ಲೋಕಾಯುಕ್ತ ಪೊಲೀಸರು ಬುಧವಾರ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ್ದು, 1.70 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ಪಿಎಸ್ಐ ಮತ್ತು ಕಾನ್ಸ್‌ಟೇಬಲ್​ ರೆಡ್ ಹ್ಯಾಂಡ್ ಆಗಿ ಬಲೆಗೆ ಬಿದ್ದಿದ್ದಾರೆ.

ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕೆರೂರು ಪೊಲೀಸ್ ಠಾಣೆಯ ಪಿಎಸ್ಐ ಭೀಮಪ್ಪ ರಬಕವಿ ಮತ್ತು ಪೇದೆ ಸಂತೋಷ್ ಬಿರಾದರ್ ಅವರನ್ನು ಬಂಧಿಸಲಾಗಿದೆ.

ಇಸ್ಪೀಟ್ ಆಡುವಾಗ ಸಿಕ್ಕಿಬಿದ್ದಿದ್ದ ಆರೋಪಿಯನ್ನು ಪ್ರಕರಣದಿಂದ ಕೈಬಿಡಲು ಹಾಗೂ ಆತನ ಬೈಕ್‌ ಬಿಡಲು 2 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ 1.70 ಲಕ್ಷ ರೂ. ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಲಂಚದ ಬೇಡಿಕೆ ಬಗ್ಗೆ ಮುತ್ತಪ್ಪ ನಾಯ್ಕರ್ ಎಂಬವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಫೋನ್‌ ಕರೆ ರೆಕಾರ್ಡಿಂಗ್ ಆಧಾರದ ಮೇಲೆ ದಾಳಿ ಮಾಡಿ ಇಬ್ಬರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

ಲೋಕಾಯುಕ್ತ ಎಸ್.ಪಿ ಮಹಾಲಿಂಗ್ ನಂದಗಾಂವಿ ಮಾರ್ಗದರ್ಶನದಲ್ಲಿ, ಲೋಕಾಯುಕ್ತ ಡಿವೈಎಎಸ್‌ಪಿ ಸುರೇಶ್ ರೆಡ್ಡಿ ನೇತೃತ್ವದಲ್ಲಿ ಈ ದಾಳಿ ನಡೆದಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ