ಕಥೆ - ಶೇಖರಗೌಡ ವೀ.ಸ.
ಹರೆಯದ ಹುಚ್ಚುಖೋಡಿ ಮನಸ್ಸು ಹೇಗೆಲ್ಲಾ ಚಂಚಲವಾಗುತ್ತದೆ ಎಂಬುದಕ್ಕೆ ಸುಧನ್ವ-ದೇಬಶ್ರೀ ಮತ್ತು ಹಿಮಾಂಶು-ಪ್ರಶಾಂತಿ, ಪ್ರವಾಸಕ್ಕೆ ಬಂದು ಬೀಚ್ ನಲ್ಲಿ ಮೈಮರೆತರು. ಮುಂದೆ ಇವರುಗಳು ತಳೆದ ನಿರ್ಧಾರವಾದರೂ ಏನು.......?
ಶ್ರೀ ಜಗನ್ನಾಥ ಸ್ವಾಮಿ ನೆಲೆಸಿರುವ ಪುರಿ ನಗರದ ಬಂಗಾಳ ಉಪಸಾಗರದ ತಟದ ಬೀಚಿನಲ್ಲಿ ತಲ್ಲೀನರಾಗಿ ತಮ್ಮದೇ ಆದ ವರ್ಣರಂಜಿತ ಭಾವನಾ ಲೋಕದಲ್ಲಿ ಜನತೆ ಮುಳುಗಿತ್ತು. ತಮ್ಮ ಪುಟಾಣಿ ಮಕ್ಕಳೊಂದಿಗೆ ಬಂದಿರುವ ಗಂಡಹೆಂಡತಿಯರು, ಹಿರಿಯ ಸದಸ್ಯರೊಂದಿಗೆ ಬಂದಿರುವ ಕುಟುಂಬದವರು, ಸ್ನೇಹಿತರೊಂದಿಗೆ ಬಂದಿರುವ ಹುಡುಗರು, ಸ್ನೇಹಿತ, ಸ್ನೇಹಿತೆಯರೊಂದಿಗೆ ಬಂದಿರುವ ಹುಡುಗ ಹುಡುಗಿಯರು ತಮ್ಮದೇ ಆದ ಖುಷಿಯ ಕ್ಷಣಗಳಲ್ಲಿ, ಮೋಜುಮಸ್ತಿಯಲ್ಲಿ ನಿರತರಾಗಿದ್ದರು.
ಸೋಲಾ ಸಿಂಗಾರ ಮಾಡಿಕೊಂಡಿರುವ ಒಂಟೆಗಳ ಮೇಲೆ ತಮ್ಮ ಜೀವನದ ಕಣ್ಮಣಿಗಳಾದ ಪುಟಾಣಿ ಮಕ್ಕಳನ್ನು ಕೂಡ್ರಿಸಿಕೊಂಡು ಸಮುದ್ರ ತಟದ ಜಿನುಗು ಉಸುಗಿನ ಮೇಲೆ ಸವಾರಿ ಮಾಡುತ್ತಿದ್ದ ಕೆಲವು ಯುವ ದಂಪತಿಗಳು ಸಂತಸದ ಪರಾಕಾಷ್ಠೆ ಅನುಭವಿಸುತ್ತಿದ್ದರು. ಬಹಳಷ್ಟು ಜನ ಮಧ್ಯ ವಯಸ್ಕರು ಹೆಂಗಸರು, ಗಂಡಸರು ಎನ್ನುವ ಭೇದ ಭಾವ ಮರೆತು ಮೊಣಕಾಲಿನವರೆಗೆ ತಮ್ಮ ಪ್ಯಾಂಟು, ಸೀರೆ, ಚೂಡಿಗಳನ್ನು ಎತ್ತಿಕೊಂಡು ನೀರಿನ ಅಲೆಗಳ ತುಂಟಾಟದ ಸವಿಯ ಮತ್ತಿನಲ್ಲಿದ್ದರು.
ಕೆಳಗೆ ಬರೀ ಚೆಡ್ಡಿ, ಮೇಲೆ ಸಪೂರ ತೋಳುಗಳು, ಹೊಕ್ಕಳ ಸುಳಿ ಕಾಣುವಂಥ ಅರೆಬರೆ ದಿರಿಸುಗಳಲ್ಲಿ ಕೆಲವು ಹುಡುಗಿಯರು ಪಡ್ಡೆ ಹುಡುಗರ ಮನಸ್ಸುಗಳಿಗೆ ಪ್ರಚೋದನೆಯನ್ನೂ ನೀಡತೊಡಗಿದ್ದರು. ಹುಡುಗರೂ ನೇತ್ರಾನಂದ ಮಾಡಿಕೊಳ್ಳುತ್ತಾ ಮನದಣಿಯೆ ಸಂತಸ ಅನುಭವಿಸತೊಡಗಿದ್ದರು. ಒಂದಿಷ್ಟು ಯುವಕ ಯುವತಿಯರು ಸಮುದ್ರದಲ್ಲಿ ನೂರಾರು ಅಡಿಗಳವರೆಗೆ ನೀರಿನಲ್ಲಿ ಮುಂದೆ ಹೋಗಿ ಸಮುದ್ರಗಳಿಗೆ ತಮ್ಮನ್ನು ಒಡ್ಡಿಕೊಂಡು ಮೈ, ಬಟ್ಟೆಗಳನ್ನೆಲ್ಲಾ ಒದ್ದೆ ಮಾಡಿಕೊಂಡು ನೀರಾಟದಲ್ಲಿ ತೊಡಗಿ ಪರಸ್ಪರ ಸಂತಸ ಹಂಚಿಕೊಳ್ಳುತ್ತಾ, ಪರಸ್ಪರರ ದೈಹಿಕ ಸೌಂದರ್ಯದ ಆರಾಧನೆಯ ತುಂಟಾಟದಲ್ಲಿ ಜಗತ್ತನ್ನೇ ಮರೆತಿದ್ದರು.
ಹಲವಾರು ಹುಡುಗಿಯರು ಹುಡುಗರ ದೇಹದಾರ್ಢ್ಯದ ರೂಪು ರೇಷೆಗಳನ್ನು ವಾರೆ ನೋಟದಲ್ಲಿ ಸವಿಯುತ್ತಿದ್ದರೆ, ಹುಡುಗರು ಸಮುದ್ರದ ನೀರಿನಲ್ಲಿ ತೊಯ್ದು ತೊಪ್ಪೆಯಾಗಿದ್ದ ಹುಡುಗಿಯರ ದೇಹದ ಉಬ್ಬು ತಗ್ಗುಗಳನ್ನು ಕಣ್ಮನಗಳಲ್ಲಿ ತುಂಬಿಕೊಳ್ಳತೊಡಗಿದ್ದರೆ, ನವ ವಿವಾಹಿತರು, ಯುವ ಪ್ರೇಮಿಗಳು ತಮ್ಮ ಸಂಗಾತಿಗಳ ಸೌಂದರ್ಯದ ಆರಾಧನೆಯಲ್ಲಿ ನಿರತರಾಗಿದ್ದರು.
ಭುವನೇಶ್ವರದ ಪ್ರಸಿದ್ಧ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕೊನೆಯ ಸೆಮ್ ನಲ್ಲಿ ಓದುತ್ತಿದ್ದ ಸುಧನ್ವ-ದೇಬಶ್ರೀ ಹಾಗೂ ಹಿಮಾಂಶು-ಪ್ರಶಾಂತಿ ಎಂಬ ಯುವ ಜೋಡಿಗಳೆರಡು ಈಗಾಗಲೇ ಒಂದು ತಾಸಿನಿಂದ ಸಮುದ್ರದಲೆಗಳ ನವಿರು ಹೊಡೆತಗಳ ಸವಿಯನ್ನು ಮೈಮನಗಳಲ್ಲಿ ತುಂಬಿಕೊಳ್ಳುತ್ತಾ ತಮ್ಮನ್ನು ತಾವೇ ಮರೆತ್ತಿತ್ತು.
ಭುವನೇಶ್ವರದಿಂದ ಬರುವಾಗ ಕೋನಾರ್ಕದ ಪ್ರಸಿದ್ಧ ಸೂರ್ಯ ದೇವಾಲಯದ ಸೊಬಗನ್ನು ಕಣ್ಮನಗಳಲ್ಲಿ ತುಂಬಿಕೊಂಡೇ ಬಂದಿದ್ದರು. ಹದಿಮೂರನೇ ಶತಮಾನದಲ್ಲಿ ನಿರ್ಮಿಸಲಾಗಿರುವ 228 ಅಡಿಗಳ ಎತ್ತರದ ಭವ್ಯ ದೇವಾಲಯದಲ್ಲಿನ ದೊಡ್ಡ ದೊಡ್ಡ ಗಾತ್ರದ 24 ಗಾಲಿಗಳು ಮತ್ತು ಏಳು ಕುದುರೆಗಳ ಕಲ್ಲಿನ ವಿಗ್ರಹಗಳ ಜೊತೆಗೆ ಅಲ್ಲಲ್ಲಿ ಢಾಳವಾಗಿ ಚಿತ್ರಿಸಿದ್ದ ವಿವಿಧ ಭಂಗಿಗಳ ಮಿಥುನ ಶಿಲ್ಪಗಳ ಕುತೂಹಲಕಾರಿ ದೃಶ್ಯಗಳನ್ನು ಕಳ್ಳನೋಟದಲ್ಲಿ ನೋಡುತ್ತಾ ಮನದಲ್ಲಿ ತುಂಬಿಕೊಂಡು ಬಂದಿದ್ದರು.





