ಸುಡು ಬೇಸಿಗೆಯಿಂದ ಪಾರು ಮಾಡಿಸಲು ಜಿಟಿಜಿಟಿ ಮಳೆಹನಿಗಳ ಈ ಮಾನ್‌ಸೂನ್‌ ಕಾಲ, ನಮಗೆ ಆಹಾರ, ಸುತ್ತಾಟದ ವಿಷಯದಲ್ಲಿ ಹೆಚ್ಚು ಖುಷಿ ಕೊಡುತ್ತದೆ. ಆದರೆ ಈ ಸೀಸನ್‌ ತನ್ನ ಜೊತೆ ಹಲವು ಬಗೆಯ ರೋಗಗಳನ್ನೂ ಕರೆತರುತ್ತದೆ. ಇದರಿಂದ ನೆಮ್ಮದಿ ಹೋಗಿ ಕಿರಿಕಿರಿ ಹೆಚ್ಚುತ್ತದೆ. ಮಾನ್‌ಸೂನ್‌ನಲ್ಲಿ ಮುಖ್ಯವಾಗಿ ಕಲುಷಿತ ನೀರು ಕುಡಿಯುವುದು ಅಥವಾ ಅದರ ಸಂಪರ್ಕಕ್ಕೆ ಬರುವುದರಿಂದ, ಕೊಳಕು ನೀರಿನ ಮೇಲಣ ಸೊಳ್ಳೆಗಳಿಂದ ರೋಗ ಬರುತ್ತದೆ.

ವೈದ್ಯರ ಪ್ರಕಾರ ಎಷ್ಟೋ ರೋಗಗಳು ಮಳೆಗಾಲದಲ್ಲಿ ನಾವು ನಿರ್ಲಕ್ಷ್ಯ ವಹಿಸುವುದರಿಂದ ಆಗುತ್ತದೆ. ಆರಂಭದಲ್ಲಿ ಇವುಗಳ ಲಕ್ಷಣ ಗೊತ್ತಾಗದೆ ಇರುವುದರಿಂದ, ಇವು ಮುಂದೆ ಗಂಭೀರ ರೂಪ ಪಡೆಯಬಹುದು.

ಇನ್‌ಫ್ಲೂಯೆನ್ಝಾ : ಮಾನ್‌ಸೂನ್‌ ಕಾರಣ ಈ ನೆಗಡಿ ಜ್ವರ ಆಗುವಿಕೆ ಬಲು ಮಾಮೂಲಿ ವಿಷಯ. ಇದೊಂದು ಸೋಂಕು ರೋಗವಾಗಿದ್ದು, ಗಾಳಿ ಮೂಲಕ ಹರಡುವ ವೈರಸ್‌ನಿಂದಾಗಿ, ಉಸಿರಾಡುವಾಗ ಒಳಗೆಳೆದುಕೊಳ್ಳುವ ಆಮ್ಲಜನಕದ ಮೂಲಕ ಹರಡುತ್ತದೆ. ಈ ವೈರಸ್‌ ನಮ್ಮ ಉಸಿರಾಟದ ವ್ಯವಸ್ಥೆಯನ್ನೇ ಇನ್‌ಫೆಕ್ಟ್ ಮಾಡಿಬಿಡುತ್ತದೆ. ಇದರಿಂದ ಮೂಗು, ಗಂಟಲು ಕೆರೆತ, ಗೊಗ್ಗರು ಧ್ವನಿ, ದೇಹಾದ್ಯಂತ ನೋವು, ಜ್ವರ ಇತ್ಯಾದಿ ಇದರ ಲಕ್ಷಣ. ಇದು ಬಂದಾಗ ಆದಷ್ಟು ಬೇಗ ವೈದ್ಯರಿಗೆ ತೋರಿಸಿ ಸಲಹೆ ಪಡೆಯಿರಿ.

ಎಚ್ಚರಿಕೆ : ಇದರಿಂದ ಪಾರಾಗಲು ಉತ್ತಮ ವಿಧಾನ ಎಂದರೆ, ನಿಯಮಿತವಾಗಿ ಸ್ವಚ್ಛ, ಬ್ಯಾಲೆನ್ಸ್ಡ್ ಪೌಷ್ಟಿಕ ಆಹಾರ ಸೇವಿಸಿ. ಅದು ನಮ್ಮ ದೇಹದ ಇಮ್ಯೂನ್‌ ಸಿಸ್ಟಮ್ ನ್ನು ವಿಕಸಿತಗೊಳಿಸಿ ರೋಗನಿರೋಧಕ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತದೆ.

ವೈರಲ್ ಫೀವರ್‌ : ದಿಢೀರ್‌ ಋತುಮಾನದ ಬದರಾವಣೆಯಿಂದಾಗಿ ಬಹಳ ಸುಸ್ತು, ಥಂಡಿ, ಮೈಕೈನೋವು, ಕಾಡುವ ತೀವ್ರ ಜ್ವರ….. ಇತ್ಯಾದಿಗಳನ್ನೇ ವೈರಲ್ ಫೀವರ್‌ ಎನ್ನುತ್ತಾರೆ. ಇದೊಂದು ಸೋಂಕು ರೋಗವಾಗಿದ್ದು, ಅದು ಸೋಂಕುಳ್ಳ ಸ್ರಾವದ ಸಂಪರ್ಕದಿಂದಾಗಿ ಹರಡುತ್ತದೆ. ವೈರಲ್ ಫೀವರ್‌ ಸಾಮಾನ್ಯವಾಗಿ 3-7 ದಿನಗಳವರೆಗೂ ಇರುತ್ತದೆ. ಇದು ತಂತಾನೇ ಸರಿಹೋಗುತ್ತದೆ, ಆದರೆ ಮತ್ತೊಮ್ಮೆ ಸೋಂಕು ತಗುಲಿದರೆ ಆ್ಯಂಟಿಬಯಾಟಿಕ್ಸ್ ಸೇವಿಸಬೇಕಾದುದು ಅನಿವಾರ್ಯ.

ಎಚ್ಚರಿಕೆ : ಇದರಿಂದ ಪಾರಾಗಲು ಮಳೆಯಲ್ಲಿ ನೆನೆಯುವುದನ್ನು ತಪ್ಪಿಸಿ. ಬಹಳ ಹೊತ್ತು ಒದ್ದೆ ಬಟ್ಟೆಯಲ್ಲೇ ಇದ್ದುಬಿಡಬೇಡಿ. ಕೈಗಳ ಸ್ವಚ್ಛತೆಯತ್ತ ವಿಶೇಷ ಗಮನ ಕೊಡಿ. ಇದರ ಜೊತೆ ವಿಟಮಿನ್‌ `ಸಿ’ ಇರುವ ಆಹಾರ ಸೇವಿಸಿ. ಹೆಚ್ಚು ತಾಜಾ ಹಸಿ ತರಕಾರಿ, ಹಣ್ಣು ಸೇವಿಸಿ. ಆಗ ಇಮ್ಯೂನ್‌ ಸಿಸ್ಟಮ್ ಸಶಕ್ತಗೊಳ್ಳುತ್ತದೆ. ಸೋಂಕುಳ್ಳ ವ್ಯಕ್ತಿಯಿಂದ ಆದಷ್ಟೂ ದೂರವಿರಿ.

ಸೊಳ್ಳೆಗಳಿಂದ ಹರಡುವ ರೋಗಗಳು

ಮಲೇರಿಯಾ : ಮಳೆಗಾಲದಲ್ಲಿ ಹರಡುವ ರೋಗಗಳಲ್ಲಿ ಕೊಳಕು ನೀರಿನಿಂದ ಹರಡುವ ಮುಖ್ಯ ರೋಗವೇ ಮಲೇರಿಯಾ. ಅನಾಫಿಲಸ್‌ ಹೆಣ್ಣು ಸೊಳ್ಳೆ ಕಚ್ಚುವುದರಿಂದ ಹರಡುವ ಈ ರೋಗ ಹೆಚ್ಚು ಬಾಧಿಸುತ್ತದೆ. ಮನೆ ಮುಂದೆ ನೀರು ನಿಲ್ಲಲು ಬಿಡಬೇಡಿ, ಇದರ ಲಕ್ಷಣ ಎಂದರೆ ತೀವ್ರ ಜ್ವರ, ಮೈ ಕೈ ನೋವು, ಥಂಡಿ, ವಾಂತಿಭೇದಿ, ಹೆಚ್ಚು ಬೆವರುವಿಕೆ ಇತ್ಯಾದಿ. ಇದನ್ನು ಬೇಗ ಗುಣಪಡಿಸದಿದ್ದರೆ ಜಾಂಡೀಸ್‌, ಅನೀಮಿಯಾ, ಲಿವರ್‌ಕಿಡ್ನಿ ಫೇಲ್ಯೂರ್‌ ಇತ್ಯಾದಿ ಸಮಸ್ಯೆ ಹೆಚ್ಚುತ್ತದೆ.

ಮಲೇರಿಯಾ ಇದೆಯೇ ಎಂದು ಪರೀಕ್ಷಿಸಲು ಸಾಮಾನ್ಯವಾಗಿ ಬ್ಲಡ್‌ ಟೆಸ್ಟ್ ಮಾಡಿಸಿ, ಮೈಕ್ರೋಸ್ಕೋಪಿಕ್‌ ಯಾ ಆ್ಯಂಟಿಜೆನ್‌ ಆಧಾರಿತ ರಾಪಿಡ್‌  ಡಯಾಗ್ನಸ್ಟಿಕ್‌ ಟೆಸ್ಟ್ ಮೂಲಕ ಮಾಡುತ್ತಾರೆ. ಇದಕ್ಕೆ ಆ್ಯಂಟಿ ಮಲೇರಿಯಲ್ ಔಷಧಿಗಳ ಜೊತೆ ಯಶಸ್ವಿ ಚಿಕಿತ್ಸೆ ನೀಡಬಹುದು.

ಡೇಂಗ್ಯು : ಇದೂ ಕೂಡ ಸೊಳ್ಳೆ ಕಡಿತದಿಂದಾಗುವ ಒಂದು ಬಗೆಯ ವೈರಲ್ ಫೀವರ್‌. ಈ ರೋಗಕ್ಕೆ `ಬ್ರೇಕ್‌ ಬೋನ್‌ ಫೀವರ್‌’ ಎಂದೂ ಹೇಳುತ್ತಾರೆ. ಮಾಂಸಖಂಡಕೀಲುಗಳಲ್ಲಿ ಹೆಚ್ಚು ನೋವು, ಊತ, ಸತತ ತಲೆನೋವು, ಚಳಿಜ್ವರ, ತೀವ್ರ ಸುಸ್ತು ಇದರ ಲಕ್ಷಣಗಳು. ಬೇಗ ಗುಣಪಡಿಸದಿದ್ದರೆ ಇದು ಹೆಚ್ಚು ಹೊಟ್ಟೆನೋವು, ರಕ್ತಸ್ರಾವ, ಸುರ್ಕ್ಯೀಟರಿ ಸಿಸ್ಟಮ್ ಅವ್ಯವಸ್ಥೆಗೂ ಕಾರಣವಾಗಬಹುದು.

ಹೀಗಾಗಿ ಇದರ ಚಿಕಿತ್ಸೆಗೆ ವಿಶೇಷ ಆ್ಯಂಟಿಬಯಾಟಿಕ್‌  ಯಾ ಆ್ಯಂಟಿವೈರಲ್ ಔಷಧಿ ಇಲ್ಲ. ಹೀಗಾಗಿ ಆರಂಭದಲ್ಲೇ ಇದನ್ನು ಗುರುತಿಸಿ ಚಿಕಿತ್ಸೆ ನೀಡಬೇಕು. ಹೆಚ್ಚು ವಿಶ್ರಾಂತಿ ಪಡೆಯುತ್ತಾ, ದ್ರವಾಹಾರ ಸೇವಿಸಬೇಕು. ಈ ಮೂಲಕ  ಬಂದ ತಲೆನೋವು, ಮಾಂಸಖಂಡಗಳ ನೋವು, ಕೀಲುನೋವು ಇತ್ಯಾದಿಗಳಿಗೆ ವೈದ್ಯರ ಸಲಹೆಯಂತೆ ಮಾತ್ರ ಔಷಧಿ ಸೇವಿಸಿ.

ಎಚ್ಚರಿಕೆ : ಡೇಂಗ್ಯು ಸೊಳ್ಳೆಯಿಂದ ಹರಡುವ ಸಾಂಕ್ರಾಮಿಕ ರೋಗ. ಹೀಗಾಗಿ ಸೊಳ್ಳೆಗಳ ಕಾಟ ನಿವಾರಿಸಿಕೊಳ್ಳಿ. ಪ್ರತಿದಿನ ಸೊಳ್ಳೆ ಪರದೆ ಕಟ್ಟಿಕೊಂಡು ಮಲಗಬೇಕು, ಓಡೋಮಾಸ್‌ ಹಚ್ಚಿಕೊಳ್ಳಿ. ಹೊರಗೆ ಓಡಾಡುವಾಗ  ಪೂರ್ತಿ ಮೈ ಮುಚ್ಚುವಂತೆ ಡ್ರೆಸ್‌ ಇರಲಿ. ಡೇಂಗ್ಯು ಸೊಳ್ಳೆ ಹೆಚ್ಚಾಗಿ ಹಗಲಲ್ಲಿ ಕಚ್ಚುತ್ತದೆ.

ಕಲುಷಿತ ನೀರಿನಿಂದಾಗುವ ರೋಗಗಳು

ಟೈಫಾಯಿಡ್‌ : ಈ ರೋಗ ಸಾಲ್ ಮಿಯೊನೆವಾ ಎಂಬ ಬ್ಯಾಕ್ಟೀರಿಯಾದಿಂದ ಬರುತ್ತದೆ. ಈ ರೋಗ ಸೋಂಕಿತ ವ್ಯಕ್ತಿಯ ಮಲದ ಜೊತೆ ಕಲುಷಿತ ನೀರು, ಆಹಾರ, ಕುಡಿಯುವ ನೀರಿನ ಸಂಪರ್ಕದಿಂದಾಗಿ ಆಗುತ್ತದೆ. ಇದಕ್ಕೆ ಚಿಕಿತ್ಸೆ ರಕ್ತ ಮತ್ತು ಮೂಳೆಗಳ ವ್ಯಾಪಕ ಪರೀಕ್ಷೆಯಿಂದ ಖಚಿತವಾಗುತ್ತದೆ. ಬಹುಕಾಲ ಕಾಡುವ ತೀವ್ರ ಜ್ವರ, ತಲೆನೋವು, ವಾಂತಿ, ಹೊಟ್ಟೆನೋವು ಇತ್ಯಾದಿ ಟೈಫಾಯಿಡ್‌ನ ಸಾಮಾನ್ಯ ಲಕ್ಷಣಗಳು. ಈ ರೋಗದ ಅಪಾಯಕಾರಿ ಗುಣವೆಂದರೆ, ರೋಗಿ ಗುಣಮುಖನಾದರೂ ಇದರ ಸೋಂಕು ಮೂತ್ರಾಶಯದಲ್ಲಿ ಉಳಿಯುತ್ತದೆ.

ಎಚ್ಚರಿಕೆ : ಸ್ವಚ್ಛ ಆಹಾರ, ನೀರು, ಮನೆಯ ಶುಭ್ರತೆ ಜೊತೆ ಕೈ ಕಾಲುಗಳನ್ನೂ ಸದಾ ಸ್ವಚ್ಛವಾಗಿಟ್ಟುಕೊಳ್ಳಬೇಕು.

ಹೆಪಟೈಟಿಸ್‌  : ಇದು ಮಳೆಗಾಲದಲ್ಲಿ ನಮ್ಮ ಲಿವರ್‌ನ್ನು ಕಾಡುವ ಒಂದು ಗಂಭೀರ ಕಾಯಿಲೆ. ಸಾಮಾನ್ಯವಾಗಿ ಇದು ವೈರಲ್ ಸೋಂಕು ರೋಗ. ಇದು ಕಲುಷಿತ ನೀರು, ಮಾನವರ ಸೋಂಕಿತ ಸ್ರಾವದ ಸಂಪರ್ಕದಿಂದ ಆಗುತ್ತದೆ. ಇದು ಹೆಚ್ಚಾಗಿ ನೊಣದಿಂದಾಗಿ ಹರಡುತ್ತದೆ. ಬಹುಕಾಲ ಇಟ್ಟ ಹಣ್ಣು, ತರಕಾರಿ, ಇತರ ಖಾದ್ಯ ಪದಾರ್ಥಗಳ ಸೇವನೆಯಿಂದಲೂ ಆಗುತ್ತದೆ. ಇದರ ನೇರ ಪರಿಣಾಮ ಕಿಡ್ನಿ ಮೇಲಾಗುತ್ತದೆ. ಇದರಿಂದ ಊತ ಕಾಣಿಸಬಹುದು. ಇದರ ಲಕ್ಷಣಗಳೆಂದರೆ ಜಾಂಡೀಸ್‌, ಹೊಟ್ಟೆನೋವು, ಹಸಿವಿನ ಕೊರತೆ, ತೀವ್ರಜ್ವರ, ವಾಂತಿ, ಭೇದಿ, ಅತಿ ಸುಸ್ತು  ಇತ್ಯಾದಿ. ಇದನ್ನು ರಕ್ತ ಪರೀಕ್ಷೆಯಿಂದ ಖಚಿತಪಡಿಸಿಕೊಳ್ಳಬೇಕು.

ಎಚ್ಚರಿಕೆ : ಇದರಿಂದ ಪಾರಾಗಲು ತಕ್ಷಣ ವಾಂತಿಗೆ ಚಿಕಿತ್ಸೆ, ಲಿವರ್‌ನ  ಸುರಕ್ಷತೆ ಕಡೆ ಗಮನ ಇತ್ಯಾದಿ ಅಗತ್ಯ. ಜೊತೆಗೆ ಸ್ವಚ್ಛತೆ ಶುಭ್ರತೆಗಳತ್ತ ಹೆಚ್ಚು ಗಮನವಿಡಿ. ಹೆಚ್ಚು ಅಪಾಯಕ್ಕೆ ಒಳಗಾದ ರೋಗಿಗಳಿಗೆ ವ್ಯಾಕ್ಸಿನ್‌ ಸಹ ಲಭ್ಯ.

ಅಕ್ಯೂಟ್‌ ಗ್ಯಾಸ್ಟ್ರೋ ಎಂಟಿರೈಟಿಸ್‌ : ಮಳೆಗಾಲದಲ್ಲಿ ಈ ರೋಗ ಅಂದ್ರೆ ಫುಡ್‌ ಪಾಯಿಸನಿಂಗ್‌ ಒಂದು ಮಾಮೂಲಿ ಕಾಯಿಲೆ. ವಾತಾವರಣದಲ್ಲಿ ಆರ್ದ್ರತೆ ಹೆಚ್ಚಿದಷ್ಟೂ ಈ ರೋಗದ ಬ್ಯಾಕ್ಟೀರಿಯಾ ಬೇಗ ಹರಡುತ್ತದೆ. ಇದರ ಲಕ್ಷಣ ಎಂದರೆ ಹೊಟ್ಟೆ ನುಲಿಯುವಿಕೆ, ತೊಳೆಸುವಿಕೆ, ವಾಂತಿ, ಭೇದಿ ಇತ್ಯಾದಿ. ಸತತ ಜ್ವರ, ಭೇದಿ ಕಾಡುವುದರಿಂದ ಬಹಳ ಸುಸ್ತು, ಸಂಕಟ ಹೆಚ್ಚುತ್ತದೆ.ಇದರಿಂದ ಪಾರಾಗಲು ನಿಮ್ಮನ್ನು ನೀವು ಹೆಚ್ಚು ಹೈಡ್ರೇಟ್‌ಗೊಳಿಸಿ (ದ್ರವಾಹಾರ ಸೇವನೆ) ಕೊಳ್ಳಿ. ಅನ್ನ, ಮೊಸರು, ಹಣ್ಣುಗಳಾದ ಬಾಳೆ, ಸೇಬು, ಕಿತ್ತಳೆ, ಬ್ಲೆಂಡ್‌ ಆಹಾರ ಸೇವಿಸಿ. ಗಂಜಿಗೆ ಎಳನೀರು ಬೆರೆಸಿ ಕುಡಿಯುತ್ತಿರಿ. ಬಾರ್ಲಿ ನೀರು ಧಾರಾಳ ಕುಡಿಯಿರಿ. ಚಿಕಿತ್ಸೆ ಪಡೆಯುವಾಗ ಜೊತೆಗೆ ಕಾದಾರಿದ ನೀರನ್ನೂ ಸೇವಿಸಬೇಕು. ವೈದ್ಯರ ಸಲಹೆಯಂತೆ ಮುಂದುವರಿಯಿರಿ.

ಎಚ್ಚರಿಕೆ : ಮಳೆಗಾಲದಲ್ಲಿ ಕಾಯಿಕಾಯಾದ, ಅರೆಬೆಂದ ಆಹಾರ, ಸಲಾಡ್‌ ಇತ್ಯಾದಿ ಬೇಡ. ಹೊರಗಿನ ಆಹಾರವಂತೂ ಖಂಡಿತಾ ಬೇಡ.

– ರಮಣಿ ಜೋಶಿ

ಒಂದಿಷ್ಟು ಸಲಹೆಗಳು

– ನೀರಿನಿಂದ ಹರಡುವ ರೋಗಗಳಾದ ಟೈಫಾಯಿಡ್‌, ಜಾಂಡೀಸ್‌, ಡಯೇರಿಯಾಗಳಿಂದ ಪಾರಾಗಲು ಮಳೆಗಾಲದ ಆರಂಭದಿಂದಲೇ ಕಾದಾರಿದ ನೀರು ಬಳಸಿರಿ.

– ರೋಗಿಯ ಟವೆಲ್‌ ಬಳಸದೆ, ಮನೆಮಂದಿ ಎಲ್ಲರೂ ಪ್ರತ್ಯೇಕ ಟವೆಲ್ ಬಳಸಬೇಕು.

– ಕೆಮ್ಮು, ಸೀನು ಬಂದಾಗ ರೋಗಿ ಅಗತ್ಯವಾಗಿ ಕರಸ್ತ್ರದಿಂದ ಮೂಗು, ಬಾಯಿ ಮುಚ್ಚಿಕೊಳ್ಳಬೇಕು.

– ಸದಾ ಸೊಳ್ಳೆಪರದೆ, ಓಡೋಮಾಸ್‌ ಬಳಸುತ್ತಿರಬೇಕು.

– ಫಂಗಲ್ ಇನ್‌ಫೆಕ್ಷನ್‌ ಕಾಡದಿರಲು ಚೆನ್ನಾಗಿ ಒಣಗಿದ ನಂತರವೇ ಬಟ್ಟೆಗಳನ್ನು ಧರಿಸಬೇಕು.

– ಮಳೆಗಾಲದಲ್ಲಿ ಮನೆ ಆಹಾರ ಸೇವಿಸಿ.

– ಕೈಗಳ ಶುಭ್ರತೆಗಾಗಿ ಹ್ಯಾಂಡ್‌ ಸ್ಯಾನಿಟೈಸರ್‌ ಬಳಸುತ್ತಿರಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ