ಬಹುತೇಕ ಮಹಿಳೆಯರ ಜೀವನ ಮದುವೆಯ ನಂತರ ಬದಲಾಗಿಬಿಡುತ್ತದೆ. ಕೆಲವರು ತಮ್ಮ ಸಂಸಾರ, ಮಕ್ಕಳು, ಸ್ವಲ್ಪ ಬಿಡುವಿನ ವೇಳೆಯಲ್ಲಿ ಟಿ.ವಿ. ಕಿಟಿ ಪಾರ್ಟಿಗಳು ಇತ್ಯಾದಿಗಳಲ್ಲೇ ಸಮಯ ಕಳೆದುಬಿಡುತ್ತಾರೆ. ಮತ್ತೆ ಕೆಲವರಿಗೆ ಏನೋ ಮಾಡುವ ಆಸೆ. ಆದರೆ ಅದನ್ನು ತೀರಿಸಿಕೊಳ್ಳಲು ಸಾಧ್ಯವಾಗಿರುವುದಿಲ್ಲ. ಈ ಎರಡೂ ಸನ್ನಿವೇಶಗಳನ್ನು ಗೆದ್ದು ನಾನೇನನ್ನಾದರೂ ಸಾಧಿಸಲೇಬೇಕು ಎನ್ನುವ ಛಲ ಕೆಲವರದು.ಈ ನಿಟ್ಟಿನಲ್ಲಿ ರಶ್ಮಿ ಜಯ್‌ ತಮ್ಮ ವೈವಾಹಿಕ ಜೀವನವನ್ನು ಯಶಸ್ವಿಯಾಗಿ ನಿರ್ವಹಿಸಿ ಅದರ ಜೊತೆ ವೈಯಕ್ತಿಕವಾಗಿ ತಮ್ಮ ಆಸೆಗಳನ್ನೂ ಪೂರೈಸಿಕೊಳ್ಳುತ್ತಾ, ಜೊತೆಗೆ ಸಮಾಜದಲ್ಲಿ ತಮ್ಮನ್ನು ಗುರುತಿಸುವಂತಹ ಕೆಲಸಗಳನ್ನು ಮಾಡಿದ್ದಾರೆ.

ಇವರಿಗೆ ತಮ್ಮ ಫಿಟ್ನೆಸ್‌ ಬಗ್ಗೆ ಬಹಳ ಕಾಳಜಿ. ಹೀಗಾಗಿ ತಮ್ಮ ಬಿಡುವಿನ ಸಮಯದಲ್ಲಿ ಝುಂಬಾ ಕ್ಲಾಸಿಗೆ ಸೇರಿಕೊಂಡರು. ಅವರು ತಮ್ಮನ್ನು ತಾವು ಫಿಟ್‌ ಮಾಡಿಕೊಂಡಿದ್ದೇ ಅಲ್ಲದೆ, ಮಿಕ್ಕವರಿಗೂ ಹೇಳಿಕೊಡುವಷ್ಟು ಪರಿಣಿತರಾದರು. ಈಗ ಪ್ರಸ್ತುತ ಸಂದೀಪ್‌ ಸ್ಟುಡಿಯೋ ಝುಂಬಾ ಫಿಟ್ನೆಸ್‌ ಸೆಂಟರಿನಲ್ಲಿ ತರಬೇತಿ ನೀಡುವ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇದರ ಜೊತೆ ಇವರ ಮತ್ತೊಂದು ಪ್ರೀತಿಯ ವಿಷಯ ಅಂದರೆ, ವಿಧ ವಿಧವಾದ ಅಡುಗೆಗಳನ್ನು ಮಾಡುವುದು. ಅನೇಕ ಆನ್‌ಲೈನ್‌ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. ಅನೇಕ ಪ್ರತಿಷ್ಠಿತ ಹೋಟೆಲ್‌ಗಳ ರೆಸ್ಟೋರೆಂಟ್‌ಗಳಲ್ಲಿ ಮಾಡುವ ತಿನಿಸುಗಳನ್ನು ವಿಮರ್ಶೆ ಮಾಡುವ ಕಾರ್ಯ ನಿರ್ವಹಿಸುತ್ತಿದ್ದಾರೆ. ಅನೇಕ ಅಡುಗೆ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ ಪಾಲ್ಗೊಂಡಿದ್ದಾರೆ. ಮಾಸ್ಟರ್‌ ಶೆಫ್‌ ವಿಜೇತೆ ಶಾಝಿಯಾ ಖಾನ್‌ರವರ ಕುಕ್ಕಿಂಗ್‌ ಶೋಗೆ ವಿಶೇಷ ಆಹ್ವಾನಿತರಾಗಿ ಹೋಗಿದ್ದಾರೆ. ದೇಸಿ ಸ್ವಾಗ್‌ ಫ್ಯಾಷನ್‌ ಈವೆಂಟ್‌ನಲ್ಲಿ ತೀರ್ಪುಗಾರ್ತಿಯಾಗಿ, ಮೈಸೂರಿನ ಸೇಂಟ್‌ ಫಿಲೋಮಿನಾ ಕಾಲೇಜಿನಲ್ಲಿ ಮಾಡೆಲ್‌ ಫೋಟೋಗ್ರಫಿ ಸ್ಪರ್ಧೆಯ ಜಡ್ಜ್ ಆಗಿ, ಶ್ರೀವಿದ್ಯಾ ಗುರುಕುಲದಲ್ಲಿ ಚರ್ಚಾ ಸ್ಪರ್ಧೆಯ ತೀರ್ಪುಗಾರ್ತಿಯಾಗಿ ಭಾಗಹಿಸಿದ ಹೆಗ್ಗಳಿಕೆ ಇವರದು.

ಈ ರೀತಿ ಅನೇಕ ಸಾರ್ಜನಿಕ ಕಾರ್ಯಕ್ರಮಗಳಲ್ಲಿ ಆಹ್ವಾನಿತರಾಗಿದ್ದಾರೆ. ಇಷ್ಟೆಲ್ಲಾ ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರೂ ಯಶಸ್ವಿಯಾಗಿ ತಮ್ಮ ಮನೆಯನ್ನು ನಿರ್ವಹಿಸಿದ್ದಾರೆ ಕೂಡಾ. ಇವೆಲ್ಲದರ ಜೊತೆ ಇಷ್ಟೆಲ್ಲಾ ನೀಡಿದ ಸಮಾಜಕ್ಕೆ ನಾನೇನಾದರೂ ಮಾಡಬೇಕೆನ್ನುವ ಆಸೆ ಕೂಡಾ. ಇವರ ಆಸೆಗೆ ನೀರುಣಿಸಿದ್ದು ಆಶಾ ಇನ್ಛಿನೈಟ್‌ ಫೌಂಡೇಶನ್ನಿನ  ಸಿ.ಇ.ಓ ಮೀರಾ ರಮಣರವರು. ಮೈಸೂರು ವಿಭಾಗದ ಸೆಂಟರ್‌ ಹೆಡ್‌ ಆಗಿ ಅಲ್ಲಿನ ಸಂಜೀವಯ್ಯ ಮೆಮೋರಿಯಲ್ ಶಾಲೆಯಲ್ಲಿನ ಮಕ್ಕಳಿಗೆ ಮತ್ತಷ್ಟು ಸ್ವಯಂ ಸೇವಕಿಯರೊಡನೆ ಇಂಗ್ಲಿಷ್‌ ಭಾಷೆಯನ್ನೂ ಕಲಿಸುತ್ತಿದ್ದಾರೆ.

ಆ ಮಕ್ಕಳ ಜೊತೆಗಿನ ಕಾಯಕ ಅವರಿಗೆ ನಿಜಕ್ಕೂ ಸಂತಸ ನೀಡುತ್ತದೆ ಎನ್ನುತ್ತಾರೆ. ಆ ಮಕ್ಕಳಿಗಾಗಿ ಒಂದು ಚಂದದ ಗ್ರಂಥಾಲಯವನ್ನು ರೂಪಿಸಿದ್ದಾರೆ. ಒಟ್ಟಾರೆ ತಮ್ಮ ಜೀವನದಲ್ಲಿ ಅಂದುಕೊಂಡದ್ದನ್ನೆಲ್ಲಾ ಸಾಧಿಸಿದ ಧನ್ಯತೆಯ ಭಾವ ರಶ್ಮಿ ಅವರದು. ಇವರ ಎಲ್ಲ ಕಾರ್ಯಗಳಿಗೂ ಇವರ ಪತಿ ಮತ್ತು ಮಕ್ಕಳ ಸಹಕಾರವಿದೆ ಎನ್ನುತ್ತಾರೆ.

– ಮಂಜುಳಾ ರಾಜ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ