ಮಕ್ಕಳಿಗೆ ಒಂದೆರಡಲ್ಲ, ಹಲವು ಹನ್ನೊಂದು ಪೌಷ್ಟಿಕಾಂಶಗಳ ಅಗತ್ಯವಿದೆ. 2 ವರ್ಷಗಳವರೆಗೂ ಮಕ್ಕಳಿಗೆ ತಾಯಿಯಿಂದ ಸ್ತನ್ಯಪಾನ ಅತ್ಯಗತ್ಯ. ಸ್ತನ್ಯಪಾನ ನಿಲ್ಲುತ್ತಿದ್ದಂತೆ ಅವರಿಗೆ ಎಲ್ಲಾ ಪೌಷ್ಟಿಕಾಂಶಗಳೂ ಹೊರಗಿನ ಆಹಾರದಿಂದಲೇ ದೊರೆಯಬೇಕು. ಅವರ ದೇಹ ಈಗ ಬಹು ಬೇಗ ಬೆಳೆಯುತ್ತಿರುವುದರಿಂದ, ಅವರಿಗೆ ಮ್ಯಾಕ್ರೋ ಮೈಕ್ರೋ ನ್ಯೂಟ್ರಿಯೆಂಟ್ಸ್ ಎರಡೂ ಅಗತ್ಯ.
ಮೈಕ್ರೋ ನ್ಯೂಟ್ರಿಯಂಟ್ಸ್
ವಿಟಮಿನ್ಸ್ ಎ : ಮಗುವಿನ ದೇಹದ ಜೀವಕೋಶಗಳ ಸಹಜ ಚಟುವಟಿಕೆ ಮತ್ತು ಉತ್ತಮ ಬೆಳಣಿಗೆಗೆ ವಿಟಮಿನ್ಸ್ ಅತ್ಯಗತ್ಯ. ಪ್ರತಿ ವಿಟಮಿನ್‌ಗೂ ನಮ್ಮ ದೇಹದಲ್ಲಿ ಮಹತ್ವಪೂರ್ಣ ಪಾತ್ರವಿದೆ. ಮಕ್ಕಳ ದೇಹದಲ್ಲಿ ವಿಟಮಿನ್ಸ್ ಕೊರತೆಯಿಂದ ಹಲವು ಆರೋಗ್ಯ ಸಮಸ್ಯೆಗಳು ಕಾಡಬಹುದು. ಅದರಿಂದಾಗಿ ಅವರ ಬೆಳವಣಿಗೆ ತಗ್ಗಬಹುದು. ವಿಟಮಿನ್ ಮಕ್ಕಳ ಮೂಳೆಗಳ ಬೆಳವಣಿಗೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಜೀವಕೋಶ, ಅಂಗಾಂಶ ಹಾಗೂ ಅಂಗಾಂಗಗಳ ಬೆಳವಣಿಗೆಗೆ ಇದು ಸಹಕಾರಿ. ಇದರ ಕೊರತೆಯಿಂದಾಗಿ ಮಕ್ಕಳ ಮೂಳೆಗಳು ಸದೃಢ ವಿಕಾಸ ಹೊಂದುವುದಿಲ್ಲ. ಇದು ಇಮ್ಯೂನ್ ಸಿಸ್ಟಂನ್ನು ಸಶಕ್ತಗೊಳಿಸಿ, ಸೋಂಕು ತಗುಲದಂತೆ ರಕ್ಷಿಸುತ್ತದೆ. ವಿಟಮಿನ್ ಕಂಗಳ ದೃಷ್ಟಿ ಸದಾ ಚುರುಕಾಗಿರುವಂತೆ ಕಾಪಾಡುವಲ್ಲಿ ಪೂರಕ.
ಮೂಲ : ಕ್ಯಾರೆಟ್, ಸಿಹಿಗೆಣಸು, ಮೆಂತ್ಯ (ಅದರ ಸೊಪ್ಪು), ಬ್ರೋಕ್ಲಿ, ಎಲೆಕೋಸು, ಮೀನಿನ ಎಣ್ಣೆ, ಮೊಟ್ಟೆ ಹಳದಿ ಭಾಗ, ಎಲ್ಲಾ ಹಸಿರು ಸೊಪ್ಪುಗಳು, ತಾಜಾ ಹಸಿ ತರಕಾರಿ ಸಲಾಡ್ ಇತ್ಯಾದಿ.
ವಿಟಮಿನ್ ಬಿ : ಇದು ಕೆಂಪು ರಕ್ತ ಕಣಗಳನ್ನು ಅಭಿವೃದ್ಧಿಪಡಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಅದು ನಮ್ಮ ಇಡೀ ದೇಹಕ್ಕೆ ಎಲ್ಲೆಡೆ ಆಮ್ಲಜನಕ ತಲುಪಿಸುವ ಕೆಲಸ ಮಾಡುತ್ತದೆ. ಇದು ಮೆಟಬಾಲಿಸಂಗೂ ಅಗತ್ಯ ಬೇಕು. ಇದರ ಕೊರತೆಯಿಂದ ಮಕ್ಕಳಲ್ಲಿ ಅನೀಮಿಯಾ ಆಗಬಹುದು.
ಮೂಲ : ಮೊಳಕೆ ಕಾಳು, ಇಡಿಯಾದ ದವಸ ಧಾನ್ಯ, ಮೀನು, ಸೀ, ಪೌಲ್ಟ್ರಿ, ಮಾಂಸ, ಮೊಟ್ಟೆ, ಹಾಲು, ಹಾಲಿನ ಉತ್ಪನ್ನಗಳು, ತಾಜಾ ಹಸಿ ತರಕಾರಿ, ಬೀನ್ಸ್ ಹಾಗೂ ಬಗೆಬಗೆಯ ಅವರೆಗಳು ಇತ್ಯಾದಿ.
ವಿಟಮಿನ್ ಸಿ : ಮಕ್ಕಳ ಇಮ್ಯೂನ್ ಸಿಸ್ಟಂ ತುಸು ದುರ್ಬಲ ಆಗಿರುತ್ತದೆ, ಹೀಗಾಗಿ ಅವರು ಬೇಗ ಸೋಂಕಿಗೆ ತುತ್ತಾಗುತ್ತಾರೆ. ವಿಟಮಿನ್ ಸಿಯ ಸೇವನೆಯಿಂದ ಮಕ್ಕಳ ಇಮ್ಯೂನ್ ಸಿಸ್ಟಂ ಸಶಕ್ತಗೊಂಡು, ಸೋಂಕನ್ನು ನಿವಾರಿಸಬಲ್ಲದು. ವಿಟಮಿನ್ ಸಿ ಸವಡುಗಳನ್ನು ಸ್ವಸ್ಥವಾಗಿಡುತ್ತದೆ. ಇದು ಕೆಂಪು ರಕ್ತಕಣಗಳನ್ನು ಹೊಸತಾಗಿ ನಿರ್ಮಿಸಿ, ಅವನ್ನು ಪುನರುಜ್ಜೀವಗೊಳಿಸುವಲ್ಲಿಯೂ ಹೆಚ್ಚಿನ ಶಕ್ತಿ ನೀಡುತ್ತದೆ. ಕಬ್ಬಿಣಾಂಶ ರಕ್ತದಲ್ಲಿ ವಿಲೀನಗೊಳ್ಳುವಲ್ಲಿಯೂ ನೆರವಾಗುತ್ತದೆ. ಇದಂತೂ ಬೆಳೆಯುವ ಮಕ್ಕಳಿಗೆ ವರದಾನವೇ ಸರಿ.
ಮೂಲ : ತುಸು ಹುಳಿ ಬೆರೆತ ಹಣ್ಣುಗಳಾದ ಕಿತ್ತಳೆ, ಮೂಸಂಬಿ, ಚಕ್ಕೋತಾ, ಸ್ಟ್ರಾಬೆರಿ, ಟೊಮೇಟೊ, ಆಲೂ, ಕಲ್ಲಂಗಡಿ, ಖರ್ಬೂಜಾ, ಎಲೆಕೋಸು, ಹೂಕೋಸು, ಹಸಿರು ಸೊಪ್ಪು, ಪರಂಗಿ, ಮಾವು ಇತ್ಯಾದಿ.
ವಿಟಮಿನ್ ಡಿ : ಇದು ಮಕ್ಕಳ ಪರಿಪೂರ್ಣ ಆರೋಗ್ಯಕ್ಕೆ ಅತ್ಯಗತ್ಯ. ಇದು ದೇಹದಲ್ಲಿ ಕ್ಯಾಲ್ಶಿಯಂನ ಮಟ್ಟವನ್ನು ನಿಯಂತ್ರಿಸುತ್ತದೆ. ಇದು ಇಡೀ ದೇಹದ ನರಮಂಡಲದ ನಿರ್ವಹಣೆ, ಬ್ಯಾಲೆನ್ಸ್ ಸಂರಕ್ಷಿಸುತ್ತದೆ. ಮೂಳೆಗಳನ್ನು ಸಶಕ್ತಗೊಳಿಸುವಲ್ಲಿಯೂ ಪೂರಕ. ಇದು ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ಮೂಲ : ಇದರ ಸುಲಭ ಸ್ರೋತ ಎಂದರೆ, ಸೂರ್ಯ ಕಿರಣಗಳಿಂದ ನೈಸರ್ಗಿಕವಾಗಿ ಇದು ನಮಗೆ ಲಭಿಸುತ್ತದೆ. ಜೊತೆಗೆ ಹಾಲು, ಮೊಟ್ಟೆ, ಚಿಕನ್, ಮೀನು ಇತ್ಯಾದಿಗಳಲ್ಲೂ ಲಭ್ಯ.
ವಿಟಮಿನ್ ಇ : ಇದು ಕೆಂಪು ರಕ್ತ ಕಣಗಳ ನಿರ್ಮಾಣದಲ್ಲಿ ಹೆಚ್ಚು ಸಹಾಯಕ. ಅಕಾಲ ಪ್ರಸವದ ಮಕ್ಕಳಲ್ಲಿ ವಿಟಮಿನ್ ಪ್ರಮಾಣ ಸಹಜವಾಗಿಯೇ ಕಡಿಮೆ. ಹೀಗಾಗಿ ಇಂಥ ಮಕ್ಕಳಿಗೆ ವಿಟಮಿನ್ ಇ ಯುಕ್ತ ಆಹಾರವನ್ನು ಹೆಚ್ಚುವರಿಯಾಗಿ ಕೊಡಬೇಕಾಗುತ್ತದೆ. ಆಗ ಅವರ ಬೆಳವಣಿಗೆಗೆ ಬಾಧಕ ಇರುವುದಿಲ್ಲ. ಏಕೆಂದರೆ ಇಡೀ ದೇಹದ ಅಸ್ಥಿಪಂಜರದ ವ್ಯವಸ್ಥೆಯನ್ನು ಇದು ಸದೃಢಗೊಳಿಸುತ್ತದೆ. ಇದು ಅಲರ್ಜಿಯನ್ನು ಸಂಪೂರ್ಣ ನಿಯಂತ್ರಿಸುವಲ್ಲಿಯೂ ಸಹಾಯಕ.
ಮೂಲ : ಲಿವರ್, ಮೊಟ್ಟೆ, ಡ್ರೈ ಫ್ರೂಟ್ಸ್, ಸೂರ್ಯಕಾಂತಿ ಎಣ್ಣೆ, ಹಸಿರು ಸೊಪ್ಪು, ಸಿಹಿಗೆಣಸು, ಟರ್ನಿಪ್, ಮಾವು, ಪರಂಗಿ, ಕುಂಬಳಕಾಯಿ ಇತ್ಯಾದಿ.
ವಿಟಮಿನ್ ಕೆ : ಇದು ಮೂಳೆಗಳ ನಿರ್ಮಾಣ, ಹೃದ್ರೋಗಗಳ ನಿಯಂತ್ರಣ ಇತ್ಯಾದಿಗಳಿಗೆ ಪೂರಕ. ಇದು ಮಕ್ಕಳ ಲಂಗ್ಸ್ ಗೆ ಇನ್‌ಫೆಕ್ಷನ್ ತಗುಲದಂತೆ ಕಾಪಾಡುವಲ್ಲಿಯೂ ಸಹಾಯಕ.
ಮೂಲ : ಬ್ರೋಕ್ಲಿ, ಎಲೆಕೋಸು, ಹೂಕೋಸು, ಹಸಿರು ಸೊಪ್ಪು, ಮೀನು, ಮೊಟ್ಟೆ, ಲಿವರ್ ಇತ್ಯಾದಿ.
ಕಬ್ಬಿಣಾಂಶ
ಮಕ್ಕಳಲ್ಲಿ ಆರೋಗ್ಯಕರ ರಕ್ತ ಹೆಚ್ಚಿಸುವಲ್ಲಿ ಕಬ್ಬಿಣಾಂಶ ಪೂರಕ. ಇದು ದೇಹದ ಎಲ್ಲಾ ಜೀವಕೋಶಗಳಿಗೂ ಆಮ್ಲಜನಕ ಒದಗಿಸುವಲ್ಲಿ ಎತ್ತಿದ ಕೈ. ಕಬ್ಬಿಣಾಂಶದ ಕೊರತೆಯಿಂದಾಗಿ ಅನೀಮಿಯಾ, ಸುಸ್ತು, ಸಂಕಟ, ನಿಶ್ಶಕ್ತಿ ಹೆಚ್ಚುತ್ತದೆ.
ಮೂಲ : ಮಾಂಸ, ಲಿವರ್, ಪೌಲ್ಟ್ರಿ, ಇಡಿಯಾದ ದವಸಧಾನ್ಯ, ಬೀನ್ಸ್, ಬಗೆಬಗೆಯ ಚಪ್ಪರದವರೆ, ಡ್ರೈ ಫ್ರೂಟ್ಸ್, ಹಸಿರು ಸೊಪ್ಪು, ತಾಜಾ ಹಸಿ ತರಕಾರಿ ಇತ್ಯಾದಿ.
ಕ್ಯಾಲ್ಶಿಯಂ
ಇದು ಮಕ್ಕಳ ಮೂಳೆ, ಹಲ್ಲುಗಳ ಸದೃಢತೆಗೆ ಅತ್ಯಗತ್ಯ ಬೇಕು. ಇದು ರಕ್ತ ಹೊರಬಂದ ಮರುಕ್ಷಣ ಜಮೆಗಟ್ಟಲು, ನರಮಂಡಲ, ಮಾಂಸಖಂಡ, ಹೃದಯಗಳು ಸಕ್ರಿಯವಾಗಿ ಚಟುವಟಿಕೆಯಿಂದಿರಲು ಪೂರಕ. ಇದು ಮಕ್ಕಳ ಎತ್ತರ ಹೆಚ್ಚಿಸುವಲ್ಲಿಯೂ ಸಹಾಯಕ. ಮಕ್ಕಳಲ್ಲಿ ಕ್ಯಾಲ್ಶಿಯಂನ ಕೊರತೆ ಕಂಡುಬಂದರೆ, ಅವರ ಮಾಂಸಖಂಡಗಳು ಸರಿಯಾಗಿ ಬೆಳವಣಿಗೆ ಹೊಂದುವುದಿಲ್ಲ.
ಮೂಲ : ಮೊಟ್ಟೆ, ಬ್ರೋಕ್ಲಿ, ಹಸಿರು ಸೊಪ್ಪು, ಹಾಲು, ಹಾಲಿನ ಉತ್ಪನ್ನಗಳು ಇತ್ಯಾದಿ.
ಝಿಂಕ್
ಇದು ನಮ್ಮ ನೆನಪಿನಶಕ್ತಿ ಸುಧಾರಿಸುತ್ತದೆ. ವೈರಸ್ ಮತ್ತಿತರ ಕೀಟಾಣುಗಳೊಂದಿಗೆ ಹೋರಾಡಿ, ಮಕ್ಕಳ ಇಮ್ಯೂನ್ ಸಿಸ್ಟಂನ್ನು ಸಶಕ್ತಗೊಳಿಸಬಲ್ಲದು. ದೇಹ ಬೆಳೆಯಲು, ವಿಕಾಸಗೊಳ್ಳಲು ಝಿಂಕ್‌ನ ಅಗತ್ಯವಿದೆ. ಮಕ್ಕಳ ಜೀರ್ಣಶಕ್ತಿ ಮತ್ತು ಮೆಟಬಾಲಿಸಂಗೂ ಪೂರಕ.
ಮೂಲ : ಲಿವರ್, ಬೀನ್ಸ್, ಬಗೆಬಗೆಯ ಚಪ್ಪರದವರೆ, ಇಡಿಯಾದ ದವಸ ಧಾನ್ಯ, ಮೊಳಕೆ ಕಾಳು, ಡ್ರೈ ಫ್ರೂಟ್ಸ್, ಹಾಲು ಇತ್ಯಾದಿ.
ಪೊಟ್ಯಾಶಿಯಂ
ದೇಹದ ಪ್ರತಿಯೊದು ಜೀವಕೋಶ ಮತ್ತು ಪ್ರತಿ ಅಂಗವನ್ನೂ ಸುಸೂತ್ರವಾಗಿ ಕಾರ್ಯ ನಿರ್ವಹಿಸುವಂತೆ ಮಾಡುವಲ್ಲಿ ಇದರ ಪಾತ್ರ ಹಿರಿದು. ಇದು ಬಿಪಿ ಮತ್ತು ಹೃದ್ರೋಗಗಳನ್ನು ತಡೆಯುವಲ್ಲಿಯೂ ಮುಂದು. ಇದರಿಂದ ಮಾಂಸಖಂಡಗಳು ಸದೃಢಗೊಂಡು ಮಕ್ಕಳು ಹೆಚ್ಚು ಚಟುವಟಿಕೆಗಳಲ್ಲಿ ತೊಡಗಿ ಕ್ರಿಯಾಶೀಲರಾಗುತ್ತಾರೆ.
ಮೂಲ : ಮಾಗಿದ ಬಾಳೆಹಣ್ಣಿನಲ್ಲಿ ಇದು ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ. ಜೊತೆಗೆ ಸಿಹಿಗೆಣಸು, ಕೊಬ್ಬುರಹಿತ ಹಾಲು, ಮೊಸರು, ಬೀನ್ಸ್ ಮತ್ತು ವಿವಿಧ ಚಪ್ಪರದವರೆಗಳಲ್ಲಿ ಇದು ಲಭ್ಯ.
ಮೆಗ್ನೀಶಿಯಂ
ಇದು ದೇಹದ ಜೀವಕೋಶಗಳ ನಿರ್ಮಾಣ ಹಾಗೂ ಶಕ್ತಿ ಒದಗಿಸುವುದರಲ್ಲಿ ಬಲು ಅತ್ಯಗತ್ಯ. ಬಾಲ್ಯದಿಂದ ಸೂಕ್ತ ಪ್ರಮಾಣದಲ್ಲಿ ಮೆಗ್ನೀಶಿಯಂ ಸೇವಿಸಿದ್ದರೆ, ಮುಂದೆ ಎಂದೂ ಹೃದ್ರೋಗಕ್ಕೆ ತುತ್ತಾಗುವ ಅಪಾಯವಿಲ್ಲ. ಹುಟ್ಟಿದ ಮಗು ದಟ್ಟ ತಲೆಗೂದಲು ಹೊಂದಿರದೆ ಬೆಳೆಯುವಾಗಲೂ ಸ್ಕ್ಯಾಂಟಿ ಹೇರ್ (ವಿರಳ ಕೂದಲು) ಹೊಂದಿದ್ದರೆ ಅಂಥ ಮಕ್ಕಳು ಮೆಗ್ನೀಶಿಯಂ ಕೊರತೆಯಿಂದ ಬಳಲುತ್ತಿದ್ದಾರೆ ಎಂದೇ ಅರ್ಥ. ಯೌವನದಲ್ಲಿ ಬೇಗ ಅವರು ಬಾಲ್ಡ್ ಆಗುತ್ತಾರೆ. ಬಾಲ್ಯದಲ್ಲೇ ಇದನ್ನು ಗುರುತಿಸಿ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆದು, ಅಗತ್ಯ ಆಹಾರ ಸೇವಿಸಬೇಕು.
ಮೂಲ : ಈರುಳ್ಳಿ, ಕೆಂಪಕ್ಕಿ, ಬ್ರೌನ್ ರೈಸ್, ಬೀನ್ಸ್, ಗೋರಿಕಾಯಿ, ವಿವಿಧ ಚಪ್ಪರದವರೆ, ಡ್ರೈ ಫ್ರೂಟ್ಸ್ ಇತ್ಯಾದಿ.
ಮ್ಯಾಕ್ರೋನ್ಯೂಟ್ರಿಯಂಟ್ಸ್
ದೇಹಕ್ಕೆ ಯಾವ ಆಹಾರದ ಅಂಶಗಳು ಅಧಿಕ ಪ್ರಮಾಣದಲ್ಲಿ ಬೇಕಾಗುತ್ತದೋ ಅದೇ ಇವು. ನಮ್ಮ ಆಹಾರದ ಮೂಲಾಧಾರವಾದ ಈ ಅಂಶಗಳು, ದೇಹಕ್ಕೆ ಹೆಚ್ಚಿನ ಶಕ್ತಿ ನೀಡಿ ನಮ್ಮನ್ನು ಸಶಕ್ತರನ್ನಾಗಿಸುತ್ತವೆ.
ಕಾರ್ಬೊಹೈಡ್ರೇಟ್
ನಾವು ಆಹಾರದಿಂದ ಪಡೆದುಕೊಳ್ಳುವ ಅತಿ ಹೆಚ್ಚಿನ ಪ್ರಧಾನ ಅಂಶವೆಂದರೆ ಇದೇ. ನಾವು ಸೇವಿಸುವ ಆಹಾರದಲ್ಲಿನ ಕೊಬ್ಬು ಮತ್ತು ಪ್ರೋಟೀನ್ ಅಂಶ ದೇಹದಲ್ಲಿ ವಿಲೀನಗೊಳ್ಳಲು ಇವು ಪೂರಕ. ಇದು ಅಂಗಾಂಶ (ಟಿಶ್ಯು) ನಿರ್ಮಾಣದಲ್ಲಿ ಸಹಾಯಕ. ಅಂಗಾಂಶಗಳ ನಿರ್ಮಾಣ ಹಾಗೂ ಅವುಗಳ ರಿಪೇರಿ ಮಾಡಲಿಕ್ಕೂ ಇವು ಬೇಕೇಬೇಕು. ಇವು ಅನೇಕ ರೂಪಗಳಲ್ಲಿ ಲಭ್ಯ. ಶುಗರ್, ಸ್ಟಾರ್ಚ್, ಫೈಬರ್ ಇತ್ಯಾದಿ. ಸ್ಟಾರ್ಚ್, ಫೈಬರ್‌ನ್ನು ಅಧಿಕ ಹಾಗೂ ಶುಗರ್ ಮೂಲದ್ದನ್ನು ಮಕ್ಕಳಿಗೆ ಕಡಿಮೆ ಪ್ರಮಾಣದಲ್ಲಿ ಕೊಡಬೇಕು.
ಮೂಲ : ಬ್ರೆಡ್, ವಿವಿಧ ಧಾನ್ಯಗಳು, ಅಕ್ಕಿ, ಪಾಸ್ತಾ, ಆಲೂ, ಸಿಹಿಗೆಣಸು ಇತ್ಯಾದಿ.
ಪ್ರೋಟೀನ್
ಇದು ಜೀವಕೋಶಗಳ ನಿರ್ಮಾಣ, ಅಂಗಾಂಶ, ಅಂಗಾಂಗಗಳ ಬೆಳವಣಿಗೆ ಎಲ್ಲಕ್ಕೂ ಬೇಕು. ಪ್ರೋಟೀನ್ ನಮಗೆ ಆಹಾರದಿಂದ ಶಕ್ತಿಯ ಮೂಲ ಒದಗಿಸುತ್ತದೆ. ಸೋಂಕಿನ ವಿರುದ್ಧ ಹೋರಾಡಲು, ಆಮ್ಲಜನಕದ ಸಂಚಾರಕ್ಕೆ ಒತ್ತು ನೀಡುತ್ತದೆ. ದೇಹದ ಬೆಳವಣಿಗೆ, ಮಾಂಸಖಂಡಗಳ ಆರೋಗ್ಯ ಕಾಪಾಡಲು ಬಲು ಅಗತ್ಯ.
ಮೂಲ : ಹಾಲು, ಹಾಲಿನ ಉತ್ಪನ್ನ, ಮಾಂಸ, ಮೀನು, ಸೋಯಾ, ಬೀನ್ಸ್, ಗೋರಿಕಾಯಿ, ಬೇಳೆಕಾಳು, ಮೊಳಕೆ ಕಾಳುಗಳು, ಪನೀರ್, ಡ್ರೈ ಫ್ರೂಟ್ಸ್ ಇತ್ಯಾದಿ.
ಕೊಬ್ಬು
ಮಕ್ಕಳ ಪಾಲಿಗಂತೂ ಕೊಬ್ಬಿನಾಂಶ ಶಕ್ತಿಯ ಮೂಲಾಧಾರ ಎನ್ನಬಹುದು. ಇದು ಸುಲಭವಾಗಿ ದೇಹದಲ್ಲಿ ಸಂಗ್ರಹಗೊಳ್ಳುತ್ತದೆ. ದೇಹದಲ್ಲಿನ ಕೊಬ್ಬು ಇತರ ಪೋಷಕಾಂಶಗಳ ಜೊತೆಗೂಡಿ ವಿಟಮಿನ್ಸ್, ಮಿನರಲ್ಸ್ ಇತ್ಯಾದಿ ವಿಲೀನಗೊಳ್ಳಲು ಸಹಾಯಕ. ಅವುಗಳ ಸಂಚಾರಕ್ಕೆ ಕೊಬ್ಬಿನ ನೆರವು ಬೇಕೇಬೇಕು.
ಮೂಲ : ಹಾಲು, ಹಾಲಿನ ಉತ್ಪನ್ನಗಳು, ಮಾಂಸ, ಮೀನು, ಡ್ರೈ ಫ್ರೂಟ್ಸ್, ಜಿಡ್ಡಿನ ಅಂಶವುಳ್ಳ ಎಣ್ಣೆ, ಎಣ್ಣೆಬೀಜ, ಬೆಣ್ಣೆ, ತುಪ್ಪ, ಡಾಲ್ಡಾ, ದಾರಾಪೂರ ಇತ್ಯಾದಿ.
ಬೆಳೆಯುವ ಮಕ್ಕಳ ಸರ್ವತೋಮುಖ ವಿಕಾಸಕ್ಕಾಗಿ ಅವರು ಸಕಾಲದಲ್ಲಿ ಸೂಕ್ತ ಪ್ರಮಾಣದ ಪೌಷ್ಟಿಕ ಆಹಾರ ಸೇವಿಸಿ, ಹೆಚ್ಚು ಹೆಚ್ಚು ದೈಹಿಕ ಚಟುವಟಿಕೆ ಬಯಸುವ ಆಟೋಟಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿ.
– ಡಾ. ಸುಶೀಲಾ ಭಟ್
ಪೋಷಕಾಂಶಗಳು ಕಾರ್ಬೊಹೈಡ್ರೇಟ್
ಧಾನ್ಯಗಳು 33%
ವಿಟಮಿನ್ಸ್ ಹಣ್ಣು ತರಕಾರಿ 33%
ಪ್ರೋಟೀನ್ ಸಸ್ಯಾಹಾರಿ/ಮಾಂಸಾಹಾರಿ 12%
ಡೇರಿ ಪ್ರೋಟೀನ್ ಹಾಲಿನ ಉತ್ಪನ್ನಗಳು 15%
ಕೊಬ್ಬು/ಶುಗರ್ ಇವೆರಡೂ ಇರುವ ಆಹಾರ 7%
ನೀರು
ವಯಸ್ಸು ಪ್ರಮಾಣ
2-3 ವರ್ಷ 3-4 ಗ್ಲಾಸ್
3-5 ವರ್ಷ 4-5 ಗ್ಲಾಸ್
5-8 ವರ್ಷ 5-6 ಗ್ಲಾಸ್ (1 ಗ್ಲಾಸ್ ಅಂದ್ರೆ 250 ಎಂಎ್)
ಮಕ್ಕಳಿಗೆ ಬೇಕಾಗುವ ಪೋಷಕಾಂಶಗಳ ಪೂರೈಕೆ
ವಯಸ್ಸು ಕ್ಯಾಲೋರಿ
23 ವರ್ಷ 1000-1100 ಕ್ಯಾಲೋರಿ
35 ವರ್ಷ 1100-1200 ಕ್ಯಾಲೋರಿ
58 ವರ್ಷ 1200-1400 ಕ್ಯಾಲೋರಿ