ಸರ್ಕಾರಿ ಸ್ಕೂಲ್‌ನಲ್ಲಿ ಟೀಚರ್‌ ಆಗಿರುವ 52 ವರ್ಷದ ರಮಾಮಣಿ ಕಳೆದ 3 ತಿಂಗಳಿಂದ ಹೃದಯರೋಗದ ಸಮಸ್ಯೆಯಿಂದ ಚಿಂತೆಗೊಳಗಾಗಿದ್ದಾರೆ. ವೈದ್ಯರು ಅವರಿಗೆ ಕೂಡಲೇ ಬೈಪಾಸ್‌ ಸರ್ಜರಿ ಮಾಡಿಸಿಕೊಳ್ಳಲು ಹೇಳಿದ್ದಾರೆ. ಅದಕ್ಕೆ 3 ಲಕ್ಷ ರೂ.ಗಳವರೆಗೆ ಖರ್ಚು ಬರುತ್ತದೆ. ಇದ್ದಕ್ಕಿದ್ದಂತೆ ಅಷ್ಟು ದೊಡ್ಡ ಮೊತ್ತದ ವ್ಯವಸ್ಥೆ ಮಾಡುವುದು ಬಹಳ ಕಷ್ಟ. ಏಕೆಂದರೆ ಗಂಡ ಸತ್ತ ನಂತರ ಅವರು ತಮ್ಮಲ್ಲಿದ್ದ ಹಣವನ್ನೆಲ್ಲಾ ಮಗನ ಉನ್ನತ ವಿದ್ಯಾಭ್ಯಾಸಕ್ಕೆ ಹಾಗೂ ಅವನನ್ನು ವಿದೇಶಕ್ಕೆ ಕಳಿಸಲು ಖರ್ಚು ಮಾಡಿಬಿಟ್ಟಿದ್ದರು. ಇಂದು ಮಗನಿಂದ ಹಣದ ಸಹಾಯ ಸಿಗುವ ಯಾವುದೇ ಭರವಸೆ ಇಲ್ಲ.

ಎಲ್ಲಾ ಜವಾಬ್ದಾರಿಗಳನ್ನೂ ನಿಭಾಯಿಸುವುದರೊಂದಿಗೆ ಅವರು ತಮ್ಮ ಆರೋಗ್ಯದ ಬಗ್ಗೆ ಕೊಂಚ ಯೋಚಿಸಿ ಮೆಡಿಕ್ಲೇಮ್ ಪಾಲಿಸಿ ತೆಗೆದುಕೊಂಡಿದ್ದರೆ ಇಂದು ಇಷ್ಟು ಚಿಂತಿಸಬೇಕಾಗಿರಲಿಲ್ಲ.

ಮೆಡಿಕ್ಲೇಮ್ ಪಾಲಿಸಿ ಎಂದರೇನು?

ಇನ್ಶೂರೆನ್ಸ್ ಸಲಹೆಗಾರ ಅವಿನಾಶ್‌ ಹೀಗೆ ಹೇಳುತ್ತಾರೆ, “ಮೆಡಿಕ್ಲೇಮ್ ಪಾಲಿಸಿ ಬಗ್ಗೆ ಹೆಚ್ಚಿನ ಜನ ಯೋಚಿಸುವುದೆಂದರೆ ನಾನಂತೂ ಆರೋಗ್ಯವಾಗಿದ್ದೇನೆ. ನನಗೆ ಅದರ ಅವಶ್ಯಕತೆ ಇಲ್ಲ,” ಆದರೆ ಕಾಯಿಲೆ ಹಾಗೂ ದುರ್ಘಟನೆ ಎಂದೂ ಯಾರಿಗೂ ಹೇಳಿ ಕೇಳಿ ಬರುವುದಿಲ್ಲ ಎನ್ನುವುದನ್ನು ಅವರು ಮರೆತುಬಿಡುತ್ತಾರೆ. ದುಬಾರಿ ಬೆಲೆಗಳಲ್ಲಿ ಒಳ್ಳೆಯ ಚಿಕಿತ್ಸೆಗೆ ಖರ್ಚು ಮಾಡಲು ಅಥವಾ ಏನಾದರೂ ದುರ್ಘಟನೆಗೆ ಗುರಿಯಾದರೆ ಚಿಕಿತ್ಸೆಗೆ ದೊಡ್ಡ ಮೊತ್ತದ ವ್ಯವಸ್ಥೆ ಮಾಡಲು ಎಲ್ಲರಿಗೂ ಸಾಧ್ಯವಿಲ್ಲ. ಅಂತಹ ಸಮಯದಲ್ಲಿ  ಹೆಲ್ತ್ ಇನ್ಶೂರೆನ್ಸ್ ಬಹಳ ಸಹಾಯಕವಾಗುತ್ತದೆ.

ಮೆಡಿಕ್ಲೇಮ್ ಪಾಲಿಸಿ

ಕಾಂಪೆನ್‌ಸೇಶನ್‌ ಸಿದ್ಧಾಂತವನ್ನು ಆಧರಿಸಿದೆ. ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಪಡೆದ ಒಂದು ನಿಶ್ಚಿತ ಸಮಯದ ನಂತರ ಪಾಲಿಸಿ ಹೋಲ್ಡರ್‌ ಯಾವುದಾದರೂ ಗಂಭೀರ ಕಾಯಿಲೆ ಅಥವಾ ಅಪಘಾತಕ್ಕೆ ಗುರಿಯಾದರೆ ವಿಮಾ ಕಂಪನಿ ಅವರಿಗೆ ಹಾಸ್ಪಿಟಲೈಸೇಶನ್‌ ಬೆನಿಫಿಟ್‌ ಅಥವಾ ಸರ್ಜಿಕಲ್ ಬೆನಿಫಿಟ್‌ ಕೊಡಿಸುತ್ತದೆ. ವಿಮೆ ಹೊಂದಿರುವವರು 24 ಗಂಟೆಗೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿ ಅಡ್ಮಿಟ್‌ ಆಗಿದ್ದರೆ ವಿಮಾ ಕಂಪನಿ ಅವರ ಚಿಕಿತ್ಸೆಯ ಖರ್ಚನ್ನು ಕೊಡುತ್ತದೆ. ಮೆಡಿಕ್ಲೇಮ್ ಪಾಲಿಸಿಯ ಶರತ್ತು ಹಾಗೂ ನಿಬಂಧನೆಗಳಿಗೆ ಅನುಸಾರವಾಗಿ ವಿಮಾ ಹೋಲ್ಡರ್‌ಗಳು ತೆಗೆದುಕೊಂಡ ಪಾಲಿಸಿಗೆ ತಕ್ಕಂತೆ ಪ್ರೀಮಿಯಮ್ ಕಟ್ಟಬೇಕು.

ಕೆಲವು ಮೆಡಿಕ್ಲೇಮ್ ಪಾಲಿಸಿಗಳಲ್ಲಿ ಮಹಿಳೆಯರಿಗೆ ಸೌಲಭ್ಯಕರ ಪ್ಲ್ಯಾನ್‌ಗಳು ಲಭ್ಯವಿವೆ. ಉದಾಹರಣೆಗೆ ಮೆಟರ್ನಿಟಿ ಸೌಲಭ್ಯ. ಗರ್ಭಧಾರಣೆಯ ನಂತರದ ಎಲ್ಲ ಚೆಕಪ್‌ಗಳು ಮತ್ತು ಪ್ರಸವದ ಖರ್ಚು ಪಾಲಿಸಿಯಲ್ಲಿ ಕವರ್‌ ಆಗಿರುತ್ತದೆ. ಆದರೆ ಈ ಸೌಲಭ್ಯ ಎಲ್ಲ ಪಾಲಿಸಿಗಳಲ್ಲೂ ಇರುವುದಿಲ್ಲ. ಇದಲ್ಲದೆ ಅನೇಕ ಹೆಲ್ತ್ ಪಾಲಿಸಿಗಳಲ್ಲಿ ವರ್ಷದಲ್ಲಿ 1 ಬಾರಿ ಅಥವಾ 2 ವರ್ಷದಲ್ಲಿ 1 ಬಾರಿ ಹೆಲ್ತ್ ಚೆಕಪ್‌ನ ಸೌಲಭ್ಯ ಸಿಗುತ್ತದೆ. ಹೆಲ್ತ್ ಚೆಕಪ್‌ನ ಸೌಲಭ್ಯ ಕೇವಲ ಪಾಲಿಸಿದಾರರಿಗಷ್ಟೇ ಸಿಗುತ್ತದೆ. ಕೆಲವು ಫ್ಯಾಮಿಲಿ ಪ್ಲೇಟರ್ ಪಾಲಿಸಿಗಳಲ್ಲಿ ಈ ಸೌಲಭ್ಯ ಇಡೀ ಕುಟುಂಬಕ್ಕೆ ಇರುತ್ತದೆ.

ಫ್ಯಾಮಿಲಿ ಪ್ಲೇಟರ್ಪಾಲಿಸಿ

ಪಾಲಿಸಿ ಏಜೆಂಟ್‌ ರಮೇಶ್‌ ಹೀಗೆ ಹೇಳುತ್ತಾರೆ, “ಮೆಡಿಕ್ಲೇಮ್ ಪಾಲಿಸಿಯ ಆಯ್ಕೆಯನ್ನು ನಮ್ಮ ಅಗತ್ಯ ಹಾಗೂ ಬಜೆಟ್‌ನ್ನು ನೋಡಿ ಮಾಡಬೇಕು. ಇಂದು ಮಾರುಕಟ್ಟೆಯಲ್ಲಿ 2 ರೀತಿಯ ಮೆಡಿಕ್ಲೇಮ್ ಪಾಲಿಸಿ ಲಭ್ಯವಿವೆ. ವ್ಯಕ್ತಿಗತ ಪಾಲಿಸಿ ಮತ್ತು ಫ್ಯಾಮಿಲಿ ಪ್ಲೇಟರ್‌ ಪಾಲಿಸಿ. ಈ ಎರಡಕ್ಕೂ ಬೇರೆ ಬೇರೆ ಪ್ರೀಮಿಯಮ್ ಮತ್ತು ಸೌಲಭ್ಯಗಳಿವೆ. ವ್ಯಕ್ತಿಗತ ಪಾಲಿಸಿ ಒಬ್ಬ ವ್ಯಕ್ತಿಯ ಹೆಸರಿನಲ್ಲಿದ್ದು ಅವರೇ ಅದರ ಸಂಪೂರ್ಣ ಲಾಭ ಪಡೆಯಬಹುದು. ಆದರೆ ಫ್ಯಾಮಿಲಿ ಪ್ಲೇಟರ್‌ ಪಾಲಿಸಿಯಲ್ಲಿ ಒಂದೇ ಪಾಲಿಸಿ ಹಾಗೂ ಪ್ರೀಮಿಯಂನಲ್ಲಿ ಕುಟುಂಬದ ಎಲ್ಲ ಸದಸ್ಯರೂ ಕವರ್‌ ಆಗುತ್ತಾರೆ.  ಹಲವರು ಕುಟುಂಬದ ಪ್ರತಿ ಸದಸ್ಯರ ಹೆಸರಿನಲ್ಲೂ ಬೇರೆ ಬೇರೆ ಪಾಲಿಸಿಗಳನ್ನು ಮಾಡಿಸುತ್ತಾರೆ. ಹೀಗಾಗಿ ಎಲ್ಲರದೂ ಪ್ರತ್ಯೇಕ ಪ್ರೀಮಿಯಂ ಕಟ್ಟಬೇಕಾಗುತ್ತದೆ. ಕುಟುಂಬದ ಸದಸ್ಯರೆಲ್ಲರೂ ಕಾಯಿಲೆ ಬಿದ್ದು ಪಾಲಿಸಿಯ ಲಾಭ ಪಡೆಯಬೇಕೆಂದಿಲ್ಲ. ಆದ್ದರಿಂದ ಫ್ಯಾಮಿಲಿ ಪ್ಲೇಟರ್‌ ಪಾಲಿಸಿ ಉಳಿತಾಯದ ದೃಷ್ಟಿಯಿಂದ ಲಾಭದಾಯಕ. ಇದರಲ್ಲಿ ಒಂದು ಪ್ರೀಮಿಯಂನಲ್ಲಿ ಎಲ್ಲ ಸದಸ್ಯರೂ ಕವರ್‌ ಆಗುತ್ತಾರೆ. ಜೊತೆಗೆ ಅಗತ್ಯ ಬಿದ್ದಾಗ ಕುಟುಂಬದ ಯಾರಾದರೂ ಒಬ್ಬ ಸದಸ್ಯ ಸಂಪೂರ್ಣ ಮೊತ್ತದ ಲಾಭ ಪಡೆಯಬಹುದು.

ಫ್ಯಾಮಿಲಿ ಪ್ಲೇಟರ್‌ ಪಾಲಿಸಿಯ ಪ್ರೀಮಿಯಂ ಕುಟುಂಬದ ಸದಸ್ಯರ ಸಂಖ್ಯೆ ಮತ್ತು ಕುಟುಂಬದ ಅತ್ಯಂತ ಹಿರಿಯ ಸದಸ್ಯರ ವಯಸ್ಸಿಗೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ.

45 ವರ್ಷದ ನಂತರ ಮೆಡಿಕಲ್ ಟೆಸ್ಟ್ ಮೆಡಿಕ್ಲೇಮ್ ಪಾಲಿಸಿಯ ಲಾಭ 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಹೆಚ್ಚಾಗಿರುತ್ತದೆ. ಏಕೆಂದರೆ ಅವರಿಗೆ ಪ್ರೀಮಿಯಂ ಕಡಿಮೆ ಕಟ್ಟುವುದಷ್ಟೇ ಅಲ್ಲದೆ, ಅವರು ಮೆಡಿಕಲ್ ಟೆಸ್ಟ್ ನ ಖರ್ಚನ್ನೂ ಉಳಿಸಬಹುದು. ಕಡಿಮೆ ವಯಸ್ಸಿನವರು ಪಾಲಿಸಿ ಪಡೆಯು ಮೊದಲು ತಮ್ಮ ಮೆಡಿಕಲ್ ಸರ್ಟಿಫಿಕೇಟ್‌ ಕೊಡಬೇಕಾಗಿಲ್ಲ. 45ಕ್ಕಿಂತ ಹೆಚ್ಚು ವಯಸ್ಸಿನವರು ಪಾಲಿಸಿ ಪಡೆಯುವ ಮೊದಲು ತಮ್ಮ ಸ್ವಂತ ಖರ್ಚಿನಲ್ಲೇ ಮೆಡಿಕಲ್ ಟೆಸ್ಟ್ ಮಾಡಿಸಿಕೊಳ್ಳಬೇಕು. ಇದರಲ್ಲಿ ಪ್ರೀಮಿಯಂ ಹೆಚ್ಚಾಗಿರುತ್ತದೆ. ಕೆಲವು ಕಂಪನಿಗಳು ಮೆಡಿಕಲ್ ರಿಪೋರ್ಟ್‌ನಲ್ಲಿ ಏನಾದರೂ ಕಾಯಿಲೆ ಕಂಡುಬಂದರೆ ಅದಕ್ಕೆ ಅನುಗುಣವಾಗಿ ಪಾಲಿಸಿ ಮತ್ತು ಪ್ರೀಮಿಯಂ ನಿರ್ಧರಿಸುತ್ತವೆ.

ತೆರಿಗೆಯಲ್ಲಿ ಉಳಿತಾಯ

ಮೆಡಿಕ್ಲೇಮ್ ನಂತಹ ಪಾಲಿಸಿಗಳು ನಿಮ್ಮ ಹಾಗೂ ನಿಮ್ಮ ಕುಟುಂಬದ ಸದಸ್ಯರ ಭವಿಷ್ಯವನ್ನಷ್ಟೇ ಸುರಕ್ಷಿತಗೊಳಿಸುವುದಿಲ್ಲ. ನಿಮ್ಮ  ಆದಾಯ ತೆರಿಗೆಯನ್ನೂ ಉಳಿಸುತ್ತದೆ. ಇನ್‌ಕಂ ಟ್ಯಾಕ್ಸ್ ಅಧಿನಿಯಮದ ಸೆಕ್ಷನ್‌ 80 ಡಿಯಂತೆ ಒಬ್ಬ ವ್ಯಕ್ತಿ ತಾನು, ಹೆಂಡತಿ ಮತ್ತು ಮಕ್ಕಳ ಹೆಸರಿನಲ್ಲಿ ಪಾಲಿಸಿ ಪಡೆದು ವರ್ಷಕ್ಕೆ ಗರಿಷ್ಠ 15,000 ರೂ. ಮತ್ತು ಸೀನಿಯರ್‌ ಸಿಟಿಜನ್‌ 20,000 ರೂ.ವರೆಗೆ ಆದಾಯ ತೆರಿಗೆ ವಿನಾಯಿತಿ ಪಡೆಯಬಹುದು.

ಆಯ್ಕೆ ಹೇಗೆ?

ಪಾಲಿಸಿ ಆಯ್ಕೆಯನ್ನು ದುಬಾರಿ ಅಥವಾ ಅಗ್ಗ ಎಂದು ನೋಡದೇ ಅದು ನಿಮಗೆಷ್ಟು ಸೌಲಭ್ಯದಾಯಕ ಎಂದು ಗಮನದಲ್ಲಿಟ್ಟುಕೊಂಡು ಮಾಡಬೇಕು. ನಿಮ್ಮ ಪ್ಲ್ಯಾನ್‌ನಲ್ಲಿ ಸೇರಿಸಿರುವ ಆಸ್ಪತ್ರೆಗಳ ಲಿಸ್ಟ್ ನಲ್ಲಿ ಯಾವುದಾದರೂ ನಿಮ್ಮ ಮನೆಯ ಸುತ್ತಮುತ್ತಲಿನಲ್ಲಿ ಇದೆಯೇ ಇಲ್ಲವೇ? ಆ ಪಾಲಿಸಿಯಲ್ಲಿ ಯಾವ ಯಾವ ಕಾಯಿಲೆಗಳು ಕವರ್‌ ಆಗುತ್ತಿವೆ? ಐಸಿಯುನ ಬಾಡಿಗೆ, ಆಸ್ಪತ್ರೆ ರೂಮ್ ಚಾರ್ಜ್‌, ಕ್ರಿಟಿಕಲ್ ಸರ್ಜರಿಯ ಖರ್ಚು ಆ ಪ್ಲ್ಯಾನ್‌ನಲ್ಲಿ ಸೇರಿದೆಯೇ ಇತ್ಯಾದಿ ವಿಷಯಗಳನ್ನು ತಿಳಿದುಕೊಂಡು ಪಾಲಿಸಿ ಪಡೆಯಬೇಕು.

ಪ್ರೀಮಿಯಂ, ಕ್ಲೇಮ್ ಸೆಟಲ್‌ಮೆಂಟ್‌ ಪ್ರಕ್ರಿಯೆ, ಪಾಲಿಸಿ ಪಡೆಯಲು ಕನಿಷ್ಠ ಹಾಗೂ ಗರಿಷ್ಠ ವಯಸ್ಸು, ರಿನ್ಯೂ ಮಾಡಲು ಗರಿಷ್ಠ ವಯಸ್ಸು, ನೋ ಕ್ಲೇಮ್, ಬೋನಸ್‌ ಇತ್ಯಾದಿಗಳ ಬಗ್ಗೆ ಅಗತ್ಯವಾಗಿ ಮಾಹಿತಿ ಪಡೆಯಬೇಕು.

ಯಾವುದು ಕವರ್ಆಗುವುದಿಲ್ಲ?

ಮೆಡಿಕ್ಲೇಮ್ ಪಾಲಿಸಿಯಲ್ಲಿ 24 ಗಂಟೆಗಿಂತ ಕಡಿಮೆ ಹಾಸ್ಪಿಟಲೈಸೇಶನ್‌ ಕವರ್‌ ಮಾಡುವುದಿಲ್ಲ. ಆದ್ದರಿಂದ 24 ಗಂಟೆಯೊಳಗೆ ಹಾಸ್ಪಿಟಲೈಸೇಶ್‌ನ ಕ್ಲೇಮ್ ತೀರಿಸಲಾಗುವುದಿಲ್ಲ. ಇದಲ್ಲದೆ, ಹೋಮಿಯಪಥಿಕ್‌ ಮತ್ತು ಆಯುರ್ವೇದಿಕ್‌ ಚಿಕಿತ್ಸೆ, ಕಣ್ಣಿನ ಪರೀಕ್ಷೆ, ಹಲ್ಲುಗಳ ಚಿಕಿತ್ಸೆ ಇತ್ಯಾದಿ ಇದರಲ್ಲಿ ಕವರ್‌ ಮಾಡುವುದಿಲ್ಲ. ಇವುಗಳನ್ನು ಕೇವಲ 1-2 ಕಂಪನಿಗಳು ಮಾತ್ರ ಕವರ್‌ಮಾಡುತ್ತವೆ.

ಗಮನಿಸಿ

ಕೆಲವು ಪಾಲಿಸಿಗಳ ಪ್ಲ್ಯಾನ್‌ನಲ್ಲಿ ಕ್ರಿಟಿಕಲ್ ಕಾಯಿಲೆಗಳು ಕವರ್‌ ಆಗುತ್ತವೆ. ಆದರೆ ಅವುಗಳೊಂದಿಗೆ `ಕೋ ಪೇಮೆಂಟ್‌’ ಕೂಡ ಸೇರಿದ್ದು ಅವುಗಳ ಬಗ್ಗೆ ವಿಮಾದಾರರಿಗೆ ನಂತರ ತಿಳಿಯುತ್ತದೆ. ಕೋಪೇಮೆಂಟ್‌ನಲ್ಲಿ ಹಾಸ್ಪಿಟಲೈಸೇಶನ್‌ ಖರ್ಚಿನ ಶೇ.50-70ರಷ್ಟನ್ನು ಕಂಪನಿ ಪೂರೈಸುತ್ತದೆ. ಉಳಿದ ಮೊತ್ತವನ್ನು ವಿಮಾದಾರರು ಭರಿಸಬೇಕು.

ಕೆಲವು ಪಾಲಿಸಿಗಳಲ್ಲಿ ಕಾಯಿಲೆಗಳ ಚಿಕಿತ್ಸೆಗಳಲ್ಲಿ ಪೇಮೆಂಟ್‌ನ್ನು ಸೇರಿಸುವುದಿಲ್ಲ. ಆದರೆ ಅವುಗಳಲ್ಲಿ ರೂಮ್ ರೆಂಟ್‌ ಮತ್ತು ಐಸಿಯುನ ಖರ್ಚನ್ನೂ ಕವರ್‌ ಮಾಡುವುದಿಲ್ಲ. ಆದ್ದರಿಂದ ಪಾಲಿಸಿ ಪಡೆಯುವಾಗ ಇದನ್ನೂ ತಿಳಿದುಕೊಳ್ಳಿ.

ಕ್ಲೇಮ್ ಮಾಡುವುದು ಹಾಗೂ ಅದನ್ನು ಪೂರೈಸಿದ ನಂತರ ಅನೇಕ ಕಂಪನಿಗಳು ಪ್ರೀಮಿಯಂನ್ನು ಹೆಚ್ಚಿಸುತ್ತವೆ. ಆದ್ದರಿಂದ ಇವೆಲ್ಲಗಳ ಬಗ್ಗೆ ಮೊದಲೇ ತಿಳಿದುಕೊಳ್ಳಿ.

ಪಾಲಿಸಿ ಪಡೆಯುವಾಗ ಕೊಟ್ಟಿರುವ ಫಾರಂನಲ್ಲಿ ನಿಮ್ಮೆಲ್ಲ ಮಾಹಿತಿಗಳನ್ನೂ ಸರಿಯಾಗಿ ಕೊಡಿ. ನಿಮಗೆ ಯಾವುದಾದರೂ ಆರೋಗ್ಯ  ಸಮಸ್ಯೆ ಇದ್ದರೆ ಅದನ್ನು ಮುಚ್ಚಿಡಬೇಡಿ.

ವಿಮಾ ಕಂಪನಿ ಕ್ಲೇಮ್ ನ್ನು ಪೂರೈಸದಿದ್ದಲ್ಲಿ ನೀವು ಇನ್ಶೂರೆನ್ಸ್ ರೆಗ್ಯೂಲೇಟರಿ ಅಂಡ್‌ ಡೆಲಪ್‌ಮೆಂಟ್‌ ಅಥಾರಿಟಿ (ಐಆರ್‌ಎಡಿಎ)ಯಲ್ಲಿ ಲಿಖಿತರೂಪದಲ್ಲಿ ನಿಮ್ಮ ದೂರನ್ನು ಸಲ್ಲಿಸಬಹುದು. ಇದರ ಬಗ್ಗೆ ಹೆಚ್ಚಿನ ವಿವರಗಳಿಗೆ ಐಆರ್‌ಎಡಿಎ ವೆಬ್‌ಸೈಟ್‌ಕೂಡ ನೋಡಬಹುದು.

ನಿರ್ಮಲಾ ರಾವ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ