ಗೃಹಶೋಭಾ ಮಹಿಳಾ ಓದುಗರ ವಿಶೇಷ ಅಭಿವೃದ್ಧಿ ವ್ಯಕ್ತಿತ್ವ ವಿಕಾಸ, ಏಳಿಗೆಗಾಗಿ ಎಂದೇ, ಡೆಲ್ಲಿ ಪ್ರೆಸ್ ಪ್ರಕಟಣಾ ತಂಡ, ಗೃಹಶೋಭಾ ಮಾಸಪತ್ರಿಕೆಯ ವತಿಯಿಂದ `ಎಂಪವರ್ ಹರ್' ಇವೆಂಟ್ ನ್ನು ಇತ್ತೀಚೆಗೆ ಬಲು ಅದ್ಧೂರಿಯಾಗಿ ಏರ್ಪಡಿಸಲಾಗಿತ್ತು. ಪ್ರಮುಖ ಪ್ರಾಯೋಜಕರು ಎಂದರೆ ಫೈನಾನ್ಶಿಯಲ್ ಎಜುಕೇಶನ್ ಪಾರ್ಟ್‌ನರ್ HDFC, ಸಿಲ್ಕ್ ಪ್ಯೂರಿಟಿ ಪಾರ್ಟ್‌ನರ್ ಸಿಲ್ಕ್ ಮಾರ್ಕ್, ಜ್ಯೂವೆಲರಿ ಪಾರ್ಟ್‌ನರ್ GRT ಜ್ಯೂವೆಲರ್ಸ್, ಬ್ಯೂಟಿ ಪಾರ್ಟ್‌ನರ್ ಗ್ರೀನ್ ಲೀಫ್, ಅಸೋಸಿಯೇಟ್ ಸ್ಪಾನ್ಸರರ್ ನಂದಿನಿ, ಮೀಡಿಯಾ ಪಾರ್ಟ್‌ನರ್ಸ್ ಪ್ರಜಾಪ್ರಗತಿ ಪ್ರಗತಿ TV.
ಕಳೆದ ತಿಂಗಳು ಜೂನ್ 22 ರಂದು ಈ ಕಾರ್ಯಕ್ರಮವನ್ನು ಬೆಂಗಳೂರಿನ ರಾಜಭವನ ರಸ್ತೆಯ ದಿ ಕ್ಯಾಪಿಟಲ್ ಹೋಟೆಲ್ ನಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಇಡೀ ಫೋಕಸ್ ಮಹಿಳಾ ಸಬಲೀಕರಣ (ವಿಮನ್ ಎಂಪವರ್ ಮೆಂಟ್)ದ ಕುರಿತಾಗಿತ್ತು. ಈ ಕಾರ್ಯಕ್ರಮಕ್ಕಾಗಿ ನಗರದ ನೂರಾರು ಮಹಿಳೆಯರು ಅತಿ ಉತ್ಸಾಹದಿಂದ ತಮ್ಮ ಸ್ಕಿನ್ ಕೇರ್, ಆರೋಗ್ಯ, ಹಣಕಾಸು, ಸಿಲ್ಕ್ ಮಾರ್ಕ್ ವಿಚಾರಗಳ ಮಾಹಿತಿ, ಹೆಚ್ಚಿನ ಮನರಂಜನೆ ಇತ್ಯಾದಿಗಳಿಗಾಗಿ ಇಲ್ಲಿ ಸೇರಿದ್ದರು.
ಮಾನಸಿಕ ಆರೋಗ್ಯದ ಸೆಷನ್
ಡಾ. ಭಾವನಾ ಪ್ರಸಾದ್, ತುಮಕೂರಿನ ಕನ್ಸಲ್ಟೆಂಟ್ ನ್ಯೂರೋಸೈಕ್ರಿಯಾಟಿಸ್ಟ್ ಆಗಿದ್ದು, ಚೈಲ್ಡ್ ಸೈಕಿಯಾಟ್ರಿಯಲ್ಲಿ ಸ್ಪೆಷಲಿಸ್ಟ್ ಹಾಗೂ ಪ್ರಸಿದ್ಧ ಡೀಅಡಿಕ್ಷನ್ ಮೋಟಿವೇಶನ್ ಸ್ಪೀಕರ್. ಸಾಮಾನ್ಯವಾಗಿ ಹೆಣ್ಣುಮಕ್ಕಳು ಇಡೀ ದಿನದ ಮನೆಗೆಲಸ, ಗಂಡ, ಮಕ್ಕಳು, ಹಿರಿಯರ ಮೇಲ್ವಿಚಾರಣೆ, ಹೊರಗಿನ ಓಡಾಟ, ಉದ್ಯೋಗದಲ್ಲಿದ್ದರೆ ಆಫೀಸ್, ಮನೆಗೆ ಬಂದು ರೆಗ್ಯುಲರ್ ಕೆಲಸ ಇತ್ಯಾದಿಗಳಿಂದ ಮಾನಸಿಕ ಒತ್ತಡಕ್ಕೆ ಸಿಲುಕುವುದು ಹೆಚ್ಚು. ಹೆಣ್ಣು ಕ್ರಮೇಣ ಬಾಲ್ಯದಿಂದ ಋತುಮತಿಯಾಗಿ, ಯೌವನಕ್ಕೆ ಕಾಲಿಟ್ಟು, ಮದುವೆ, ಗರ್ಭಾವಸ್ಥೆ, ಬಾಣಂತನ, ವೃದ್ಧಾಪ್ಯ ಇತ್ಯಾದಿಗಳ ನಾನಾ ಅವಸ್ಥೆಗಳಲ್ಲಿ ಯಾವಾಗ ಬೇಕಾದರೂ ಈ ಸ್ಥಿತಿಗೆ ಬರಬಹುದು. ಸೂಕ್ತ ಮಾನಸಿಕ ಆರೋಗ್ಯ, ತಜ್ಞರನ್ನು ಕಂಡು ಮಾಮೂಲಿ ರೋಗಗಳಿಗೆ ಚಿಕಿತ್ಸೆ ಪಡೆಯುವಂತೆಯೇ ಇದಕ್ಕೂ ಚಿಕಿತ್ಸೆ ಪಡೆಯಬೇಕು ಎಂದು ಮನವರಿಕೆ ಮಾಡಿಕೊಟ್ಟರು. ಇಂಥವರ ಬಳಿ ಹೋದ ಮಾತ್ರಕ್ಕೆ ಹುಡುಗಿಗೆ `ಹುಚ್ಚು' ಎಂದು ಲೇಬಲ್ ಅಂಟಿಸುವ ನಮ್ಮ ಸಮಾಜದ ಟ್ಯಾಬೂ ಬಗ್ಗೆ ಖೇದ ವ್ಯಕ್ತಪಡಿಸುತ್ತಾ, ಇಂಥ ಮೂಢನಂಬಿಕೆಗಳಿಂದ ಹೊರಬರಬೇಕು ಎಂದು ಕರೆಕೊಟ್ಟರು. ಮಕ್ಕಳಲ್ಲಿ ಬೆಡ್ ವೆಟಿಂಗ್, ಬಾಣಂತಿ ಆದಾಗ `ಸನ್ನಿ' ಸಮಸ್ಯೆ, ಅಡೋಲೆಸೆಂಟ್ ಡಿಪ್ರೆಶನ್ಸ್ ಇತ್ಯಾದಿಗಳ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಿ ಪ್ರೇಕ್ಷಕರ ನೂರಾರು ಸಂದೇಹಗಳನ್ನು ಪರಿಹರಿಸಿದರು.
SIP ಸಹೇಲಿ ಸೆಷನ್
ಗಿರಿಜಾರಾಣಿ ಕಾವಡಪು HDFC AMC ಲಿ.ನ ಜಾಯಿಂಟ್ AVP ಆಗಿದ್ದು ಫೈನಾನ್ಸ್ ಫೀಲ್ಡ್ ನಲ್ಲಿ 20ಕ್ಕೂ ಅಧಿಕ ವರ್ಷದ ಅನುಭವ ಹೊಂದಿದ್ದಾರೆ. ಮೋರ್ಗನ್ ಅಸೆಟ್ಸ್ ಕೋಟಕ್ ಮ್ಯೂಚುಯೆಲ್ ಫಂಡ್ಸ್ ನಲ್ಲೂ ಕೆಲಸದಲ್ಲಿದ್ದ ಇವರು, ಕಬ್ಬಿಣದ ಕಡಲೆ ಎಂದೇ ಭಾವಿಸಲಾಗಿರುವ ಫೈನಾನ್ಸ್ ಕುರಿತು ಸಭಿಕರಿಗೆ ವಿವರವಾಗಿ ತಿಳಿಸಿಕೊಟ್ಟರು. ಮ್ಯೂಚುಯೆಲ್ ಫಂಡ್ಸ್ ನ ಬೇಸಿಕ್ ಕಾನ್ಸೆಪ್ಟ್, ಹೆಂಗಸರು ಇದರಲ್ಲಿ ಏಕೆ ತೊಡಗಬೇಕು, ಬ್ಯಾಂಕಿನ SB, RD ಖಾತೆಗಳಿಗಿಂತ ಇದರಿಂದ ಹೇಗೆ ಹೆಚ್ಚಿನ ಲಾಭ ಗಳಿಸಬಹುದು, SIP ಮೂಲಕ ಇನ್ ವೆಸ್ಟ್ ಮೆಂಟ್ ಮಾಡುವುದರಿಂದ ಎಷ್ಟು ಬೇಗ ಹೆಚ್ಚಿನ ಮೊತ್ತದಲ್ಲಿ ಹಣದ ಬೆಳವಣಿಗೆ ಆಗುತ್ತದೆ ಎಂದು ವಿವರವಾಗಿ ತಿಳಿಸಿಕೊಟ್ಟರು. ಮ್ಯೂಚುಯೆಲ್ ಫಂಡ್ ನ ವಿಧಗಳು, ಅದರಲ್ಲಿ ಮಹಿಳೆಯ ಭಾಗವಹಿಸುವಿಕೆ ಮುಂತಾದ ಇವರ ಮಾತುಕಥೆಯ ಪ್ರಮುಖ ಅಂಶವಾಗಿತ್ತು.