ಕಳೆದ ನವೆಂಬರ್ ನಲ್ಲಿ ನಮ್ಮ 21ನೇ ವಿವಾಹವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಿಕೊಂಡಾಗ ಎಲ್ಲಿಯಾದರೂ ದೂರದ ಪ್ರದೇಶಕ್ಕೆ ಪ್ರವಾಸಕ್ಕೆ ಹೋಗೋಣ ಎಂದು ನಿರ್ಧರಿಸಿದಾಗ ಹಲವಾರು ಪ್ರದೇಶಗಳು ನಮ್ಮ ಮನಸ್ಸಿಗೆ ಬಂದು ಅಂತಿಮವಾಗಿ ಥೈಲ್ಯಾಂಡ್ ದೇಶಕ್ಕೆ ಹೋಗುವಂತೆ ನಿರ್ಧರಿಸಲಾಯಿತು. ಥೈಲ್ಯಾಂಡ್ ಪ್ರವಾಸಕ್ಕೆ ಹೋಗುವ ಬಗೆಗೆ ಒಂದಿಬ್ಬರು ಸ್ನೇಹಿತರನ್ನು ವಿಚಾರಿಸಿದರೆ, ಅವರಿಂದ ಸಕಾರಾತ್ಮಕ ಸ್ಪಂದನೆಗಿಂತ ಒಂದು ರೀತಿಯ ಕುಹಕಾತ್ಮಕ ಸ್ಪಂದನೆಯೇ ಬಂದಿತು. ಈ ವಯಸ್ಸಿನಲ್ಲಿ, ನೀವೂ ಅದೂ ಸಂಸಾರ ಸಮೇತರಾಗಿ ಥೈಲ್ಯಾಂಡಿಗೆ ಹೋಗುವುದು ಉಚಿತವಲ್ಲ. ಅದರಲ್ಲೂ ಸಸ್ಯಹಾರಿಗಳಿಗೆ ಅಲ್ಲಿ ಊಟೋಪಚಾರಗಳು ಸರಿಹೊಂದುವುದಿಲ್ಲ. ಅಲ್ಲಿಯ ಜನರು ಸುಖಾಸುಮ್ಮನೆ ಮೈಮೇಲೆ ಬಿದ್ದು ಕಾಡುತ್ತಾರೆ. ಕಳ್ಳಕಾಕರು ಹೆಚ್ಚು ಎಂದು ಹೀಗೆ ಹಾಗೆ ಭಯ ಪಡಿಸಿದ್ದೇ ಹೆಚ್ಚು. ಹೇಗೂ ಥೈಲ್ಯಾಂಡಿಗೆ ಹೋಗುವುದೆಂದು ನಿರ್ಧರಿಸಿಯಾಗಿದೆ. ಲಕ್ಷಾಂತರ ಜನ ಭಾರತೀಯರು ಪ್ರವಾಸಿಗರಾಗಿ ಹೋಗುತ್ತಿದ್ದಾರೆ. ಕೋಶ ಓದಿ ನೋಡು. ದೇಶ ಸುತ್ತಿ ನೋಡು ಎನ್ನುವಂತೆ ಥೈಲ್ಯಾಂಡ್ ಪ್ರವಾಸವೇನೋ ನಿರ್ಧರಿಸಿಯಾಗಿದೆ ಅಲ್ಲಿಗೆ ಹೋಗಿ ನೋಡೇ ಬಿಡುವ ಎಂದು ತೀರ್ಮಾನಿಸಿಯೇ ಬಿಟ್ಟೆವು. ಹೇಗೂ ಥೈಲ್ಯಾಂಡಿಗೆ ಹೋಗುತ್ತಿದ್ದೇವೆ. ನಮ್ಮ ಪ್ರವಾಸದ ಪ್ರತೀ ಕ್ಷಣದ ಅನುಭವವನ್ನು ಎಲ್ಲರೊಂದಿಗೆ ಹಂಚಿಕೊಂಡಲ್ಲಿ ಮುಂದೆ ಥೈಲ್ಯಾಂಡ್ ಪ್ರವಾಸಕ್ಕೆ ಹೋಗುವವರಿಗೆ ಅನುಕೂಲವಾಗಲಿ ಎಂದೇ ಈ ಲೇಖನ.
ಬೆಂಗಳೂರಿನಿಂದ ಬ್ಯಾಂಕಾಕ್ ದೂರ : ವಿಮಾನದಲ್ಲಿ ಸುಮಾರು 2500 kilometers.
ಪ್ರಯಾಣದ ಸಮಯ : ವಿಮಾನದಲ್ಲಿ ಸುಮಾರು 3 ಗಂಟೆ 45 ನಿಮಿಷಗಳು.
ಯಾವ ಯಾವ ವಿಮಾನಗಳಲ್ಲಿ ಹೋಗಬಹುದು : ಭಾರತದ ಎಲ್ಲಾ ಪ್ರಮುಖ ನಗರಗಳಿಂದಲೂ ಥೈಲ್ಯಾಂಡಿನ ಪ್ರಮುಖ ನಗರಗಳಿಗೆ ಅನೇಕ ವಿಮಾನ ಸಂಸ್ಥೆಗಳ ನೇರವಾದ ವಿಮಾನಗಳಿವೆ. ಆದರೆ ಕಡಿಮೆ ದರ ಇರುವ ಕಾರಣ ಪ್ರವಾಸಿಗರು ಹೆಚ್ಚಾಗಿ Air Asia thai & GoAir ಬಳಸುತ್ತಾರೆ.
ಸಾಮಾನು ಸರಂಜಾಮು : ಭಾರತದಿಂದ ಥೈಲ್ಯಾಂಡ್ ಬಹಳ ಹತ್ತಿರವಿರುವ ಕಾರಣ ಅಂತರಾಷ್ಟ್ರೀಯ ವಿಮಾನಗಳಲ್ಲಿ ಪ್ರತಿಯೊಬ್ಬರಿಗೂ 10-15KG ಯಷ್ಟು ಮಾತ್ರವೇ ಸಾಮಾನು ಸರಂಜಾಮುಗಳನ್ನು ತೆಗೆದು ಕೊಂಡು ಹೋಗ ಬಹುದಾದ ಕಾರಣ, ಅದಷ್ಟೂ ಕಡಿಮೆ ಸಾಮಾನುಗಳನ್ನು ತೆಗೆದುಕೊಂಡು ಹೋಗುವುದು ಉತ್ತಮ.
ಥೈಲ್ಯಾಂಡಿಗೆ ಹೋಗುವ ವ್ಯವಸ್ಥೆ : ಸಾಧಾರಣವಾಗಿ ಬಹುತೇಕರು ಯಾವುದಾದರೂ ಯಾವುದೇ ತೊಂದರೆ ಇರಬಾರದೆಂದು ಟ್ರಾವೆಲ್ಸ್ ಮುಖಾಂತರವೋ ಇಲ್ಲವೇ ನಾನಾ ರೀತಿಯ online travels portal ಮುಖಾಂತರ ಪ್ರವಾಸವನ್ನು ಬುಕ್ ಮಾಡುತ್ತಾರೆ. ಇಲ್ಲಿ ಯಾವುದೇ ಟ್ರಾವೆಲ್ಸ್ ಮುಖಾಂತರ ಬುಕ್ ಮಾಡಿದರೂ ಥೈಲ್ಯಾಂಡಿನಲ್ಲಿ ಆವರೆಲ್ಲರೂ ಸ್ಥಳೀಯ ಟೂರ್ ಏಜೆಂಟ್ಸ್ ಗಳನ್ನೇ ಅವಲಂಭಿಸಿರುತ್ತಾರೆ. ಹಾಗಾಗಿ ಇಲ್ಲಿಂದ ಅಲ್ಲಿಗೆ ಹೋಗುವವರೆಲ್ಲರನ್ನೂ ಕೆಲವೇ ಬೆರಳೆಣಿಕೆಯ ಟ್ರಾವಲ್ಸ್ ಕಂಪನಿಗಳು ಅವರವರ ಹೋಟೆಲ್ಲಿನಿಂದ ನೇರವಾಗಿ ಕರೆದುಕೊಂಡು ಒಟ್ಟಾಗಿ ಗುಂಪು ಗುಂಪಾಗಿ ಪ್ರವಾಸವನ್ನು ಮಾಡಿಸುತ್ತಾರೆ.
ಆದರೆ ಪ್ರವಾಸ ಸ್ವಲ್ಪ ರೋಚಕವಾಗಿರಲಿ ಎಂದು ಸ್ವಲ್ಪ ಹೆಚ್ಚಿನ ಶ್ರಮ ಮತ್ತು ಆಸ್ಥೆ ವಹಿಸುವವರು ಇಲ್ಲಿಂದಲೇ ಎಲ್ಲವನ್ನೂ online booking ಮಾಡಿ ಸ್ವಂತವಾಗಿಯೂ ಹೋಗಬಹುದು. ಹೀಗೆ ಮಾಡುವುದರಿಂದ 15-20% ಹಣವನ್ನು ಉಳಿಸಬಹುದಾದರೂ ಸ್ವಲ್ಪ ರಿಸ್ಕ್ ತೆಗೆದು ಕೊಳ್ಳಬೇಕಾಗಬಹುದು ಮತ್ತು ಎಲ್ಲವೂ ನಾವು ಅಂದು ಕೊಂಡಂತೆ ನಡೆಯದೆಯೂ ಇರಬಹುದು.





