ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಒಡೆತನದ 3000 ಎಕರೆ ಪ್ರದೇಶದಲ್ಲಿರುವ ಪ್ರಾಣಿ ಸಂಗ್ರಹಾಲಯ ‘ವಂತಾರ’ಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ರು.
ವಿಶ್ವ ವನ್ಯಜೀವಿ ದಿನದ ಅಂಗವಾಗಿ ವಿಶ್ವದ ಅತಿದೊಡ್ಡ ಮೃಗಾಲಯ, ಪ್ರಾಣಿ ಸಂರಕ್ಷಣಾ ಹಾಗೂ ಪುನರ್ವಸತಿ ಕೇಂದ್ರವನ್ನ ಪ್ರಧಾನಿ ಮೋದಿ ಉದ್ಘಾಟನೆ ಮಾಡಿದ್ರು. ಅನಂತ್ ಅಂಬಾನಿ ನಿರ್ಮಿಸಿರುವ ಪ್ರಾಣಿ-ಪಕ್ಷಿಗಳ ಲೋಕದಲ್ಲಿ ಸಂಚರಿಸಿದ ಪ್ರಧಾನಿ ಮೋದಿ ಪ್ರಾಣಿ ಸಂಪತ್ತು, ವಿವಿಧ ಸೌಲಭ್ಯಗಳನ್ನ ಕಣ್ತುಂಬಿಕೊಂಡರು. ಹುಲಿ, ಸಿಂಹ ಮರಿಗಳಿಗೆ ಆಹಾರ ನೀಡಿ ಸಂತಸಗೊಂಡರು.
ಪ್ರಧಾನಿ ನರೇಂದ್ರ ಮೋದಿಗೆ ಪ್ರಾಣಿ-ಪಕ್ಷಿಗಳಂದ್ರೆ ಪಂಚಪ್ರಾಣ ಅನ್ನೋದು ಎಲ್ರಿಗೂ ಗೊತ್ತಿದೆ. ಪ್ರಧಾನಿ ಕಚೇರಿ ಹಾಗೂ ಲೋಕ ಕಲ್ಯಾಣ ಮಾರ್ಗ ನಿವಾಸದಲ್ಲಿ ವಾಯು ವಿಹಾರ ನಡೆಸುವಾಗ ನವಿಲುಗಳಿಗೆ ಕಾಳು ತಿನ್ನಿಸುವ ದೃಶ್ಯಗಳನ್ನ ನೋಡಿರ್ತೀರಾ. ಬಿಡುವಿನ ಸಮಯದಲ್ಲಿ ಅರಣ್ಯದಲ್ಲಿ ಸಫಾರಿ ಮಾಡೋದನ್ನೂ ಕಂಡಿರ್ತೀರಾ.
ಪರಿಸರ ಪ್ರೇಮಿಯಾಗಿರುವ ಪ್ರಧಾನಿ ಮೋದಿ ಗುಜರಾತ್ನ ಜಾಮ್ನಗರದಲ್ಲಿ ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ನಿರ್ಮಿಸಿರುವ ವಂತಾರಕ್ಕೆ ಭೇಟಿ ನೀಡಿದ್ರು. ವಿಶ್ವದ ಅತಿದೊಡ್ಡ ಮೃಗಾಲಯ, ಪ್ರಾಣಿ ಸಂರಕ್ಷಣಾ ಹಾಗೂ ಪುನರ್ವಸತಿ ಕೇಂದ್ರ ವಂತಾರವನ್ನ ಪ್ರಧಾನಿ ಮೋದಿ ಉದ್ಘಾಟಿಸಿದ್ರು. ಉದ್ಘಾಟನೆ ಬಳಿಕ ಪ್ರಾಣಿ-ಪಕ್ಷಿಗಳ ವಂತಾರದಲ್ಲಿ ಸಂಚರಿಸಿ, ವಿವಿಧ ಸೌಲಭ್ಯಗಳ ಮಾಹಿತಿ ಪಡೆದುಕೊಂಡರು.
ವಂತಾರದಲ್ಲಿರುವ ವನ್ಯಜೀವಿ ಆಸ್ಪತ್ರೆಗೆ ಭೇಟಿ ನೀಡಿದ ಪ್ರಧಾನಿ ಮೋದಿ MRI, ಸಿಟಿ ಸ್ಕ್ಯಾನಿಂಗ್, ಐಸಿಯುಗಳು ಸೇರಿದಂತೆ ವಿವಿಧ ಚಿಕಿತ್ಸಾಲಯಗಳನ್ನ ವೀಕ್ಷಣೆ ಮಾಡಿದ್ರು. ಮೃಗಾಲಯದಲ್ಲಿ ಸುತ್ತಾಡಿದ ನಂತರ ಏಷ್ಯಾಟಿಕ್ ಸಿಂಹದ ಮರಿ, ಬಿಳಿ ಸಿಂಹದ ಮರಿ, ಚಿರತೆ ಮರಿ ಸೇರಿದಂತೆ ಅಪರೂಪದ ಹಾಗೂ ಅಳಿವಿನಂಚಿನಲ್ಲಿರುವ ಪ್ರಾಣಿಗಳೊಂದಿಗೆ ಆಟವಾಡಿದ್ರು.
ಹುಲಿ, ಸಿಂಹ, ಚಿರತೆ ಮರಿಗಳಿಗೆ ಆಹಾರ ನೀಡಿದ್ದಲ್ಲದೆ, ಕ್ರೂರ ಪ್ರಾಣಿಗಳ ಬಳಿಯೂ ಧೈರ್ಯವಾಗಿ ಹೋಗಿ ಅವುಗಳನ್ನ ಸಂತೈಸಿದ್ರು. ಗೋಲ್ಡನ್ ಟೈರ್ಗೆ ಮುಖಾಮುಖಿಯಾಗಿ ಕೂತರು. ಈ ದೃಶ್ಯ ದೇಶಾದ್ಯಂತ ಟ್ರೆಂಡ್ ಆಗಿದೆ.
ಜೀಬ್ರಾಗಳ ಜೊತೆ ಹೆಜ್ಜೆ ಹಾಕಿದ ಮೋದಿ, ಜಿರಾಫೆ ಹಾಗೂ ಘೇಂಡಾಮೃಗ ಮರಿಗೆ ಆಹಾರ ನೀಡಿದ್ರು. ಒರಾಂಗುಟನ್ ಜೊತೆ ಪ್ರೀತಿಯಿಂದ ಆಟವಾಡಿದ ಮೋದಿ, ವಿಶ್ವದ ಅತಿದೊಡ್ಡ ಆನೆ ಆಸ್ಪತ್ರೆಯೊಳಗೆ ಎಂಟ್ರಿಕೊಟ್ಟು ಆನೆಗೆ ಚಿಕಿತ್ಸೆ ನೀಡುವುದನ್ನ ವೀಕ್ಷಣೆ ಮಾಡಿದ್ರು.
ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ತಮ್ಮ ಸ್ವಂತ ಹಣದಲ್ಲಿ ನಿರ್ಮಿಸಿರುವ ಈ ವಂತಾರ ಸುಮಾರು 2 ಸಾವಿರ ಜಾತಿಯ ಪ್ರಾಣಿ-ಪಕ್ಷಿಗಳು ಸೇರಿದಂತೆ ಒಟ್ಟು ಒಂದುವರೆ ಲಕ್ಷಕ್ಕೂ ಹೆಚ್ಚು ಅಳಿನಂಚಿನಲ್ಲಿರುವ ಹಾಗೂ ಅಪಾಯದಲ್ಲಿರುವ ಪ್ರಾಣಿ-ಪಕ್ಷಿಗಳಿಗೆ ಪುನಜನ್ಮ ನೀಡುವ ನೆಲೆಯಾಗಿದ್ದು, ಜಗತ್ತಿನಾದ್ಯಂತ ಗಮನ ಸೆಳೆದಿದೆ.