ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮದ ಧ್ರುವತಾರೆ ಪಿ. ಲಂಕೇಶ್ ಅವರ ನೆರಳು ಮಾತ್ರವಲ್ಲದೆ, ತಮ್ಮದೇ ಆದ ವಿಶಿಷ್ಟ ಅಸ್ತಿತ್ವ ಕಂಡುಕೊಂಡಿದ್ದ ಧೀಮಂತ ಮಹಿಳೆ ಇಂದಿರಾ ಲಂಕೇಶ್. ಪತ್ರಕರ್ತರಾಗಿ ನನ್ನ ವೃತ್ತಿಜೀವನದಲ್ಲಿ ಇಂದಿರಾ ಅವರನ್ನು ಎರಡು ಭಿನ್ನ ಕಾಲಘಟ್ಟಗಳಲ್ಲಿ, ವಿಭಿನ್ನ ಭಾವದ ಸಂದರ್ಭಗಳಲ್ಲಿ ಮುಖಾಮುಖಿಯಾದ ಅಪರೂಪದ ಅನುಭವದ ನೆನಪಿನ ಬುತ್ತಿ ಇಲ್ಲಿದೆ...
ಇಂದಿರಾ ಲಂಕೇಶ್ ಅವರ ಎರಡು ವಿಭಿನ್ನ ಮುಖಗಳನ್ನು ನಾನು ಕಣ್ಣಾರೆ ಕಂಡಿದ್ದೆ. ಒಂದು ಕಡೆ 'ಕೌದಿ' ಮಾರುತ್ತಿದ್ದ ಆ ಸ್ವಾಭಿಮಾನಿ, ಕಲಾಪ್ರೇಮಿ ಉದ್ಯಮಿ ಮಹಿಳೆ; ಮತ್ತೊಂದು ಕಡೆ ಮಗಳನ್ನು ಕಳೆದುಕೊಂಡ ಮಹಾನ್ ದುಃಖದಲ್ಲೂ ಮಗಳ ದಿಟ್ಟತನವನ್ನು ಹೆಮ್ಮೆಯಿಂದ ನೆನೆದ ತಾಯಿ. ಈ ಎರಡೂ ಸಂದರ್ಭಗಳನ್ನು ಅತ್ಯಂತ ಹತ್ತಿರದಿಂದ ಕಂಡು ದಾಖಲಿಸಿದ ನನ್ನ ಪತ್ರಿಕೋದ್ಯಮದ ಈ ಅನುಭವ ನಿಜಕ್ಕೂ ಅಪರೂಪದ್ದು.
2003ರಲ್ಲಿ 'ಗೃಹಶೋಭಾ' ಮಾಸಿಕಕ್ಕಾಗಿ 'ಸಿಲ್ಕ್ ಸ್ಪೆಶಲ್' ಮಾಡುತ್ತಿದ್ದ ಸಂದರ್ಭ. ಆಗ ಇಂದಿರಾ ಲಂಕೇಶ್ ಅವರು ಬಸವನಗುಡಿ ನ್ಯಾಶನಲ್ ಕಾಲೇಜು ಸಮೀಪದ ಕಾಂಪ್ಲೆಕ್ಸ್ ಒಂದರಲ್ಲಿ 'ಅಂಗಜಾ' ಎಂಬ ಸೀರೆ ಮಳಿಗೆ ಹೊಂದಿದ್ದರು. ಅಲ್ಲಿ ಅವರು ರೇಷ್ಮೆ ಸೀರೆಗಳ ನಡುವೆ ಕೌದಿಗಳನ್ನು ಕೂಡ ಮಾರುತ್ತಿದ್ದುದು ನನಗೆ ನಿಜಕ್ಕೂ ಅಚ್ಚರಿಯ ವಿಷಯವಾಗಿತ್ತು.
ರೇಷ್ಮೆ ಸೀರೆಗಳ ವೈಭವದ ಮಧ್ಯೆ 'ಕೌದಿ'ಗಳನ್ನು ಮಾರಾಟ ಮಾಡುತ್ತಿದ್ದದ್ದು ಅವರ ವಿಶಿಷ್ಟ ಸೌಂದರ್ಯಪ್ರಜ್ಞೆಗೆ ಸಾಕ್ಷಿಯಾಗಿತ್ತು. 'ಕೌದಿ' ಎನ್ನುವುದು ಕೇವಲ ಹಳೆಯ ಬಟ್ಟೆಗಳ ಜೋಡಣೆಯಲ್ಲ; ಅದೊಂದು ಗ್ರಾಮೀಣ ಭಾರತದ ಅದ್ಭುತ ಕಲಾಕೃತಿ, ಶ್ರಮದ ಸಂಕೇತ. ರೇಷ್ಮೆಯ ಆಡಂಬರದ ಮಧ್ಯೆಯೂ ನಮ್ಮ ಮಣ್ಣಿನ ಕಲೆಗೆ, ಗ್ರಾಮೀಣ ಮಹಿಳೆಯರ ಬೆವರಿನ ಶ್ರಮಕ್ಕೆ ತಮ್ಮ ಮಳಿಗೆಯಲ್ಲಿ ಗೌರವಯುತ ಸ್ಥಾನ ನೀಡಿದ ಅವರ ಆಲೋಚನೆ ಎಷ್ಟು ದೊಡ್ಡದು!
ಅಂದು ಆ ಅಂಗಡಿಯ ಆಪ್ತ ಸಂಭಾಷಣೆಯಲ್ಲಿ ಅವರು ಪತಿ ಪಿ. ಲಂಕೇಶರ ವ್ಯಕ್ತಿತ್ವದ ಅಪರೂಪದ ಮುಖಗಳನ್ನು ಮತ್ತು ಮಕ್ಕಳ ವೈವಿಧ್ಯಮಯ ಸಾಹಸದ ಹಾದಿಯನ್ನು ಅತ್ಯಂತ ಆತ್ಮೀಯವಾಗಿ ತೆರೆದಿಟ್ಟರು. ಜೊತೆಗೆ, ತಮ್ಮ ಹೃದಯಸ್ಪರ್ಶಿ ಆತ್ಮಕಥನ 'ಹುಳಿಮಾವು ಮತ್ತು ನಾನು' ಕೃತಿಯ ಒಳಪುಟಗಳ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟ ಧೀಮಂತ ಕ್ಷಣವದು.
ಆದರೆ, ಎರಡನೇ ಸಲ ನಾನು ಅವರನ್ನು ಭೇಟಿಯಾದದ್ದು ಅತ್ಯಂತ ದು:ಖದ ಸಂದರ್ಭದಲ್ಲಿ. ಗೌರಿ ಲಂಕೇಶ್ ಅವರ ಹತ್ಯೆಯಾದ ಕೆಲವು ದಿನಗಳ ನಂತರ, ಅವರ ಸಾಹಸಮಯ ಪತ್ರಿಕೋದ್ಯಮದ ಕುರಿತು 'ಗೃಹಶೋಭಾ' ಪತ್ರಿಕೆಗೆ ವಿಶೇಷ ಲೇಖನವೊಂದನ್ನು ಬರೆಯಬೇಕಿತ್ತು. ಆ ಕಡು ದುಃಖದ ವಾತಾವರಣದಲ್ಲೇ ಇಂದಿರಾ ಲಂಕೇಶ್ ಅವರನ್ನು ನಾನು ಎರಡನೇ ಬಾರಿಗೆ ಮುಖಾಮುಖಿಯಾಗಿದ್ದು.
ಮಾಹಿತಿ ಸಂಗ್ರಹಕ್ಕಾಗಿ ನಾನು ಉತ್ತರಹಳ್ಳಿ ಸಮೀಪದ ಅವರ ಮನೆಗೆ ಹೋದಾಗ ಅಲ್ಲಿ ಕವಿತಾ ಲಂಕೇಶ್ ಕೂಡ ಜೊತೆಯಲ್ಲಿದ್ದರು. ಹೆತ್ತ ಮಗಳನ್ನು ಕಳೆದುಕೊಂಡ ಮಹಾನ್ ಶೋಕದಲ್ಲಿದ್ದ ಇಂದಿರಾ ಅವರು ಆಗ ನನ್ನೊಂದಿಗೆ ಮಾತುಕತೆ ನಡೆಸುವ ಸ್ಥಿತಿಯಲ್ಲಿ ಇರಲಿಲ್ಲ. ಆಗ ಕವಿತಾ ಅವರೇ ಮಧ್ಯಪ್ರವೇಶಿಸಿ, "ಅಕ್ಕನ ಪತ್ರಿಕೋದ್ಯಮದ ಬಗ್ಗೆ ಕೇಳಲು ಬಂದಿದ್ದಾರೆ, ನಿನಗೆ ನೆನಪಿರುವ ಸಂಗತಿಗಳನ್ನು ಇವರ ಮುಂದೆ ಹೇಳಿಬಿಡು" ಎಂದು ತಾಯಿಯಲ್ಲಿ ವಿನಂತಿಸಿಕೊಂಡರು.





