“ಹಿಂದೂ” ಎಂಬ ಪದವನ್ನು ನಾನು ಯಾವ ಕೆಟ್ಟ ಅರ್ಥದಲ್ಲೂ ಬಳಸುತ್ತಿಲ್ಲ. ಅದಕ್ಕೆ ಕೆಟ್ಟ ಅರ್ಥ ಇದೆ ಎನ್ನುವವರ ಅಭಿಪ್ರಾಯವನ್ನು ನಾನು ಒಪ್ಪುವುದಿಲ್ಲ. ಹಿಂದೆ, ಹಿಂದೂ ಎಂದರೆ ಸಿಂಧೂ ನದಿಯಿಂದಾಚೆ ವಾಸ ಮಾಡುವವರೆಂದು ಅರ್ಥವಿತ್ತು. ಆದರೆ ನಮ್ಮನ್ನು ದ್ವೇಷಿಸುವವರಲ್ಲಿ ಅನೇಕರು ಆ ಪದಕ್ಕೆ ತಪ್ಪು ವಿವರಣೆಯನ್ನು ನೀಡಿರುವರು. ಆದರೆ ಹೆಸರಿನಲ್ಲೇನಿದೆ? ಹಿಂದೂ ಶಬ್ದವೂ ಭವ್ಯವಾದ ಆಧ್ಯಾತ್ಮಿಕ ವಿಷಯಗಳನ್ನು ಸೂಚಿಸುವುದೇ; ಇಲ್ಲವೇ ನಿಂದಾರ್ಹನೂ, ಪತಿತನೂ, ಅಪ್ರಯೋಜಕನೂ, ಅನಾಗರಿಕನೂ ಆದ ಮಾನವನೆಂದು ಸೂಚಿಸುವುದೇ, ಎಂಬುದನ್ನು ತೋರಿಸುವುದು ನಮ್ಮ ಅಧೀನದಲ್ಲಿದೆ. ಈಗ ಹಿಂದೂ ಎಂಬ ಪದಕ್ಕೆ ಹೀನವಾದ ಅರ್ಥ ಏನಾದರೂ ಇದ್ದರೆ, ಅದನ್ನು ಗಮನಿಸದಿರಿ. ಯಾವುದೇ ಭಾಷೆಯಲ್ಲಾಗಲೀ ಕಂಡುಬರುವ ಶಬ್ದಗಳಲ್ಲಿ, ಈ ಶಬ್ದವು ಅತ್ಯುತ್ಕೃಷ್ಟವಾದುದೆಂದು ಕಾರ್ಯತಃ ತೋರಿಸಲು ಸಿದ್ಧರಾಗೋಣ. ನಾವು ನಮ್ಮ ಪೂರ್ವಿಕರ ಸಲುವಾಗಿ ಅವಮಾನ ಪಡಬೇಕಾಗಿಲ್ಲ ಎಂಬುದು ನನ್ನ ಜೀವನದ ತತ್ತ್ವಗಳಲ್ಲೊಂದಾಗಿದೆ. ಇದುವರೆಗೆ ಜನ್ಮವೆತ್ತಿ ಆತ್ಮ ಗೌರವದಿಂದ ನಡೆದ ಮಾನವರಲ್ಲಿ ನಾನೂ ಒಬ್ಬ. ಆದರೆ, ನಾನು ಹೆಮ್ಮೆಪಡುವುದು ಖಂಡಿತವಾಗಿಯೂ ನನಗಾಗಿ ಅಲ್ಲ; ನನ್ನ ಪೂರ್ವಜರಿಗೋಸ್ಕರವಾಗಿ. ನಾನು ನಮ್ಮವರ ಚರಿತ್ರೆಯನ್ನು ಹೆಚ್ಚು ಹೆಚ್ಚಾಗಿ ಓದಿದ ಹಾಗೆಲ್ಲಾ, ಹೆಚ್ಚು ಹೆಚ್ಚಾಗಿ ಹಿಂದಿರುಗಿ ನೋಡಿದ ಹಾಗೆಲ್ಲಾ, ಅವರ ವಿಚಾರದಲ್ಲಿ ನನಗೆ ಹೆಚ್ಚು ಹೆಚ್ಚಾಗಿ ಹೆಮ್ಮೆ ತಲೆದೋರುತ್ತದೆ. ನನ್ನ ದೃಢನಂಬಿಕೆಗನುಸಾರವಾಗಿ ಕೆಲಸ ಮಾಡುವ ಶ್ರದ್ಧೆ ಶಕ್ತಿಗಳನ್ನು ಕೊಟ್ಟು, ಧೂಳಿಗೆ ಸಮನಾಗಿದ್ದ ನನ್ನನ್ನು ಉನ್ನತ ಸ್ಥಿತಿಗೆ ತಂದಿದೆ; ಮಹಾತ್ಮರಾದ ನಮ್ಮ ಹಿರಿಯರು ಹಾಕಿರುವ ಮಾರ್ಗವನ್ನು ವ್ಯವಹಾರದಲ್ಲಿ ಅನುಸರಿಸುವಂತೆ ಪ್ರೇರಿಸಿದೆ. ಪ್ರಾಚೀನ ಆರ್ಯರ ವಂಶಸ್ಥರಾದ ನೀವೂ, ಭಗವಂತನ ಕೃಪೆಯಿಂದ ಆ ಹೆಮ್ಮೆಯನ್ನು ಪಡೆಯಿರಿ, ನಿಮಗೆ ನಿಮ್ಮ ಪೂರ್ವಿಕರಲ್ಲಿರುವ ವಿಶ್ವಾಸವು ನಿಮ್ಮ ರಕ್ತಗತವಾಗಲಿ, ಅದು ನಿಮ್ಮ ಜೀವನದಲ್ಲಿ ಮುಖ್ಯ ಅಂಶವಾಗಲಿ! ಅದು ಇಡಿಯ ಜಗತ್ತಿಗೇ ಕಲ್ಯಾಣವನ್ನುಂಟುಮಾಡಲಿ!





