ಕಾರವಾರ ಶಾಸಕ ಸತೀಶ್ ಸ್ಮೈಲ್ ಪುತ್ರಿ ಹಾಗೂ ಮಿಸ್ ಗೋವಾ ಸಾದ್ವಿ ಸತೀಶ್ ಸೈಲ್ 2026ರ "ಮಿಸ್ ಇಂಡಿಯಾ" ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಒಡಿಶಾದ ಭುವನೇಶ್ವರದ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿಯಲ್ಲಿ ನಡೆದ 61ನೇ ಫೆಮಿನಾ ಮಿಸ್ ಇಂಡಿಯಾ ಗ್ರ್ಯಾಂಡ್ ಫಿನಾಲೆಯಲ್ಲಿ ಗೋವಾವನ್ನು ಪ್ರತಿನಿಧಿಸಿದ್ದ ಸಾದ್ವಿ ಸತೀಶ್ ಸೈಲ್ ವಿಜೇತರಾಗಿದ್ದಾರೆ. ವಿಸ್ ಇಂಡಿಯಾ ವರ್ಲ್ಡ್ ನಿಕಿತಾ ಪೋರ್ವಾಲ್ ಈ ಬಾರಿಯ ಮಿಸ್ ಇಂಡಿಯಾ ಕಿರೀಟ ವಿಜೇತೆ ಸಾದ್ವಿಗೆ ಕ್ರೌನಿಂಗ್ ಮಾಡಿದ್ದಾರೆ.
ಮಹಾರಾಷ್ಟ್ರದ ರಾಜ್ನಂದಿನಿ ಪವಾರ್ ಮೊದಲ ರನ್ನರ್ ಅಪ್ ಮತ್ತು ಜಮ್ಮು-ಕಾಶ್ಮೀರದ ಶ್ರೀಅದ್ವೈತಾ ಜಿ. ಎರಡನೇ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದಾರೆ.
ವಿಜೇತ ಸಾದ್ವಿ ಸತೀಶ್ ಸೈಲ್ ಅವರು ಬೆಳ್ಳಿ-ಟೋನ್ಡ್ ಮೆಟಾಲಿಕ್ ಒಳಗೊಂಡ ಬಿಳಿ ಹಾಗೂ ಕಪ್ಪು ಬಣ್ಣದ ಗೌನ್ ಧರಿಸಿದ್ದರು. ಸ್ಲೀವ್ ಲೆಸ್ ಗೌನ್ ಹಾಕಿದ್ದರು.
ಕಳೆದ ಆವೃತ್ತಿಯ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ನಿಕಿತಾ ಪೋರ್ವಾಲ್ ಅವರು 60ನೇ ಫೆಮಿನಾ ಮಿಸ್ ಇಂಡಿಯಾ ಕಿರೀಟ ಧರಿಸಿದ್ದರು. ಸದ್ಯ ಇವರು 2027ರ ಮಿಸ್ ವರ್ಲ್ಡ್ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿದ್ದು, ಭಾರತ ಪ್ರತಿನಿಧಿಸಲು ತಯಾರಾಗುತ್ತಿದ್ದಾರೆ.
61ನೇ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ವಿವಿಧ ರಾಜ್ಯಗಳ ಒಟ್ಟು 29 ಸುಂದರಿಯರು ಮಿಸ್ ಇಂಡಿಯಾ ಪಟ್ಟಕ್ಕೆ ಪೈಪೋಟಿ ನಡೆಸಿದ್ದರು. ಅಂತಿಮ ಸುತ್ತಿಗೆ 3 ಸ್ಪರ್ಧಿಗಳು ತಲುಪಿದ್ದರು. ಅವರಲ್ಲಿ ಸಾದ್ವಿ ಸತೀಶ್ ಸೈಲ್ ವಿಜೇತರಾಗಿದ್ದಾರೆ.
ಸಾದ್ವಿ ಸತೀಶ್ ಸೈಲ್ ಮಾಡೆಲ್ ಮಾತ್ರವಲ್ಲದೇ ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಫಸ್ಟ್ ರನ್ನರ್ ಅಪ್ ರಾಜ್ನಂದಿನಿ ಪವಾರ್ ಸ್ಕ್ವಾಶ್ ಆಟಗಾರ್ತಿ ಹಾಗೂ ನೃತ್ಯಗಾರ್ತಿಯಾಗಿದ್ದಾರೆ. ಸೆಕೆಂಡ್ ರನ್ನರ್ ಅಪ್ ಶ್ರೀಅದ್ವೈತಾ ವೈದ್ಯೆಯಾಗಿದ್ದು, ಡಾನ್ಸ್ ಹಾಗೂ ಮಾಡೆಲಿಂಗ್ನಲ್ಲೂ ಸಕ್ರಿಯರಾಗಿದ್ದಾರೆ.





