ಬೆಂಗಳೂರಿನ ಜೆಜೆನಗರದ ವಿ ಎಸ್​ ಗಾರ್ಡನ್​ನಲ್ಲಿ ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಅಪ್ರಾಪ್ತ ಬಾಲಕರನ್ನು ಬಂಧಿಸಿದ್ದಾರೆ.

ಘಟನೆ ನಡೆದ ಸ್ಥಳದ ಸುತ್ತಮುತ್ತಲಿನ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಾವಳಿಗಳನ್ನು ಆಧರಿಸಿ, ಆರೋಪಿಗಳನ್ನು ಭಾನುವಾರ ತಡರಾತ್ರಿ ಬಂಧಿಸಲಾಗಿದೆ. ಆರೋಪಿಗಳು 14ರಿಂದ 16 ವರ್ಷ ವಯೋಮಾನದವರಾಗಿದ್ದು, ಸ್ಥಳೀಯ ಬಾಲಕರು ಎಂದು ತಿಳಿದುಬಂದಿದೆ. ಈ ಕೃತ್ಯದ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಎಸಿಪಿ ನೇತೃತ್ವದಲ್ಲಿ ಹೆಚ್ಚಿನ ತನಿಖೆ ಕೈಗೊಳ್ಳಲಾಗುತ್ತಿದೆ.

ವಿಎಸ್​ ಗಾರ್ಡನ್​ ನಿವಾಸಿ ಎನ್.ಶಶಿಕುಮಾರ್​ ನೀಡಿದ ದೂರಿನ ಮೇರೆಗೆ ದಲಿತರ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆ ಹಾಗೂ ಭಾರತೀಯ ನ್ಯಾಯಸಂಹಿತೆ (ಬಿಎನ್​ಎಸ್​) ಸೆಕ್ಷನ್​ 118(1), 196(2), ಆರ್​ ಡಬ್ಲ್ಯೂ 3 (5)ರ ಅಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ.

ಭಾನುವಾರ ರಾತ್ರಿ 8.10ರ ಸುಮಾರಿಗೆ ವಿ ಎಸ್​ ಗಾರ್ಡನ್​ನ ಪಂಚಮುಖಿ ದೇವಸ್ಥಾನದಿಂದ ಓಂಶಕ್ತಿ ಮಾಲಾಧಾರಿಗಳು ಮೆರವಣಿಗೆಯಲ್ಲಿ ಸಾಗುತ್ತಿದ್ದರು. ಈ ವೇಳೆ ನಾಲ್ಕು ಮಂದಿ ಮುಸ್ಲಿಂ ಯುವಕರು ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲೇಟು ಬಿದ್ದಿದ್ದರಿಂದ ಯುವತಿಯ ತಲೆಗೆ ಗಾಯವಾಗಿದೆ ಎಂದು ಶಶಿಕುಮಾರ್ ದೂರಿನಲ್ಲಿ ತಿಳಿಸಿದ್ದರು.

ಮೂವರ ಬಂಧನ: ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ  ಡಾ.ಜಿ.ಪರಮೇಶ್ವರ್, ಪೂಜೆ ಮಾಡುವ ಸಂದರ್ಭದಲ್ಲಿ ಕಿಡಿಗೇಡಿಗಳು ಕಲ್ಲು ಎಸೆದಿದ್ದಾರೆ. ಘಟನೆ ಸಂಬಂಧ ಈಗಾಗಲೇ ಮೂವರನ್ನು ವಶಕ್ಕೆ ಪಡೆದಿದ್ದಾರೆ. 15, 16 ನೇ ವಯೋಮಾನದ ಮೂವರನ್ನ ವಶಕ್ಕೆ ಪಡೆಯಲಾಗಿದೆ.  ತನಿಖೆ ನಡೆಸಿ  ಪ್ರಚೋದನೆ ನೀಡಿದವರ ವಿರುದ್ದ ಕ್ರಮ ಕೈಗೊಳ್ಳುತ್ತಾರೆ ಎಂದರು.

ಕಲ್ಲುತೂರಾಟದ ಬಳಿಕ ಜೆಜೆ ನಗರ ಬೂದಿ ಮುಚ್ಚಿದ ಕೆಂಡದಂತಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದು, 2 ಕೆಎಸ್​ಆರ್​ಪಿ ತುಕಡಿ ನಿಯೋಜಿಸಲಾಗಿದೆ. ಕಲ್ಲು ತೂರಾಟ ನಡೆದ ರಸ್ತೆ ಹಾಗೂ ಪಂಚಮುಖಿ ದೇವಸ್ಥಾನದ ಸುತ್ತಮುತ್ತ ಪೊಲೀಸರು ಪಥಸಂಚಲನ ನಡೆಸಿ, ಸ್ಥಳೀಯರಿಗೆ ಧೈರ್ಯ ತುಂಬಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ