ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ತೆರೆಳಿದ್ದ ಗ್ರೂಪ್ ಕ್ಯಾಪ್ಟ್ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾನಿಗಳನ್ನು ಹೊತ್ತ ಬಾಹ್ಯಾಕಾಶ ಕೋಶ “ಡ್ರ್ಯಾಗನ್ ಗ್ರೇಸ್” ಭಾರತೀಯ ಕಾಲಮಾನ ಮಂಗಳವಾರ ಸುಮಾರು 3.01 ಗಂಟೆಗೆ ಸುರಕ್ಷಿತವಾಗಿ ಬದಿಳಿಯಿತು.
ಸ್ಪೇಸ್ ಎಕ್ಸ್ನ ಡ್ರ್ಯಾಗನ್ ಗ್ರೇಸ್ ನೌಕೆಯು ಗಂಟೆಗೆ 28,000 ಕಿ.ಮೀ. ವೇಗದಲ್ಲಿ 22.5 ಗಂಟೆ ಪ್ರಯಾಣಿಸಿ ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯೆಗೊ ಕರಾವಳಿಯ ಪೆಸಿಫಿಕ್ ಸಾಗರದಲ್ಲಿ ಸುರಕ್ಷಿತವಾಗಿ ಇಳಿಯಿತು.ಈ ಮೂಲಕ, ಭಾರತದ ಗಗನಯಾನಿ ಶುಭಾಂಶು ಶುಕ್ಲಾ ಅವರು ದೇಶದ ಅಂತರಿಕ್ಷ ಯಾನ ಮತ್ತು ಅನ್ವೇಕ್ಷಣೆ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಸಿದರು. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪಯಣಿಸಿದ ಮೊದಲ ಭಾರತೀಯ ಎಂಬ ಗೌರವಕ್ಕೂ ಭಾಜನರಾಗಿದ್ದಾರೆ.
“ಡ್ರ್ಯಾಗನ್ ಗ್ರೇಸ್” ಅನ್ನು ಮುನ್ನಡೆಸಿದ ಶುಕ್ಲಾ, ಪೆಸಿಫಿಕ್ ಸಾಗರದಲ್ಲಿ ಸುರಕ್ಷಿತವಾಗಿ ಇಳಿಸಿದರು. ಒಂದು ಗಂಟೆ ನಂತರ, ಶುಭಾಂಶು ಶುಕ್ಲಾ, ಕಮಾಂಡರ್ ಪೆಗ್ಗಿ ವಿಟ್ಸನ್, ಹಂಗರಿಯ ಟಿರ್ಬೊಕಾಪು ಹಾಗೂ ಪೋಲೆಂಡ್ನ ಸ್ಲಾವೋಸ್ಯು, ವಿನ್ಸೀವ್ಸ್ಕಿ ಬಾಹ್ಯಾಕಾಶ ಕೋಶದಿಂದ ಹೊರಗೆ ಬರುತ್ತಿದ್ದಂತೆ, ಮುಗುಳ್ನಗೆ ಬೀರಿದರು. “ಆ್ಯಕ್ಸಿಯಂ-4” ಬಾಹ್ಯಾಕಾಶದ ಭಾಗವಾಗಿ 20 ದಿನಗಳ ಅಂತರಿಕ್ಷ ಯಾನ ಯಶಸ್ವಿಗೊಳಿಸಿ ಧನ್ಯತಾಭಾವ ಅವರ ಮೊಗದಲ್ಲಿ ಕಂಡುಬಂತು. 18 ದಿನ ಅಂತರ ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಇದ್ದ ಶುಭಾಂಶು ಶುಕ್ಲಾ, ಹಲವಾರು ಪ್ರಯೋಗಗಳನ್ನು ಕೈಗೊಂಡಿದ್ದಾರೆ.
ಬಾಹ್ಯಾಕಾಶ ಕೋಶದಿಂದ ಗಗನಯಾನಿಗಳನ್ನು ಹೊರಗೆ ಕರೆದುಕೊಂಡು ಬರಲು “ಶನೋನ್” ನೌಕೆಯನ್ನು ಸನ್ನದ್ಧವಾಗಿ ಇಡಲಾಗಿತ್ತು. ಡ್ರ್ಯಾಗನ್ ಗ್ರೇಸ್ ಬಳಿ ಶನೋನ್ ನೌಕೆ ಹೋಗುತ್ತಿದ್ದಂತೆ ನಾಲ್ಕೂ ಮಂದಿ ಗಗನಯಾನಿಗಳು, ಕೋಶದ ಚಿಕ್ಕ ದ್ವಾರದ ಮೂಲಕ ಹೊರಗೆ ಬಂದರು.
ಹೊರಗೆ ಬಂದ ನಾಲ್ವರು ಗಗನಯಾನಿಗಳನ್ನುವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತರ, ಹೆಲಿಕಾಪ್ಟರ್ ಮೂಲಕ ನಿಗದಿತ ಸ್ಥಳಕ್ಕೆ ಕರೆದೊಯ್ಯಲಾಯಿತು. ಈ ಗಗನಯಾನಿಗಳು ಭೂ ಕಕ್ಷೆಯಲ್ಲಿ ಗುರುತ್ವಾಕರ್ಷಣ ಶಕ್ತಿರಹಿತ ಪರಿಸರದಲ್ಲಿ 20 ದಿನಗಳನ್ನು ಕಳೆದಿದ್ದರಿಂದ, ಭೂಮಿಯ ಗುರುತ್ವಾಕರ್ಷಣ ಶಕ್ತಿ ಪ್ರಭಾವದ ಪರಿಸಕ್ಕೆ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ. ಹಾಗಾಗಿ ಅವರು ಏಳು ದಿನ ಪ್ರತ್ಯೇಕ ಸ್ಥಳದ ಇರಿಸುವ ವ್ಯವಸ್ಥೆ ಮಾಡಲಾಗಿದೆ.
ಶುಭಾಂಶು ಶುಕ್ಲಾ ಅವರ ಊರು ಲಖನೌದಲ್ಲಿ ಅವರ ಪೋಷಕರು ಐಎಸ್ಎಸ್ನಿಂದ ವಾಪಾಸಾಗುವ ಪ್ರಕ್ರಿಯೆಯನ್ನು ನೋಡುತ್ತಿದ್ದಂತೆ ಅವರ ಕಣ್ಣಾಲಿಗಳು ತುಂಬಿ ಬಂದವು. ಅವರ ಮೊಗದಲ್ಲಿ ಸಾರ್ಥಕತೆಯ ಭಾವ ಮೂಡಿತ್ತು.
ಪ್ರೇರಣೆಯಾದ ಶುಕ್ಲಾ: ಮೋದಿ
“ಗಗನಯಾತ್ರಿ ಶುಭಾಂಶು ಶುಕ್ಲಾ ಅವರ ಸಮರ್ಪಣಾ ಭಾವ, ಧೈರ್ಯ ಹಾಗೂ ಅದಮ್ಯ ಉತ್ಸಾಹದ ಮೂಲಕ ದೇಶದ ಕೋಟ್ಯಂತರ ಜನರಿಗೆ ಹಾಗೂ ಅವರ ಕನಸುಗಳಿಗೆ ಸ್ಪೂರ್ತಿಯಾಗಿದ್ದಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ಐಎಸ್ಎಸ್ನಿಂದ ಭೂಮಿಗೆ ಮರಳಿರುವ ಅವರಿಗೆ ಸ್ವಾಗತ ಕೋರುವ ಸಂದೇಶವನ್ನು ಮೋದಿ ತಮ್ಮ “ಎಕ್ಸ್” ನಲ್ಲಿ ಪೋಸ್ಟ್ ಮಾಡಿದ್ದಾರೆ.
ಶುಕ್ಲಾ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಭೇಟಿ ನೀಡಿದ ಸಾಧನೆ ಮಾಡಿರುವ ಮೊದಲ ಭಾರತೀಯ. ಭಾರತದ ಮಹತ್ವಾಕಾಂಕ್ಷೆಯ ಮಾನವಸಹಿತ ಗಗನಯಾನ ಕಾರ್ಯಕ್ರಮಕ್ಕೆ ಶುಕ್ಲಾ ಅವರ ಈ ವ್ಯೋಮಯಾನ ಮತ್ತೊಂದು ಮೈಲುಗಲ್ಲಾಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.