ವ್ಯಕ್ತಿಯನ್ನು ಮತ್ತು ಸಮಾಜವನ್ನು ವಿಶ್ವ ಪ್ರಜ್ಞೆಯ ಮೂಲಕ ವಿಶ್ವ ಸಂಸ್ಕೃತಿಯ ಮೂಲಕ ಒಗ್ಗೂಡಿಸುವ ಪ್ರಯತ್ನವೇ ವಿಶ್ವಸಂಸ್ಕೃತಿಯ ಮಹಾಯಾನ ಎಂದು ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ಸಚಿವರು, ಕಾಂಗ್ರೆಸ್ಸಿನ ಕಾರ್ಯಕಾರಿ  ಸಮಿತಿ ಸದಸ್ಯರಾದ ಡಾ. ಎಂ ವೀರಪ್ಪ ಮೊಯ್ಲಿಹೇಳಿದ್ದಾರೆ.

ತಮ್ಮ ವಿಶ್ವ ಸಂಸ್ಕೃತಿಯ ಮಹಾಯಾನ ಗದ್ಯ ಮಹಾಕಾವ್ಯದ ನಾಲ್ಕನೇ ಸಂಪುಟದ ಬಿಡುಗಡೆ ಸಮಾರಂಭ ಪೂರ್ವಭಾವಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಸಂಪುಟಗಳಲ್ಲೂ ಈ ಅಂಶವನ್ನು ಸಂವಾದದ ರೂಪದಲ್ಲಿ ನಿರೂಪಿಸಿದ್ದೇನೆ. ಇದಕ್ಕೆ ದೇಶದ ಗಡಿ ಇಲ್ಲ, ಭಾಷೆಯ ಗಡಿಯೂ ಇಲ್ಲ, ಜನಾಂಗದ ಭಿನ್ನತೆಯು ಇಲ್ಲ, ವಿಶ್ವದ ಬೇರೆ ಬೇರೆ ಸಂಸ್ಕೃತಿಗಳನ್ನು ಒಂದುಗೂಡಿಸಿ ಅಧ್ಯಯನ ಮಾಡಲಾಗಿದೆ. ಅದನ್ನು ಕನ್ನಡನಾಡಿನ ಜನ ಪ್ರೀತಿಯಿಂದ ಸ್ವೀಕರಿಸುತ್ತಾರೆಂದು ನಾನು ನಂಬಿದ್ದೇನೆ ಎಂದರು.

ಇಂದು ನಾಗರಿಕತೆಯ ಇತಿಹಾಸ ಜನಾಂಗವನ್ನು ಒಂದುಗೂಡಿಸುತ್ತಿಲ್ಲ. ಆದರೆ ಸಂಸ್ಕೃತಿ ಮಾತ್ರ ಜನಾಂಗವನ್ನು ಒಂದುಗೂಡಿಸಬಲ್ಲದು. ಭಾವೈಕ್ಯತೆ ಸಾಧಿಸಬಲ್ಲದು. ಸಂಸ್ಕೃತಿಯ ಅಧ್ಯಯನವೊಂದೇ ವ್ಯಕ್ತಿ ಮತ್ತು ಸಮಾಜವನ್ನು ಸರಿದಾರಿಗೆ ತರುವ ಪರಮಾಸ್ತ್ರ. ಅದನ್ನು ಹೊರತುಪಡಿಸಿ ಬೇರೊಂದು ಇಲ್ಲ ಯಾವುದೇ ಸಿದ್ಧಾಂತವಾದರೂ ಸಂಸ್ಕೃತಿ ಮರೆಯುವಂತಿಲ್ಲ. ಉದಾಹರಣೆಗೆ ಹೇಳುವುದಾದರೆ ಜೈನ ಧರ್ಮ ಅಹಿಂಸ ಪರೋಮೋಧರ್ಮಃ ಎಂದರೆ ಲಿಂಗಾಯಿತ ಧರ್ಮ ದಯವಿಲ್ಲದ ಧರ್ಮ ಯಾವುದಯ್ಯ ಎಂದು ಪ್ರಶ್ನಿಸುತ್ತದೆ. ಕರ್ನಾಟಕ ವಿಶೇಷವಾಗಿ ಭಾರತ ಸಕಲ ಧರ್ಮಗಳ ಸಾಮರಸ್ಯದ ತೊಟ್ಟಿಲು. ಇದನ್ನು ನಮ್ಮ ಸಂಸ್ಕೃತಿ ಚರಿತ್ರೆ ವಿಸ್ತಾರವಾಗಿ ಹೇಳಿದೆ. ಇದನ್ನು ಮತ್ತೊಮ್ಮೆ ಜನರ ಮುಂದೆ ತರುವ ಪ್ರಯತ್ನವನ್ನು ಈ ಸಂಪುಟಗಳ ಮೂಲಕ ಮಾಡಿದ್ದೇನೆ. ಇಂದು ಸಾಹಿತ್ಯ ಜನರನ್ನು ಒಂದುಗೂಡಿಸಬೇಕಾಗಿದೆ. ಆದರೆ ಆ ಕೆಲಸವಾಗುತ್ತಿಲ್ಲವೆಂದು ವಿಷಾದದಿಂದ ಹೇಳಬೇಕಾಗಿದೆ ಎಂದರು.

ವಿಶ್ವ ಸಂಸ್ಕೃತಿಯ ಮಹಾಯಾನ ಗದ್ಯ ಮಹಾಕಾವ್ಯವು ಏಳು ಸಂಪುಟಗಳಲ್ಲಿ ಬಿಡುಗಡೆಯಾಗಲಿದೆ. ಮೊದಲನೆಯ ಸಂಪುಟ 2024ರಲ್ಲಿ ಚಿಕ್ಕಬಳ್ಳಾಪುರದಲ್ಲಿ ಬಿಡುಗಡೆಯಾಯಿತು. ಎರಡನೇ ಸಂಪುಟ 2025 ಜನವರಿಯಲ್ಲಿ ಮೂಡುಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಬಿಡುಗಡೆಯಾಯಿತು. ಮೂರನೇ ಸಂಪುಟ ಬಾಗಲಕೋಟೆಯಲ್ಲಿ 2025 ಅಗಸ್ಟ್ ನಲ್ಲಿ ಬಿಡುಗಡೆಯಾಯಿತು.

ಇದೀಗ ವಿಶ್ವ ಸಂಸ್ಕೃತಿಯ ಮಹಾಯಾನ ನಾಲ್ಕನೆಯ ಸಂಪುಟ ನವಂಬರ್ 11ರಂದು ಬೆಳಗ್ಗೆ 10.30ಕ್ಕೆ ಮೈಸೂರಿನ ಸುತ್ತೂರು ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಬಿಡುಗಡೆಯಲಾಗಿದೆ.

ಜೆಎಸ್​ಎಸ್​ ಕಾಲೇಜಿನ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ನಡೆಯುವ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಹಿಸಲಿದ್ದಾರೆ. ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಗ್ರಂಥ ಬಿಡುಗಡೆ ಮಾಡಲಿದ್ದಾರೆ. ಅರಣ್ಯ ಸಚಿವ ರಾಮಲಿಂಗ ರೆಡ್ಡಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ .ರೇವಣ್ಣ, ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ, ಶಾಸಕರಾದ ತನ್ವೀರ್ ಸೇಟ್, ಧಾರ್ಮಿಕ ಪರಿಷತ್ತಿನ ಅಧ್ಯಕ್ಷ ಕೆ ಎಂ ನಾಗರಾಜ್ ಭಾಗವಹಿಸುತ್ತಾರೆ. ಸಂಶೋಧಕರಾದ ಡಾ. ಕೆ ಅನಂತರಾಮ್ ಅವರು ಆಶ್ರಯ ನುಡಿಗಳನ್ನು ನುಡಿಯಲಿದ್ದಾರೆ. ಕೃತಿ ಪರಿಚಯವನ್ನು ಸಂಸ್ಕೃತ  ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಡಾ. ಪದ್ಮಶೇಖರ್ ಅವರು ನೆರವೇರಿಸಲಿದ್ದಾರೆ

ಸಮಾರಂಭದ ದಿವ್ಯಸಾನಿಧ್ಯವನ್ನು ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ವಹಿಸಲಿದ್ದಾರೆ.

ನಾಲ್ಕು ಸಂಪುಟಗಳನ್ನು ಖ್ಯಾತ ಪ್ರಕಾಶಕರಾದ ಬೆಂಗಳೂರಿನ ಸ್ವಪ್ನ ಬುಕ್ ಹೌಸ್ ಅವರು ಮಾಡಿದ್ದಾರೆ. ಇದರ ಮ್ಯಾನೇಜಿಂಗ್ ಡೈರೆಕ್ಟರ್ ನಿತಿನ್ ಷಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ