ಮುಖ ಅಥವಾ ದೇಹದ ಇತರೆ ಭಾಗದಲ್ಲಿ ಅಲ್ಲಲ್ಲಿ ಒಂದಿಷ್ಟು ಮೃದು ಕೂದಲು ಬೆಳೆಯುವುದು ಸಹಜ. ಮೃದು ಕೂದಲು ಕಠೋರವಾಗತೊಡಗಿದರೆ ಅದು ಹಾರ್ಮೋನ್ ಅಸಮತೋಲನದ ಸಂಕೇತವಾಗಿರಬಹುದು. ಆ ಸಂಕೇತಗಳನ್ನು ನಿರ್ಲಕ್ಷಿಸಬೇಡಿ.
ಮಹಿಳೆಯರ ಮುಖದಲ್ಲಿ ಒಂದಿಷ್ಟು ಹಗುರ ಹಾಗೂ ಮೃದು ಕೂದಲು ಬೆಳೆಯುವುದು ಸಾಮಾನ್ಯ. ಆದರೆ ಅಲ್ಲಿ ಬೆಳೆದ ಕೂದಲು ದಟ್ಟವಾಗಿದ್ದರೆ, ಕಠೋರವಾಗಿದ್ದರೆ, ಅದು ಹಾರ್ಮೋನ್ ಅಸಮತೋಲನದ ಸಂಕೇತ. ಆ ಕಾರಣದಿಂದ ಹಲವು ಜಟಿಲತೆಗಳು ಉಂಟಾಗಬಹುದು. ಈ ಸಮಸ್ಯೆಯನ್ನು `ಹಿರ್ಸುಟಿಸಂ’ ಎಂದು ಹೇಳಲಾಗುತ್ತದೆ. ಮಹಿಳೆಯರ ಗದ್ದ, ತುಟಿಯ ಮೇಲ್ಭಾಗ, ಸ್ತನಗಳ ಮಧ್ಯಭಾಗದಲ್ಲಿ ಹೊಟ್ಟೆ, ಬೆನ್ನು, ತೊಡೆಯ ಆಂತರಿಕ ಭಾಗದಲ್ಲಿ ಕೂದಲು ಇರುವುದು ಪುರುಷ ಹಾರ್ಮೋನು ಆ್ಯಂಡ್ರೋಜೆನ್‌ನ ಅಧಿಕ ಸ್ರಾವ ಉಂಟಾಗುವುದರ ಸಂಕೇತ. ಅದು ಅಡ್ರಿನ್ ಗ್ರಂಥಿಯ ಮುಖಾಂತರ ಅಥವಾ ಅಂಡಕೋಶದ ರೋಗಗಳ ಕಾರಣದಿಂದ ಸ್ರಾವವಾಗುತ್ತದೆ. ಈ ರೀತಿಯ ಸ್ಥಿತಿಗಳು ಅಂಡಾಣು ಉತ್ಪತ್ತಿಗೆ ತೊಂದರೆಯನ್ನುಂಟು ಮಾಡಿ ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಕಡಿಮೆಗೊಳಿಸುತ್ತದೆ. ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್ (ಪಿಸಿಓಎಸ್) ಇದು ಕೂಡ ಮಹಿಳೆಯರಲ್ಲಿ ಬೇಡವಾದ ಕೂದಲಿಗೆ ಸಂಬಂಧಪಟ್ಟಿದೆ. ಇದು ಮಧುಮೇಹ ಹಾಗೂ ಹೃದ್ರೋಗದ ಅಪಾಯಕ್ಕೆ ನಾಂದಿ. ಜಾರ್ಜಿಯಾ ಹೆಲ್ತ್ ಯೂನಿರ್ಸಿಟಿಯಲ್ಲಿ ನಡೆದ ಒಂದು ಸಂಶೋಧನೆಯ ಪ್ರಕಾರ, ಪಿಸಿಓಎಸ್ ಮಹಿಳೆಯರಲ್ಲಿ ಹಾರ್ಮೋನಿಗೆ ಸಂಬಂಧಪಟ್ಟ ಏರುಪೇರುಗಳಿಗೆ ಒಂದು ಮುಖ್ಯ ಕಾರಣವಾಗಿದೆ. ಇದು ಶೇ.10ರಷ್ಟು ಮಹಿಳೆಯರಿಗೆ ತೊಂದರೆ ಕೊಡುತ್ತದೆ.
ಹಿರ್ಸುಟಿಸಂನಿಂದ ತೊಂದರೆಗೊಳಗಾದ ಶೇ.90ರಷ್ಟು ಮಹಿಳೆಯರಲ್ಲಿ ಪಿಸಿಓಎಸ್ ಅಥವಾ ಇಡಿಯೊಪೆಥಿಕ್ ಹಿರ್ಸುಟಿಸಂನ ಸಮಸ್ಯೆ ಕಂಡುಬಂದಿದೆ. ಹೆಚ್ಚಿನ ಪ್ರಕರಣಗಳಲ್ಲಿ ಈಸ್ಟ್ರೋಜನ್ ಸ್ರಾವದಲ್ಲಿ ಕೊರತೆ ಹಾಗೂ ಟೆಸ್ಟೊಸ್ಟೆರಾನ್ ಅತಿಯಾದ ಉತ್ಪಾದನೆಯಿಂದಾಗಿ ಅದು ಹದಿವಯಸ್ಸಿನ ಬಳಿಕ ನಿಧಾನವಾಗಿ ವಿಕಸಿತವಾಗುತ್ತದೆ.
ಆನುವಂಶಿಕ ಕಾರಣಗಳು : ಕುಟುಂಬದಲ್ಲಿ ರೋಗದ ಇತಿಹಾಸ ಇದ್ದರೆ ಈ ಅಪಾಯ ಇನ್ನಷ್ಟು ಹೆಚ್ಚುತ್ತದೆ. ತ್ವಚೆಯ ಸಂವೇದನಾಶೀಲತೆ ಆನುವಂಶಿಕತೆಗೆ ಮತ್ತೊಂದು ಕಾರಣವಾಗುತ್ತದೆ. ಟೆಸ್ಟೊಸ್ಟೆರಾನ್‌ನ ಮಟ್ಟ ಕಡಿಮೆಯಾಗುವುದರಿಂದಲೂ ತುಂಬಾ ಒರಟಾದ ಹಾಗೂ ದಪ್ಪನೆಯ ಕೂದಲು ಬೆಳವಣಿಗೆಗೆ ಕಾರಣವಾಗುತ್ತದೆ.
ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್ : ಯಾವ ಮಹಿಳೆಯರು ಪಿಸಿಓಎಸ್ ಸಮಸ್ಯೆಗೆ ತುತ್ತಾಗಿರುತ್ತಾರೊ, ಅಂಥವರ ಮುಖದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೂದಲಿನ ಬೆಳವಣಿಗೆ ಕಂಡುಬರುತ್ತದೆ. ಇದು ಬಂಜೆತನಕ್ಕೆ ಒಂದು ಮುಖ್ಯ ಕಾರಣ ಕೂಡ. ಪಿಸಿಓಎಸ್ ಕಾರಣದಿಂದ ಅಂಡಕೋಶದಲ್ಲಿ ಹಲವು ಚಿಕ್ಕಪುಟ್ಟ ಗೆಡ್ಡೆಗಳು ಉಂಟಾಗುತ್ತವೆ. ಪುರುಷ ಹಾರ್ಮೋನಿನ ಅಧಿಕ ಸ್ರಾವದ ಕಾರಣದಿಂದ ಅಂಡಾಣು ಬಿಡುಗಡೆಯಲ್ಲಿ ಅನಿಯಮಿತ, ಮುಟ್ಟಿಗೆ ಸಂಬಂಧಪಟ್ಟಂತೆ ಏರುಪೇರು ಹಾಗೂ ಬೊಜ್ಜಿನ ಸಮಸ್ಯೆ ಕಾಣಿಸಿಕೊಳ್ಳಬಹುದು.
ಅಂಡಕೋಶದಲ್ಲಿ ಗೆಡ್ಡೆ : ಕೆಲವು ಪ್ರಕರಣಗಳಲ್ಲಿ ಆ್ಯಂಡ್ರೊಜೆನ್‌ನಿಂದಾಗಿ ಅಂಡಕೋಶದಲ್ಲಿ ಟ್ಯೂಮರ್ ಹಿರ್ಸುಟಿಸಂಗೆ ಕಾರಣವಾಗುತ್ತದೆ. ಈ ಕಾರಣದಿಂದಾಗಿ ಟ್ಯೂಮರ್ ಬಹುಬೇಗ ಬೆಳೆಯುತ್ತದೆ. ಈ ಎಲ್ಲದರ ಪರಿಣಾಮ ಎಂಬಂತೆ ಮಹಿಳೆಯರಲ್ಲಿ ಪುರುಷರ ಲಕ್ಷಣಗಳು ಅಂದರೆ ಧ್ವನಿ ಗಡಸಾಗುವಿಕೆ, ಯೋನಿಯ ಕ್ಲೈಟೊರಿಸ್‌ನ ಆಕಾರ ವಿಸ್ತಾರಗೊಳ್ಳುವಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಅಡ್ರಿನ್‌ನಲ್ಲಿ ಏರುಪೇರು : ಕಿಡ್ನಿಯ ಮೇಲ್ಭಾಗದಲ್ಲಿರುವ ಅಡ್ರಿನ್ ಗ್ರಂಥಿಗಳು ಆ್ಯಂಡ್ರೋಜೆನ್‌ನ್ನು ನಿಯಂತ್ರಿಸುತ್ತವೆ. ಈ ಗ್ರಂಥಿ ಸರಿಯಾಗಿ ಕೆಲಸ ಮಾಡದೇ ಇದ್ದರೆ `ಹಿರ್ಸುಟಿಸಂ’ನ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಮಹಿಳೆಯರ ಮುಖದಲ್ಲಿ ಕೂದಲಿನ ಬೆಳವಣಿಗೆ ಪಿಸಿಓಎಸ್, ಕಾಂಜೆನಿಟ್ ಅಡ್ರಿನ್ ಹೈಪರ್‌ಪ್ಲೇಸಿಯಾ ಮುಂತಾದವುಗಳ ಸಂಕೇತವಾಗಿರಬಹುದು. ಇವೆಲ್ಲ ಬಂಜೆತನಕ್ಕೆ ಮುಖ್ಯ ಕಾರಣವಾಗಿರಬಹುದು. ಇಂತಹ ಸ್ಥಿತಿಯಲ್ಲಿ ವೈದ್ಯರು ಸಮಸ್ಯೆಯ ನಿಖರತೆ ಪತ್ತೆಹಚ್ಚಲು ಕೆಲವೊಂದು ಪರೀಕ್ಷೆ ಮಾಡಿಸುತ್ತಾರೆ. ಮುಟ್ಟು ಶುರುವಾದದ್ದು ಯಾವ ವಯಸ್ಸಿನಲ್ಲಿ, ಕೂದಲಿನ ಬೆಳವಣಿಗೆ ಪ್ರಮಾಣ ಹೇಗಿದೆ ಎಂಬುದನ್ನು ಕಂಡುಕೊಳ್ಳುತ್ತಾರೆ. ಇದರ ಜೊತೆ ಜೊತೆಗೆ ಅನಿಯಮಿತ ಮುಟ್ಟು, ಸ್ತನಗಳಲ್ಲಿ ಊತಕಗಳ ಕೊರತೆ, ಲೈಂಗಿಕ ಇಚ್ಛೆ ಪ್ರಬಲವಾಗುವಿಕೆ, ತೂಕ ಹೆಚ್ಚಾಗುವಿಕೆ ಮತ್ತು ಮಧುಮೇಹದ ಇತಿಹಾಸದ ಬಗ್ಗೆ ತಿಳಿದುಕೊಳ್ಳಲಾಗುತ್ತದೆ. ಹೊಟ್ಟೆಯಲ್ಲಿ ಯಾವುದಾದರೂ ಗಂಟಿನ ಬೆಳವಣಿಗೆ ಆಗುತ್ತಿದೆಯೇ ಎಂಬುದನ್ನು ಕಂಡುಕೊಳ್ಳಲಾಗುತ್ತದೆ. ಕೆಲವು ಸೀರಮ್ ಮಾರ್ಕರ್ ಟೆಸ್ಟ್ ಗಳನ್ನು ಕೂಡ ಮಾಡಲಾಗುತ್ತದೆ.
ಟೆಸ್ಟೊಸ್ಟೆರಾನ್ : ಒಂದು ವೇಳೆ ಇದರ ಮಟ್ಟ ಸಾಮಾನ್ಯಕ್ಕಿಂತ ಸ್ವಲ್ಪ ಹೆಚ್ಚಾದರೆ ಅದು ಪಿಸಿಓಎಸ್ ಅಥವಾ ಸಿಎಎಚ್‌ನ ಸಂಕೇತ ಆಗಿರಬಹುದು. ಅದರ ಮಟ್ಟ ಹೆಚ್ಚಿನ ಪ್ರಮಾಣದಲ್ಲಿ ಇದ್ದರೆ, ಅದು ಓವೇರಿಯನ್ ಟ್ಯೂಮರ್‌ನ ಲಕ್ಷಣ ಆಗಿರಬಹುದು.
ಪ್ರೊಜೆಸ್ಟೆರಾನ್ : ಈ ಟೆಸ್ಟ್ ನ್ನು ಮುಟ್ಟಿನ ಆರಂಭಿಕ ಹಂತದಲ್ಲಿ ಮಾಡಲಾಗುತ್ತದೆ. ಈ ಹಾರ್ಮೋನಿನ ಅಧಿಕ ಪ್ರಮಾಣ ಪಿಸಿಓಎಸ್‌ನ ಲಕ್ಷಣವನ್ನು ತೋರಿಸುತ್ತದೆ. ಒಂದು ವೇಳೆ ಪ್ರ್ಯೊಲಾಕ್ಟಿನ್ ಹಾರ್ಮೋನಿನ ಮಟ್ಟ ಹೆಚ್ಚಿಗೆ ಇದ್ದರೆ, ಆಕೆ ಹೈಪರ್ ಪ್ರ್ಯೊಲಾಕ್ಟಿಮಿಯಾ ತೊಂದರೆಗೆ ಸಿಲುಕಿದ್ದಾಳೆ ಎಂದರ್ಥ.
ಸೀರಮ್ ಟಿಎಸ್‌ಎಚ್ : ಥೈರಾಯ್ಡ್ ನ್ನು ಸ್ಟಿಮ್ಯುಲೇಟ್ ಮಾಡುವ ಹಾರ್ಮೋನಿನ ಪ್ರಮಾಣ ಕಡಿಮೆಯಾದರೆ, ಹೈಪರ್ ಥೈರಾಯಿಡಿಸಂ ಸಮಸ್ಯೆ ಆಗುತ್ತದೆ. ಮಹಿಳೆಯರ ಸಂತಾನೋತ್ಪತ್ತಿಗೆ ಸಂಬಂಧಪಟ್ಟ ಸಮಸ್ಯೆಗಳತ್ತ ಬೆರಳು ಮಾಡಿ ತೋರಿಸುತ್ತದೆ.
ಪೆಲ್ವಿಕ್ ಅಲ್ಟ್ರಾಸೌಂಡ್ : ಓವೇರಿಯನ್ ನಿರೂಪ್ಲಾಸ್ಮಾ ಅಥವಾ ಪಾಲಿಸಿಸ್ಟಿಕ್ ಓವೇರಿಯನ್‌ನ್ನು ಕಂಡುಹಿಡಿಯಲು ಈ ಪರೀಕ್ಷೆ ಮಾಡಲಾಗುತ್ತದೆ.
ಚಿಕಿತ್ಸೆ : ಸಾಮಾನ್ಯ ಹಿರ್ಸುಟಿಸಂನ ಹೆಚ್ಚಿನ ಪ್ರಕರಣಗಳಲ್ಲಿ ಬೇರಾವುದೇ ಲಕ್ಷಣಗಳು ಕಂಡುಬರುವುದಿಲ್ಲ. ಹೀಗಾಗಿ ಯಾವುದೇ ಚಿಕಿತ್ಸೆ ಪಡೆಯಬೇಕಾದ ಅಗತ್ಯವಿಲ್ಲ. ಹಿರ್ಸುಟಿಸಂನ ಚಿಕಿತ್ಸೆ ಬಂಜೆತನಕ್ಕೆ ಸಂಬಂಧಪಟ್ಟಿದೆ. ಇದರಲ್ಲಿ ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡಲಾಗುತ್ತದೆ. ಒಂದು ವೇಳೆ ಮಹಿಳೆ ಗರ್ಭ ಧರಿಸಲು ಇಚ್ಛಿಸುತ್ತಿದ್ದಲ್ಲಿ ಅವಳ ಆ್ಯಂಡ್ರೊಜೆನ್‌ನ ಪ್ರಮಾಣವನ್ನು ನಿರ್ದಿಷ್ಟ ಮಟ್ಟಕ್ಕೆ ತರಲು ಆಕೆಗೆ ಔಷಧೋಪಚಾರ ಕೈಗೊಳ್ಳಲಾಗುತ್ತದೆ. ಅದರಿಂದಾಗಿ ಟೆಸ್ಟೋಸ್ಟೆರಾನ್ ಮಟ್ಟ ಕಡಿಮೆಗೊಳಿಸುವುದು ಹಾಗೂ ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಮೊದಲಿನಂತೆ ಮಾಡಲು ಸಹಾಯವಾಗುತ್ತದೆ.
– ಡಾ. ಸಾಗರಿಕಾ