ಅತ್ತ ಗಂಡೂ ಅಲ್ಲದೆ, ಇತ್ತ ಹೆಣ್ಣು ಅಲ್ಲದೆ ಮಂಗಳಮುಖಿಯರ ವಾಸ್ತವಿಕ ಜೀವನ ಅತೀ ಕಠೋರವಾದುದು. ಇಂಥವರ ಆಂತರಿಕ ಬದುಕಿನ ಕುರಿತಾಗಿ ಒಂದು ಕಿರು ನೋಟ ಇಲ್ಲಿದೆ......!
``ಸುಮೀ.... ಸುಮೀ....'' ಎಂದು ಒಂದೇ ಸಮನೆ ಸುಶೀಲಮ್ಮ ಕೂಗುತ್ತಲೇ ಇದ್ದರು. ಸುಮಿ ಹಿಂದಿನ ದಿನ ತಾನೇ ಚಿಕ್ಕಪ್ಪನ ಮನೆಯಿಂದ ರಜೆ ಮುಗಿಸಿಕೊಂಡು ಬಂದಿದ್ದಳು. ಸುಮಿಗೆ ಚಿಕ್ಕಪ್ಪನ ಮನೆಯಲ್ಲಿ ಫ್ರಿಜ್, ವಾಷಿಂಗ್ ಮೆಷಿನ್, ಮಿಕ್ಸಿ, ತರಾವರಿ ಅಡುಗೆ, ಪ್ರತಿನಿತ್ಯ ಸ್ನಾನ..... ಹೀಗೆ ಅಭ್ಯಾಸವಾಗಿಬಿಟ್ಟಿತ್ತು. ಇಲ್ಲಿ ಮನೆಗೆ ವಾಪಸ್ ಬಂದರೆ ಅದೇ ಬಿಂದಿಗೆ ತೆಗೆದುಕೊಂಡು ಬಾವಿಯಿಂದ ನೀರು ಸೇದಿ ಹೊರುವುದು, ಅಮ್ಮ ಹಸಿ ಸೌದೆ ಒಲೆಗೆ ಇಟ್ಟು ಉರಿ ಹಾಕಿ ಕಣ್ಣೆಲ್ಲಾ ಕೆಂಪಗೆ ಮಾಡಿಕೊಂಡು ಹಂಡೆಯಲ್ಲಿ ನಮಗೆಲ್ಲಾ ವಾರಕ್ಕೊಮ್ಮೆ ನೀರು ಕಾಯಿಸುತ್ತಿದ್ದರು.
ಅವಳ ಅಪ್ಪನಿಗೆ ಮನೆಗೆ ದಿನಸಿ ತರುವುದು ಎಂದರೆ ಭಾರಿ ಲೆಕ್ಕಾಚಾರ. ಸುಮಿಗೆ ಖಾರ, ಸಿಹಿ ತಿಂಡಿ ತಿನ್ನುವಾಸೆ. ಹಾಗೆಯೇ ಸಾರು ಪಲ್ಯಕ್ಕೆ ತಾನೇ ರುಬ್ಬುವ ಕಲ್ಲಿನಿಂದ ಮಸಾಲೆ ತಿರುವಬೇಕಿತ್ತು. ಬಟ್ಟೆ ತೊಳೆಯಬೇಕೆಂದರೆ ಮೈಲಿ ದೂರ ಹೋಗಿ ಬಾವಿಯಿಂದ ನೀರು ಸೇದಿ ಬಟ್ಟೆ ತೊಳೆದು ತರಬೇಕಿತ್ತು.
ಆದರೆ ಚಿಕ್ಕಪ್ಪನ ಮನೆಯಲ್ಲಿ ಎಲ್ಲಾ ಅಚ್ಚುಕಟ್ಟಾದ ವ್ಯವಸ್ಥೆ ನೋಡಿ ಬಂದವಳಿಗೆ, `ನಾನು ಯಾಕಾದ್ರೂ ನಮ್ಮನೆಗೆ ವಾಪಸ್ಸು ಬಂದೆನೋ...' ಎಂದೆನಿಸಿ ಪೆಚ್ಚುವೋರೆ ಹಾಕಿಕೊಂಡು ಯೋಚಿಸುತ್ತಾ ಕುಳಿತಿದ್ದಳು. ಹಾಗಾಗಿ ಅವರಮ್ಮ ಎಷ್ಟು ಸಾರಿ ಕೂಗಿದರೂ ಅದು ಅವಳ ತಲೆಗೆ ಹೋಗಿರಲಿಲ್ಲ.
``ಸುಮೀ.... ಒಲೆ ಮೇಲೆ ಅಕ್ಕಿ ಹಾಕಿದ್ದೀನಿ.... ಎಲ್ಲಾ ಉಕ್ಕಿ ಹೋಗಿದೆ, ಬಸಿ ಬಾ.....'' ಎಂದು ಸುಶೀಲಮ್ಮ ಜೋರಾಗಿ ಗದರಿಸಿದರು.
ಚಿಕ್ಕಪ್ಪನ ಮನೆಯಲ್ಲಿ ಗ್ಯಾಸ್ ಸ್ಟವ್ ಮೇಲೆ ಕುಕ್ಕರಿನಲ್ಲಿ ಬೇಯುತ್ತಿದ್ದ ಅನ್ನವನ್ನು ನೋಡಿ ಬೆರಗಾಗಿದ್ದಳು. ಇಲ್ಲಿ ಅರ್ಧಂಬರ್ಧ ಹಸಿ ಸೌದೆಯಲ್ಲಿ ಬೇಯಿಸುತ್ತಿದ್ದ ಅನ್ನ. ಅನ್ನ ಬೆಂದ ಮೇಲೆ ಸಾರಿಗೆ ಕಾಳು, ಸೊಪ್ಪು ಬೇಯಿಸಲು ಇಡಬೇಕು. ಇಂತಹ ಪರಿಸ್ಥಿತಿಯಲ್ಲಿ ಸುಮಿಯ ಜೀವನ ಸಾಗುತ್ತಿತ್ತು.
ಸುಮಿಯ ವಿಚಿತ್ರವಾದ ಫ್ರೆಂಡ್
ಸುಮಿ ಶಾಲೆಗೆ ಹೋಗುತ್ತಿದ್ದಾಗ ಅವಳಿಗೆ ಒಬ್ಬ ಗೆಳತಿ ಇದ್ದಳು. ಅವಳ ಹೆಸರು ಜ್ಞಾನವಿ, ಅವಳು ತುಂಬಾ ಸುಂದರವಾಗಿದ್ದಳು. ಅವಳ ಅಣ್ಣ ಸಂಜಯ್ ತಂಗಿಗಿಂತ ಸ್ಛುರದ್ರೂಪಿ. ಅವನು 9ನೇ ತರಗತಿಯಲ್ಲಿ ಓದುತ್ತಿದ್ದ. ಅವನು ಆ ವಯಸ್ಸಿನಲ್ಲಿಯೇ ಸಹಜವಾಗಿ ಎಲ್ಲರೊಂದಿಗೆ ಬೆರೆಯುತ್ತಾ, ಹಾಡುತ್ತಾ..... ಕುಣಿಯುತ್ತಾ ಸಂತಸದಿಂದ ಇರುತ್ತಿದ್ದವು.
ಆಂತರಿಕ ಬದಲಾವಣೆ
10ನೇ ತರಗತಿಗೆ ಬರುವ ಹೊತ್ತಿಗೆ ಅವನಲ್ಲಿ ಭಾವನೆಗಳು ಬದಲಾಗುತ್ತಾ ಹೋದವು. ತಂಗಿಯ ಬಳೆಗಳನ್ನು ಹಾಕಿಕೊಳ್ಳುವುದು, ಅವಳಿಲ್ಲದಿದ್ದಾಗ ಅವಳ ಉಡುಪುಗಳನ್ನು ಹಾಕಿಕೊಂಡು ಕನ್ನಡಿಯಲ್ಲಿ ನೋಡುವುದು, ಕಣ್ಣಿಗೆ ಕಾಡಿಗೆ ಹಚ್ಚಿಕೊಳ್ಳುವುದು ಹೀಗೆ.....
ಮೊದ ಮೊದಲು ಸುಮಿಯ ಗೆಳತಿ ಅವನು ಈಗೀಗ ವಿಚಿತ್ರವಾಗಿ ವರ್ತಿಸುತ್ತಿದ್ದಾನೆ ಎಂದು ಗಲಿಬಿಲಿಗೊಂಡು ಅಣ್ಣನನ್ನು ಬೈಯುತ್ತಿದ್ದಳು. ತಾನು ಇಲ್ಲದಿದ್ದಾಗ ತನ್ನ ಉಡುಪುಗಳನ್ನು ಏಕೆ ಹಾಕಿಕೊಳ್ಳಬೇಕು, ತನ್ನ ವಸ್ತುಗಳನ್ನು ಏಕೆ ಉಪಯೋಗಿಸಬೇಕು ಎಂದು ಸಿಡುಕುತ್ತಿದ್ದಳು.
ಆದರೆ ದಿನೇ ದಿನೇ ಸಂಜಯ್ ನ ಮನಸ್ಸಿನಲ್ಲಿ ಹೆಣ್ಣಿನಲ್ಲಿ ಇರಬೇಕಾದ ಆಸೆ, ಭಾವನೆಗಳು ಹೆಚ್ಚಾಗ ತೊಡಗಿದವು. ತರಗತಿಯಲ್ಲಿ ಹುಡುಗರ ಬದಲಾಗಿ ಹುಡುಗಿಯರ ಜೊತೆಗೆ ಹೆಚ್ಚಾಗಿ ಬೆರೆಯತೊಡಗಿದ. ಇದನ್ನು ಕಂಡು ಹುಡುಗರೆಲ್ಲಾ ಗೇಲಿ ಮಾಡಿ ನಗಲು ಪ್ರಾರಂಭಿಸಿದರು. ಆದರೂ ಅವನಿಗೆ ತನ್ನಲ್ಲಿ ಆಗುತ್ತಿರುವ ಬದಲಾವಣೆ, ಭಾವನೆಗಳನ್ನು ಹತ್ತಿಕ್ಕಲಾಗದೆ ಒದ್ದಾಡುತ್ತಿದ್ದ.





