿಯ ಕನಸನ್ನು ನನಸು ಮಾಡಿದ್ದು ಹೇಗೆ? ಇದಕ್ಕೆ ಅವಳ ತಂದೆಯ ಸಹಕಾರವಿತ್ತೇ…….?

ಮಾವ ಯಾವುದಕ್ಕೂ ಆಕ್ಷೇಪಿಸದಿದ್ದರೂ, ಅತ್ತೆಯ ಕಿರಿಕಿರ ಮಾತ್ರ ಇದ್ದೇ ಇರುತ್ತಿತ್ತು.  ಮಗುವಿಗೆ ಎರಡು ವರ್ಷವಾಯಿತು. ಅವಳ ಆಟ ಪಾಠಗಳಲ್ಲಿ ತನ್ನ ನೋವನ್ನು ಮರೆತಳು ಅನಿತಾ. ಈ ವರ್ಷ ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳಾ ಮಂಡಳಿಯಲ್ಲಿ ಒಬ್ಬರು ಮಹಿಳಾ ಲೇಖಕಿಯನ್ನು ಕರೆದು ಸನ್ಮಾನ ಮಾಡುವುದು ಎಂದು ತೀರ್ಮಾನಿಸಿದರು.

ನೂರೈತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದ ಮತ್ತು ಅನಿತಾಳಿಗೆ ತುಂಬಾ ಇಷ್ಟವಾದ ಲೇಖಕಿಯನ್ನೇ ಕರೆಸಿದ್ದರು. ಆ ಲೇಖಕಿಯ ಜೊತೆ ತುಂಬಾ ಮಾತನಾಡಬೇಕು, ಬರೆಯಲು ಸಮಯ ಹೇಗೆ ಹೊಂದಿಸಿಕೊಳ್ಳುತ್ತೀರಿ ಎಂದೆಲ್ಲಾ ಕೇಳಬೇಕು, ಅವರ ಸಲಹೆ ಸೂಚನೆಗಳು ತನಗೆ ಉಪಯುಕ್ತವಾಗಬಹುದು ಎಂದು ಅನಿತಾ ಪ್ಲಾನ್‌ ಮಾಡಿಕೊಂಡಳು.

ಮಹಿಳಾ ಲೇಖಕಿ ಬಂದಾಗ ಅವರಿಗೆ ಸನ್ಮಾನ ಮಾಡಿ ಅವರು ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಮೇಲೆ ನಿಮಗೆ ಯಾರಿಗಾದರೂ ಏನಾದರೂ ಕೇಳುವುದು ಇದ್ದರೆ ಕೇಳಬಹುದು ಎಂದು ಹೇಳಿದರು.

ಕೆಲವರು ನಿಮ್ಮ ಮುಂದಿನ ಕಾದಂಬರಿ ಯಾವುದು? ನಿಮ್ಮ ಮಕ್ಕಳು ಬರೆಯುತ್ತಾರಾ? ಎಂದೆಲ್ಲಾ ಕೇಳಿದರು.

ಅನಿತಾ ಮಾತ್ರ, “ಮೇಡಂ, ನೀವು ಯಾವ ಸಮಯದಲ್ಲಿ ಬರೆಯುತ್ತೀರಾ….? ಬರೆಯಲು ಅಂತ ಏನಾದರೂ ನಿರ್ದಿಷ್ಟ ಸಮಯ ಮಾಡಿಕೊಂಡಿದ್ದೀರಾ….?” ಎಂದು ಕೇಳಿದಳು.

ಲೇಖಕಿ ನಗು ನಗುತ್ತಾ, “ಬರವಣಿಗೆಗೆ ನಿರ್ದಿಷ್ಟ ಸಮಯ ಅಂತ ಮಾಡಿಕೊಳ್ಳುವುದು ಕಷ್ಟ. ನಮ್ಮ ಮನದಲ್ಲಿ ಭಾವನೆಗಳು ಬಂದಾಗ ಅದನ್ನು ಬರೆದುಬಿಡಬೇಕು. ಇಲ್ಲಾ ಅಂದರೆ ಅದು ಮರೆತೇ ಹೋಗುವ ಸಾಧ್ಯತೆ ಇರುತ್ತದೆ. ನಾನೂ ಹಾಗೆಯೇ…. ಎಷ್ಟೋ ಸಲ ಅಡುಗೆ ಮಾಡುವಾಗ ಮಧ್ಯೆ ಯಾವುದಾದರೂ ಒಳ್ಳೆಯ ವಿಷಯಗಳು ಹೊಳೆದಾಗ ಅಡುಗೆಯನ್ನು ಅರ್ಧಕ್ಕೇ ನಿಲ್ಲಿಸಿ ಥಟ್ಟಂತ ಬರೆದುಬಿಡುತ್ತೇನೆ. ನಂತರ ಅಡುಗೆ ಮುಂದುವರಿಸುತ್ತೇನೆ. ಕೆಲವು ಬಾರಿ ಮಲಗಿದಾಗ ಮಧ್ಯರಾತ್ರಿ ಎಚ್ಚರವಾದಾಗ ಮನದಲ್ಲಿ ಭಾವನೆಗಳು ಮೂಡುತ್ತವೆ. ಆಗ ಎದ್ದು ಅದನ್ನು ಪೇಪರ್‌ ನಲ್ಲಿ ದಾಖಲಿಸಿಬಿಡುವೆ!” ಎಂದರು.

“ನಿಮ್ಮ ಕುಟುಂಬದವರು ಇದಕ್ಕೆ ಸಹಕಾರ ನೀಡುತ್ತಾರಾ….?” ಮತ್ತೆ ಕೇಳಿದಳು ಅನಿತಾ.

“ಓ….. ಖಂಡಿತಾ! ನಮ್ಮ ಮನೆಯಲ್ಲಿ ನನಗೆ ಎಲ್ಲರದೂ ಸಹಕಾರವಿದೆ. ನಾನು ರಾತ್ರಿ ಬರೆಯುವಾಗ ನನ್ನ ಯಜಮಾನರು ಎಷ್ಟೋ ಸಲ ಕಾಫಿ ಮಾಡಿಕೊಟ್ಟು ಆಮೇಲೆ ಮಲಗುವರು,” ಎಂದರು.

ಮತ್ತೆ ಕೆಲವು ಜನರು ಇನ್ನಷ್ಟು ಪ್ರಶ್ನೆಗಳನ್ನು ಕೇಳಿದರು. ಅವರು ಎಲ್ಲರಿಗೂ ನಗುನಗುತ್ತಾ ಉತ್ತರಿಸಿ, ನಂತರ ಹೊರಟರು.

ಮನೆಗೆ ಬಂದರೂ ಅನಿತಾ ಅದೇ ಗುಂಗಿನಲ್ಲಿದ್ದಳು. ನಿಜವಾಗಲೂ ಆ ಲೇಖಕಿ ಎಷ್ಟು ಪುಣ್ಯವಂತರು. ಅದನ್ನೇ ವಸಂತ್‌ ನ ಬಳಿ ಹೇಳಿದಾಗ,  “ಓಹೋ…. ಈಗ ತಾವು ರಾತ್ರಿ ಬರೆಯುವಾಗ ನಾನು ಕಾಫಿ ಮಾಡಿಕೊಡಬೇಕೋ…. ಅದೆಲ್ಲಾ ಕನಸು ಇಟ್ಟುಕೊಳ್ಳಬೇಡ. ಇಷ್ಟು ಬರೆಯಲು ಅವಕಾಶ ನೀಡಿದ್ದಕ್ಕಾಗಿ ಖುಷಿಪಡಬೇಕು. ಈಗ ನಮ್ಮ ಹಳ್ಳಿಗಳಲ್ಲಿ ಯಾರಿಗೆ ನಿನ್ನಷ್ಟು ಅವಕಾಶವಿದೆ?” ಎಂದ ವಸಂತ್‌.

ಅಲ್ಲಿಗೆ ಸುಮ್ಮನಾಗದ ಅನಿತಾ, ಒಂದು ಲೇಖನ ಬರೆದು ಪತ್ರಿಕೆಗೆ ಕಳುಹಿಸಿದಳು. ನಮ್ಮ ಪುರುಷ ಪ್ರಧಾನ ಸಮಾಜದಲ್ಲಿ ಕೆಲವರು ಮಾತ್ರ ಮಹಿಳೆಯರಿಗೆ ಎಲ್ಲದರಲ್ಲೂ ಮುಂದೆ ಬರಲು ಉತ್ತೇಜನ ನೀಡುತ್ತಾರೆ. ಇನ್ನೂ ಕೆಲವಷ್ಟು ಮನೆಗಳಲ್ಲಿ ಮಹಿಳೆಯರನ್ನು ಮನೆಯಿಂದ ಆಚೆ ಬರಲೂ ಬಿಡುವುದಿಲ್ಲ. ಇದರಿಂದ ನಮ್ಮ ಸಮಾಜದಲ್ಲಿ ಎಷ್ಟೋ ಪ್ರತಿಭಾವಂತ ಮಹಿಳೆಯರ ಪ್ರತಿಭೆಗಳು ಮನೆಯಲ್ಲೇ ಕೊಳೆಯುವಂತಾಗಿದೆ. ಈಗ ಸಾಹಿತ್ಯದ ವಿಷಯದಲ್ಲೂ ಅಷ್ಟೇ. ಮಹಿಳೆಯರಿಗೆ ಬರೆಯಲು ಸಮಯ ಪ್ರೋತ್ಸಾಹ ಎಲ್ಲ ಸಿಗುವುದಿಲ್ಲ. ಅದೇ ಪುರುಷರು ಯಾವ ಸಮಯದಲ್ಲಿ ಬರೆಯಲು ಕುಳಿತರೂ, ಮಹಿಳೆಯರು ಅವರಿಗೆ ತುಂಬಾ ಪ್ರೋತ್ಸಾಹ ನೀಡುತ್ತಾರೆ. ಯಾವ ಡಿಸ್ಟರ್ಬೆನ್ಸ್ ಇರದೆ ಬರೆಯುವಂತೆ ನೋಡಿಕೊಳ್ಳುತ್ತಾರೆ. ಇದೇ ತರಹ ಪುರುಷರು ಮಹಿಳೆಯರಿಗೆ ಪ್ರೋತ್ಸಾಹ ನೀಡುವಂತಾಗಬೇಕು. ನಮ್ಮ ಸಮಾಜದಲ್ಲಿ ಮಹಿಳೆಯರಿಗೆ ಮನೆ ಕೆಲಸ, ತೋಟದ ಕೆಲಸ, ಮಕ್ಕಳನ್ನು ನೋಡಿಕೊಳ್ಳುವುದು ಇದರಲ್ಲೇ ಸಮಯ ಕಳೆಯುತ್ತದೆ.

ರಾತ್ರಿ ಏನಾದರೂ ಬರೆಯಲು ಹೊರಟರೆ ಅದಕ್ಕೂ ಮನೆಯಲ್ಲಿ ರಾತ್ರಿಯೆಲ್ಲಾ ದೀಪ ಉರಿಸಿ ನಮ್ಮ ನಿದ್ದೆಯನ್ನು ಹಾಳು ಮಾಡುತ್ತೀಯ ಅಂತ ಬೈಯುವ ಜನರೇ ಜಾಸ್ತಿ. ನಿದ್ದೆಗೆಟ್ಟು ಬರೆಯುತ್ತೇನೆ ಎನ್ನುವ ಮನಸ್ಸಿದ್ದರೂ ಮನೆಯಲ್ಲಿ ಬರೆಯಲು ಸಹಕಾರ ನೀಡುವುದಿಲ್ಲ. ಇದರಿಂದ ಎಷ್ಟೊಂದು ಪ್ರತಿಭಾವಂತ ಮಹಿಳೆಯರು ಸಾಹಿತ್ಯದಲ್ಲಿ ಮುಂದೆ ಬರಲು ಅವಕಾಶ ಸಿಗದೇ ಇರುವರು ಎಂದು ಮುಂತಾಗಿ ದೊಡ್ಡ ಲೇಖನ ಕಳುಹಿಸಿದಳು.

ಅದು ಪ್ರಕಟವಾದಾಗ “ನಾನು ಎಷ್ಟು ಸಪೋರ್ಟ್‌ ಮಾಡುತ್ತೇನೆ, ಆದರೂ ನೀನು ಆ ತರಹ ಬರೆದಿದ್ದೀಯಾ….?” ಎಂದು ವಸಂತ್‌ ಕೋಪಿಸಿಕೊಂಡಿದ್ದ.

“ನಾನು ಸ್ವಾಭಾವಿಕವಾಗಿ ಬರೆದಿರುವೆ. ನೀವು ಯಾಕೆ ಅದನ್ನು ನಿಮಗೇ ಅಂತ ಅಂದುಕೊಂಡಿರಿ?” ಎಂದಳು ಬೇಸರದಿಂದ ಅನಿತಾ.

chhali-story2

ಅಮ್ಮನ ಡೈರಿ ಓದುತ್ತಾ ಓದುತ್ತಾ ಸಮಯಲೇ ತಿಳಿಯಲಿಲ್ಲ ಶಾರದಾಗೆ. ಆಗಲೇ ರಾತ್ರಿ ಮೂರು ಗಂಟೆ…. ಇವತ್ತಿಗೆ ಇಷ್ಟು ಸಾಕು, ಇನ್ನು ಮಲಗೋಣ ಎಂದು, ಅಮ್ಮನ ಬಗ್ಗೆಯೇ ಯೋಸುತ್ತಾ ನಿದ್ದೆಗೆ ಜಾರಿದಳು. ಮಾಮೂಲಿನಂತೆ ಬೆಳಗ್ಗೆ ಎದ್ದು ಆಚೆ ಬಂದಾಗ ವಸಂತ್‌, “ರಾತ್ರಿಯೆಲ್ಲಾ ನಿದ್ದೆ ಮಾಡಲಿಲ್ವಾ….. ಶಾರೂ…. ಕಣ್ಣೆಲ್ಲಾ ಕೆಂಪಗಾಗಿದೆ. ಎಲ್ಲಾ ಒಂದೇ ದಿನ ಓದಬೇಕೆಂದುಕೊಂಡೆಯಾ….” ಎಂದು ಕೇಳಿದರು.

“ಇಲ್ಲಾ ಅಪ್ಪಾ…. ಇನ್ನೂ ಕಥೆಗಳನ್ನು ಓದಲು ಶುರು ಮಾಡಿಲ್ಲ. ಮೊದಲು ಡೈರಿ ತೆಗೆದುಕೊಂಡೆ. ಅಮ್ಮನ ಡೈರಿ ಓದುತ್ತಾ ಓದುತ್ತಾ ಸಮಯ ಕಳೆದದ್ದೇ ತಿಳಿಯಲಿಲ್ಲ. ಮೂರು ಗಂಟೆಗೆ ಮಲಗಿದೆ. ಅಪ್ಪಾ ನನ್ನದೊಂದು ಪ್ರಶ್ನೆ….. ನೀನು ಯಾಕೆ ಅಮ್ಮನ ಬರಹಗಳನ್ನು ಪುಸ್ತಕ ರೂಪದಲ್ಲಿ ತರಲಿಲ್ಲ?” ಎಂದು ಕೇಳಿದಳು.

“ಓ ಅದಾ… ಮೊದಲು ಪ್ರಕಾಶಕರು ಹೊಸಬರ ಬರಹಗಳನ್ನು ಪ್ರಕಟಣೆ ಮಾಡುತ್ತಿರಲಿಲ್ಲ. ನಾವೇ ಹಣ ಕೊಟ್ಟು ಮಾಡಿಸಬೇಕಿತ್ತು. ಇಪ್ಪತ್ತು ಸಾವಿರ ಖರ್ಚು ಮಾಡಿ ಪ್ರಕಟಿಸಿದರೂ, ಪುಸ್ತಕಗಳನ್ನು ಕೊಂಡು ಕೊಳ್ಳುವವರು ಸಿಗುವುದಿಲ್ಲ. ಅಷ್ಟು ಪುಸ್ತಕ ನಮ್ಮ ಬಳಿಯೇ ಧೂಳು ತುಂಬಿ ಕುಳಿತಿರುತ್ತದೆ.

“ಮೊದಲು ನಿನ್ನ ಅಮ್ಮನಿಗೆ ಪುಸ್ತಕ ಪ್ರಕಟಿಸುವ ಆಸೆ ತುಂಬಾ ಇತ್ತು. ನನ್ನ ಗೆಳೆಯ ಶ್ರೀನಿವಾಸನನ್ನು ವಿಚಾರಿಸೋಣವೆಂದು ಅವನ ಮನೆಗೆ ಕರೆದುಕೊಂಡು ಹೋದೆ. ಅವನಿಗೂ ಬರೆಯುವ ಹುಚ್ಚು. ಅವನು ಎರಡು ಪುಸ್ತಕಗಳನ್ನು ಪ್ರಕಟಿಸಿದ್ದ. ಅವನ ಮನೆಯಲ್ಲಿ ಪುಸ್ತಕಗಳು ರಾಶಿ ರಾಶಿಯಾಗಿ ಹಾಗೇ ಇತ್ತು. ಅದಕ್ಕೆ ನಿನ್ನ ಅಮ್ಮ, `ಶ್ರೀನಿವಾಸಣ್ಣ, ನೀವು ಪುಸ್ತಕ ಸೇಲ್ ಆಗಿಲ್ಲ ಅಂತ ಕೊರಗುವ ಬದಲು, ಅಟ್ಲೀಸ್ಟ್ ಲೈಬ್ರರಿಗೆ ಹಾಗೂ ಫ್ರೆಂಡ್ಸ್ ಗಳಿಗೆಲ್ಲ ಉಚಿತವಾಗಿ ಕೊಡಬಹುದಿತ್ತಲ್ಲ…. ಇಲ್ಲಿ ಸುಮ್ಮನೆ ಧೂಳು ತಿನ್ನುವ ಬದಲು,’ ಎಂದಿದ್ದಳು.

“ಲೈಬ್ರರಿಯಲ್ಲಿ ಹಾಗೆ ಸುಮ್ಮನೆ ತೆಗೆದುಕೊಳ್ಳುವುದಿಲ್ಲ. ಅದಕ್ಕೆ ರಿಜಿಸ್ಟರ್‌ ಮಾಡಿಸಿಕೊಳ್ಳಬೇಕು. ಇನ್ನು ನೀವು ಹೇಳಿದ ಹಾಗೆ ಪರಿಚಿತರಿಗೆ ಉಚಿತವಾಗಿ ಕೊಟ್ಟೆ. ನನ್ನ ನಿಮ್ಮ ಹಾಗೆ ಪುಸ್ತಕದ ಅಭಿರುಚಿ ಇರುವವರು ತುಂಬಾ ಚೆನ್ನಾಗಿ ಇಟ್ಟುಕೊಳ್ಳುತ್ತಾರೆ. ಆದರೆ ಪುಸ್ತಕದ ಬಗ್ಗೆ ಯಾವ ಅಭಿರುಚಿ, ಇಲ್ಲದವರು ಪುಸ್ತಕನ್ನು ಹಾಳು ಮಾಡುತ್ತಾರೆ, ತೂಕಕ್ಕೆ ಹಾಕುತ್ತಾರೆ.

“ಹೀಗೆ ಒಬ್ಬ ಗೆಳೆಯನಿಗೆ ಎರಡು ಪುಸ್ತಕಗಳನ್ನು ಕೊಟ್ಟಿದ್ದೆ, ಖುಷಿಯಿಂದ ತೆಗೆದುಕೊಂಡ, ಎರಡು ತಿಂಗಳು ಬಿಟ್ಟು ಏನೋ ಕೆಲಸಕ್ಕೆ ಆ ಕಡೆ ಹೋದಾಗ ಅವನ ಮನೆಗೆ ಹೋದೆ. ನನ್ನ ಕಣ್ಣೆದುರಲ್ಲೇ ನಾನು ಬರೆದ ಪುಸ್ತಕ ಹರಿದು ಬಿದ್ದಿತ್ತು. ನೋಡಿ ತುಂಬಾ ಸಂಕಟವಾಯಿತು. ನಂತರ ಎಲ್ಲರಿಗೂ ಪುಸ್ತಕ ಕೊಡುವುದನ್ನು ನಿಲ್ಲಿಸಿದೆ. ನಮ್ಮ ಸಮಾಜದಲ್ಲಿ ಉಚಿತವಾಗಿ ಕೊಟ್ಟರೆ, ಅದಕ್ಕೆ ಬೆಲೆ ಇಲ್ಲ ಎಂದು ತುಂಬಾ ಬೇಸರದಿಂದ ನುಡಿದ್ದಿ ಶ್ರೀನಿವಾಸ್‌.

“ಹಾಗೆ ನಿನ್ನ ಅಮ್ಮನಿಗೆ, `ನಿಮ್ಮ ಬರಹ ಪತ್ರಿಕೆಯಲ್ಲಿ ಪ್ರಕಟವಾಗುತ್ತದೆ ಅಲ್ವಾ….? ಸದ್ಯಕ್ಕೆ ಅಲ್ಲೇ ಹಾಕುತ್ತಿರಿ, ನಂತರ ಪ್ರಕಾಶಕರು ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ,’ ಎಂದು ಸಲಹೆ ನೀಡಿದ. ಆಮೇಲೆ ಅನಿತಾ ನಾವು ಹಣ ಕೊಟ್ಟು ಪುಸ್ತಕ ಪ್ರಕಟಿಸುವುದು ಬೇಡಾ, ಯಾರಾದರೂ ಪ್ರಕಾಶಕರು ತಾವಾಗಿಯೇ ಬಂದಾಗ ಕೊಡೋಣವೆಂದು ಎಲ್ಲವನ್ನೂ ನೀಟಾಗಿ ಇಟ್ಟಿದ್ದಳು,” ಎಂದು ಹೇಳಿದ ವಸಂತ್‌.

ಅಷ್ಟರಲ್ಲಿ ಅಜ್ಜಿ ಕೂಗಿದಳು ಎಂದು ಓಡಿದಳು ಶಾರದಾ. ಆ ದಿನ ಕಾಲೇಜು ಇದ್ದ ಕಾರಣ ಬೇಗ ಬೇಗ ರೆಡಿಯಾಗಿ ಹೊರಟಳು. ಬಸ್‌ ಸ್ಟಾಂಡ್‌ ನಲ್ಲಿ ಸಿಕ್ಕಿದ ಗೆಳತಿ ನೀತಾ, “ಏ ಶಾರೀ…. ಅಮ್ಮನ ಟ್ರಂಕ್‌ ನೋಡಿದೆಯಾ….? ಅದರಲ್ಲಿ ಏನೇನು ಒಡವೆಗಳು ಇತ್ತು…..?” ಎಂದು ಕೇಳಿದಳು.

“ಒಡವೆಗಳಿಗಿಂತ ಅಮೂಲ್ಯವಾದದ್ದು ಇತ್ತು ಕಣೇ…..! ಅಮ್ಮನ ಕೈ ಬರಹಗಳ ರಾಶಿಯೇ ಇದೆ. ಅದರಲ್ಲಿ ಸರಸ್ವತಿಯೇ ಟ್ರಂಕ್ ನಲ್ಲಿ ಇರುವಂತೆ ಅನಿಸಿತು,” ಎಂದಳು.

ಬಸ್‌ ಬಂದಿದ್ದರಿಂದ ಇಬ್ಬರೂ ಹತ್ತಿ ಕುಳಿತರು. ಕಾಲೇಜಿಗೆ ಹೋದರೂ ಶಾರದಾಗೆ ಬೇಗ ಹೋಗಿ ರಾತ್ರಿ ಅಮ್ಮನ ದಿನಚರಿ ಓದು ತವಕ.

ರಾತ್ರಿ ಊಟದ ನಂತರ ಮತ್ತೆ ಅಮ್ಮನ ಟ್ರಂಕ್‌ ತೆಗೆದು ಎಲ್ಲವನ್ನೂ ಒಮ್ಮೆ ಸರಿದಳು. `ಅಮ್ಮನ ಬರಹಗಳನ್ನೆಲ್ಲಾ ಸೇರಿಸಿ ಪುಸ್ತಕ ಮಾಡಬೇಕು,’ ಎಂದುಕೊಂಡಳು. ಮೊದಲು ಡೈರಿಯನ್ನು ಮುಗಿಸಿ ನಂತರ ಉಳಿದೆಲ್ಲವನ್ನೂ ಓದಬೇಕು ಅಂತ ಯೋಚಿಸಿ ಡೈರಿ ಕೈಗೆತ್ತಿಕೊಂಡಳು.

ಆ ಲೇಖನ ಪತ್ರಿಕೆಯಲ್ಲಿ ಬಂದ ಮೇಲೆ ಊರಿನಲ್ಲಿ ಎಲ್ಲರೂ, “ಅನಿತಾ, ನಿಮಗೆ ಮನೆಯಲ್ಲಿ ಬರೆಯಲು ಸಹಕಾರ ಕೊಡುದಿಲ್ವಾ…..? ನೀವು ಅದಕ್ಕೆ ಹಾಗೇ ಲೇಖನ ಬರೆದಿದ್ದೀರಾ…..?” ಎಂದು ಕೇಳುವರೇ.

ಛೇ… ಯಾಕೆ ಹೀಗೆ….? ಈ ಜನರು ಲೇಖಕ ಬರೆದದ್ದೆಲ್ಲಾ ಅವನ ಜೀವನದ ಘಟನೆಗಳೇ ಅಂತ ಯಾಕೆ ತಿಳಿಯಬೇಕು? ಜನರಲ್ ಆಗಿ ನಮ್ಮ ಮನದ ಭಾವನೆಗಳನ್ನು ಹಂಚಿಕೊಳ್ಳಲು ಅವಕಾಶ ಕೊಡುವುದೇ ಇಲ್ವಾ….? ಏನು ಬರೆದರೂ ನಮ್ಮದೇ ಅಂತ ನೋಡುತ್ತಾರೆ, ನನಗೆ ಬರೆಯಲು ಕೊಡದಿದ್ದರೆ ನಾನು ಪತ್ರಿಕೆಗೆ ಕಳುಹಿಸಲು ಇದನ್ನು ಬರೆಯಲು ಸಾಧ್ಯವಾಗುತ್ತಿತ್ತಾ……? ನನ್ನ ಸ್ವಂತ ವಿಷಯ ಬರೆದಿಲ್ಲ ಅಂದರೂ ಒಪ್ಪುವುದಿಲ್ಲ. ನಿಜವಾಗಿಯೂ ಬರೆಯಲು ತುಂಬಾ ಸ್ವತಂತ್ರ ಇಲ್ಲದ್ದಿರೂ, ಅಲ್ಪ ಸ್ವಲ್ಪ ಪ್ರೋತ್ಸಾಹ ನನಗೆ ಸಿಕ್ಕಿದೆ. ಆದರೆ ತಾನು ನೋಡಿದಂತೆ ಈ ಊರಿನಲ್ಲೇ ಎಷ್ಟು ಜನ ಹೆಂಗಸರಿಗೆ ಕಥೆ ಕಾದಂಬರಿ ಓದಲು ಇಷ್ಟವಿದ್ದರೂ, ಪುಸ್ತಕ ಹಿಡಿದ ತಕ್ಷಣ ಬೈಯುವ ಗಂಡಂದಿರು, ಮನೆಯವರು ಇದ್ದಾರೆ. ಇನ್ನೂ ಅವರುಗಳು ಬರೆಯಲು ಶುರು ಮಾಡಿದರೆ ಬಿಡುವರಾ….! ಇದೆಲ್ಲಾ ನೋಡಿ ಬೇಸರವಾಗಿ ಬರೆದರೆ ನನ್ನದೇ ವಿಷಯ ಅಂತ ಯಾಕೆ ತಿಳಿಯುತ್ತಾರೋ….? ಇದರಿಂದಾಗಿ ಮನೆಯಲ್ಲಿ ಕಿರಿಕಿರಿ. ಏಕಾದರೂ ಈ ಲೇಖನ ಬರೆದೆ ಅನಿಸಿಬಿಟ್ಟಿತ್ತು ಅನಿತಾಳಿಗೆ.

ವಸಂತ್‌ ಆಚೆ ಹೋದಾಗ ಆ ಹಳ್ಳಿಯ ಜನ, “ಏನೋ ವಸಂತ, ನಿನ್ನ ಹೆಂಡತಿ ನಿಮ್ಮ ಮನೆಯವರನ್ನು ಕೆಟ್ಟವರು ಅಂತ ಬೆರದಿದ್ದಾಳಂತೆ. ಅದಕ್ಕೆ ಕಣೋ… ಹೆಂಗಸರಿಗೆ ಜಾಸ್ತಿ ಸಲುಗೆ ಕೊಡಬಾರದು ಅನ್ನೋದು. ನೀನು ಅವಳನ್ನು ತಲೆ ಮೇಲೆ ಕೂರಿಸಿಕೊಂಡಿದ್ದೆ. ಸರಿಯಾಗಿ ಮಾಡಿದಳು ಬಿಡು,” ಎಂದು ಅಪಹಾಸ್ಯ ಮಾಡತೊಡಗಿದರು.

ಈಗ ಮನೆಯಲ್ಲಿ ಇರುಸು ಮುರುಸು. ಹೀಗಿರುವಾಗ ಬರೆಯಲು ಮನಸ್ಸು ಬರಲಿಲ್ಲ. ಅಲ್ಲದೆ ಮತ್ತೆ ಎರಡನೆ ಸಲ ಗರ್ಭಿಣಿಯಾಗಿದ್ದಳು. ಮೊದಲ ಸಲ ಗರ್ಭಿಣಿಯಾದಾಗ ತುಂಬಾ ಚೆನ್ನಾಗಿ ನೋಡಿಕೊಂಡಿದ್ದ ವಸಂತ್‌, ಈ ಸಲ ಅನಿತಾಳ ಮೇಲೆ ಸಣ್ಣದಾಗಿ ಕೋಪ, ಜೊತೆಗೆ ಅಕ್ಕ, ತಂಗಿಯರು, ಅಮ್ಮ ಎಲ್ಲರೂ ಚುಚ್ಚಿ ಕೊಡುತ್ತಿದ್ದರು.

“ನೋಡೋ…. ವಸಂತ, ನೀನು ಎಷ್ಟು ದುಡ್ಡು ಖರ್ಚು ಮಾಡಿಕೊಂಡು ಓದಲು ಪುಸ್ತಕ, ಬರೆಯಲು ಪೇಪರ್‌, ಪೆನ್ನು ಎಲ್ಲಾ ತಂದುಕೊಟ್ಟೆ. ಆದರೆ ಅವಳು ಕೃತಜ್ಞತೆ ಇಲ್ಲದೆ, ನಿನ್ನ ವಿರುದ್ಧವೇ ಬರೆದಳು. ಇನ್ನು ಬರೆಯುವುದು ಸಾಕು, ಇನ್ನೊಂದು ಮಗುವಾಗುತ್ತದೆ. ಹಾಗೆಲ್ಲ ಹಣವನ್ನು ಹಾಳು ಮಾಡಬೇಡ, ಮಕ್ಕಳ ಭವಿಷ್ಯಕ್ಕೆ ಕೂಡಿಡು,” ಅಂತ ಅನಿತಾಳಿಗೆ ಕೇಳುವ ಹಾಗೆ ಸಲಹೆ ಕೊಟ್ಟರು.

ಈ ಸಲ ಗರ್ಭಿಣಿ ಆದಾಗಿನಿಂದಲೂ ಮನಸ್ಸಿಗೆ ಕಿರಿಕಿರಿಯಾದ ಕಾರಣ ಅದು ಒಳಗಿರುವ ಮಗುವಿನ ಮೇಲೆ ಪರಿಣಾಮ ಬೀರಿತು. ತಿಂಗಳು ತುಂಬಿದ ನಂತರ ತಾಯಿ ಮನೆಗೆ ಕಳುಹಿಸಿದರು. ಬರೆಯಲು ಉತ್ಸಾಹವೇ ಇಲ್ಲ. ಬರೆಯಲು ಎಲ್ಲರ ವಿರೋಧ, ಅದನ್ನು ಮೀರಿ ಬರೆದರೂ ಪುಸ್ತಕ ಪ್ರಕಟಣೆ ಮಾಡುವುದು ಬರೀ ಕನಸು. ಹೀಗೆ ಯೋಚಿಸಿ ಮನಸ್ಸು ಕೆಡಿಸಿಕೊಂಡಳು.

ತವರಿನಲ್ಲಿ ಅಣ್ಣ ಅನಂತ ಎಷ್ಟೋ ಸಮಾಧಾನ ಮಾಡುತ್ತಿದ್ದ, “ಹೆಂಗಸರಿಗೆ ಮಾತ್ರವಲ್ಲ ಅನಿತಾ, ಕೆಲವು ಗಂಡಸರಿಗೂ ಪೂರ್ಣ ಪ್ರಮಾಣದಲ್ಲಿ ಲೇಖಕರಾಗಿ ಇರಲು ಸಾಧ್ಯವಿಲ್ಲ. ಅವರಿಗೆ ಕುಟುಂಬ ನಿರ್ವಹಣೆ ಜವಾಬ್ದಾರಿ ಇರುತ್ತದೆ. ಬರೆಯುವುದರಿಂದ ಬರುವ ಹಣದಲ್ಲಿ ಜೀವನ ನಿರ್ವಹಣೆ ಕಷ್ಟ. ಇದು ಹೆಂಗಸರು, ಗಂಡಸರೆನ್ನದೆ ಎಲ್ಲರ ಸಮಸ್ಯೆ. ಮೊದಲು ನಮ್ಮನ್ನು ನಂಬಿದವರನ್ನು ರಕ್ಷಿಸಿ. ನಂತರ ಹವ್ಯಾಸಕ್ಕೆ ತೊಡಗಬೇಕು. ನಿನ್ನದು ಚಿಕ್ಕ ವಯಸ್ಸು, ಸ್ವಲ್ಪ ದಿನ ಕಳೆಯಲಿ. ನಿನ್ನ ಬರಹಕ್ಕೂ ಬೇಡಿಕೆ ಬರುತ್ತದೆ. ಅಲ್ಲಿಯವರೆಗೆ ತಾಳ್ಮೆಯಿಂದ ಇರಬೇಕು,” ಎಂದು ಸಮಾಧಾನ ಮಾಡುತ್ತಿದ್ದ.

ಡೆಲಿವರಿ ಆಯಿತು, ಗಂಡು ಮಗು. ವಂಶೋದ್ಧಾರಕ ಬಂದ ಅಂತ ವಸಂತ ಅವಳ ಮೇಲಿನ ಬೇಸರ ಮರೆತು ಮೊದಲಿಗಿಂತ ಹೆಚ್ಚಿನ ಪ್ರೀತಿ ತೋರುತ್ತಿದ್ದ. ಆದರೆ ಅನಿತಾಳಲ್ಲಿ ಭಾವನೆ ಸತ್ತು ಹೋಗಿತ್ತು. ಮಗಳು ಶಾರದಾಳನ್ನು ಕುಳ್ಳಿರಿಸಿಕೊಂಡು ದಿನಾಲು ಒಂದೊಂದು ಕಥೆ ಹೇಳುತ್ತಿದ್ದಳು. ‘ಶಾರೀ…. ನೀನು ತುಂಬಾ ಓದಬೇಕು, ಕೆಲಸಕ್ಕೆ ಸೇರಬೇಕು. ನಮ್ಮ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಈ ಮನೆ ಕೆಲಸ, ಹಳ್ಳಿಯ ತೋಟದ ಕೆಲಸ ಎಷ್ಟು ಮಾಡಿದರೂ, ಕೊನೆಗೆ ಮೂರು ಪೈಸೆ ಬೇಕಿದ್ದರೂ ಗಂಡನ ಬಳಿ ಕೈಚಾಚಬೇಕು. ನಿನಗೆ ಹಾಗಾಗಬಾರದು. ನೀನು ತುಂಬಾ ಓದಿ ದೊಡ್ಡ ಕೆಲಸಕ್ಕೆ ಸೇರಿಕೊಳ್ಳಬೇಕು. ಆರ್ಥಿಕವಾಗಿ ಸದೃಢಳಾಗಬೇಕು,” ಎಂದು ಹೇಳತೊಡಗಿದಳು.

ಈ ಎರಡು ಮಕ್ಕಳ ಭವಿಷ್ಯವೇ ತನ್ನ ಮುಂದಿನ ಗುರಿ ಅಂದುಕೊಂಡಳು. ಸ್ವಲ್ಪ ಚೇತರಿಸಿಕೊಂಡು ಮಕ್ಕಳ ಆರೈಕೆಯಲ್ಲಿ ತೊಡಗಿದಳು. ಹೀಗಿರುವಾಗಲೇ ಮತ್ತೊಂದು ದೊಡ್ಡ ಆಘಾತವಾಯಿತು. ಮಗುವಿಗೆ ಹುಷಾರಿಲ್ಲದೆ ಡಾಕ್ಟರ್‌ ಬಳಿ ಹೋದಾಗ, ಮಗುವಿಗೆ ಹೃದಯದಲ್ಲಿ ಸಣ್ಣ ರಂಧ್ರವಿದೆ. ಆಪರೇಷನ್‌ ಮಾಡಿಸಬೇಕು, ಬೆಂಗಳೂರಿಗೆ ಹೋಗಬೇಕು ಎಂದರು.

“ಚೆನ್ನಾಗಿ ಆಟವಾಡಿಕೊಂಡಿದ್ದ ಮಗುವಿಗೆ ಏನಾಯಿತು….? ಡಾಕ್ಟರ್‌ ನನ್ನ ಕಂದನಿಗೆ ಏನೂ ಆಗುದಿಲ್ವಾ…. ಹುಷಾರಾಗುತ್ತಾನಾ….?” ಎಂದು ಕೇಳಿದಳು ಅನಿತಾ.

“ಸಾಧ್ಯವಾದಷ್ಟು ಬೇಗ ಆಪರೇಷನ್‌ ಮಾಡಿಸಿ, ಭಯಪಡುವ ಅಗತ್ಯವಿಲ್ಲ. ಹುಷಾರಾಗುತ್ತಾನೆ,” ಎಂದರು.

“ಡಾಕ್ಟರ್‌ ಮೂರು ತಿಂಗಳು ಬಿಟ್ಟು ಆಪರೇಷನ್‌ ಮಾಡಿಸಬಹುದಾ….?” ವಸಂತ ಕೇಳಿದ.

“ಸಾಧ್ಯವಾದಷ್ಟು ಬೇಗ ಮಾಡಿಸಿ. ಅಲ್ಲಿಯತನಕ ಈ ಮೆಡಿಸಿನ್‌ ಮುಂದುವರಿಸಿ,” ಎಂದರು.

“ಆಪರೇಷನ್‌ ಗೆ ಲಕ್ಷಗಟ್ಟಲೆ ಹಣ ಬೇಕು. ಸ್ವಲ್ಪವೇ ದಿನ ಬೆಳೆ ಕೈಗೆ ಬರುತ್ತದೆ. ಆಗ ಬೆಂಗಳೂರಿಗೆ ಹೋಗಿ ಆಪರೇಷನ್ ಮಾಡಿಸೋಣ, ಯೋಚಿಸಬೇಡ,” ಎಂದು ಸಮಾಧಾನ ಮಾಡಿದ ವಸಂತ.

“ನನ್ನ ಒಡವೆಗಳನ್ನು ಕೊಡುತ್ತೇನೆ. ಮೊದಲು ಆಪರೇಷನ್‌ಮಾಡಿಸಿ. ನನ್ನ ಕಂದನಿಗೆ ಏನೂ ಆಗಬಾರದು,” ಎಂದು ಗೋಗರೆದಳು ಅನಿತಾ.

ಅವಳ ಒಡವೆ ತೆಗೆದುಕೊಳ್ಳಲು ಮನಸ್ಸಾಗದೆ, “ಇನ್ನೂ ಮೂರು ತಿಂಗಳು ತಾನೇ ಮಾಡಿಸೋಣ,” ಅಂತ ಸುಮ್ಮನಾದ ವಸಂತ. ಮನೆಯಲ್ಲಿ ಹಿರಿಯರದೂ ಅದೇ ಅಭಿಪ್ರಾಯವಾಗಿತ್ತು.

ಮುಂದಿನ ವಾರ ಬೆಂಗಳೂರಿಗೆ ಹೋಗಲು ತಯಾರಿ ಮಾಡಿಕೊಂಡಿದ್ದರು. ಆದರೆ ಮಗುವಿನ ಆಯುಸ್ಸು ಅಷ್ಟೇ ಇತ್ತು ಅನಿಸುತ್ತದೆ. ಬೆಂಗಳೂರಿಗೆ ಹೋಗುವ ಮೊದೀ ಮಗು ಇವರನ್ನು ಬಿಟ್ಟು ದೇವರ ಪಾದ ಸೇರಿತು.

ಆಗಿನಿಂದ ಅನಿತಾ ಡಿಪ್ರೆಶನ್‌ ಗೆ ಜಾರಿದಳು. ಛೇ…. ತಾಯಿಯಾಗಿ ತಾನು ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ತನ್ನದು ಎಂತಹ ಹೀನಾಯ ಸ್ಥಿತಿ. ತನಗೆ ಏತಕ್ಕೂ ಸ್ವಾತಂತ್ರ್ಯ ಇಲ್ಲವೇ…..? ತನ್ನ ಮಾತನ್ನು ಯಾರೂ ಕೇಳಲಿಲ್ಲ. ಡಾಕ್ಟರ್ ತಿಳಿಸಿದಾಗಲೇ ಬೆಂಗಳೂರಿಗೆ ಹೋಗಿದ್ದರೆ ತನ್ನ ಮಗ ಉಳಿಯುತ್ತಿದ್ದ. ಎಲ್ಲರೂ ಸೇರಿ ನನ್ನ ಬಾಯಿಯನ್ನು ಕಟ್ಟಿ ಹಾಕಿದರು. ತಾನು ಯಾರ ಮಾತು ಕೇಳದೆ ತನ್ನ ಒಡವೆ ಮಾರಿ ಆಪರೇಷನ್‌ ಮಾಡಿಸಿದ್ದರೆ ಮಗ ಉಳಿಯುತ್ತಿದ್ದ.

“ಛೇ… ಕ್ಷಮಿಸಿಬಿಡು ಕಂದಾ…. ತಾಯಿಯಾಗಿ ನಿನ್ನ ಉಳಿಸಲು ನನಗೆ ಸಾಧ್ಯವಾಗಲಿಲ್ಲ. ಈ ಅಮ್ಮನನ್ನು ಕ್ಷಮಿಸಿಬಿಡು…..” ಎಂದು ಪದೇ ಪದೇ ಹೇಳುತ್ತಾ ಅಳುತ್ತಿದ್ದಳು.

“ಮೊದಲೇ ಡಾಕ್ಟರ್‌ ಬಳಿ ಹೋಗಿದ್ದರೆ ಉಳಿಸಬಹುದಿತ್ತು. ವಸಂತ ಹಾಗೂ ಅತ್ತೆ, ಮಾವ ತನ್ನ ಮಾತಿಗೆ ಬೆಲೆಯೇ ಕೊಡಲಿಲ್ಲ. ಅತ್ತೆ, ಗಂಡ ಇವರಿಂದ ತನ್ನ ಮಗನನ್ನು ಕಳೆದುಕೊಂಡೆ,” ಎಂದು ಸದಾ ರೋದಿಸುತ್ತಿದ್ದಳು.

ಆ ಕಡೆ ಬರೆಯುವುದು, ಓದುವುದು ಎಲ್ಲವನ್ನೂ ಬಿಟ್ಟಿದ್ದೆ. ಮನೆಯಲ್ಲಿ ಯಾರಿಗೂ ನನ್ನ ಮನಸ್ಸು ಅರ್ಥವಾಗುವುದಿಲ್ಲ. ಈಗ ಈ ಮಗು ತನ್ನ ಬಿಟ್ಟು ದೂರ ಹೋಯಿತು. ಯೋಚಿಸಿ ಯೋಚಿಸಿ ಕೊರಗುವಳು.

ನಮ್ಮ ಸಮಾಜದಲ್ಲಿ ಹೆಣ್ಣು ಮಕ್ಕಳ ಮಾತಿಗೆ ಬೆಲೆಯೇ ಇಲ್ವಾ…..? ಇದು ಯಾವಾಗ ಸರಿಯಾಗುತ್ತದೆ. ಯೋಚಿಸುತ್ತಾ ಯಾರ ಜೊತೆಗೂ ಬೆರೆಯದೇ ಒಬ್ಬಳೇ ಇರತೊಡಗಿದಳು.

“ಅನಿತಾ ಯಾಕೆ ಹೀಗಿದ್ದೀಯಾ…..? ನೋಡು ಅವನ ಆಯುಸ್ಸು ಅಷ್ಟೇ ಇತ್ತು. ನೀನು ಅದನ್ನೇ ಯೋಚಿಸಿ, ಆರೋಗ್ಯ ಕೆಡಿಸಿಕೊಂಡರೆ, ನಿನ್ನ ಮುದ್ದಿನ ಶಾರಿಯನ್ನು ಯಾರು ನೋಡಿಕೊಳ್ಳುತ್ತಾರೆ? ಅವಳ ಬಗ್ಗೆ ಯೋಚಿಸು,” ಎಂದು ಹೇಳಿ ವಸಂತ ಸಮಾಧಾನ ಮಾಡುತ್ತಿದ್ದ.

ಒಂದು ಬಂಡಲೇ ವೈಟ್‌ ಶೀಟ್‌ ಗಳನ್ನು ತಂದುಕೊಟ್ಟು ಮತ್ತೆ ನೀನು ಕಥೆ ಬರೆಯಲು ಶುರು ಮಾಡು ಎಂದು ಹುರಿದುಂಬಿಸುತ್ತಿದ್ದ. ಅವಳ ಮನಸ್ಸು ಬೇರೆ ಕಡೆ ಡೈವರ್ಟ್‌ ಆಗಬಹುದು ಎನ್ನುವ ಆಲೋಚನೆ ವಸಂತನಿಗೆ. ಅವಳನ್ನು ತವರಿಗೆ ಕರೆದುಕೊಂಡು ಹೋಗಿ ಬಿಟ್ಟು ಬಂದ. ಅಲ್ಲೂ ಅವಳ ವರ್ತನೆ ಬದಲಾಗಲಿಲ್ಲ.

ಅಣ್ಣಂದಿರು, ಅಮ್ಮ ಎಲ್ಲಾ ಹೇಳಿದರು, “ಅನಿತಾ, ಶಾರದಾಗೆ ನಿನ್ನ ಬಿಟ್ಟು ಇನ್ಯಾರು ಇದ್ದಾರೆ? ಅವಳನ್ನು ನೋಡಿ ದುಃಖವನ್ನು ಮರೆಯಬೇಕು,” ಎಂದರು.

ಯಾವುದಕ್ಕೂ ಪ್ರತಿಕ್ರಿಯಿಸದೆ ಮಾತಿಲ್ಲದೆ ಮೂಕವಾಗಿ ಇರುತ್ತಿದ್ದಳು. ಮಗಳನ್ನು ತಬ್ಬಿಕೊಂಡು ಕಣ್ಣೀರು ಸುರಿಸುತ್ತಿದ್ದಳು. ಡಾಕ್ಟರ್ ಹತ್ತಿರ ಹೋದಾಗ ಅವರ ಮನಸ್ಸಿಗೆ ತುಂಬಾ ಘಾಸಿಯಾಗಿದೆ. ಸ್ವಲ್ಪ ದಿನ ಎಲ್ಲಾದರೂ ಪ್ರವಾಸ ಹೋಗಿ ಬನ್ನಿ, ನಿಧಾನಕ್ಕೆ ಸರಿಯಾಗುತ್ತಾರೆ ಎಂದಿದ್ದರು.

ಡಾಕ್ಟರ್‌ ಹೇಳಿದಂತೆ ಅನಿತಾ ಹಾಗೂ ಶಾರದಾರನ್ನು ಕರೆದುಕೊಂಡು ವಸಂತ ಪ್ರವಾಸಕ್ಕೆ ಹೊರಟ.

ಅನಿತಾಳಿಗೆ ಪ್ರಕೃತಿ ಎಂದರೆ ತುಂಬಾ ಇಷ್ಟ. ಪ್ರಕೃತಿಯ ಮಡಿಲಲ್ಲಿ ಮೈ ಮರೆಯುವಳು. ಅದಕ್ಕೆ ವಸಂತ ಒಂದು ವಾರ ಕೊಡಗು, ಮಡಿಕೇರಿ ಅಲ್ಲೆಲ್ಲಾ ಸುತ್ತಾಡಿ ಬರಬೇಕೆಂದು ಹೊರಟ. ಕಾರಿನಲ್ಲಿ ಹೋದರೆ ಮತ್ತೆ ನಾವು ನಾವೇ ಇರುವುದರಲ್ಲಿ ಹೆಚ್ಚು ಬದಲಾವಣೆ ಆಗೋಲ್ಲ, ಬಸ್ಸಿನಲ್ಲಾದರೆ ನಾನಾ ತರಹದ ಜನರನ್ನು ನೋಡಿ ಅನಿತಾ ತನ್ನ ನೋವು ಮರೆಯಬಹುದೆಂದು ಯೋಚಿಸಿ ಬಸ್ಸಿನಲ್ಲಿ ಹೊರಟರು.

ಬಸ್ಸಿನಲ್ಲಿ ವಸಂತ ಅಂದುಕೊಂಡ ಹಾಗೆ ಹಿಂದಿನ, ಮುಂದಿನ ಸೀಟಿನಲ್ಲಿ ಕುಳಿತವರೆಲ್ಲಾ ಮಾತನಾಡಿಸುತ್ತಾ ಇದ್ದರು. ಮೊದಲಿನಂತೆ ವಾಚಾಳಿ ಆಗದಿದ್ದರೂ ಅಲ್ಪ ಸ್ವಲ್ಪ ಅವರುಗಳ ಜೊತೆಗೆ ಮಾತನಾಡಿದಳು. ಹಿಂದಿನ ಸೀಟಿನಲ್ಲಿ ಕುಳಿತ ಒಬ್ಬರು ಅಜ್ಜಿ ಮೊಮ್ಮಗಳನ್ನು ಕರೆದುಕೊಂಡು ಬಂದಿದ್ದರು. ಸಣ್ಣ ಪುಟ್ಟದ್ದಕ್ಕೆ ಆ ಮಗುವಿಗೆ ಬೈಯುವರು. ಮಗುವಿನ ಪೆಚ್ಚು ಮುಖ ನೋಡಿದ ಅನಿತಾ, ನಿಮ್ಮ ಅಮ್ಮ ಬಂದಿಲ್ವಾ….? ಎಂದು ಕೇಳಿದಳು. ಹತ್ತು ವರ್ಷದ ಆ ಮಗು, “ನನಗೆ ಅಮ್ಮ ಇಲ್ಲ…. ಅಮ್ಮಾ ದೇವರ ಬಳಿ ಹೋಗಿದ್ದಾಳೆ,” ಎಂದು ಕಣ್ಣಲ್ಲಿ ನೀರು ತುಂಬಿಕೊಂಡು ಹೇಳಿದಳು.

“ಅಯ್ಯೋ….. ಪಾಪ,” ಎಂದು ಅನಿತಾ ತನ್ನ ಕೈಯಲ್ಲಿದ್ದ ಚಾಕಲೇಟ್‌ ನ್ನು ಅವಳಿಗೆ ಕೊಟ್ಟಳು.

ಹಾಗೇ ಆ ಮಗುವನ್ನು ನೋಡುತ್ತಾ, ತನ್ನ ಶಾರದಾಗೆ ಹೀಗಾದರೆ…..ಶಾರದಾ ಹೀಗೆ ಅಜ್ಜಿ ಜೊತೆಗೆ ದುಗುಡ, ನೋವು ತುಂಬಿದ ಮನದಲ್ಲಿ ಹೋಗುತ್ತಿರುವಂತೆ ಕನಸು ಕಂಡಳು. ಕರುಳು ಕಿವುಚಿದಂತಾಯಿತು. ತನಗೇನಾದರೂ ಆದರೆ…. ಯೋಚಿಸಿ ಭಯವಾಯಿತು. ಪಕ್ಕ ಕುಳಿತ ಶಾರದಾಳನ್ನು ಬಿಗಿಯಾಗಿ ತಬ್ಬಿಕೊಂಡಳು.

tonik-story2

“ಕಂದಾ ನನ್ನ ಮುದ್ದು ಶಾರೀ…. ನಿನ್ನ ಬಿಟ್ಟು ನಾನು ಎಲ್ಲೂ ಹೋಗಲ್ಲ,” ಎನ್ನುತ್ತಾ ಕನವರಿಸಿದಳು.

`ಛೇ…. ತಾನು ಮೊದಲಿನಂತೆ ಆಗಬೇಕು. ತಾನು ತನ್ನ ಶಾರೀಗೋಸ್ಕರ ಬದುಕಬೇಕು….’ ಮನಸ್ಸಿನಲ್ಲೇ ದೃಢ ನಿರ್ಧಾರ ಮಾಡಿದಳು.

ನಂತರ ಎಲ್ಲಾ ಕಡೆ ಸುತ್ತಾಡುವಾಗ ವಸಂತನ ಜೊತೆ ಸ್ವಲ್ಪ ಸ್ವಲ್ಪ ಬೆರೆತಳು. ಸಧ್ಯ ಪ್ರವಾಸಕ್ಕೆ ಬಂದು ಒಳ್ಳೆಯ ಕೆಲಸ ಮಾಡಿದೆ ಎಂದುಕೊಂಡ ವಸಂತ.

ಮೂರು ಜನರು ಅಲ್ಲಿ ನೋಡುವ ಸ್ಥಳಗಳನ್ನು ನೋಡುತ್ತಾ, ಹಸಿರು ಪರಿಸರದಲ್ಲಿ ಓಡಾಡುತ್ತಾ ಕೆಲವು ಫೋಟೋಗಳನ್ನು ತೆಗೆದುಕೊಂಡರು. ಶಾರದಾಗಂತೂ ಅಪ್ಪ, ಅಮ್ಮ ಮೂರು ಹೊತ್ತು ತನ್ನ ಜೊತೆಗೆ ಇರುತ್ತಾರೆ ಅಂತ ಖುಷಿ. ಇಬ್ಬರ ಕೈ ಹಿಡಿದುಕೊಂಡು ಓಡಾಡುತ್ತಿದ್ದಳು.

ಹಗಲೆಲ್ಲಾ ಸುತ್ತಾಡಿ ರಾತ್ರಿ ಲಾಡ್ಜ್ ಗೆ ಬಂದ ಮೇಲೆ. “ಅನಿತಾ ನಿನಗೆ ಸುಸ್ತು ಇಲ್ಲದಿದ್ದರೆ ನೀನು ಕಥೆ, ಲೇಖನ ಏನಾದರೂ ಬರೀ,” ಎಂದು ಪೇಪರ್‌ ಹಾಗೂ ಪೆನ್ನು ಕೊಟ್ಟ ವಸಂತ.

“ಈಗ ಬರೆಯುವ ಮನಸ್ಸಿಲ್ಲಾ…. ನನಗೆ ಸುಸ್ತಾಗಿದೆ,” ಎಂದು ಶಾರದಾಳನ್ನು ತಬ್ಬಿಕೊಂಡು ಮಲಗಿದಳು. ಒಂದು ವಾರ ಕಳೆಯುವಷ್ಟರಲ್ಲಿ ಎಪ್ಪತ್ತು ಪರ್ಸೆಂಟ್‌ ಸುಧಾರಿಸಿದ್ದಳು ಅನಿತಾ. ಅವಳೇ ವಾಪಸ್‌ ಊರಿಗೆ ಹೋಗಲು ಬಲವಂತ ಮಾಡಿದಳು.

“ಅತ್ತೆ, ಮಾವ ಇಬ್ಬರೇ ಇರುತ್ತಾರೆ. ನಾವು ಬಂದು ವಾರವಾಯಿತು. ವಾಪಸ್‌ ಹೋಗೋಣ,” ಎಂದಳು.

“ನಿನಗೆ ಸಮಾಧಾನಾದರೆ ಹೋಗೋಣ. ಶಾರೀ ಪುಟ್ಟಾ ಊರಿಗೆ ಹೋಗುವುದಾ?” ಎಂದು ಮಗಳನ್ನು ಕೇಳಿದ.

“ಈಗ ಹೋಗೋಣ ಅಪ್ಪಾ, ಆದರೆ ಮತ್ತೆ ಸ್ವಲ್ಪ ದಿನ ಬಿಟ್ಟು ನೀನು ಕರೆದುಕೊಂಡು ಬರಬೇಕು. ಅಪ್ಪ, ಅಮ್ಮ ಇಬ್ಬರೂ ಹೀಗೆ ನನ್ನ ಜೊತೆಗೆ ಇರಬೇಕು,” ಎಂದು ಶಾರದಾ ಮುದ್ದು ಮುದ್ದಾಗಿ ಹೇಳಿದಳು.

“ಆಯಿತು ಪುಟ್ಟಾ…. ಇನ್ನೂ ಹೀಗೆಯೇ ನಾನು, ನೀನು, ಅಮ್ಮ ಪ್ರವಾಸ ಬರುತ್ತಿರೋಣ,” ಎಂದು ಮಗಳನ್ನು ಮುದ್ದು ಮಾಡಿದ.

ಆ ಪ್ರಕೃತಿಯ ಮಡಿಲಲ್ಲಿ, ಹಸಿರು ಪರಿಸರದಲ್ಲಿ, ಅನಿತಾಳ ಮನಸ್ಸಿಗೆ ಸ್ವಲ್ಪ ಸಮಾಧಾನ ಬಂದಿತು.

ಪ್ರವಾಸದಿಂದ ಬಂದ ಮೇಲೆ ಅನಿತಾ ಸ್ವಲ್ಪ ಚೇತರಿಸಿಕೊಂಡಳು. ಆದರೂ ಅವಳು ಮನದಲ್ಲೇ ಯೋಚಿಸುವಳು. ಏನೇ ಇರಲಿ ಹೆಣ್ಣು ಮಕ್ಕಳಿಗೆ ತಮ್ಮದೇ ಆದ ದುಡಿಮೆ ಇರಬೇಕು, ಆಗ ಎಲ್ಲದಕ್ಕೂ ಸ್ವಾತಂತ್ರ್ಯವಿರುತ್ತದೆ ಎನಿಸುತ್ತಿತ್ತು.

ತನಗೂ ಅಷ್ಟೇ, ತನ್ನದೇ ಆದ ದುಡಿಮೆ ಇದ್ದರೆ ಯಾರ ಮಾತು ಕೇಳದೆ ತಕ್ಷಣ ಮಗನಿಗೆ ಆಪರೇಷನ್‌ ಮಾಡಿಸಬಹುದಿತ್ತು….. ತನ್ನ ಬರಹಗಳನ್ನು ಪುಸ್ತಕದ ರೂಪದಲ್ಲಿ ತರಬಹುದಿತ್ತು…..ತಾನು ಪ್ರಕಾಶಕಳಾಗಿ ಹೊಸ ಬರಹಗಾರರಿಗೆ ಪ್ರೋತ್ಸಾಹ ನೀಡಬಹುದಿತ್ತು ಅಂತೆಲ್ಲಾ ಯೋಚಿಸುವಳು. ಅದಕ್ಕೆ ದಿನ ಶಾರದಾಳಿಗೆ ತುಂಬಾ ಚೆನ್ನಾಗಿ ಓದಿ ಕೆಲಸಕ್ಕೆ ಸೇರಿಕೊಳ್ಳಬೇಕು ಎಂದು ಹೇಳುತ್ತಿದ್ದಳು. ಹೀಗೆ ನೋವನ್ನು ನುಂಗಿ ಮೇಲೆ ನಗುತ್ತಾ ಇರಲು ಪ್ರಯತ್ನಿಸುತ್ತಿದ್ದಳು. ಆದರೂ ತನ್ನಲ್ಲಿ ಏನೋ ಬದಲಾವಣೆಯಾಗಿದೆ ತಾನು ಬದುಕುವುದಿಲ್ಲ ಅನಿಸುತ್ತಿತ್ತು. ತುಂಬಾ ಹೊಟ್ಟೆ ನೋವು ಬರುತ್ತಿತ್ತು. ಯಾರಿಗೂ ಹೇಳದೆ ನೋವು ನುಂಗುತ್ತಿದ್ದಳು. ಒಂದು ದಿನ ತಡೆಯಲು ಆಗದೆ ಡಾಕ್ಟರ್‌ ಬಳಿ ಹೋದಾಗ ಹೊಟ್ಟೆಯಲ್ಲಿ ಗಡ್ಡೆಯಿದೆ. ಒಂದು ವಾರ ಬಿಟ್ಟು ಬನ್ನಿ ಆಪರೇಷನ್‌ ಮಾಡಬೇಕು ಎಂದರು. ಆಗ ಅನಿತಾಳಿಗೆ ತಾನು ಬದುಕುವುದಿಲ್ಲ ಎಂದು ಖಚಿತವಾಯಿತು.

ಗಂಡನ ಬಳಿ, “ರೀ… ನನಗೆ ಏನಾದರೂ ಹೆಚ್ಚು ಕಡಿಮೆ ಆದರೆ, ನಮ್ಮ ಶಾರಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಹಾಗೂ ಅವಳನ್ನು ತುಂಬಾ ಓದಿಸುತ್ತೇನೆ ಎಂದು ಮಾತು ಕೊಡಿ,” ಎಂದಳು.

“ಅನಿತಾ ಭಯಪಡಬೇಡ. ನಿನಗೆ ಏನೂ ಆಗುವುದಿಲ್ಲ. ನೀನು ಹೇಳಿದಂತೆ ಶಾರಿಯನ್ನು ಜೀವಕ್ಕಿಂತ ಮಿಗಿಲಾಗಿ ನೋಡಿಕೊಳ್ಳುವೆ. ಆದರೆ ಅವಳಿಗೆ ತಾಯಿಯ ಪ್ರೀತಿ ಬೇಕು. ನೀನು ಶಾರಿಗೋಸ್ಕರ ಬದುಕುತ್ತೇನೆ ಎಂದು ದೃಢ ಮನಸ್ಸು ಮಾಡಬೇಕು,” ಎಂದು ಸಮಾಧಾನ ಮಾಡಿದ.

ಆಪರೇಷನ್‌ ಗಾಗಿ ಆಸ್ಪತ್ರೆಗೆ ಹೋಗುವ ಹಿಂದಿನ ದಿನ ತಾನು ಬರೆದ ಎಲ್ಲಾ ಬರಹಗಳು ಹಾಗೂ ದಿನಚರಿಯನ್ನು ಟ್ರಂಕ್‌ ನಲ್ಲಿ ಹಾಕಿದಳು. ಕೊನೆಯದಾಗಿ ಮಗಳಿಗೆ, “ಶಾರೀ…. ನೀನು ತುಂಬಾ ಚೆನ್ನಾಗಿ ಓದಬೇಕು ಹಾಗೂ ನೀನು ದೊಡ್ಡವಳಾದ ಮೇಲೆ ನನ್ನ ಬರಹಗಳನ್ನು ಪುಸ್ತಕ ಮಾಡಿಸು. ಸಾಧ್ಯವಾದರೆ ನೀನೂ ಬರೆಯುವುದನ್ನು ರೂಢಿಸಿಕೋ…. ನಾನು ನಿನಗೋಸ್ಕರ ಯಮನ ಜೊತೆಗೆ ಹೋರಾಡುತ್ತೇನೆ. ನನಗೆ ಬದುಕು ಆಸೆ ತುಂಬಾ ಇದೆ. ಇದಕ್ಕೂ ಮೀರಿ ನನಗೇನಾದರೂ ಆದರೆ ಯೋಚಿಸಬೇಡ. ನಾನು ಅಲ್ಲಿಂದಲೇ ನಿನ್ನ ಏಳಿಗೆಯನ್ನು ನೋಡುತ್ತೇನೆ, ನೀನು ವಿದ್ಯಾವಂತಳಾಗಬೇಕು,” ಎಂದು ಪತ್ರವನ್ನು ಬರೆದು ಅದರಲ್ಲಿ ಇಟ್ಟಳು.

ಮರುದಿನ ಆಸ್ಪತ್ರೆಗೆ ಹೊರಡುವಾಗ ಟ್ರಂಕ್‌ ನ ಬೀಗ ಹಾಕಿ ಬೀಗನ್ನು ವಸಂತನ ಬಳಿ ಕೊಟ್ಟು ನನಗೇನಾದರೂ ಹೆಚ್ಚು ಕಡಿಮೆ. ಆದರೆ ಶಾರೀಗೆ ಇಪ್ಪತ್ತೆರಡು ವರ್ಷವಾದ ಮೇಲೆ ಈ ಬೀಗದ ಕೈ ಕೊಡಿ ಎಂದಿದ್ದಳು.

ಶಾರೀಗೆ ಡೈರಿ ಓದಿ ಅಮ್ಮ ಆಸ್ಪತ್ರೆಯಲ್ಲಿ ಮಲಗಿದ್ದು ನೆನಪಾಯಿತು. ಸಾಯುವ ಮೊದಲು ಹೇಳಿದ್ದಳು. `ನೀನು ತುಂಬಾ ಓದಬೇಕು ಶಾರೀ…. ತುಂಬಾ ಖ್ಯಾತಿವಂತಳಾಗಬೇಕು. ನಾನು ಇನ್ನೆರಡು ದಿನಗಳಲ್ಲಿ ಮನೆಗೆ ಬರುತ್ತೇನೆ,’ ಎಂದಿದ್ದ ಅಮ್ಮ ವಾಪಸ್‌ ಮನೆಗೆ ಬರಲಿಲ್ಲ.

ಅಮ್ಮನ ನೆನೆದು ಕಣ್ಣೀರು ಹಾಕಿದಳು. `ಅಮ್ಮನ ಬರಹಗಳನ್ನು ಪುಸ್ತಕ ಮಾಡಿಸಬೇಕು. ಇದಕ್ಕೆ ಚಂದ್ರಿಕಾ ಆಂಟಿಯ ಸಹಾಯ ಕೇಳಬೇಕು,’ ಎಂದುಕೊಂಡಳು.

ಮರುದಿನ ಅಪ್ಪನ ಬಳಿ, “ಅಪ್ಪಾ…. ನನಗೆ ರಜೆ ಬಂದ ನಂತರ ಚಂದ್ರಿಕಾ ಆಂಟಿಯನ್ನು ಭೇಟಿ ಮಾಡಿ ಬರುತ್ತೇನೆ. ಅಮ್ಮ ಬರೆದ ಬರಹಗಳನ್ನು ಪುಸ್ತಕ ಮಾಡಿಸಬೇಕು,” ಎಂದಳು ಶಾರದಾ.

“ಶಾರೂ…. ನಾನು ಪ್ರಕಾಶಕರ ಬಳಿ ಮಾತನಾಡಿರುವೆ.  ನಿನಗೆ ಇಪ್ಪತ್ತೆರಡು ವರ್ಷ ಆಗಲಿ ಅಂತ ಕಾಯುತ್ತಿದ್ದೆ. ನಿನ್ನನ್ನು ಪ್ರಕಾಶಕರ ಬಳಿ ಕರೆದುಕೊಂಡು ಹೋಗುವೆ,” ಎಂದರು.

“ನೀನು ಎಲ್ಲವನ್ನೂ ಮೊದಲು ಓದು, ನಂತರ ಇಬ್ಬರೂ ಹೋಗಿ ಮಾತನಾಡೋಣ. ಇದಕ್ಕೆ ನಿನ್ನ ಅಮ್ಮನ ಹಣವೇ ಇದೆ. ಅನಿತಾ ತುಂಬಾ ಸ್ವಾಭಿಮಾನಿ. ನನ್ನ ಹಣದಿಂದ ಪುಸ್ತಕ ಬಿಡುಗಡೆ ಮಾಡಿಸುವುದನ್ನು ಇಷ್ಟಪಡುವುದಿಲ್ಲ. ಅದಕ್ಕೆ  ನಮ್ಮ ಜಾಯಿಂಟ್‌ ಅಕೌಂಟ್‌ ನಲ್ಲಿ ಅವಳು ಕೂಡಿಟ್ಟಿದ್ದ ಹಣ ಹಾಗೇ ಇಟ್ಟಿದ್ದೆ,” ಎಂದ ವಸಂತ.

ಮರುದಿನ ಪಾರ್ತಮ್ಮ, “ಶಾರೀ… ಏನು ಇಟ್ಟಿದ್ದಾಳೆ ನಿನ್ನ ಅಮ್ಮ ಟ್ರಂಕಿನಲ್ಲಿ?” ಎಂದು ಅಪಹಾಸ್ಯ ಮಾಡಿದರು.

ಅವರಿಗೆ ಮೊದಲಿನಿಂದಲೂ ಸೊಸೆ ಓದುವುದು, ಬರೆಯುವುದು ಇಷ್ಟವಿರಲಿಲ್ಲ. ಅನಿತಾ ಯಾವಾಗಲೂ ಬರೆಯಲು ಸಮಯವಿಲ್ಲ, ತನ್ನ ಬರಹದ ಪುಸ್ತಕ ಮಾಡಿಸಲಿಲ್ಲ ಅಂತ ಬೇಸರ ಮಾಡಿಕೊಳ್ಳುವಳು. ಹೆಂಗಸರಿಗೆ ಮನೆ ಕೆಲಸ ಅಚ್ಚುಕಟ್ಟಾಗಿ ಮಾಡುವುದು ಕಲಿತರೆ ಸಾಕು ಎಂದರೂ ಕೇಳುತ್ತಿರಲಿಲ್ಲ ಎಂದು ಬೇಸರವಿತ್ತು.

“ಅಮ್ಮ ಟ್ರಂಕ್‌ ನಲ್ಲಿ ಇಟ್ಟಿರುವುದು ಅತ್ಯಮೂಲ್ಯ ವಸ್ತು. ಅದು ಅವರು ನನಗೆ ನೀಡಿದ ಅಮೂಲ್ಯ ಕೊಡುಗೆ,” ಎಂದಳು.

“ಯಾಕೋ…. ಬರುಬರುತ್ತಾ ನೀನೂ ನಿನ್ನಮ್ಮನಂತೆ ಆಗುತ್ತಿದ್ದೀಯಾ,” ಎಂದು ವಟುಗುಟ್ಟುತ್ತಾ ಒಳಗಡೆ ಹೋದರು.

ಒಂದು ವಾರದ ನಂತರ ಶಾರದಾ ಅಪ್ಪನ ಜೊತೆಗೆ ನಾಲ್ಕು, ಐದು ಪ್ರಕಾಶಕರ ಬಳಿ ಹೋದಳು.

“ನಮ್ಮ ಅಮ್ಮ ತುಂಬಾ ಕಥೆಗಳನ್ನು ಬರೆದಿದ್ದಾರೆ. ಅಲ್ಲದೆ, ಎರಡು ಕಾದಂಬರಿಗಳು ಇವೆ. ಅದನ್ನು ಪ್ರಕಟಣೆ ಮಾಡಿಸಬೇಕು, ನಮಗೆ ಇದರ ಬಗ್ಗೆ ಏನೂ ತಿಳಿದಿಲ್ಲ,” ಎಂದಳು ಶಾರದಾ.

ಒಬ್ಬ ಪ್ರಕಾಶಕರು, “ನೀವು ಮೊದಲು ಒಂದು ಪುಸ್ತಕ ಮಾಡಿಸಿ. ಒಂದು ಇನ್ನೂರು ಪ್ರತಿಗಳನ್ನು ಪ್ರಿಂಟ್‌ ಮಾಡಿಸಿ, ನಂತರ ಕೆಲವು ವಾಚನಾಲಯಗಳಿಗೆ ರೆಕ್ಮೆಂಡ್‌ ಮಾಡುತ್ತೇನೆ. ಅದು ಹೇಗೆ ಖಾಲಿಯಾಗುತ್ತದೆ ನೋಡಿಕೊಂಡು ಉಳಿದದ್ದು ಮಾಡಿಸೋಣ,” ಎಂದು ಕೆಲವು ಸಲಹೆಗಳನ್ನು ಕೊಟ್ಟರು.

“ಈಗ ಮೊದಲಿನ ಹಾಗೆ ಬರೆದು ಕಷ್ಟಪಡುವ ಹಾಗಿಲ್ಲ. ಎಲ್ಲಾ ಮೊಬೈಲ್ ‌ಟ್ಯಾಬ್ಲೆಟ್‌ ಗಳಲ್ಲೇ ಟೈಪ್‌ ಮಾಡುತ್ತಾರೆ, ಈಗ ಲೇಖಕರಿಗೆ ಸುಲಭ ಎಂದು ಉತ್ತಮವಾದ ಹತ್ತು ಕಥೆಗಳನ್ನು ಸೆಲೆಕ್ಟ್ ಮಾಡಿ ಕನ್ನಡ ನುಡಿ ತಂತ್ರಾಂಶದಲ್ಲಿ ಟೈಪ್‌ ಮಾಡಿ ನನಗೆ ಮೇಲ್ ‌ಮಾಡಿ. ಉಳಿದದ್ದು ನಾನೇ ಮಾಡುವೆ,” ಎಂದರು.

ಮನೆಗೆ ಬಂದ ಶಾರದಾ ಚಂದ್ರಿಕಾ ಆಂಟಿಗೆ ಫೋನ್‌ ಮಾಡಿದಾಗ ಅವರು ತುಂಬಾ ಖುಷಿಪಟ್ಟರು, `ಶಾರೂ, ನೀನು ಅಮ್ಮನ ಪುಸ್ತಕ ಪ್ರಕಟಣೆ ಮಾಡಿಸುವುದು ತುಂಬಾ ಖುಷಿಯಾಯಿತು. ಅವಳ ಆತ್ಮಕ್ಕೆ ನೆಮ್ಮದಿ ಸಿಗುತ್ತದೆ. ಅನಿತಾ ತುಂಬಾ ಚೆನ್ನಾಗಿ ಬರೆಯುತ್ತಿದ್ದಳು.”

ಈ ರೀತಿ ಶಾರದಾ ತನ್ನ ತಾಯಿಯ ಕನಸನ್ನು ನನಸು ಮಾಡಿದಳು. ಅನಿತಾಳ ಬರಹಗಳೆಲ್ಲ ಪುಸ್ತಕಗಳಾಗಿ ಅಪಾರ ಜನಪ್ರಿಯತೆ ಪಡೆಯಿತು. ತಾಯಿಯ ಆಸೆಯಂತೆ ಅವಳು ಎಂಜಿನಿಯರ್‌ ಎನಿಸಿ ಆಧುನಿಕ ಜೀವನದಲ್ಲಿ ಕಾಲಕ್ಕೆ ತಕ್ಕಂತೆ ಆರ್ಥಿಕವಾಗಿ ಸ್ವತಂತ್ರಳಾದಳು. ಜೊತೆಗೆ ಅಮ್ಮನ ಅಭಿಲಾಷೆಯಂತೆ ತಾನೂ ಬರೆಯುವುದನ್ನು ರೂಢಿಸಿಕೊಂಡು ಸಾಹಿತ್ಯ ಕೃಷಿ ಮುಂದುರಿಸಿದಳು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ