ಪರಿಮಳಾ ಜಗ್ಗೇಶ್ಡಯೆಟಿಶಿಯನ್ಶೆಫ್

ಒಂದು ಸಿನಿಮಾ ಮಾಡಿಬಿಡುವಂಥ ನೈಜ ಕಥೆ ಇವರದು. ಒಂದು ಅಪರೂಪದ ಲವ್ ಸ್ಟೋರಿ ಜಗ್ಗೇಶ್‌ ಮತ್ತು ಪರಿಮಳಾರದು. ಸ್ಕೂಲ್‌ನಲ್ಲಿದ್ದಾಗಲೇ ಪ್ರೀತಿಸಿ ಕಾಲೇಜು ಮೆಟ್ಟಿಲು ಹತ್ತುವಾಗಲೇ ಮದುವೆ, ಮದುವೆ ನಂತರ ಪತಿರಾಯ ಜಗ್ಗೇಶ್‌ರ ಪ್ರೋತ್ಸಾಹದಿಂದ ವಿದ್ಯಾಭ್ಯಾಸ ಮುಂದುವರಿಸಿ ಎಂಜಿನಿಯರಿಂಗ್‌ನಲ್ಲಿ ರಾಂಕ್‌ ಪಡೆದ ಗಟ್ಟಿ ಮಹಿಳೆ ಪರಿಮಳಾ ಜಗ್ಗೇಶ್‌. ಚಿಕ್ಕ ವಯಸ್ಸಿನಲ್ಲೇ ಇಬ್ಬರು ಗಂಡು ಮಕ್ಕಳ ಅಮ್ಮನಾಗಿ ಈಗ ಮುದ್ದಿನ ಮೊಮ್ಮಗನನ್ನು ಪಡೆದಿರುವ ಪರಿಮಳಾ, ಪ್ರಪಂಚದಲ್ಲೇ ತನ್ನಷ್ಟು ಸುಖಿ ಯಾರೂ ಇಲ್ಲ ಎನ್ನುವಷ್ಟು ಸಂತೋಷದಿಂದಿದ್ದಾರೆ.ಪರಿಮಳಾ ಸಾಹಸಿಗರು. ಕೈಯಲ್ಲಿ ಕಾರಿನ ಸ್ಟೇರಿಂಗ್‌ ಹಿಡಿದರೆ ರೇಸನ್ನು ಗೆಲ್ಲಬಲ್ಲರು. ರೆಕ್ಕೆ ಕಟ್ಟಿಕೊಂಡು ಆಕಾಶದಲ್ಲಿ ಹಾರಾಡಬಲ್ಲರು. ಅಸಾಧ್ಯ ಎನ್ನುವ ಪದವೇ ಇಲ್ಲ ಎನ್ನಬಹುದು ಈಕೆಯ ಡಿಕ್ಷನರಿಯಲ್ಲಿ. ಒಬ್ಬ ತಾರಾ ಪತ್ನಿಯಾಗಿದ್ದರೂ ಸಹ ಮನೆ, ಮಕ್ಕಳು, ಸಂಸಾರ ಅಂತ ಯಾವತ್ತೂ ಕಾಲಹರಣ ಮಾಡಿದವರಲ್ಲ. ಒಬ್ಬ ಉತ್ತಮ ಆರ್ಕಿಟೆಕ್ಟ್ ಆಗಿ ಫ್ರೀಲಾನ್ಸರ್‌ ಆಗಿ ಸುಮಾರು ವರ್ಷ ಕೆಲಸ ಮಾಡಿ ಸಾಧನೆ ಮಾಡಿದ ಕೀರ್ತಿ ಇವರದು.

ಹೊಸದು ಏನೇ ಇರಲಿ ಅದನ್ನು ಕಲಿಯಬೇಕೆಂಬ ಹಂಬಲ. ಜೊತೆಗೆ ಪತಿ ಜಗ್ಗೇಶರ ಪ್ರೋತ್ಸಾಹ, ಸ್ನೇಹಿತನಂತೆ ನಿಂತು ಬೆನ್ನು ತಟ್ಟುತ್ತಾ ಬಂದಿದ್ದಾರೆ.

ಇತ್ತೀಚೆಗೆ ಪರಿಮಳಾ ಬೇರೊಂದು ವಿಷಯಕ್ಕೆ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಡಯೆಟಿಶಿಯನ್‌ ಆಗಿ ತಮ್ಮದೇ ಆದ ಒಂದು ನ್ಯೂಟ್ರಿ ಅಫೇರ್‌ ಎಂಬ ಕೌನ್ಸಿಲಿಂಗ್‌ ಶುರು ಮಾಡಿಕೊಂಡಿದ್ದಾರೆ. ಇದೆಲ್ಲದರ ಬಗ್ಗೆ ಬಹಳ ಇಂಟರೆಸ್ಟ್ ಆಗಿರುವ ಸಂಗತಿಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

ನನಗೆ ನಾನೇ ಡಾಕ್ಟರ್ಆದೆ….

ನಾನು ಸುಮಾರು ಐದು ವರ್ಷದಿಂದ ಶುಗರ್‌ ತೊಂದರೆಯಿಂದ ಇನ್ಸುಲಿನ್‌ ತೆಗೆದುಕೊಳ್ಳುತ್ತಿದ್ದೆ. ಆದರೆ ನಾನೀಗ ನನ್ನ ನ್ಯೂಟ್ರಿಶಿಯನ್‌ನಿಂದ ನನ್ನ ವರ್ಕೌಟ್‌ನಿಂದ ಸಕ್ಕರೆ ಕಾಯಿಲೆಯಿಂದ ಹೊರಬಂದು ಒಂದೇ ಒಂದು ಮಾತ್ರೆಯಿಂದ ಈಗ ನಾನು ಆರೋಗ್ಯವಂತಳಾಗಿದ್ದೇನೆ. ಇದೆಲ್ಲ ಸಾಧ್ಯವಾಗಿದ್ದು ಅನುಭವದಿಂದ. ಸುಮಾರು ಹದಿನೈದು ವರ್ಷದಿಂದ ನಮ್ಮ ದೇಹದೊಳಗೆ ಏನೆಲ್ಲ ವ್ಯತ್ಯಾಸಗಳಾಗುತ್ತದೆ, ಏಕಾಗುತ್ತದೆ ಎನ್ನುವುದರ ಬಗ್ಗೆ ತುಂಬಾನೆ ಸ್ಟಡಿ ಮಾಡಿ, ತಿಳಿದುಕೊಂಡೆ. ಜೊತೆಗೆ ಸ್ಪೋರ್ಟ್ಸ್ ನ್ಯೂಟ್ರಿಶಿಯನ್‌, ಕ್ಲಿನಿಕ್‌ ನ್ಯೂಟ್ರಿಶಿಯನ್‌ ಕೋರ್ಸ್‌ಗಳನ್ನು ಮಾಡಿದೆ. ಇನ್ನು ನಾನೇ ಒಂದು ಕ್ಲಿನಿಕ್‌ ಮಾಡಿ ನ್ಯೂಟ್ರಿಶಿಯನ್ ತಂಡವಿರುವಂಥ ಒಂದು ಆರೋಗ್ಯವಂತ ವಾತಾರಣ ಸೃಷ್ಟಿ ಮಾಡಿದ್ದೇನೆ.

ಕಾಯಿಲೆ ಮುಕ್ತರಾಗೋದು ಹೇಗೆ?

ಮನುಷ್ಯನಿಗೆ ಕಾಯಿಲೆ ಬರೋದು ಸಹಜ. ಆದರೆ ಅದೇ ನಮ್ಮ ಕರ್ಮ ಅಂತ ಕೈಚೆಲ್ಲಿ ಕುಳಿತುಬಿಟ್ಟರೆ ಅವರು ತಮ್ಮ ಬದುಕನ್ನೇ ಹಾಳು ಮಾಡಿಕೊಳ್ಳುತ್ತಾರೆ. ಸ್ವಲ್ಪ ಎಚ್ಚರವಹಿಸಿ ನನ್ನ ಆಹಾರದಲ್ಲಿ ದೈನಂದಿನ ಚಟುವಟಿಕೆಗಳಲ್ಲಿ ಮಾನಸಿಕವಾಗಿ ದೈಹಿಕವಾಗಿ ಶ್ರಮಪಟ್ಟರೆ, ಕಾಯಿಲೆ ಮನುಷ್ಯ ಎನ್ನುವ ಹಣೆಪಟ್ಟಿಯಿಂದ ಖಂಡಿತ ಹೊರಬರಬಹುದು ಎಂಬುದನ್ನು ನಾನು ನನ್ನ ಮೇಲೆಯೇ ಪ್ರಯೋಗ ಮಾಡಿಕೊಂಡೆ. ನಾನು ಕಂಡುಕೊಂಡ ಈ ಕ್ರಮವನ್ನು ಬೇರೆಯವರು ಅನುಸರಿಸಲಿ, ಆರೋಗ್ಯವಂತರಾಗಿ ಜೀವನ ಸಾಗಿಸಲಿ ಎನ್ನುವ ಒಂದೇ ಕಾರಣಕ್ಕಾಗಿ ನಾನು ನನ್ನ ಕ್ಲಿನಿಕ್‌ಗೆ ನ್ಯೂಟ್ರಿ ಅಫೇರ್‌ ಅಂತ ಹೆಸರಿಟ್ಟೆ. ದೇಹ ಮತ್ತು ಆಹಾರದ ನಡುವೆ ಒಂದು ಉತ್ತಮವಾದ ಸ್ವಚ್ಛ ಸಂಬಂಧವಿದ್ದಾಗ ಮಾತ್ರ ಮನುಷ್ಯ ಒಂದು ಸುಂದರ, ಆರೋಗ್ಯವಂತ ಬದುಕನ್ನು ಸಾಗಿಸಲು ಸಾಧ್ಯ ಎಂದು ಕನ್‌ವಿನ್ಸ್ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ. ಇದನ್ನು ನಾನು ಹಣದ ಆಸೆಗಾಗಿ ಮಾಡುತ್ತಿಲ್ಲ. ಒಂದು ಸಮಾಜ ಸೇವೆ ಅಂತ ತಿಳಿದುಕೊಂಡಿದ್ದೇನೆ.

ಎಪ್ಪತ್ತು ವರ್ಷದ ವಯಸ್ಸಿನವರೊಬ್ಬರು ನನ್ನಿಂದ ಸಲಹೆ ಪಡೆದು, ಎದ್ದು ಓಡಾಡದೇ ಇದ್ದವರು ಇಂದು ಆರಾಮವಾಗಿ ವಾಕಿಂಗ್‌ಮಾಡಿಕೊಂಡಿದ್ದಾರೆ. ಅವರನ್ನು ನೋಡಿದಾಗ ಸಂತೋಷವಾಗುತ್ತದೆ, ಬದುಕು ಸಾರ್ಥಕ ಅನಿಸುತ್ತೆ.

ಜೀವನದಲ್ಲಿ ಎಲ್ಲ ಸಾಧ್ಯ. ಆದರೆ ಅದಕ್ಕೆ ಸರಿಯಾದ ಗೈಡೆನ್ಸ್ ಬೇಕಷ್ಟೆ.

ಇದೆಲ್ಲ ಹೇಗೆ ಶುರುವಾಯ್ತು…..?

ನನಗೆ ಸಕ್ಕರೆ ಕಾಯಿಲೆ ಇದೆ ಅಂತ ತಿಳಿದಾಗ ನಾನು ಮೊದಲು ಯೋಚಿಸಿದ್ದು ನನ್ನ ಕುಟುಂಬದವರ ಬಗ್ಗೆ. ನನಗೇನಾದರೂ ಹೆಚ್ಚು ಕಡಿಮೆಯಾದರೆ ಮನೆ, ಕುಟುಂಬದ ಗತಿ ಏನು? ಎನ್ನುವ ಚಿಂತೆ ಕಾಡತೊಡಗಿತು. ನಾನು ಹೇಗಾದರೂ ಮಾಡಿ ಇದರಿಂದ ಹೊರಬರಬೇಕು. ನನ್ನಿಂದ ಯಾರಿಗೂ ತೊಂದರೆಯಾಗಬಾರದು ಎಂದು ನಿರ್ಧರಿಸಿ ನಮ್ಮ ಡಾಕ್ಟರ್‌ ರಮಣರಾವ್‌ ಅವರಿಂದ ಏನೇನು ಮಾಡಬಾರದು ಎಂಬ ಲಿಸ್ಟ್ ಪಡೆದು ಅದನ್ನು ಬಹಳ ಸ್ಟ್ರಿಕ್ಟ್ ಆಗಿ ಫಾಲೋ ಮಾಡಿದೆ. ಸಿಕ್ಕಾಪಟ್ಟೆ ಸ್ಟಡೀ ಮಾಡಿದೆ. ಎಲ್ಲ ವೆಬ್‌ಸೈಟ್‌ಗಳನ್ನು ತಿರುವಿ ಹಾಕಿದೆ. ಆಗ ನನ್ನ ಗಮನಕ್ಕೆ ಬಂದದ್ದು ಒಂದೇ ಒಂದು. ಆಹಾರ… ಇದು ಸರಿಯಾದ ರೀತಿಯಲ್ಲಿ ನಮ್ಮ ದೇಹ ಸೇರದಿದ್ದರೆ ಕಾಯಿಲೆಗಳು ತಾನಾಗಿಯೇ ಬಂದು ಸೇರಿಸಿಕೊಳ್ಳುತ್ತವೆ ಎಂದು ತೀರ್ಮಾನಿಸಿಬಿಟ್ಟೆ. ನಾವು ಊಟದ ಜೊತೆ ಒಳ್ಳೆ ಸಂಬಂಧ ಇಟ್ಟುಕೊಂಡರೆ ಮಾತ್ರ ಅದು ನಿಮ್ಮನ್ನು ಕಾಪಾಡುತ್ತದೆ. ನಮ್ಮ ಆಹಾರ, ನಮ್ಮ ದೇಹ, ನಮ್ಮ ಜೀವನದ ಜೊತೆ ಯಾವಾಗ ಸಂಬಂಧ ಬೆಳೆಸಿಕೊಳ್ಳುತ್ತೇವೋ ಕೊನೆ ಉಸಿರು ಇರುವವರೆಗೂ ಆರೋಗ್ಯ ನಮ್ಮ ಜೊತೆ ಇರುತ್ತದೆ.

ಡಯೆಟ್ಅಂದ್ರೆ ಯಪ್ಪಾ…. ಅಂತಾರೆ….

ಹುಟ್ಟಿದಾಗಿನಿಂದ ತಿಂದು ಬದುಕಿ ಬಾಳುತ್ತೇವೆ. ದುಡ್ಡು ಕೊಟ್ಟು ಹೋಟೆಲ್‌ಗೆ ಹೋಗಿ ತಿಂದು ಬರುತ್ತೇವೆ. ಹೆಚ್ಚು ಕಡಿಮೆಯಾಯಿತು ಅಂದರೆ ಡಯೆಟ್‌ ಡಯೆಟ್‌ ಅಂತ ಶುರುವಾಗುತ್ತದೆ. ಸಪ್ಪೆ ಊಟ, ಖಾರವಿಲ್ಲ, ಸ್ವೀಟ್‌ ಇಲ್ಲ. ಯಪ್ಪಾ ಇದೇನು ಬಂತಪ್ಪ ಅಂತ ಅರ್ಧ ಸತ್ತೇ ಹೋಗಿಬಿಡುತ್ತಾರೆ. ಡಯೆಟ್‌ ಅಂದಾಕ್ಷಣ ಸಪ್ಪೆ, ರುಚಿ ಇಲ್ಲದ ಆಹಾರ ಅಂತ ಬಹಳ ಜನ ತಪ್ಪು ತಿಳಿವಳಿಕೆಯಿಂದ ಸಾಗುತ್ತಿದ್ದಾರೆ.

ಹೆಲ್ದಿ ಫುಡ್‌ನತ್ತ ಒಲವು ತೋರಿದರೆ ಡಯೆಟ್‌ ಪದ ತಾನಾಗಿಯೇ ಓಡಿಹೋಗುತ್ತೆ. ನಾವು ಏನೇ ತಿಂದರೂ ಅದು ಹೆಲ್ದಿಯಾದ ಆಹಾರವಾಗಿರಬೇಕು ಎಂದಷ್ಟೇ ನಾವು ನಮ್ಮ ನ್ಯೂಟ್ರಿ ಅಫೇರ್‌ ಕ್ಲಿನಿಕ್‌ನಲ್ಲಿ ಹೇಳ್ತೀವಿ. ನಾವೇ ತಯಾರಿಸಿ ಕೊಡ್ತೀವಿ. ಬಹಳ ಜನರಿಗೆ ತುಂಬಾ ಇಷ್ಟವಾಗ್ತಿದೆ. ಉಪಯೋಗ ಆಗುತ್ತಿದೆ. ನಾವು ಡಯೆಟ್‌ ಮಾಡುತ್ತಿದ್ದೇವೆ ಎನ್ನುವ ಕೊರಗೂ ಸಹ ಇಲ್ಲವಾಗಿದೆ.

ನನ್ನ ಬಳಿ ಬರುವವರಿಗೆ ಸಂಪೂರ್ಣ ಮಾಹಿತಿ ಕೊಟ್ಟು ಅವರು ತಮ್ಮ ಇಡೀ ಕುಟುಂಬವನ್ನು ಉತ್ತಮ ಆರೋಗ್ಯದಿಂದ ಕಾಪಾಡಿಕೊಂಡು ಹೋಗುವಷ್ಟು ತಯಾರು ಮಾಡುತ್ತೇನೆ. ಪ್ರಯಾಣ ಮಾಡುವಾಗ ಎಂಥಾ ಆಹಾರ ತೆಗೆದುಕೊಂಡು ಹೋಗಬೇಕು. ಒಂದು ಡಿನ್ನರ್‌ಗೆ ಹೋದರೆ ಏನು ತಿನ್ನಬೇಕು? ಇಂಥದ್ದನ್ನೆಲ್ಲ ನಾನು ಎಲ್ಲರಿಗೂ ಉಚಿತ ಸಲಹೆ ಕೊಡುತ್ತಿರುತ್ತೇನೆ.

ತೂಕ ಇಳಿಕೆ….

ಕೆಲವರಲ್ಲಿ ತಪ್ಪು ಕಲ್ಪನೆ ಇದೆ. ನಾವು ತೂಕ ಇಳಿಸಿಬಿಟ್ಟರೆ ಹೆಚ್ಚು ಹೆಲ್ದಿಯಾಗಿರುತ್ತೀವಿ ಅಂತ. ಅದು ಶುದ್ಧ ತಪ್ಪು. ಹಿರಿಯರು ಹೇಳಿದ್ದಾರಲ್ಲ…… ಊಟ ಬಲ್ಲವನಿಗೆ ರೋಗವಿಲ್ಲ ಅಂತ. ಅದನ್ನೇ ಸರಿಯಾಗಿ ಫಾಲೋ ಮಾಡಬೇಕಷ್ಟೆ. ಮಾನಸಿಕ ಒತ್ತಡ ಕೂಡ ಕಾಯಿಲೆಗೆ ಕಾರಣವಾಗುತ್ತದೆ. ತಮ್ಮ ಆರೋಗ್ಯದತ್ತ ಗಮನ ಕೊಡದೆ ಉದಾಸೀನ ಮಾಡುವುದು, ಡಾಕ್ಟರ್‌ ಬಳಿ ಚೆಕಪ್‌ಗೆ ಹೋಗದೆ ಇರುವುದು ಕೂಡಾ ಅವರು ಮಾಡುವ ದೊಡ್ಡ ತಪ್ಪು.

ಕಿರುತೆರೆಯಲ್ಲೂ ಸಾಧನೆ

ನನಗೆ ತಿಳಿದಿರುವ ಒಂದಷ್ಟು ವಿಚಾರವನ್ನು ದೂರ ದೂರದಲ್ಲಿರುವವರಿಗೂ ತಲುಪಲಿ ಎಂಬ ಒಂದೇ ಕಾರಣಕ್ಕೆ ನಾನು ಈಗ ಕಿರುತೆರೆಯಲ್ಲೂ ಕಾಣಿಸಿಕೊಳ್ಳುತ್ತಿದ್ದೇನೆ. ಮೊದಲ ಬಾರಿಗೆ ತೆರೆ ಮೇಲೆ ಬರುವುದಕ್ಕೆ ಕಾರಣ ಝೀ ಟಿ.ವಿ.ಯವರು. `ಒಗ್ಗರಣೆ ಡಬ್ಬಿ’ ಕಾರ್ಯಕ್ರಮದಲ್ಲಿ ವಾರಕ್ಕೆರಡು ದಿನ ನಾನು ನ್ಯೂಟ್ರಿಶಿಯನ್‌ ಫುಡ್‌ ಹೇಗೆ ತಯಾರಿಸಬೇಕು ಎಂಬುದನ್ನು ಮಾಡಿ ತೋರಿಸುತ್ತೇನೆ. ಒಂದು ನಯಾ ಪೈಸೆ ಸಂಭಾವನೆ ಪಡೆಯದೇ ನಾನು ಈ ಕಾರ್ಯಕ್ರಮ ನಡೆಸಿಕೊಡ್ತಿದ್ದೀನಿ. ಹೆಚ್ಚು ಹೆಚ್ಚು ಜನ ಉಪಯೋಗ ಪಡೆದುಕೊಳ್ಳಲಿ ಎಂಬುದಷ್ಟೇ ನನ್ನ ಉದ್ದೇಶ.

ಒಂದಿಷ್ಟು ಟಿಪ್ಸ್

ವೈಜ್ಞಾನಿಕವಾಗಿ ಹೇಳುವುದಾದರೆ ಒಂದು ದಿನಕ್ಕೆ ಎಷ್ಟು ನೀರು ಸೇವಿಸಿದರೆ ಒಳ್ಳೆಯದು? ನಮ್ಮ ದೇಹ ಅರವತ್ತು ಪರ್ಸೆಂಟ್‌ನಷ್ಟು ನೀರಿನಿಂದ ತುಂಬಿದೆ. ಅದಕ್ಕೆ ತಕ್ಕ ಹಾಗೆ ನೀರು ಸೇವಿಸಲೇಬೇಕಾಗುತ್ತದೆ. ಅದರ ಬಗ್ಗೆ ಯಾರೂ ಅಷ್ಟು ಪ್ರಾಮುಖ್ಯತೆಯೇ ಕೊಡುತ್ತಿಲ್ಲ. ಉದಾಹರಣೆ 60 ಕೆ.ಜಿ. ತೂಕ ಇರುವವರು ಪ್ರತಿನಿತ್ಯ ಎರಡು ಲೀಟರ್‌ ನೀರು ಕುಡಿಯಬೇಕು.

ರುಚಿಯಾದ ಊಟ ಸೇವಿಸುವುದು ಹೇಗೆ ಎಂಬುದನ್ನು ನಾನು ತಿಳಿಸಿಕೊಡುತ್ತಿದ್ದೇನೆ. ಸಾಮಾನ್ಯ ಜನರನ್ನು ತಲುಪಲು ಒಂದು ಒಳ್ಳೆಯ ಮಾಧ್ಯಮ ಸಿಕ್ಕಿದೆ. ನನ್ನಿಂದ ಸಾಧ್ಯವಾದದ್ದು ಈ ರೀತಿ ಸಹಾಯ ಮಾಡಲು ಬಯಸುತ್ತೇನೆ.

ಸರಸ್ವತಿ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ