ವ್ಯಂಗ್ಯ - ಕಲ್ಪನಾ ಪ್ರಭಾಕರ್ ಹೆಗಡೆ
ಬೆಂಗಳೂರಿನಂಥ ಮಹಾನಗರಿಯಲ್ಲಿ ಬಾಡಿಗೆ ಮನೆ ಹುಡುಕಿ, ಅದರಲ್ಲಿ ವಾಸಿಸುವುದು ಎಂಥ ಕಷ್ಟಕರ ಎಂಬುದನ್ನು ಅನುಭವಿಸಿಯೇ ತಿಳಿಯಬೇಕಲ್ಲವೇ....?
ಸೂರು, ಗೃಹ, ನಿಲಯ, ಗೂಡು, ಆಲಯ ಎಂದೆಲ್ಲ ಕರೆಯಿಸಿಕೊಳ್ಳುವ `ಮನೆ' ಮನುಷ್ಯನ ಕನಿಷ್ಠ ಅವಶ್ಯಕತೆಗಳಲ್ಲಿ ಒಂದು ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಕೇವಲ ಮನುಷ್ಯನಿಗೆ ಮಾತ್ರವಲ್ಲ ಪ್ರಾಣಿ, ಪಕ್ಷಿಗಳಿಗೂ ತಮ್ಮ ರಕ್ಷಣೆ, ವಿಶ್ರಾಂತಿಗೋಸ್ಕರ ಮನೆ ಅಥವಾ ಗೂಡಿನ ಅವಶ್ಯಕತೆ ಇದ್ದೇ ಇದೆ. ಇದು ಸ್ವಂತದ್ದೂ ಇರಬಹುದು ಅಥವಾ ಬಾಡಿಗೆಯದ್ದೂ ಇರಬಹುದು. ಎಲ್ಲರಿಗೂ ಸ್ವಂತ ಮನೆಯಲ್ಲೇ ವಾಸಿಸಬೇಕೆಂದರೆ ಅದು ಅಸಾಧ್ಯವಾದದ್ದು. ಹಣ ಜಾಗ ಎಂದೆಲ್ಲ ಅನುಕೂಲ, ಸಾಧ್ಯಗಳು ಇರಬೇಕಾಗುತ್ತದೆ. ಇಂತಹ ಸಮಯದಲ್ಲಿ ಬೇರೆಯವರು ಕಟ್ಟಿದ ಮನೆಯನ್ನು ಬಾಡಿಗೆಗೆ ತೆಗೆದುಕೊಳ್ಳುವುದು ಅನಿವಾರ್ಯ.
ಮೊನ್ನೆ ನನ್ನ ಗೆಳತಿ ಫೋನ್ ಮಾಡಿದ್ದಳು. ಮಾತಾಡ್ತಾ, ``ಈ ಬೆಂಗಳೂರು ಪೇಟೇಲಿ ಬಾಡಿಗೆ ಮನೇಲಿ ಇದ್ದು ಇದ್ದು ಬೇಸರ ಬಂದಿದೆ. ಈ ಓನರದ್ದು ತುಂಬಾ ಕಿರಿಕಿರಿ, ವರ್ಷ ವರ್ಷ ಬಾಡಿಗೆ ಏರಿಸ್ತಾರೆ. ವಾಟರ್ ಬಿಲ್ಲು, ಕರೆಂಟ್ ಬಿಲ್ಲು ಎಲ್ಲಾ ನಾವೇ ತುಂಬ್ಕೊಳ್ಳೋದು, ಮನೆಗೆ ಯಾರಾದ್ರೂ ಗೆಸ್ಟ್ ಬರೋ ಹಾಗಿಲ್ಲ ಓರೆಗಣ್ಣಿನಿಂದ ನೋಡ್ತಾರೆ, ಬೇಸಿಗೆ ಬರುವ ಮೊದಲೇ `ನೀರನ್ನು ಹದವಾಗಿ ಖರ್ಚು ಮಾಡ್ರೀ' ಅಂತ ಶುರು ಮಾಡ್ತಾರೆ.
``ಈಗೀಗ ಎದುರು ಬಂದಾಗ ಹೇಳೋದಕ್ಕೆ ಸಂಕೋಚವಾಗುತ್ತೆ ಅಂತ ಮೊಬೈಲ್ ನಲ್ಲಿ ಮೆಸೇಜ್ ಕಳಿಸೋಕೆ ಶುರು ಹಚ್ಚಿದ್ದಾರೆ. ಚಿಕ್ಕ ಸದ್ದಾದ್ರೂ ಕಿವಿ ನೆಟ್ಟಗೆ ಮಾಡಿ ಕೇಳ್ತಾರೆ, ಗೋಡೆಗೆ ಮೊಳಳೆ ಹೊಡೆಯೋ ಹಾಗಿಲ್ಲ, ಎಲ್ಲದಕ್ಕೂ ತಕರಾರು. ಅದ್ಕೇ ಚಿಕ್ಕದಾದ್ರೂ ಸರಿ, ಸಾಲವಾದ್ರೂ ಸರಿ ಪುಟ್ಟದಾದ ಪುಟ್ಟದಾದ ಒಂದು ಸೈಟು ನೋಡ್ತಾ ಇದ್ದೀವಿ ಕಣೇ....
``ಒಂದು ಸ್ವಂತ ಮನೆ ಮಾಡ್ಕೋಬೇಕು, ಗಂಜೀ ಉಂಡ್ರೂ ಗಂಡನ ಮನೆ ಲೇಸು ಅನ್ನೋ ಗಾದೆ ಹಾಂಗೇ ಚಿಕ್ಕದಾದ್ರೂ ಸರಿ ನಮ್ಮದೂ ಅಂತ ಸ್ವಂತ ಮನೆ ಇರ್ಬೇಕು, ನೆಮ್ಮದಿಯಿಂದ ಇರೋದಕ್ಕೆ ಆಗುತ್ತೆ,'' ಎಂದಿದ್ದಳು.
ನನಗೂ ಅವಳು ಹೇಳಿದ್ದು ಸರಿ ಎನಿಸಿತು.
ಅವರವರ ಸಮಸ್ಯೆ ಅವರಿಗೇ ಗೊತ್ತು. ಆದರೂ ನನಗೆ ತೋಚಿದಂತೆ, ``ನೀವು ಹೇಳಿದ್ದು ಹೌದು ಕಣೇ.... ಆದ್ರೆ ಎಲ್ಲರಿಗೂ ನಿಂತ ಕೈಗೆ ಸೈಟು ಮನೆ ಮಾಡ್ಕೋಳ್ಳೋಕೆ ಆಗಲ್ವಲ್ಲಾ..... ನಾವು ಮನುಷ್ಯರಾಗದೇ ಹಕ್ಕಿ ಪಕ್ಷಿಗಳಾಗಿದ್ರೆ ಎಷ್ಟು ಒಳ್ಳೆಯದಿತ್ತು. ``ಕಸಕಡ್ಡಿ ಎಲ್ಲಾ ತಂದು ಹೋದಲ್ಲೆಲ್ಲಾ ಒಂದು ಪುಟಾಣಿ ಗೂಡು ಕಟ್ಕೊಂಡು ಇರಬಹುದಿತ್ತು..... ಎಲ್ಲದಕ್ಕೂ ಕಾಲ ಕೂಡಿ ಬರಬೇಕಲ್ಲಾ..... ಆಗುತ್ತೆ ಬಿಡು,'' ಎಂದು ಸಮಾಧಾನ ಮಾಡಿದ್ದೆ.
ಅದೇ ಕ್ಷಣದಲ್ಲೇ ನಾವು ಹಳ್ಳಿಯಲ್ಲಿದ್ದರು. ಪುಣ್ಯವಂತ್ರು ಎಲ್ಲರಿಗೂ ಹೊಲ ತೋಟ ಇಲ್ಲದೇ ಇದ್ರೂ ನಮ್ದೂ ಅಂತ ಒಂದು ಚಿಕ್ಕ ಮನೆಯಾದ್ರೂ ಇರುತ್ತೆ ಎನಿಸಿತು.
ಈಗೆಲ್ಲಾ ಸಿಟಿಯಲ್ಲಿ ಒಂದು ದೊಡ್ಡ ಬಿಲ್ಡಿಂಗ್ ಕಟ್ಟಿ ಬಾಡಿಗೆಗೆ ಕೊಟ್ಟುಬಿಟ್ರೆ ಅದೊಂದು ಫಲ ಕೊಡುವ ಮರದ ಇದ್ದ ಹಾಗೆ ಅನ್ನೋದಕ್ಕಿಂತ ದುಡ್ಡಿನ ಗಿಡ ನೆಟ್ಟ ಹಾಗೆ ಎಂದರೆ ಸರಿ ಹೊಂದುತ್ತೆ. ತಿಂಗಳು ತಿಂಗಳು ದುಡ್ಡು ಬೆಳೆಯುತ್ತಿರುತ್ತದೆ. ಬ್ಯಾಂಕಿನಲ್ಲಿ ಹಣ ಇಟ್ಟು ಪ್ರತಿ ತಿಂಗಳೂ ಇಂಟ್ರೆಸ್ಟ್ ತಗೊಂಡಂತೆ. ಅದಕ್ಕೇ ಇತ್ತೀಚೆಗೆ ಜನರಿಗಿಂತ ಮನೆಗಳೇ ಜಾಸ್ತಿ ಕಾಣುತ್ತವೆ. ಕೆಲವರಿಗೆ ಇದೊಂದು ಸಾಧನೆಯ ಕೆಲಸ ಹೌದು. ಅದ್ಕೇ ಅಲ್ವೇ ಒಂದು ಸ್ವಂತ ಮನೆಗೋಸ್ಕರ ನಗರದ ಜನರು ಹಗಲು ರಾತ್ರಿ ಲೆಕ್ಕಿಸದೆ ಕೆಲಸ ಮಾಡ್ತಾರೆ, ಏನೆಲ್ಲಾ ಕಷ್ಟಪಡ್ತಾರೆ.





