ಗುಂಡ ಗುಂಡಿ ಒಂದೇ ಸಮ ಕಿತ್ತಾಡಿದರು. ಆ ಬೇಸರಕ್ಕೆ ದಿನವಿಡೀ ಮಾತನಾಡಲಿಲ್ಲ. ಮಾರನೇ ದಿನ ಬೆಳಗಾದಾಗ……

ಗುಂಡಿ : ನೋಡ್ರಿ, ಇದು ಸರಿಹೋಗೋಲ್ಲ. ಇಬ್ಬರೂ ಒಂದು ಸಂಧಾನಕ್ಕೆ ಬರೋಣ, 50-50, ಆಯ್ತಾ?

ಗುಂಡ : ಸರಿ, ಮೊದಲು ನಾನು ಏನು ಮಾಡಬೇಕು?

ಗುಂಡಿ : ಈ ಜಗಳಕ್ಕೆ ಕಾರಣವಾದ ನಮ್ಮಿಬ್ಬರ ವಾಗ್ವಾದದಲ್ಲಿ ಯಾರದ್ದೇ ತಪ್ಪಿರಲಿ, ತಪ್ಪೆಲ್ಲ ನಂದೇ ಅಂತ ನೀವು ಒಪ್ಪಿಕೊಂಡುಬಿಡಿ, ನಾನು ಧಾರಾಳ ಮನಸ್ಸಿನಿಂದ ಕ್ಷಮಿಸಿ ಬಿಡ್ತೀನಿ!

ನಡು ವಯಸ್ಸಿನ ದಂಪತಿಗಳು ಯಾವುದೋ ಪಾರ್ಟಿಗೆ ಹೋಗಿದ್ದರು. ಬಹಳ ದಿನಗಳಾದ ಮೇಲೆ ಪಾರ್ಟಿ ರುಚಿ ಕಂಡಿದ್ದ ಗುಂಡ, ಮೈಮರೆತು ಅದರಲ್ಲಿ ತಲ್ಲೀನನಾಗಿದ್ದ. ಅಷ್ಟರಲ್ಲಿ ದೂರದಲ್ಲಿದ್ದ ಅವನ ಪತ್ನಿ ಗುಂಡಿ, ತನ್ನ ತೋರು ಬೆರಳು ತೋರಿ, ಬಳಿ ಬರುವಂತೆ ಸನ್ನೆ ಮಾಡಿ ಕರೆದಳು. ಗುಂಡನಿಗಂತೂ ರೇಗಿ ಹೋಯಿತು. ಇಲ್ಲಿಯೂ ನೆಮ್ಮದಿಯಾಗಿರಲು ಬಿಡುವುದಿಲ್ಲವಲ್ಲ ಅಂತ ಸಿಟ್ಟೇರಿತು. ಗುಂಡಿ ಹತ್ತಿರ ಬಂದ ಗುಂಡ, “ಏನೇ ಅದು ನಿನ್ನ ಗೋಳು?” ಎಂದು ಸಿಡುಕಿದ.

“ಏನಿಲ್ಲ…. ಇಷ್ಟು ವರ್ಷಗಳ ನಂತರ ಈ ಬೆರಳಿನ ತಾಕತ್ತು ತಗ್ಗಿಲ್ಲ ತಾನೇ ಎಂದು ಪರೀಕ್ಷಿಸುತ್ತಿದ್ದೆ!” ಎಂದು ಗುಂಡಿ ಹೇಳಿದಾಗ, ಗುಂಡನ ಮತ್ತೆಲ್ಲ ಒಂದೇ ಕ್ಷಣದಲ್ಲಿ ಗಮ್ಮತ್ತಾಗಿ ಇಳಿದುಹೋಯ್ತು!

ಬಹಳ ದಿನಗಳಾದ ಮೇಲೆ ಬೋರೇಗೌಡರು ಡಾಕ್ಟರ್‌ ನ್ನು ಕಾಣಲು ಬಂದರು. ಅವರನ್ನು ವೈದ್ಯರು ಆಮೂಲಾಗ್ರವಾಗಿ ಪರೀಕ್ಷಿಸಿದರು.

ಡಾಕ್ಟರ್‌ : ಇದೇನು ಗೌಡ್ರೆ…. ಯಾವುದೋ ಹಳೆಯ ರೋಗ ಬಹಳ ದಿನಗಳಿಂದ ನಿಮ್ಮನ್ನು ಕಾಡುತ್ತಿದೆ ಅನ್ಸುತ್ತೆ!

ಗೌಡರು : ಅಯ್ಯೋ.. ಮೆಲ್ಲಗೆ ಹೇಳಿ ಡಾಕ್ಟ್ರೇ…. ನನ್ನ ಹೆಂಡತಿ ಇಲ್ಲೇ ಹೊರಗೆ ಕೂತಿದ್ದಾಳೆ!

ಗಿರೀಶ್‌ : ತಾಯಿಯ ಆರೈಕೆಗೂ ಹೆಂಡತಿಯ ಆರೈಕೆಗೂ ಅಜಗಜಾಂತರ ವ್ಯತ್ಯಾಸವಿದೆ ಗೊತ್ತಾ…?

ಸತೀಶ : ಅದು ಹೇಗೆ?

ಗಿರೀಶ : ಮಗ ಬೆಳೆಯ ತೊಡಗಿದಂತೆ ತಾಯಿ ಅವನ ತಲೆಗೂದಲಲ್ಲಿ ಕೈ ಆಡಿಸಿ, ಎಣ್ಣೆ ಹಚ್ಚಿ, ನೆತ್ತಿ ತಂಪು ಮಾಡಿಸಿ, ಬಾಚಿ ಕಳುಹಿಸಿದಂತೆ ಅವನ ತಲೆಗೂದಲು ದಟ್ಟವಾಗಿ ಚೆನ್ನಾಗಿ ಬೆಳೆಯುತ್ತದೆ. ಮದುವೆ ಆದ ಮೇಲೆ ಹೆಂಡತಿ ಕೈಗೆ ಜುಟ್ಟು ಒಪ್ಪಿಸಿಬಿಟ್ಟರೆ ಆಯ್ತು, ಅವಳು ಅವನ ತಲೆಗೂದಲು ಜಗ್ಗಿ ಕೈಯಾಡಿಸಿಬಿಟ್ಟರೆ…. ಅವನ ತಲೆ ಎಲ್ಲಾ ಸೈಟೋ ಸೈಟು!

ವಿಮಲಾ : ಗಂಡನಿಗೆ ಏನಾದರೂ ಅಫೇರ್‌ ಇದೆಯಾ ಅಂತ ತಿಳಿದುಕೊಳ್ಳುವುದು ಹೇಗೆ?

ಕಮಲಾ : ತುಂಬಾ ಸುಲಭ…. ಆತ ಒಳ್ಳೆಯ ಮೂಡ್‌ ನಲ್ಲಿರುವಾಗ ಅವನ ಎದೆಗೆ ತಲೆಯಾನಿಸಿ, `ಡಾರ್ಲಿಂಗ್‌, ನಿನ್ನ ಜೀವನದಲ್ಲಿ ಬೇರೊಬ್ಬ ಹೆಣ್ಣು ಇಲ್ಲ ತಾನೇ?’ ಅಂತ ಕೇಳಿ ನೋಡು.

ವಿಮಲಾ : ಹ್ಞೂ…ಹ್ಞೂಂ… ಆಮೇಲೆ?

ಕಮಲಾ : ಅವನ ಎದೆಬಡಿತ ನಾರ್ಮಲ್ ಆಗಿದ್ದರೆ ಏನೂ ಎಡವಟ್ಟಿಲ್ಲ ಅಂತ ಅರ್ಥ. ಅದೇ ಬಹಳ ಹೆಚ್ಚಿದರೆ… ಏನೋ ಒಳಗೊಳಗೇ ನಡೀತಿದೆ ಅಂತರ್ಥ…..

ಪತಿ : ಈ ಸಲ ಮಲೇಶಿಯಾಗೆ ಪ್ರವಾಸಕ್ಕೆ ಹೋಗೋಣ. ಅಲ್ಲಿ ಮುಖ್ಯವಾಗಿ ಏನೇನು ನೋಡಬೇಕು ಅಂತ ಪಟ್ಟಿ ಮಾಡಿಕೊಂಡಿದ್ದೀಯೇನು….?

ಪತ್ನಿ : ಅದೆಲ್ಲ ಸರಿ, ದರ್ಶನೀಯ ಸ್ಥಾನಗಳ ಲಿಸ್ಟ್ ಮಾಡುವಾಗ ಯಾವ ಜಾಗದ ಪಕ್ಕ ಧಾರಾಳವಾಗಿ ಶಾಪಿಂಗ್‌ ಗೆ ಅವಕಾಶವಿದೆಯೋ ಅದಕ್ಕೆ ಮಾತ್ರ ಪ್ರಾಶಸ್ತ್ಯ ಕೊಡಬೇಕು!

ಮಹೇಶ : ನಮ್ಮ ದೇಶದ ಹೆಂಗಸರು ಬುದ್ಧಿವಂತರೋ ಅಲ್ಲವೋ…. ಹೇಳು ನೋಡೋಣ!

ಸುರೇಶ : ಅಲ್ಲ ಅಂದವರು ಯಾರು? ಮುಚ್ಚಳ ತೆರೆಯದೆ ಡಬ್ಬಾ ಅಲುಗಾಡಿಸಿ ಅದು ಜೀರಿಗೇನೋ, ಸೋಂಪೋ ಎಂದು ಕರಾರುವಾಕ್ಕಾಗಿ ಹೇಳಿಬಿಡುತ್ತಾರೆ!

ರಾಜೇಶ : ಭಾರತದ ಇಂಥ ಶ್ರೀಮತಿಯರಿಗೂ ಭಾರತ ರತ್ನಕ್ಕೆ ಸಮನವಾದ ಒಂದು ಪ್ರಶಸ್ತಿಯನ್ನು ಪ್ರತ್ಯೇಕವಾಗಿ ಮೀಸಲಿಡಬೇಕು.

ದಿನೇಶ : ಎಂಥ ಮಹಿಳೆಯರಿಗಾಗಿ?

ರಾಜೇಶ : ಒಂದು ನಿಮಿಷಕ್ಕೆ 300 ಶಬ್ದಗಳ ವೇಗದಲ್ಲಿ ದಬಾಯಿಸಿದರೂ, ಮಾತಿನ ಕೊನೆಯಲ್ಲಿ ಮಾತ್ರ, `ನನ್ನ ಬಾಯಿ ಮಾತ್ರ ತೆರೆಸಬೇಡ! ಇಲ್ಲದಿದ್ದರೆ….’ ಎನ್ನುವವರಿಗೇ!

ಮೋಹನ್‌ : ಇದೇನು ಇಷ್ಟೊಂದು ಪಾತ್ರೆಯ ರಾಶಿ? ಮನೆ ಯಾಕೆ ಹೀಗೆ ತಿಪ್ಪೆಗುಂಡಿ ಆಗಿದೆ?

ಶೇಖರ್‌ : ಹೆಂಡತಿ ತವರಿಗೆ ಹೋಗಿದ್ದಾಳೆ ಮಾರಾಯ… ಮನೆ ಗುಡಿಸಿ ಈಗ ಏನಾಗಬೇಕಿದೆ? ಬೀಗ ಜಡಿದು ಈಗ ಆಫೀಸಿಗೆ ಹೊರಡೋದೇ ತಾನೇ? ಹೇಗೂ ತಡವಾಗಿದೆ, ಆಫೀಸ್‌ ಕ್ಯಾಂಟೀನ್‌ ನಲ್ಲೇ ತಿಂಡಿಕಾಫಿ ಮುಗಿಸಿದರಾಯ್ತು, ರಾತ್ರಿ ಮನೆಗೆ ಬಂದ ಮೇಲೆ ಒಂದೇ ಒಂದು ಬಾಣಲೆ ತೊಳೆದು ಏನೋ ಒಂದಿಷ್ಟು ಬೇಯಿಸಿದರಾಯಿತು.

ಅಪರೂಪಕ್ಕೆ ಬಾಯ್‌ ಫ್ರೆಂಡ್‌ ಪಿಜ್ಜಾ ಕಾರ್ನರ್‌ ಗೆ ಕರೆದುಕೊಂಡು ಹೋಗಿ, ವೈವಿಧ್ಯಮಯ ಬಗೆಯ 2 ಪಿಜ್ಜಾಗಳಿಗೆ ಆರ್ಡರ್ ಕೊಟ್ಟ. ಇಬ್ಬರೂ ರೊಮ್ಯಾಂಟಿಕ್‌ ಮೂಡ್‌ ನಲ್ಲಿ ಸಂಭಾಷಣೆ ಆರಂಭಿಸಿದರು.

ಪ್ರೇಯಸಿ : ಹಾಯ್‌ ಡಾರ್ಲಿಂಗ್‌… ನನ್ನ ಹೃದಯದ ಬಡಿತ ಪಟಪಟನೆ ಹೆಚ್ಚುವಂಥ ಅದ್ಭುತ ಡೈಲಾಗ್‌ ಏನಾದರೂ ಹೇಳಬಾರದೇ?

ಪ್ರಿಯಕರ : ಈ ದುಬಾರಿ ಆರ್ಡರ್‌ ಪೂರೈಸುವಷ್ಟು ಹಣ ಖಂಡಿತಾ ನನ್ನ ಬಳಿ ಇಲ್ಲ!

ಮೋನಿ : ಏನಾಯ್ತೋ ರವಿ…. ಯಾಕೆ ಹೀಗೆ ಮೈಯೆಲ್ಲ ಬಾಸುಂಡೆ… ಬ್ಯಾಂಡೇಜು…. ಏನು ಕಥೆ?

ರವಿ : ಏನು ಹೇಳ್ಲೀ…. ಎಲ್ಲ ನನ್ನ ಕರ್ಮ! ನಮ್ಮ ಪಕ್ಕದ ಫ್ಲಾಟಿಗೆ ಹೊಸದಾಗಿ ಒಂದು ಚೈನೀಸ್‌ ಕುಟುಂಬ ಬಂದಿತ್ತು. ಮದುವೆಯಾದ ಒಂದೇ ವರ್ಷದಲ್ಲಿ ಅವನ ಹೆಂಡತಿ ಸತ್ತುಹೋದಳು…..

ಮೋನಿ : ಅದಕ್ಕೆ ನಿನಗೇಕೆ ಈ ದುರ್ದೆಶೆ?

ರವಿ : ಚೈನಾ ಮಾಲಲ್ವಾ? ಒಂದು ವರ್ಷ ಬಾಳಿಕೆ ಬಂದಿದ್ದೇ ಹೆಚ್ಚು ಅಂದೆನಪ್ಪ…. ಅದಕ್ಕೆ ಹೋಗಿ ಅವನು…..

ಗ್ರಾಹಕ : ಏ ಮಾಣಿ…. ಎಂಥ ಜೂಸ್‌ ಕೊಟ್ಟಿದ್ದೀಯಾ ಮಾರಾಯ? ಇದರಲ್ಲಿ ನೊಣ ಬಿದ್ದಿದೆ!

ಮಾಣಿ : ಸ್ವಲ್ಪ ನಿಮ್ಮ ಹೃದಯವನ್ನು ವಿಶಾಲವಾಗಿ ಇಟ್ಟುಕೊಳ್ಳಿ. ಅಂಥ ಪುಟ್ಟ ಜೀವ ನಿಮ್ಮ ಇಷ್ಟು ದೊಡ್ಡ ಗ್ಲಾಸಿನಿಂದ ಎಷ್ಟು ಮಹಾ ಜೂಸ್‌ ಕುಡಿದೀತು?

ನಿಂಗ ಮೊದಲ ಸಲ ಬೆಂಗಳೂರಿಗೆ ಬಂದಿದ್ದ. ಹೊಸ ಮಾಲ್ ಕಂಡು ಒಳಗೆ ಶಾಪಿಂಗ್‌ ನಡೆಸಲು ಹೋದ. ಅಲ್ಲಿದ್ದ ಲಿಫ್ಟ್ ಬಳಿ ಸೂಚನೆ ಇತ್ತು : ಒಂದು ಸಲಕ್ಕೆ ಕೇವಲ 8 ವ್ಯಕ್ತಿಗಳು ಮಾತ್ರ! ಗುಂಡ ಲಿಫ್ಟ್ ಹತ್ತದೆ ಬಹಳ ಹೊತ್ತಿನಿಂದ ಹೊರಗೆ ಕಾಯುತ್ತಾ ನಿಂತ.

ಇವನು ಹೊರಗೇ ನಿಂತಿರುವುದನ್ನು ಕಂಡು ಲಿಫ್ಟ್ ಕೆಟ್ಟಿದೆಯೇ ಎಂದು ಯಾರೋ ವಿಚಾರಿಸಿದರು. “ಅದೇನೋ ಗೊತ್ತಿಲ್ಲ…. ಆದರೆ ಉಳಿದ 7 ಜನ ಬಂದುಬಿಡಲಿ ಆಮೇಲೆ ಹೋಗೋಣ ಎಂದು ಕಾಯುತ್ತಿದ್ದೇನೆ!”

ಪತ್ನಿ ಬೇಸಿಗೆಯಲ್ಲಿ ಮಕ್ಕಳನ್ನು ತವರಿಗೆ ಕರೆದುಕೊಂಡು ಹೋಗಿ ಬಂದಳು. ಮನೆಗೆ ಬಂದು ನೋಡುತ್ತಾಳೆ….. ಇಡೀ ಮನೆ ಥಳಥಳ ಹೊಳೆಯುತ್ತಿದೆ. ಅಡುಗೆಮನೆಯ ಪಾತ್ರೆಪಡಗ ನೀಟಾಗಿ ಕೂತಿವೆ…. ಬಟ್ಟೆಗಳು ಮಡಿಸಲ್ಪಟ್ಟು ವಾರ್ಡ್‌ ರೋಬ್ ಸೇರಿವೆ….. ಒಟ್ಟಾರೆ ಹುಡುಕಿದರೂ ಮನೆಯಲ್ಲಿ ಕಸ ಕೊಳೆ ಇಲ್ಲ…..

ತನ್ನ ಹೆಗಲಿನ ಮೇಲೆ ನೀರಿನ ಹನಿ ಬಿದ್ದದ್ದು ನೋಡಿ ಪತಿ ಮಹಾಶಯ ತಿರುಗಿ ಪತ್ನಿಗೆ ಹೇಳಿದ, “ಏನಾಯ್ತು? ಪ್ರಯಾಣ ಸುಖಕರವಾಗಿತ್ತು ತಾನೇ? ನಿನ್ನ ತವರಿನಲ್ಲಿ ಎಲ್ಲರೂ ಕ್ಷೇಮ ತಾನೇ?”

ಪತ್ನಿ ಮುಗುಳ್ನಗುತ್ತಾ ಹೇಳಿದಳು, “ಹಾಗೇನಿಲ್ಲ ಬಿಡಿ…. ಎಲ್ಲಾ ಚೆನ್ನಾಗಿದ್ದಾರೆ. ನನ್ನ ಕಣ್ಣಿಂದ ಉದುರಿದ್ದು ಕಂಬನಿ ಅಲ್ಲ… ಆನಂದಬಾಷ್ಪ! ನಿಮಗೆ ಇಷ್ಟೆಲ್ಲ ಮನೆಗೆಲಸ ಬರುತ್ತೆ ಅಂತ ಗೊತ್ತಿಲ್ಲದೆ ನಿಂಗಿ, ರಂಗಿ ಅಂತ ಕೆಲಸದವಳ ಜೊತೆ ಹೋರಾಡುತ್ತಿದ್ದೆ. ಇನ್ನು ಮುಂದೆ ಯಾವ ನಿಂಗಿಯೂ ಬೇಡ, ರಂಗಿಯೂ ಬೇಡ! ಎಲ್ಲ ಕೆಲಸ ನೀವೇ ಮಾಡಿ!”

ನೀತಿ : ಹೆಂಡತಿಯನ್ನು ಇಂಪ್ರೆಸ್‌ ಮಾಡಲು ಆಕೆ ಇಲ್ಲದಾಗ ಹೆಚ್ಚಿನ ಮನೆಗೆಲಸ ಮಾಡೀರಿ…. ಜೋಕೆ!

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ