ಸುಜಾತಾಳ ಮನೆಯವರು ಸಂಪ್ರದಾಯದ ಸಂಕೋಲೆಯ ಹೆಸರಿನಲ್ಲಿ, ತಾವು ಆವರಿಸಿದ ವರನನ್ನೇ ಅವಳು ಮದುವೆಯಾಗಬೇಕೆಂದು ನಿರ್ಬಂಧ ಹೇರಿದರು. ಅವನು ಹಣವಂತನಿರಬಹುದು, ಆದರೆ ಅವಳ ಮನದ ಅಭಿಪ್ರಾಯಗಳಿಗೆ ಕಿಲುಬು ಕವಡೆಯ ಕಿಮ್ಮತ್ತೂ ಕೊಡುತ್ತಿರಲಿಲ್ಲ. ಕೊನೆಗೆ ಸುಜಾತಾ ತಾಳಿದ ನಿರ್ಧಾರವೇನು......?
``ಅಮ್ಮ, ಇಷ್ಟು ಬೇಗ ನನಗೆ ಮದುವೆ ಬೇಡ ಅಂತ ಎಷ್ಟು ಸಲ ಹೇಳಿದ್ದೀನಿ..... ನಾನು ಮುಂದೆ ಇನ್ನೂ ಓದಬೇಕು, ಡಬಲ್ ಗ್ರಾಜ್ಯುಯೇಟ್ ಆಗಬೇಕು.....'' ಸುಜಾತಾ ಅಮ್ಮನ ಬಳಿ ಬಂದು ಅವರ ಕೈ ಹಿಡಿದುಕೊಳ್ಳುತ್ತಾ ಬಲು ಪ್ರೀತಿಯಿಂದ ಹೇಳಿದಳು.
``ಅಲ್ಲಮ್ಮ.... ಈ ಹುಡುಗನಲ್ಲಿ ನೀನು ಏನು ದೋಷ ಕಂಡೆ? ಹುಡುಗ ಬಿ.ಇ ಮುಗಿಸಿ ಉನ್ನತ ಖಾಸಗಿ ಕಂಪನಿಯಲ್ಲಿ ಎಂಜಿನಿಯರ್, ಉತ್ತಮ ಸಂಬಳ, ಅನುಕೂಲಸ್ಥ ಮನೆತನ..... ಹೈ ಫೈ ಫ್ಯಾಮಿಲಿ..... ನಿನ್ನ ತಂದೆಯ ಗೆಳೆಯರಿಗೆ ಬಹು ಪರಿಚಿತರ ಮಗನಂತೆ.... ಒಳ್ಳೆ ಆದಾಯದ ಜೊತೆಗೆ ಈ ಕಾಲಕ್ಕೆ ತಕ್ಕಂತೆ ಬೇಕಾದ ಅನುಕೂಲಗಳಿವೆ, ನೋಡೋಕೆ ಬಹಳ ಸ್ಮಾರ್ಟ್ ಅಲ್ಲದಿದ್ದರೂ ತೀರಾ ತೆಗೆದು ಹಾಕು ಹಾಗಿಲ್ಲ. ಅವರ ಮನೆಯಲ್ಲಿ ಬೇಕಾದಷ್ಟು ಆಳುಕಾಳು ತುಂಬಿದ್ದಾರೆ, ನೀನು ಆ ಮನೆಯಲ್ಲಿ ಮಹಾರಾಣಿ ಹಾಗಿರಬಹುದು.... ಇಂಥ ಒಳ್ಳೆ ಹುಡುಗ ಸಿಕ್ಕಿರುವಾಗ ಈ ಅವಕಾಶ ಯಾರಾದರೂ ಕಳೆದುಕೊಳ್ಳುತ್ತಾರೆಯೇ?'' ತಾಯಿ ಲಲಿತಮ್ಮ ಮಗಳ ಕೆನ್ನೆ ತಟ್ಟುತ್ತಾ ಅವಳನ್ನು ಓಲೈಸಲು ನೋಡಿದರು.
ಅಮ್ಮನ ಕೊರಳಿಗೆ ಕೈ ಸುತ್ತಿಕೊಳ್ಳುತ್ತಾ ಸುಜಾತಾ, ``ಅಮ್ಮ ದಯವಿಟ್ಟು ನನ್ನ ಮಾತು ಅರ್ಥ ಮಾಡಿಕೋ..... ಯಾರದೋ ಆಸ್ತಿ ನನಗೆ ಮುಖ್ಯ ಅಲ್ಲ.... ನಾನು ಕಲಿತ ವಿದ್ಯೆಗೆ ಉತ್ತಮ ನೌಕರಿ ಸಿಗಬೇಕು, ನನ್ನ ಕಾಲ ಮೇಲೆ ನಾನು ನಿಲ್ಲಬೇಕು.... ಆಮೇಲೆ ಈ ಮದುವೆ ಗಿದುವೆ.....'' ಮಹಾ ಸ್ವಾಭಿಮಾನದ ನುಡಿಗಳು ಅವಳದು.
ಅವಳು ತಾಯಿಯನ್ನು ಒಪ್ಪಿಸಿ, ತಂದೆಯನ್ನು ವಿರೋಧಿಸಲು ಹರಸಾಹಸ ಮಾಡುತ್ತಿದ್ದಳು. ಅಮ್ಮ ತಾನಾಗಿ ಬೇಡ ಎಂದು ಅಪ್ಪನ ಮುಂದೆ ಹೇಳಿದಾಗ ಮಾತ್ರ ಈ ಸಂಬಂಧದಿಂದ ತನಗೆ ಬಿಡುಗಡೆ ಎಂದು ಅವಳಿಗೆ ಗೊತ್ತಿತ್ತು.
``ಸುಜಿ, ಒಂದು ಕೆಲಸ ಮಾಡು. ನೀನು ಆ ಹುಡುಗನ ಜೊತೆ ಒಮ್ಮೆ ನಿಧಾನವಾಗಿ ಮಾತನಾಡು. ನಿಮ್ಮಿಬ್ಬರ ಅಭಿಪ್ರಾಯ ಏನು ಅಂತ ಗೊತ್ತಾಗುತ್ತದೆ,'' ಹಠ ಹಿಡಿದ ಮಗಳನ್ನು ಒಪ್ಪಿಸಲು ತಾಯಿ ಕೊನೆಗೆ ಈ ಅಸ್ತ್ರ ಪ್ರಯೋಗಿಸಿದರು.
ತಿದ್ದಿ ತೀಡಿದ ಕಣ್ಣು ಮೂಗಿನ ಸುಜಾತಾ ಲಕ್ಷಣವಾದ ದಂತದ ಮೈ ಬಣ್ಣದ ಹುಡುಗಿ. ಸಂಗೀತ ಕಲಿತಿದ್ದು, ಕಲಿಕೆಯಲ್ಲಿ ಗೋಲ್ಡ್ ಮೆಡಲಿಸ್ಟ್ ಆಗಿದ್ದಳು. ಎಂ.ಎಸ್ಸಿ ಮುಗಿಸಿ, ಇದೀಗ ಪಿ.ಎಚ್.ಡಿ ಸೇರಲು ತಯಾರಿ ನಡೆಸಿದ್ದಳು.
ಅವರ ನೆಂಟರಿಷ್ಟರು, ಪರಿಚಿತರು ಎಲ್ಲರೂ ಸುಜಾತಾಳ ಸರಳ ವ್ಯಕ್ತಿತ್ವ, ಸ್ನೇಹಮಯ ಗುಣ ಸ್ವಭಾವಗಳಿಂದ ಬಹಳ ಪ್ರಭಾವಿತರಾಗಿದ್ದರು. ಗುಂಪಿನಲ್ಲಿ ನಾಲ್ವರ ಮಧ್ಯೆ ಅವಳು ಸದಾ ಕೇಂದ್ರಬಿಂದುವಾಗಿ ಆಕರ್ಷಣೆ ಗಳಿಸುತ್ತಿದ್ದಳು.
ಅಮ್ಮನ ಮಾತು ತಳ್ಳಿಹಾಕಲಾರದೇ ಅವಳು ಆ ಅನುಕೂಲಸ್ಥ ರ ಸುಧೀರ್ ನನ್ನು ಭೇಟಿಯಾಗಲು ನಿರ್ಧರಿಸಿದಳು. ಆ ಹುಡುಗ ತಾನು ಅಂದುಕೊಂಡದ್ದಕ್ಕಿಂತ ಸ್ಮಾರ್ಟ್ ಆಗಿದ್ದಾನೆ ಎನಿಸಿತು. ಹೀಗೆ 3-4 ಸಲ ಭೇಟಿ ಆಗಿ, ಔಪಚಾರಿಕ ಮಾತುಕಥೆ ನಡೆಸಿದಾಗ, ಸುಧೀರ್ ಇವಳಿಗೂ ಇಷ್ಟವಾಗತೊಡಗಿದ.