ಗೃಹಿಣಿ ಎಷ್ಟೇ ಕಲಿತು ತ್ಯಾಗಮಯಿಯಾಗಿದ್ದರೂ, ಅವಳು ಸಂಪಾದಿಸುತ್ತಿಲ್ಲ ಎಂಬ ಅವಹೇಳನೆಗೆ ಗುರಿಯಾಗುತ್ತಾಳೆ. `ಕೇವಲ ಗೃಹಿಣಿಎಂಬ ಅಡ್ಡ ಹೆಸರ ಬೇರೆ. ನಿಜವಾಗಿಯೂ ಗೃಹಿಣಿಯ ಕರ್ತವ್ಯ ಅಷ್ಟಕ್ಕೇ ಮುಗಿಯುತ್ತದೆಯೇ…..?

`ಗೃಹಿಣಿಯ ಗೃಹ ಮುಚ್ಯತೆ’ ಎಂಬ ಸಂಸ್ಕೃತ ನಾಣ್ಣುಡಿಯಂತೆ ಗೃಹಕ್ಕೆ ಗೃಹಿಣಿಯೇ ಭೂಷಣ. ಒಂದು ಮನೆ ಉತ್ತಮ ಗೃಹ ಎನಿಸಿಕೊಳ್ಳಬೇಕಾದರ ಆ ಮನೆಯಲ್ಲಿ ಶಾಂತಿ, ನೆಮ್ಮದಿ, ಪ್ರೀತಿ ಇರಬೇಕು. ಗೃಹದಲ್ಲಿ ಸದ್ಗೃಹಿಣಿ ಇದ್ದರೆ ಆ ಮನೆಗೇ ಒಂದು ಕಳೆ!

ಸರಳಾ, ತುಂಬಾ ಸರಳವಾದ ವ್ಯಕ್ತಿತ್ವವುಳ್ಳ ಗೃಹಿಣಿ. ತನ್ನ ಸಂಸಾರವನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುವ ಛಾತಿಯುಳ್ಳವಳು. ಅವಳಿಗೆ ಸಂಸಾರವೇ ಪ್ರಪಂಚ. ಅವಳು ತನ್ನ ಅತ್ತೆ, ಮಾವ, ಗಂಡ, ಮಕ್ಕಳನ್ನು ಬಹಳ ಪ್ರೀತಿಯಿಂದ ನೋಡಿಕೊಂಡು ಹೋಗುತ್ತಿದ್ದಳು. ಅವಳು ಬುದ್ಧಿವಂತೆ. ಎಂಜಿನಿಯರಿಂಗ್‌ ಪದವಿ ಹೊಂದಿದ್ದರೂ ಸಂಸಾರಕ್ಕಾಗಿ ಉದ್ಯೋಗವನ್ನು ತ್ಯಜಿಸಿ ಅಪ್ಪಟ ಗೃಹಿಣಿಯಾಗಿದ್ದಳು.

ಪಕ್ಕದ ಮನೆಯ ಶಾಂತಮ್ಮನಿಗೆ ಸರಳಾಳನ್ನು ಕಂಡರೆ ಸ್ವಲ್ಪ ಅಸಡ್ಡೆ. ಏಕೆಂದರೆ ಸರಳ ಪದವೀಧರೆಯಾಗಿದ್ದರೂ ದುಡಿದು ಸಂಪಾದಿಸದೆ ಮನೆಯ ಗೃಹಿಣಿಯಾಗಿದ್ದಾಳೆ ಎಂದು.

ಶಾಂತಮ್ಮನವರ ಸೊಸೆ ಉದ್ಯೋಗಸ್ಥೆ, ಸಾಫ್ಟ್ ವೇರ್‌ ಕಂಪನಿಯೊಂದರಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದಳು. ಆದ್ದರಿಂದ ಶಾಂತಮ್ಮ ತನ್ನ ಸೊಸೆಯ ಕೆಲಸ ಹಾಗೂ ದೊಡ್ಡ ಸಂಬಳದ ಬಗ್ಗೆ ಹೆಮ್ಮೆಯೊಡನೆ ಸ್ವಲ್ಪ ದೊಡ್ಡಸ್ಥಿಕೆಯ ಹಮ್ಮೂ ಸೇರಿಕೊಂಡಿತ್ತು. ಯಾವಾಗಲೂ ಸರಳಾಳನ್ನು ಉದ್ದೇಶಿಸಿ ಆಕ್ಷೇಪಣೆ ತೆಗೆಯುತ್ತಿದ್ದಳು.

ಹೊರಗಡೆ ಹೋಗಿ ನಾಲ್ಕು ಕಾಸು ಸಂಪಾದಿಸದೆ ಗೃಹಿಣಿಯಾಗಿ ಮನೆಯಲ್ಲಿಯೇ ಇರುವುದಕ್ಕೆ ವ್ಯಂಗ್ಯಭರಿತ ಮಾತು ಇದ್ದೇ ಇರುತ್ತಿತ್ತು. ಆದರೆ ಸರಳಾ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳುತ್ತಿರಲ್ಲಿಲ್ಲ. ನಕ್ಕು ಸುಮ್ಮನಾಗಿಬಿಡುತ್ತಿದ್ದಳು.

ಹೀಗೆ ಇವರಾಗಿ ಒಮ್ಮೆ ಶಾಂತಮ್ಮನವರಿಗೆ ಆರೋಗ್ಯ ಸಮಸ್ಯೆ ಎದುರಾಯಿತು. ಅವರಿಗೆ ಅವರ ಕೆಲಸವನ್ನು ಮಾಡಿಕೊಳ್ಳಲು ಆಗುತ್ತಿರಲಿಲ್ಲ. ಸೊಸೆ ಕೆಲಸಕ್ಕೆ ಹೋಗುತ್ತಿದ್ದರಿಂದ ಅವರನ್ನು ನೋಡಿಕೊಳ್ಳಲು ಅನಿವಾರ್ಯವಾಗಿ ಒಬ್ಬ ನರ್ಸ್‌ ನ್ನು ಇಟ್ಟುಕೊಳ್ಳಬೇಕಾಯಿತು. ಅವಳು ತಿಂಗಳಿಗೆ 25,000 ಸಂಬಳದ ಬೇಡಿಕೆ ಇಟ್ಟಳು. ಇವರಿಗೆ ಕೊಡದೆ ಬೇರೆ ದಾರಿ ಇರಲಿಲ್ಲ. ಹಾಗೆ ಚಿಕ್ಕ ಮೊಮ್ಮಗನನ್ನು ನೋಡಿಕೊಳ್ಳಲು ಹೀಗೆ, ಮನೆಗೆಲಸದ ಒಟ್ಟು ಬಾಬ್ತು 50,000 ದಾಟಿತು. ಮಗ ಸೊಸೆ ದುಡಿದ ಅರ್ಧ ಸಂಬಳ ಈ ಖರ್ಚು ವೆಚ್ಚ ತೂಗಿಸುವಲ್ಲಿಯೇ ಸರಿಯಾಯಿತು. ಜೊತೆಗೆ ಆಸ್ಪತ್ರೆ ಹಾಗೂ ಔಷಧಿಗಳ ಖರ್ಚು ಬೇರೆ.

ಆಗ ಶಾಂತಮ್ಮನಿಗೆ ಒಂದು ವಿಚಾರ ಅರಿವಾಯಿತು. ಸರಳಾ ಅಷ್ಟೊಂದು ಓದಿದ್ದರೂ ಗೃಹಿಣಿಯಾಗಿ ಸಂಸಾರವನ್ನು ಅಚ್ಚುಕಟ್ಟಾಗಿ ತೂಗಿಸಿಕೊಂಡು ಹೋಗುತ್ತಿದ್ದಾಳೆ, ಹಿರಿಯರ ಆರೋಗ್ಯದ ಕಾಳಜಿ, ಮನೆಯ ಬಹಳಷ್ಟು ಕೆಲಸಗಳನ್ನು ಅವಳೇ ಮಾಡಿ  ಮುಗಿಸಿರುತ್ತಾಳೆ. ಮನೆಯ ಖರ್ಚನ್ನು ಜಾಣ್ಮೆಯಿಂದ ನಿಭಾಯಿಸಿ ಗಂಡನ ಆದಾಯದಲ್ಲಿ ಬಹಳಷ್ಟನ್ನೂ ಉಳಿಸಿ ಬ್ಯಾಂಕಿನ ಖಾತೆಯಲ್ಲಿಟ್ಟಿದ್ದಾಳೆ. ಮುಂದೆ ಅವಳ ಮಗಳ ಓದಿಗೆ ಈ ಹಣ ಉಪಯೋಗಕ್ಕೆ ಬರಲಿ ಎಂಬ ಮುಂದಾಲೋಚನೆ ಅವಳದು.

ಅದಲ್ಲದೆ ವಿರಾಮದ ಸಮಯದಲ್ಲಿ ಮಕ್ಕಳಿಗೆ ಪಾಠ ಹೇಳುವುದರ ಜೊತೆಗೆ ಮನೆಯ ಸುತ್ತಲಿನ ಮಕ್ಕಳಿಗ ಸಂಗೀತ ಪಾಠವನ್ನೂ ಹೇಳಿಕೊಡುತ್ತಾಳೆ. ಈ ವಿಚಾರಗಳನ್ನೆಲ್ಲಾ ಮಥಿಸಿದ ಶಾಂತಮ್ಮನಿಗೆ ಗೃಹಿಣಿಯ ಕೆಲಸವನ್ನು ಆದಾಯದ ಚೌಕಟ್ಟಿನಲ್ಲಿ ಹೋಲಿಕೆ ಮಾಡಿದ್ದು ತಪ್ಪು ಎನಿಸಿತು. ಕರ್ತವ್ಯದ ಜೊತೆ ಪ್ರೀತಿಯಿಂದ ಮನೆಮಂದಿಯನ್ನೆಲ್ಲ ಪೊರೆಯುವ ಸರಳಾಳ ಜೊತೆ ದುಡಿಯುತ್ತಾ ಸದಾ ಗಡಿಬಿಡಿಯಿಲ್ಲಿರುವ ಸೊಸೆಯ ಜೊತೆ ಹೋಲಿಕೆ ಮಾಡಿ ಹೀಗಳೆದದ್ದು ತಪ್ಪು ಎಂದು ಅರಿವಾಯಿತು.

ದುಡಿಯುವ ಹೆಣ್ಣುಮಕ್ಕಳು ಹೆಚ್ಚಲ್ಲ, ಹಾಗೆ ಮನೆಯ ಗೃಹಿಣಿಯ ಪಾತ್ರ ಕಮ್ಮಿಯಿಲ್ಲ ಎಂದು ಅರಿವಾಯಿತು. ಸಮಯ ಸಹಕಾರವಿದ್ದರೆ ಸರಳಾ ಎರಡನ್ನೂ ನಿಭಾಯಿಸಬಲ್ಲಳು ಎಂದು ಮೆಚ್ಚುಗೆಯ ಜೊತೆ ಆದರ್ಶ ಗೃಹಿಣಿಯಾಗಿರುವ ಅವಳ ಬಗ್ಗೆ ಹೆಮ್ಮೆಯೂ  ಮೂಡಿತು!

ಚೇತನಾ ಭಾರ್ಗವ್

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ