ಹಿತ್ತಲ ಗಿಡ ಮದ್ದಲ್ಲ ಎಂಬಂತೆ ಮನೆಯಲ್ಲಿ ಎಷ್ಟೇ ರುಚಿ ರುಚಿಯಾಗಿ ಮಾಡಿಕೊಟ್ಟರೂ, ಅದರಲ್ಲಿ ಇಲ್ಲದ ದೋಷ ಹುಡುಕಿ ಚೆನ್ನಾಗಿಲ್ಲ ಎನ್ನುವುದೇ ಮನೆಯವರ ಅಭ್ಯಾಸ. ಆದರೆ ಪರ ಊರಿಗೆ ಹೋದಾಗಲೇ, ನಮ್ಮೂರ ಊಟದ ರುಚಿ ಗೊತ್ತಾಗೋದು, ಅಲ್ವೇ......?
ಸಾಧಾರಣವಾಗಿ ನಮಗೆ ಅವಶ್ಯಕತೆ ಇರುವುದೆಲ್ಲ ಸುಲಭವಾಗಿ ಸಿಗುತ್ತಲೇ ಹೋದರೆ ಅದರ ಬೆಲೆ ಗೊತ್ತಾಗುವುದಿಲ್ಲ. ಇಲ್ಲಿ ಇದ್ದಾಗ ಅದರ ಬಗ್ಗೆಯೇ ಗೊಣಗುತ್ತಲೇ ಇರುವರು ಹೊರಗೆ ಹೋಗಿ ಬಂದ ನಂತರ ಇಲ್ಲಿನ ಮೌಲ್ಯದ ಅರ್ಥ ಮಾಡಿಕೊಳ್ಳುತ್ತೇವೆ. ಅದಕ್ಕೇ ಏನೋ, ಎರಡನೇ ಸೊಸೆ ಬಂದ ನಂತರವೇ ಮೊದಲ ಸೊಸೆಯ ಮಹತ್ವ ಗೊತ್ತಾಗುತ್ತದೆ ಎಂದು ನಮ್ಮ ಹಿರಿಯರು ಹೇಳಿದ್ದಾರೆ.
ನಮ್ಮಾಕೆ ಮನೆಯಲ್ಲಿ ಮಕ್ಕಳಿಗೆ ರುಚಿ ರುಚಿಯಾದ ಅಡುಗೆ ಮಾಡಿ ಹಾಕಿದರೂ, ಛೇ.... ದಿನ ಅದೇ ಹುಳಿ, ಸಾರು, ಪಲ್ಯನಾ.... ಎಂದು ಗೊಣಗುತ್ತಾ ಆಗಾಗ್ಗೆ ಮಕ್ಕಳು ಸ್ನೇಹಿತರ ಜೊತೆಯಲ್ಲಿ ಜಂಕ್ ಫುಡ್ ತಿನ್ನುತ್ತಾರೆ. ಕಳೆದ ತಿಂಗಳು ಮಗಳು ಶೈಕ್ಷಣಿಕ ಪ್ರವಾಸಕ್ಕೆಂದು ಎರಡು ವಾರಗಳ ಕಾಲ ಉತ್ತರ ಭಾರತದ ಕೆಲವು ಪ್ರದೇಶಗಳಿಗೆ ಹೋಗುವಾಗ, ನಿಮ್ಮ ಊಟ ತಿಂದು ಸಾಕು ಸಾಕಾಗಿ ಹೋಗಿದೆ. ಅಬ್ಬಾ....! ಎರಡು ಆರಗಳ ಕಾಲ ರುಚಿ ರುಚಿಯಾಗಿ ಉತ್ತರ ಭಾರತೀಯ ತಿನಿಸುಗಳನ್ನು ತಿನ್ನಬಹುದು ಎಂದು ಅಮ್ಮನೊಂದಿಗೆ ಕೊಚ್ಚಿಕೊಂಡು ಹೋಗಿದ್ದ ನಮ್ಮ ಮಗಳು ಅಲ್ಲಿಗೆ ಹೋದಳು.
ಎರಡೇ ದಿನಗಳಲ್ಲಿ, `ಅಮ್ಮಾ... ಇಲ್ಲಿಯ ಊಟವೇ ಸರಿ ಇಲ್ಲ. ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ ಮತ್ತು ರಾತ್ರಿಯ ಊಟಕ್ಕೆ ಚಪಾತಿ/ರೋಟಿ ತಿಂದು ತಿಂದೂ ಸಾಕಾಗಿದೆ. ಅದೂ ಅಲ್ಲದೇ, ಒಂದು ತಿಂಡಿಗೆ 100-150 ಆದ್ರೆ ಇನ್ನು ಊಟ ಮಾಡಬೇಕಾದರೆ, 250-300 ರೂ. ಖರ್ಚಾಗುತ್ತದೆ,' ಎಂದು ಗೋಳಾಡಿದ್ದಳು.
ಪ್ರವಾಸವೆಲ್ಲ ಮುಗಿದು ದೆಹಲಿಯಿಂದ ಬೆಂಗಳೂರಿನ ರೈಲು ಹತ್ತಿದ ಕೂಡಲೇ, `ಅಮ್ಮಾ, ನಾನು ಬಂದ ಕೂಡಲೇ ಅನ್ನ, ತಿಳಿಸಾರು ಮತ್ತು ಪಲ್ಯ ಮಾಡಿಡಿ. ನಾಲಿಗೆ ಎಲ್ಲಾ ಕೆಟ್ಟು ಹೋಗಿದೆ,' ಎಂದು ಹೇಳಿದಳು. ಮನೆಗೆ ಬಂದ ಬಂದ ನಂತರ ಸ್ನಾನ ಮತ್ತು ನಿತ್ಯ ಕರ್ಮಗಳನ್ನೆಲ್ಲಾ ಮುಗಿಸಿ ಪಟ್ಟಾಗಿ ಒಂದು ಚೂರೂ ಚಕಾರವೆತ್ತದೇ, ಅಮ್ಮ ಮಾಡಿದ ಅಡುಗೆಯನ್ನೇ ಆಹಾ....ಓಹೋ... ಎಂದು ಸವಿಯುತ್ತಾ ಹೊಟ್ಟೆ ಭರ್ತಿ ಗಡದ್ದಾಗಿ ತಿಂದು ಡರ್ ಎಂದು ತೇಗಿ ಗೊರ್ ಎಂದು ನಿದ್ದೆ ಮಾಡಿ ಎದ್ದಾಗಲೇ ನಮ್ಮ ಮಗಳಿಗೆ ಮನೆಯ ಊಟದ ಮಹತ್ವ ಮತ್ತು ಅಮ್ಮನ ಕೈ ರುಚಿ ಅದರ ಮೌಲ್ಯ ಗೊತ್ತಾದದ್ದು.
ದೆಹಲಿಗೆ ಪ್ರವಾಸ
ಈಗ ಅಂತಹದ್ದೇ ಅನುಭವ ನನಗೂ ಸಹ ಆಯಿತು. ಅದರ ಸುಂದರ ಅನುಭವ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಕಛೇರಿಯ ಕೆಲಸದ ನಿಮಿತ್ತ ಮೂರು ದಿನಗಳ ಹಿಂದೆ ಬೆಂಗಳೂರಿನಿಂದ ದೆಹಲಿಗೆ ಹೋಗಬೇಕಿತ್ತು. ವಿಮಾನ ಬೆಳಗ್ಗೆ 6.10ಕ್ಕೆ ಇದ್ದ ಕಾರಣ, ಹಿಂದಿನ ರಾತ್ರಿ ಸರಿಯಾಗಿ ನಿದ್ದೆಯೂ ಇರದೇ, ಬೆಳ್ಳಂಬೆಳಗ್ಗೆ 3.30ಕ್ಕೆಲ್ಲಾ ಎದ್ದು ಸ್ನಾನ, ಸಂಧ್ಯಾವಂದನೆ ಎಲ್ಲವನ್ನೂ ಮುಗಿಸಿ, ವಿಮಾನ ನಿಲ್ದಾಣಕ್ಕೆ ಬರುವಷ್ಟರಲ್ಲಿ 4.30 ಆಗಿತ್ತು. ನಂತರ ಅರ್ಧ ಮುಕ್ಕಾಲು ಗಂಟೆಯಲ್ಲಿ ಬ್ಯಾಗ್ ಚೆಕ್ ಇನ್ ಎಲ್ಲಾ ಮುಗಿಸಿ, ಇನ್ನೂ ಸಮಯ ಇದ್ದ ಕಾರಣ, ಹಾಗೇ ಸುಮ್ಮನೆ ತಮಾಷೆ ಮಾಡು ಸಲುವಾಗಿ ಹೀಗೆ ಮಾಡಿದೆ.