ನೀಳ್ಗಥೆ - ಶಂಕರಾನಂದ ಹೆಬ್ಬಾಳ
ಒಳ್ಳೆಯ ಮನೆತನದ ಹೆಣ್ಣು ಮಗಳು ಸೌಮ್ಯಾ, ಯಾರನ್ನೋ ನಂಬಿಕೊಂಡು ಮನೆಯವರು ನಿಶ್ಚಯಿಸಿದ್ದ ಮದುವೆ ತೊರೆದು, ಪ್ರೀತಿಸಿದವನೊಂದಿಗೆ ಓಡಿಹೋದಳು. ಮುಂದೆ ಅವಳ ಭವಿಷ್ಯ........?
ಅದು ಮೊದಲೇ ನಿಶ್ಚಯವಾದ ಮದುವೆ. ಪಂಡರಾಪುರದ ದೇಗುಲದಲ್ಲಿ ಒಲ್ಲದ ಸೋದರ ಮಾವನ ಜೊತೆಗೆ ಮದುವೆ ನಡೆಯಲು ಎಲ್ಲ ಸಿದ್ಧತೆಗಳು ನಡೆದಿದ್ದವು. ಮಾವಿನೆಲೆಯ ತೋರಣಗಳಿಂದ ಕಲ್ಯಾಣ ಮಂಟಪವನ್ನು ಅಲಂಕಾರ ಮಾಡಲಾಗಿತ್ತು. ಎಲ್ಲೆಡೆಯಲ್ಲೂ ವಾದ್ಯಗಳ ಸದ್ದು ಕಿವಿಯಲ್ಲಿ ಮಂಗಳಕರವಾಗಿ ಕೇಳುತ್ತಿತ್ತು.
ಕೈಗಳಿಗೆ ಮದರಂಗಿಯ ಕೆಂಪು ಬಣ್ಣ ಬಳಿದುಕೊಂಡಿದ್ದ ಮದುಮಗಳು ಒಂದೇ ಸಮ ಅರಳಿದ ಕುಸುಮದಂತೆ ಹೊಳೆಯುತ್ತಿದ್ದಳು.
ಮದುಮಗ ಅದೇ ತಾನೇ ಕಡೆಗೋಲಿನಲ್ಲಿ ಕಡೆದಿಟ್ಟ ನವನೀತದಂತೆ ಮೃದು ಮನಸ್ಸಿನ ಕೋಮಲ ನವಭಾವಗಳೊಂದಿಗೆ ಹಸೆಮಣೆಯಲ್ಲಿ ಹೊಸ ಕನಸುಗಳನ್ನು ಕಾಣುತ್ತಿದ್ದನು.
ಹುಡುಗಿಯ ಗೆಳತಿ ಮದುಣಗಿತ್ತಿ (ಸೌಮ್ಯಾ)ಗೆ, ``ಇರಲಿ.... ಸಮಾಧಾನ ತಂದುಕೋ....! ಹೆಣ್ಣು ಜನುಮನೇ ಇಷ್ಟು....! ಎಷ್ಟೆಷ್ಟೋ ಆಸೆ ಪಡುತ್ತೇವೆ.... ಆದರೆ ಕೊನೆಗೆ ಪಾಲಿಗೆ ಬಂದದ್ದು ಪಂಚಾಮೃತ ಎಂದು ತಿಳಿಯಬೇಕು ಕಣೇ,'' ಎಂದು ಸಮಾಧಾನಪಡಿಸಿ ಆಕೆಯ ಅಲಂಕಾರದ ವೈಭವವನ್ನು ಮುಗಿಸಿ ಹೊರಟಳು, ``ಹತ್ತು ನಿಮಿಷ.... ಬರುವೆ, ನಮ್ಮ ತಾಯಿ ಫೋನ್ ಮಾಡುತ್ತಿದ್ದಾರೆ,'' ಎಂದು ಮಾತಾಡಲು ಹೊರಟು ಹೋದಳು.
ಅದೇ ಕ್ಷಣನ್ನು ಸರಿಯಾಗಿ ಬಳಸಿಕೊಂಡು, ಅಲ್ಲಿಂದ ಯಾರಿಗೂ ಗೊತ್ತಾಗದಂತೆ ಆ ಕನ್ಯೆ ಪರಾರಿಯಾದಳು.
ಸ್ವಲ್ಪ ಸಮಯದ ನಂತರ.....``ಸೌಮ್ಯಾ..... ಎಲ್ಲಿದ್ದೀಯಾ....? ಬೇಗ ಬಾ... ಸಮಯ ಮೀರುತಿದೆ. ಎಲ್ಲಿ ಹೋದೆ ಹಾಳಾಗಿ.... ಇನ್ನೂ ಅಲಂಕಾರ ಮುಗಿದಿಲ್ಲವೇನೆ....'' ಎಂದರೂ ಕಮಕ್ ಕಿಮಕ್ ಎನ್ನದ ಮಗಳನ್ನು ನೋಡಿ ಕಿಟಕಿಯಲ್ಲಿ ಕಣ್ಣಾಡಿಸಿದಳು. ಅಲ್ಲಿ ಆಕೆಯ ಸುಳಿವೇ ಇರಲಿಲ್ಲ.
ಒಂದು ಕ್ಷಣದಲ್ಲಿ ಎಲ್ಲವೂ ಅಲ್ಲೋಲ ಕಲ್ಲೋಲ..... ಹುಡುಕಿದರೂ ಒಳಗೂ ಇಲ್ಲ ಹೊರಗೂ ಇಲ್ಲ.... ಗಾಬರಿಯಿಂದ ಓಡಿ ಬಂದ ಸೌಮ್ಯಾಳ ಗೆಳತಿ, ``ಅಮ್ಮ ಏನಾಯಿತಮ್ಮ.....?'' ಎಂದು ಗೆಳತಿಯ ತಾಯಿಯನ್ನು ಕೇಳಿದಳು.
``ಏನು ಹೇಳಲಮ್ಮ..... ಸೌಮ್ಯಾ ಕಾಣೆಯಾಗಿದ್ದಾಳೆ ಎಲ್ಲೂ ಇಲ್ಲ,'' ಎಂದರು ಸೌಮ್ಯಾಳ ತಾಯಿ.
`ಕಡೆಗೂ ಸೌಮ್ಯಾ ಹೇಳಿದಂತೆ ಮಾಡಿದ್ದಾಳೆ,' ಎಂದು ಮನಸ್ಸಿನಲ್ಲಿ ನೆನೆಸಿದ ಗೆಳತಿ, ``ಇಲ್ಲೇ ಎಲ್ಲೋ ಇರಬಹುದಮ್ಮ ನೋಡೋಣ,'' ಎಂದಳು.
ಹಾಗಾದರೆ ಸೌಮ್ಯಾ ಎಲ್ಲಿ ಹೋಗಿರಬಹುದು....? ಏನಾಯಿತು....? ಈ ಮದುವೆ ಅವಳಿಗೆ ಇಷ್ಟವಿತ್ತೋ... ಇಲ್ಲವೋ....? ಹೀಗಾಗಲು ಕಾರಣವೇನು....?
ಅಲ್ಲಿಂದ ಪಲಾಯನ ಗೈದ ಸೌಮ್ಯಾ ಕಾಣದಂತೆ ಕಣ್ಮರೆಯಾದಳು. ಸುಳಿವೇ ಇಲ್ಲದ ಸುಳಿಗಾಳಿಯಂತೆ ಹಾಗೆ ಇದ್ದು ಹೀಗೆ ಕಣ್ಮರೆಯಾದಳು.
ಆ ಮದುವೆ ನಡೆಯುತ್ತಿದ್ದ ದೇಗುಲದಲ್ಲಿ ಇದ್ದಕ್ಕಿದ್ದಂತೆ ಮೌನ ಆವರಿಸಿತು. ಜೊತೆಗೆ ಮದುವೆ ಅರ್ಧಕ್ಕೆ ನಿಂತು ಹೋಯಿತು. ಮದುಮಗ ಜೋಲು ಮೊಗದಿಂದ ಮದುವೆಯ ಕನಸುಗಳನ್ನು ಅದುಮಿಟ್ಟುಕೊಂಡು, ``ಅಕ್ಕಾ... ಇರಲಿ ಬಿಡು....! ಮತ್ತೆ ಅವಳು ಬಂದಾಗ ನೋಡುತ್ತೇನೆ. ನನ್ನ ಹಣೆಬರಹ ಚೆನ್ನಾಗಿಲ್ಲ....,'' ಎನ್ನುತ್ತಾ ಒಳಗೊಳಗೆ ನೊಂದುಕೊಂಡ ಸೌಮ್ಯಾಳ ಸೋದರಮಾವ ಶಿವ ಅವಳದೇ ಧ್ಯಾನದಲ್ಲಿ ಲೀನನಾಗಿದ್ದ.
ಅಷ್ಟರಲ್ಲಿ ಆವಳು ಮಗನೊಬ್ಬ ಬಂದು, ``ಅಮ್ಮಾವ್ರೆ.... ಚಿಕ್ಕ ಅಮ್ಮಾವ್ರು ಹೊಳೆ ದಡದ ತವಾ ತೆಪ್ಪ ಏರಿ ಹೋಗುತ್ತಿದ್ದುದನ್ನು ನೋಡಿದೆ,'' ಎಂದು ಹೇಳಿದ.





