ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟಿರುವುದು ಅತ್ಯಂತ ದುಃಖಕರ ವಿಚಾರ. ಇಂತಹ ಘಟನೆಗಳು ಆಗಬಾರದಿತ್ತು. ನನಗೂ ಇದರಿಂದ ಆಘಾತವಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಕಾಪೌಂಡ್ ಗೋಡೆ ಕುಸಿದು ಏಳು ಮಂದಿ ಮೃತಪಟ್ಟ ಹಾಗೂ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಬೌರಿಂಗ್ ಆಸ್ಪತ್ರೆಗೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಬುಧವಾರ ರಾತ್ರಿ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
ಏಳು ಜನ ಮೃತಪಟ್ಟಿದ್ದು, ಅದರಲ್ಲಿ 4 ಜನ ಬೀದಿ ಬದಿ ವ್ಯಾಪಾರಿಗಳು, ಇಬ್ಬರು ಕೇರಳದವರು. ಒಂದು ಮಗು ಸಾವನ್ನಪ್ಪಿದ್ದು, ಒಬ್ಬರ ಗುರುತು ಇನ್ನೂ ಸಿಕ್ಕಿಲ್ಲ. ಚಪ್ಪಲಿ ವ್ಯಾಪಾರಿ, ಬಟ್ಟೆ ವ್ಯಾಪಾರಿ ಮೃತಪಟ್ಟಿದ್ದಾರೆ. ಪ್ರವಾಸಕ್ಕೆ ಕೇರಳದಿಂದ ಬಂದವರು ಮೃತಪಟ್ಟಿದ್ದಾರೆ ಎಂದರು.
ಮರಗಳು, ಕೊಂಬೆಗಳು ಬಿದ್ದು ವಾಹನಗಳಿಗೂ ಹಾನಿಯಾಗಿದೆ. ನಾಳೆಯಿಂದಲೇ ದುರ್ಬಲ ಕೊಂಬೆಗಳನ್ನು ತೆರವುಗೊಳಿಸಲು ನಾನು ನಿರ್ದೇಶಿಸಿದ್ದೇನೆ. ನಗರದಲ್ಲಿ ನೂರಕ್ಕೂ ಹೆಚ್ಚು ಕಡೆ ಮರಗಳು ಬಿದ್ದಿದ್ದು, ಅಪಾಯಕಾರಿಯಾಗಿರುವ ಮರ ಹಾಗೂ ಕೊಂಬೆಗಳನ್ನು ಗುರುತಿಸಿ, ತೆರವುಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿರುವೆ. ನಾನು ಕನಕಪುರದಿಂದ ಮರಳುವಾಗಲೂ ಅನೇಕ ಕಡೆಗಳಲ್ಲಿ ಮರ ಬಿದ್ದಿರುವುದನ್ನು ಗಮನಿಸಿದೆ ಎಂದರು.
ಮುಖ್ಯಮಂತ್ರಿಗಳು ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ್ದಾರೆ. ಇಲ್ಲಿ ಪರಿಹಾರಕ್ಕಿಂತ ಈ ಅಪಘಾತ ಸಂಭವಿಸಬಾರದಿತ್ತು. ಕೇರಳದ ಕುಟುಂಬಶ್ರೀ ಎನ್ನುವ ಸಂಸ್ಥೆಯ ಮುಖಾಂತರ 56 ಮಂದಿ ಪ್ರವಾಸಕ್ಕೆ ಬಂದಿದ್ದಾರೆ. ಕಮರ್ಷಿಯಲ್ ಸ್ಟ್ರೀಟ್ ಅಲ್ಲಿ ಶಾಪಿಂಗ್ ಗೆ ಬಂದಿದ್ದರು.
ಆಗ ಮಳೆ ಬಂದಿದೆ. ಎಲ್ಲರಿಗೂ ಎಚ್ಚರಿಕೆ ನೀಡಿದ್ದಾರೆ. ಆಗ ಅವರು ಮಳೆಯಿಂದ ರಕ್ಷಣೆ ಪಡೆಯಲು ಗೋಡೆ ಪಕ್ಕ ಹೋಗಿದ್ದಾರೆ. ಆಗ 8 ಅಡಿ ಎತ್ತರದ ಗೋಡೆ ಕುಸಿದು ಮೃತಪಟ್ಟಿದ್ದಾರೆ. ಪ್ರೀತಿ, ಶೈಜಾ, ಶಿಜು ಎನ್ನುವ ಮೂವರು ಗಾಯಗೊಂಡಿದ್ದರು, ಈಗ ಚೇತರಿಸಿಕೊಂಡಿದ್ದಾರೆ ಎಂದರು.
ಲತಾ ಮತ್ತು ಸ್ಪೃತಿ ಮೃತಪಟ್ಟಿದ್ದು, ಇವರೆಲ್ಲಾ ನ್ಯೂಟ್ರಿಷಿಯನ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದವರು. ಸರ್ಕಾರದ ಅಧಿಕಾರಿಗಳು ಸಹ ಇವರ ಜೊತೆ ಬಂದಿದ್ದಾರೆ. ಕೇರಳ ಸರ್ಕಾರಕ್ಕೂ ನಾವು ಮಾಹಿತಿ ನೀಡುತ್ತೇವೆ. ಶವ ಪರೀಕ್ಷೆ ನಡೆಸಿ ಇಲ್ಲಿಂದಲೇ ಗೌರವಯುತವಾಗಿ ಅವರನ್ನು ಕಳಿಸಿಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಇದು ಅತ್ಯಂತ ಹಳೆಯ ಗೋಡೆಯಾಗಿದ್ದು, ಈ ಘಟನೆ ನಡೆದಿರುವುದು ದುರ್ದೈವ. ಈ ದುರಂತ ಬಹಳ ನೋವು ತಂದಿದೆ. ಈ ಬಗ್ಗೆ ತನಿಖೆ ಮಾಡಿ ವರದಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ವರದಿಗಳ ಪ್ರಕಾರ ಬೆಂಗಳೂರು ಮಳೆಗೆ 8 ಸಾವು ಸಂಭವಿಸಿದೆ. ವೆಗಾ ಸಿಟಿ ಮಾಲ್ ಬಳಿ ಒಂದು ಸಾವು ಸಂಭವಿಸಿದೆ" ಎಂದರು.





