ಬಾಲ್ಯದಲ್ಲಿ ಅಜ್ಜ-ಅಜ್ಜಿಯರು ಹೇಳುತ್ತಿದ್ದ “ನಿಧಿ ಸಿಕ್ಕ ಕಥೆಗಳು”, “ಗುಪ್ತಧನ”, “ರಾಜರ ಖಜಾನೆ” ಎಂಬ ಕಥೆಗಳನ್ನು ಕೇಳಿ ಬೆಳೆದವರು ನಾವು. ಹಳೆಯ ಕೋಟೆಗಳು, ಅರಮನೆಗಳು ಅಥವಾ ನೆಲದಾಳದಲ್ಲಿ ಚಿನ್ನದ ಪೆಟ್ಟಿಗೆಗಳು ಸಿಗುತ್ತವೆ ಎಂಬ ಕಥೆಗಳು ಕೇವಲ ಕಾಲ್ಪನಿಕ ಎಂದು ಬಹುತೇಕರು ಭಾವಿಸುತ್ತಾರೆ. ಆದರೆ, ಕೆಲವೊಮ್ಮೆ ನಿಜ ಜೀವನವೇ ಕಥೆಗಳಿಗಿಂತ ವಿಚಿತ್ರವಾಗಿರುತ್ತದೆ. ಅಂತಹ ಅಚ್ಚರಿಯ ಘಟನೆಯೊಂದು ಇತ್ತೀಚೆಗೆ ಆಸ್ಟ್ರಿಯಾದ ರಾಜಧಾನಿ ವಿಯೆನ್ನಾ (Vienna) ನಗರದಲ್ಲಿ ನಡೆದಿದೆ. ಸಾಮಾನ್ಯ ಪ್ಲಂಬರ್ ಒಬ್ಬನ ಬದುಕನ್ನೇ ಬದಲಾಯಿಸಿದ ಈ ಘಟನೆ ಈಗ ವಿಶ್ವದಾದ್ಯಂತ ಸುದ್ದಿಯಾಗಿದೆ.
ಹಗ್ಗವೊಂದು ಬದಲಿಸಿತು ಅದೃಷ್ಟ

ವಿಯೆನ್ನಾದ ಪೆನ್ಜಿಂಗ್ (Penzing) ಪ್ರದೇಶದಲ್ಲಿರುವ ಹಳೆಯ ಬಂಗಲೆಯೊಂದರಲ್ಲಿ ನೆಲಮಾಳಿಗೆಯ ನವೀಕರಣ ಕಾಮಗಾರಿ ನಡೆಯುತ್ತಿತ್ತು. ಸುಮಾರು 15 ವರ್ಷಗಳಿಂದ ಕಟ್ಟಡ ಕಾಮಗಾರಿಗಳಲ್ಲಿ ಕೆಲಸ ಮಾಡುತ್ತಿದ್ದ ಪ್ಲಂಬರ್ ಒಬ್ಬರು ಎಂದಿನಂತೆ ತಮ್ಮ ಕೆಲಸದಲ್ಲಿ ತೊಡಗಿದ್ದರು. ಅಷ್ಟರಲ್ಲಿ ಕಾಂಕ್ರೀಟ್ ನೆಲದ ಬದಿಯಿಂದ ಹೊರಗೆ ಕಾಣಿಸುತ್ತಿದ್ದ ಒಂದು ಹಳೆಯ ಹಗ್ಗ ಅವರ ಗಮನ ಸೆಳೆಯಿತು. ಕುತೂಹಲದಿಂದ ಅವರು ಅದನ್ನು ಎಳೆದರು. ಆದರೆ ಅದು ಸುಲಭವಾಗಿ ಹೊರಬರಲಿಲ್ಲ. ಏನೋ ದೊಡ್ಡ ವಸ್ತುವಿಗೆ ಕಟ್ಟಿರುವಂತೆ ಅನುಭವವಾಯಿತು. ಅದಾದ ನಂತರ ಗುದ್ದಲಿ ಮತ್ತು ಪಿಕಾಸಿ ಸಹಾಯದಿಂದ ನೆಲವನ್ನು ಅಗೆದಾಗ, ಅಲ್ಲಿ ತುಕ್ಕು ಹಿಡಿದಿದ್ದ ಹಳೆಯ ಲೋಹದ ಪೆಟ್ಟಿಗೆ ಕಾಣಿಸಿಕೊಂಡಿತು.ಪೆಟ್ಟಿ
ಪೆಟ್ಟಿಗೆಯೊಳಗೆ ಏನಿತ್ತು?
ಆ ಹಳೆಯ ಪೆಟ್ಟಿಗೆಯೊಳಗೆ ಇದ್ದದ್ದು ಸಾಮಾನ್ಯ ವಸ್ತುಗಳಲ್ಲ. ಅದರೊಳಗೆ ಸುಮಾರು 30 ಕಿಲೋಗ್ರಾಂ ತೂಕದ ಚಿನ್ನದ ನಾಣ್ಯಗಳು ಅಚ್ಚುಕಟ್ಟಾಗಿ ತುಂಬಿಕೊಂಡಿದ್ದವು. ತಜ್ಞರ ಅಂದಾಜಿನ ಪ್ರಕಾರ, ಈ ಚಿನ್ನದ ನಿಧಿಯ ಒಟ್ಟು ಮೌಲ್ಯ ಸುಮಾರು 2.4 ಮಿಲಿಯನ್ ಅಮೆರಿಕನ್ ಡಾಲರ್, ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು ₹20 ರಿಂದ ₹21 ಕೋಟಿ. ಒಂದು ಕ್ಷಣದಲ್ಲೇ ಸಾಮಾನ್ಯ ಪ್ಲಂಬರ್‌ನ ಜೀವನವೇ ಬದಲಾಗುವಂತಹ ಘಟನೆ ಇದಾಗಿತ್ತು.
ಈ ನಾಣ್ಯಗಳ ವಿಶೇಷತೆ ಏನು?

ಈ ನಾಣ್ಯಗಳನ್ನು ಆಸ್ಟ್ರಿಯಾದ ಪುರಾತತ್ವ ತಜ್ಞರು ಹಾಗೂ ನಾಣ್ಯಶಾಸ್ತ್ರಜ್ಞರು ಪರಿಶೀಲಿಸಿದಾಗ ಹಲವು ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬಂದವು.
- ಈ ನಾಣ್ಯಗಳು ಎರಡನೇ ಮಹಾಯುದ್ಧಕ್ಕೂ (1939–1945) ಮುಂಚಿನ ಅವಧಿಗೆ ಸೇರಿದವು.
- ಪ್ರತಿಯೊಂದು ನಾಣ್ಯದ ಮೇಲೂ ವಿಶ್ವಪ್ರಸಿದ್ಧ ಸಂಗೀತ ಸಂಯೋಜಕ ವೋಲ್ಫ್‌ಗಾಂಗ್ ಅಮಾಡಿಯಸ್ ಮೊಜಾರ್ಟ್ (Mozart) ಅವರ ಭಾವಚಿತ್ರ ಕೆತ್ತಲಾಗಿತ್ತು.
- ಹಲವು ನಾಣ್ಯಗಳು ಅತ್ಯುತ್ತಮ ಸ್ಥಿತಿಯಲ್ಲಿ ಸಂರಕ್ಷಿತವಾಗಿದ್ದವು.
- ಕೆಲವು ನಾಣ್ಯಗಳು ಸಂಗ್ರಾಹಕರ ದೃಷ್ಟಿಯಲ್ಲಿ ಅತ್ಯಂತ ಅಪರೂಪದ ಮಾದರಿಗಳಾಗಿವೆ.
ಇದರಿಂದಾಗಿ ಅವುಗಳ ಮೌಲ್ಯ ಸಾಮಾನ್ಯ ಚಿನ್ನಕ್ಕಿಂತ ಹಲವು ಪಟ್ಟು ಹೆಚ್ಚಾಗಿದೆ.
“ಇದು ನನ್ನ ಕನಸಿನಲ್ಲೂ ಇರಲಿಲ್ಲ”
ಈ ಘಟನೆ ಬಳಿಕ ಜರ್ಮನ್ ದೂರದರ್ಶನ ವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿದ ಪ್ಲಂಬರ್ ಹೀಗೆ ಹೇಳಿದರು:
“ನಾನು 15 ವರ್ಷದವನಿದ್ದಾಗಿನಿಂದ ಕಟ್ಟಡ ಕಾಮಗಾರಿಗಳಲ್ಲಿ ಕೆಲಸ ಮಾಡುತ್ತಿದ್ದೇನೆ. ಕೆಲವೊಮ್ಮೆ ಹಳೆಯ ನಾಣ್ಯಗಳು ಸಿಕ್ಕಿರುವುದುಂಟು. ಆದರೆ ಇಷ್ಟೊಂದು ದೊಡ್ಡ ಪ್ರಮಾಣದ ಚಿನ್ನದ ನಿಧಿ ಸಿಗುತ್ತದೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲ.”
ನಿಧಿ ಯಾರಿಗೆ ಸೇರಲಿದೆ?

ಈ ಕಥೆಯ ಅತ್ಯಂತ ಕುತೂಹಲಕಾರಿ ಭಾಗ ಇಲ್ಲಿದೆ. ನಿಧಿ ಸಿಕ್ಕ ಮನೆ ಪ್ಲಂಬರ್‌ಗೆ ಸೇರಿದ್ದಲ್ಲ. ಆದರೂ ಆಸ್ಟ್ರಿಯಾದ ಕಾನೂನಿನ ಪ್ರಕಾರ, ಇಂತಹ ಪುರಾತನ ನಿಧಿ ಪತ್ತೆಯಾದರೆ ಅದನ್ನು ಆಸ್ತಿ ಮಾಲೀಕ ಮತ್ತು ನಿಧಿಯನ್ನು ಪತ್ತೆಹಚ್ಚಿದ ವ್ಯಕ್ತಿ ಸಮಾನವಾಗಿ ಹಂಚಿಕೊಳ್ಳಬೇಕು.





