ಪ್ರೇಯಸಿಯೇ ತನ್ನ ಪ್ರಿಯಕರನನ್ನು ಮನೆಗೆ ಆಹ್ವಾನಿಸಿ, ಕಣ್ಣುಗಳಿಗೆ ಬಟ್ಟೆ ಕಟ್ಟಿ, ಆತನನ್ನು ಮಂಚಕ್ಕೆ ಕಟ್ಟಿ, ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆಗೈದಿರುವ ದಾರುಣ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತನ್ನನ್ನು ಆತ ನಿರ್ಲಕ್ಷ್ಯ ಮಾಡಿದ್ದಾನೆ ಎಂದು ಆಕೆ ಈ ಕೃತ್ಯ ಎಸಗಿದ್ದಾಳೆ ಎನ್ನಲಾಗಿದೆ. ಇನ್ನು ಅವನು ಸಾಯುತ್ತಿರುವುದನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರೇಮಾ (27) ಮತ್ತು ಚಿಕ್ಕನಾಯಕನಹಳ್ಳಿ ಮೂಲಕ ಕಿರಣ್ (27) ಟೆಲಿಕಾಂ ಅಂಗಡಿಯಲ್ಲಿ ಸಹೋದ್ಯೋಗಿಗಳಾಗಿದ್ದು, ಒಂದು ವರ್ಷಕ್ಕೂ ಹೆಚ್ಚು ಕಾಲ ಸಂಬಂಧದಲ್ಲಿದ್ದರು. ಇತ್ತೀಚೆಗೆ, ಕಿರಣ್ ಆಕೆಯ ಬಗ್ಗೆ ಸಾಕಷ್ಟು ಗಮನ ನೀಡುತ್ತಿಲ್ಲ ಮತ್ತು ತನ್ನನ್ನು ಮದುವೆಯಾಗುವುದಿಲ್ಲ ಎಂದು ಭಾವಿಸಿದ ಪ್ರೇಮಾ ಈ ಕೃತ್ಯ ಎಸಗಿದ್ದಾಳೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಾಗಡಿ ರಸ್ತೆ ಅಂಜನಾನಗರದ ನಿವಾಸಿ ಪ್ರೇಮಾ, ಕಿರಣ್‌ನನ್ನು ತನ್ನ ಮನೆಗೆ ಆಹ್ವಾನಿಸಿದ್ದಾಳೆ. ಕಿರಣ್ ಬಂದಾಗ, ಸ್ವಲ್ಪ ಹೊತ್ತು ಮಾತನಾಡಿದ್ದಾರೆ. ವಿದೇಶಿ ಶೈಲಿಯಲ್ಲಿ ಪ್ರಪೋಸ್ ಮಾಡುತ್ತೇನೆ ಎಂದು ಹೇಳಿ ಆತನನ್ನು ಮಂಚಕ್ಕೆ ಕಟ್ಟಿ, ಕಣ್ಣಿಗೂ ಬಟ್ಟೆ ಕಟ್ಟಿದ್ದಾಳೆ. ಮೊದಲೇ ತಂದಿಟ್ಟುಕೊಂಡಿದ್ದ ಸೀಮೆಎಣ್ಣೆಯನ್ನು ಆತನ ಮೇಲೆ ಸುರಿದು, ಬೆಂಕಿ ಹಚ್ಚಿದ್ದಾಳೆ.
ಮಹಿಳೆಯನ್ನು ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ನಡೆಸಿದ್ದೇವೆ. ಆಕೆ ತನ್ನ ಪ್ರೇಮಿಗೆ ಬೆಂಕಿ ಹಚ್ಚಿ ಕೊಂದಿದ್ದಾಗಿ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ದೃಢಪಡಿಸಿದ್ದಾರೆ.
ನಾಲ್ಕುವರೆ ಲಕ್ಷದ ಗಿಫ್ಟ್: ಪೊಲೀಸರ ತನಿಖೆಯ ವೇಳೆ ದೊರೆತ ಮಾಹಿತಿ ಪ್ರಕಾರ, ಕಳೆದ ವರ್ಷ ಆಗಸ್ಟ್‌ನಲ್ಲಿ ಪ್ರೇಮಾಗೆ ಕಿರಣ್ ಪರಿಚಯವಾಗಿದ್ದ. ಈ ವರ್ಷದ ಫೆಬ್ರವರಿ 14ರ ‘ವ್ಯಾಲೆಂಟೈನ್ಸ್ ಡೇ’ ದಿನ ಪ್ರೇಮಾ ತನ್ನ ಪ್ರೀತಿಯನ್ನು ನಿವೇದಿಸಿದ್ದಳು. ಕಿರಣ್ ಕೂಡ ಒಪ್ಪಿಕೊಂಡಿದ್ದ. ಪ್ರಿಯಕರನಿಗಾಗಿ ಪ್ರೇಮಾ ಬರೋಬ್ಬರಿ 4.5 ಲಕ್ಷ ರೂಪಾಯಿ ಮೌಲ್ಯದ ಬೈಕ್ ಮತ್ತು ಮೊಬೈಲ್ ಫೋನ್ ಕೊಡಿಸಲು ಮುಂದಾಗಿದ್ದಳು. ಕೊಲೆ ಕೃತ್ಯ ನಡೆದ ದಿನ ಇಬ್ಬರೂ ಸೇರಿ ಬೈಕ್ ನೋಡಲು ಹೋಗಿದ್ದರು ಎನ್ನಲಾಗಿದೆ.
ಆದರೆ, ಇತ್ತೀಚೆಗೆ ಕಿರಣ್ ಪ್ರೇಮಾಳಿಂದ ಅಂತರ ಕಾಯ್ದುಕೊಳ್ಳಲು ಶುರು ಮಾಡಿದ್ದ. ಇದರಿಂದ ಮನನೊಂದಿದ್ದ ಪ್ರೇಮಾ, ಆತನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಮೊದಲೇ ತೀರ್ಮಾನಿಸಿದ್ದಳು. ಅದಕ್ಕಾಗಿಯೇ ಸೀಮೆಎಣ್ಣೆಯನ್ನು ಮೊದಲೇ ಖರೀದಿಸಿ ತಂದಿಟ್ಟುಕೊಂಡಿದ್ದಳು. ಮದುವೆ ವಿಚಾರವಾಗಿ ಮನೆಯಲ್ಲಿ ಮತ್ತೆ ಗಲಾಟೆ ಆರಂಭವಾದಾಗ, ಪ್ಲಾನ್ ಪ್ರಕಾರ ಕಿರಣ್‌ನನ್ನು ಮಂಚಕ್ಕೆ ಕಟ್ಟಿ ಹಾಕಿ ಬೆಂಕಿ ಹಚ್ಚಿದ್ದಾಳೆ.
ಕುಟುಂಬ ಹೊರಗೆ ಹೋಗಿತ್ತು: ಪ್ರೇಮಾ ಮತ್ತು ಅವರ ಕುಟುಂಬವು ವಸತಿ ಕಟ್ಟಡದ ಎರಡನೇ ಮಹಡಿಯಲ್ಲಿರುವ ಮನೆಯಲ್ಲಿ ಬಾಡಿಗೆಗೆ ಪಡೆದಿದ್ದು, ಮಾಲೀಕ ಚೇತನ್ ಕುಮಾರ್ ನೆಲ ಮಹಡಿಯಲ್ಲಿ ವಾಸಿಸುತ್ತಿದ್ದಾರೆ. ಅವರ ಕುಟುಂಬವು ಒಂದು ದಿನದ ನಿಮಿತ್ತ ಹೊರಗೆ ಹೋಗಿತ್ತು.





