ಎಲ್ಪಿಜಿ ಹೊತ್ತ ವಿದೇಶಿ ಹಡಗು ಭಾನುವಾರ ನವ ಮಂಗಳೂರು ಬಂದರಿಗೆ ಬಂದು ತಲುಪಿದೆ. ಕಚ್ಚಾ ತೈಲ ಹೊತ್ತ ಇನ್ನೊಂದು ಹಡಗು ಭಾನುವಾರ ರಾತ್ರಿಯೇ ಮಂಗಳೂರು ತಲುಪಿದ್ದು, ಇನ್ನೂ ನಾಲ್ಕು ಹಡಗುಗಳು ಆಗಮಿಸುತ್ತಿವೆ.
ರಷ್ಯಾ ಮೂಲದ “ಅಕ್ವಾ ಟೈಟಾನ್” ಹಡಗು ಶನಿವಾರ ರಾತ್ರಿ ಮಂಗಳೂರು ಬಂದರಿಗೆ ಬಂದಿದ್ದು, ಭಾನುವಾರ ಮಂಗಳೂರು ರಿಫೈನರಿ ಅಂಡ್ ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ ಗೆ 96, 099.80 ಟನ್ ಕಚ್ಚಾ ತೈಲವನ್ನು ಇಳಿಸಿದೆ. ಈ ಹಡಗು 96 ಸಾವಿರ ಟನ್ ತೈಲವನ್ನು ಹೊತ್ತು ಚೀನಾದತ್ತ ಹೊರಟಿತ್ತು. ಆದರೆ ಭಾರತದಿಂದ ರಷ್ಯಾಕ್ಕೆ ತೈಲಕ್ಕೆ ಬೇಡಿಕೆ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಬೆಳವಣಿಗೆಯಿಂದ ಚೀನಾಕ್ಕೆ ಹೊರಟಿದ್ದ ಈ ಟ್ಯಾಂಕರ್ ಭಾರತದ ಕಡೆಗೆ ಹೊರಟು ಮಂಗಳೂರಿಗೆ ಆಗಮಿಸಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನು ಜನವರಿ ಅಂತ್ಯದಲ್ಲಿ ಬಾಲ್ಟಿಕ್ ಬಂದರಿನಿಂದ ಲೋಡ್ ಮಾಡಲಾಗಿತ್ತು. ಈ ಟ್ಯಾಂಕರ್ ಎಂಆರ್ಪಿಎಲ್ ಜೆಟ್ಟಿಗೆ ಬಂದಿದ್ದು, ಅಲ್ಲಿಂದ ತೈಲವನ್ನು ಭೂಗತ ತೈಲ ಸಂಗ್ರಹಾಲಯದಲ್ಲಿ ಶೇಖರಿಸಲಾಗಿದೆ.
ಇನ್ನು ಸಿಂಗಪುರ ಧ್ವಜ ಹೊಂದಿರುವ ಪೈಕ್ಸಿಸ್ ಪಯೋನಿಯರ್ ಹೆಸರಿನ ಹಡಗು ಒಟ್ಟು 47, 236 ಟನ್ ಎಲ್ ಪಿಜಿ ಹೊತ್ತು ತಂದಿದೆ. ಇದು ಅಮೆರಿಕದ ಟೆಕ್ಸಾಸ್ ನ ನೆದರ್ ಲ್ಯಾಂಡ್ ಬಂದರಿನಿಂದ ಫೆ. 14 ರಂದು ಪ್ರಯಾಣ ಆರಂಭಿಸಿತ್ತು. ನವ ಮಂಗಳೂರು ಬಂದರಿನಲ್ಲಿ ಈ ಹಡಗಿನಿಂದ 16, 714 ಟನ್ ಎಲ್ ಪಿಜಿಯನ್ನು ಏಜೆಸ್ ಲಾಜೆಸ್ಟಿಕ್ಸ್ ಲಿಮಿಟೆಡ್ ಇಳಿಸಲಾಗಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಗೆ ಎಲ್ ಪಿಜಿ ಪೂರೈಕೆಗಾಗಿ ಇನ್ನೂ ನಾಲ್ಕು ಹಡಗುಗಳು ನವ ಮಂಗಳೂರು ಬಂದರಿಗೆ ಆಗಮಿಸಲಿವೆ ಎಂದು ಮೂಲಗಳು ತಿಳಿಸಿವೆ.





