ಸ್ಯಾಂಡಲ್‌ವುಡ್‌ನ ಹಿರಿಯ ನಟ ಅನಂತನಾಗ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪದ್ಮಭೂಷಣ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ನಟ ಅನಂತ್ ನಾಗ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪದ್ಮಭೂಷಣ ಪ್ರಶಸ್ತಿ ಪ್ರದಾನ ಮಾಡಿದರು.
ಸಿನಿ ಜಗತ್ತಿನ ಕಲಾ ಕ್ಷೇತ್ರದಲ್ಲಿ ಅನಂತ್ ನಾಗ್ ಅವರ ಮಹಾನ್ ಸಾಧನೆಗೆ ಭಾರತ ಸರ್ಕಾರದ ಅತ್ಯುನ್ನತ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಹಿಂದೆ ಪ್ರಶಸ್ತಿ ಘೋಷಣೆಯಾಗಿದ್ದಾಗ, ಅನಂತ್ ನಾಗ್ ಅವರು ಈ ಪ್ರಶಸ್ತಿ ಕರ್ನಾಟಕದವರಿಗೆ ಹಾಗೂ ಕನ್ನಡಿಗರಿಗೆ ಅರ್ಪಿಸಿದ್ದೇನೆ ಎಂದು ಹೇಳಿದ್ದರು.
1948ರ ಸೆ.4ರಂದು ಉತ್ತರ ಕನ್ನಡದ ಶಿರಳ್ಳಿ ಗ್ರಾಮದಲ್ಲಿ ಹುಟ್ಟಿದ ಅನಂತನಾಗ್, 1973ರ ಸಂಕಲ್ಪ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟವರು. ಕನ್ನಡದ ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ಅವರ ನಾ ನಿನ್ನ ಬಿಡಲಾರೆ, ಬಯಲುದಾರಿ, ಚಂದನದ ಗೊಂಬೆ, ಗಣೇಶನ ಮದುವೆ, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಗಾಳಿಪಟ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಮೋಘ್ನವಾಗಿ ಅಭಿನಯಿಸಿದ್ದಾರೆ.
2025ರ ಜನವರಿ 25 ರಂದು ಪದ್ಮಪ್ರಶಸ್ತಿಗಳನ್ನು ಘೋಷಣೆ ಮಾಡಿದ್ದ ಕೇಂದ್ರ ಸರ್ಕಾರ 7 ಪದ್ಮವಿಭೂಷಣ ಪ್ರಶಸ್ತಿಗಳನ್ನು ಘೋಷಣೆ ಮಾಡಿತ್ತು. ಇದರ ಜೊತೆಗೆ 19 ಪದ್ಮಭೂಷಣ, 113 ಪದ್ಮಶ್ರೀ ಪ್ರಶಸ್ತಿಗಳನ್ನು ಪ್ರಕಟಿಸಿತ್ತು. ವಿವಿಧ ಕ್ಷೇತ್ರಗಳಲ್ಲಿ ಕೊಡುಗೆ ನೀಡಿದವರನ್ನು ಗುರುತಿಸಿ ಈ ಪ್ರಶಸ್ತಿಗಳನ್ನು ಘೋಷಿಸಲಾಗಿತ್ತು. ಇಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನಂತ್ ನಾಗ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.