ಶುದ್ಧ ನೀರು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಅವಶ್ಯಕತೆ. ಕಲುಷಿತ ನೀರಿನ ಸೇವನೆ ದೇಹಕ್ಕೆ ಮಾರಕ ಪರಿಣಾಮ ಬೀರುತ್ತದೆ.

ವಿಶ್ವಸಂಸ್ಥೆ ಕೂಡ ಇದನ್ನೇ  ಒತ್ತಿ ಹೇಳಿದೆ. ಹೀಗಿದ್ದಾಗ್ಯೂ ಅಶುದ್ಧ ನೀರಿನ ಸೇವನೆಯಿಂದ ಪ್ರತಿರ್ಷ 1.8 ದಶಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ.

ನೀರಿನ 4 ಮಹತ್ವದ ಸಂಗತಿಗಳು

ಪ್ರಮಾಣ : ಪ್ರತಿಯೊಬ್ಬ ವ್ಯಕ್ತಿಗೂ ಕುಡಿಯಲು, ಅಡುಗೆ ಮಾಡಲು, ಸ್ವಚ್ಛತೆ ಹೀಗೆ ದಿನಕ್ಕೆ 50 ಲೀಟರ್‌ ನೀರು ಬೇಕು.

ವಿಶ್ವಾಸಾರ್ಹತೆ : ನೀರಿನ ಲಭ್ಯತೆ ವಿಶ್ವಾಸಾರ್ಹವಾಗಿರಬೇಕು. ಹವಾಮಾನ ಯಾವುದೇ ಆಗಿರಬಹುದು. ವ್ಯಕ್ತಿಗೆ ಶುದ್ಧ ನೀರು ಲಭಿಸಬೇಕು. ನೀರಿನ ಶುದ್ಧತೆಯಲ್ಲಿ ಕೊರತೆ ಉಂಟಾದರೆ, ಅದು ಆ ವ್ಯಕ್ತಿಯ ಜೀವನದ ಗುಣಮಟ್ಟದ ಮೇಲೆ ಪ್ರಭಾವ ಬೀರುತ್ತದೆ.

ಗುಣಮಟ್ಟ : ನೀರಿನ ಲಭ್ಯತೆಗಾಗಿ ಸೂಕ್ತ ವ್ಯವಸ್ಥೆ ಇರಬೇಕು. ಏಕೆಂದರೆ ಪ್ರತಿಯೊಂದು ಕುಟುಂಬಕ್ಕೂ ಶುದ್ಧ ನೀರು ಲಭಿಸಬೇಕು.

ಖರ್ಚು : ನೀರಿನ ಲಭ್ಯತೆಯೊಂದೇ ಮುಖ್ಯ ಅಲ್ಲ, ವ್ಯಕ್ತಿಗೆ ಅದು ಸುಲಭ ದರದಲ್ಲಿ ಸಿಗುವ ವ್ಯವಸ್ಥೆ ಕೂಡ ಮಾಡಬೇಕು.

ಶುದ್ಧ ನೀರು ಏಕೆ ಅತ್ಯವಶ್ಯ?

ಪೋಷಣೆಗೆ ಪೂರಕ : ಮನುಷ್ಯನ ದೇಹದಲ್ಲಿ ಶೇ.60ರಷ್ಟು ನೀರಿದೆ. ಹೀಗಾಗಿ ಆ ಪ್ರಮಾಣ ಕಾಯ್ದುಕೊಂಡು ಹೋಗಲು ದಿನ ಸೂಕ್ತ ಪ್ರಮಾಣದಲ್ಲಿ ನೀರು ಕುಡಿಯಬೇಕು, ಬಾಯಿ ಸ್ವಚ್ಛಗೊಳಿಸಲು ಕೂಡ ಶುದ್ಧ ನೀರು ಬೇಕೇಬೇಕು. ಅದು ರಕ್ತದ ಸಾಂದ್ರತೆಯನ್ನು ಸಮರ್ಪಕ ರೀತಿಯಲ್ಲಿಡಲು ನೆರವಾಗುತ್ತದೆ. ರಕ್ತದ ಮುಖಾಂತರ ಪೋಷಕಾಂಶ ಹಾಗೂ ಆಮ್ಲಜನಕವನ್ನು ದೇಹದ ಪ್ರತಿಯೊಂದು ಜೀವಕೋಶದ ತನಕ ತಲುಪಿಸಲು ನೆರವಾಗುತ್ತದೆ.

ವಿಷಕಾರಿ ಘಟಕಗಳು ಹೊರಹೋಗಲು ಅನುಕೂಲ : ಸ್ವಚ್ಛ ಹಾಗೂ ತಾಜಾ ನೀರು ದೇಹದಿಂದ ವಿಷಕಾರಿ ಘಟಕಗಳು ಹೊರಹೋಗಲು ದಾರಿ ಮಾಡಿಕೊಡುತ್ತದೆ. ಆ ವಿಷಕಾರಿ ಘಟಕ ದೇಹದಲ್ಲಿ ನಿರ್ಮಾಣವಾಗಿರಬಹುದು ಅಥವಾ ಹೊರಗಿನಿಂದ ಬಂದಿರಬಹುದು ಅಥವಾ ಕಲುಷಿತ ನೀರಿನ ಮುಖಾಂತರ ದೇಹಕ್ಕೆ ಪ್ರವೇಶಿಸಿರಬಹುದು.

ದ್ರವ ಪದಾರ್ಥದ ಸಮತೋಲನ : ಸ್ವಚ್ಛ ಹಾಗೂ ಶುದ್ಧ ನೀರು ಕುಡಿಯುವುದರಿಂದ ದೇಹದಲ್ಲಿ ದ್ರವ ಪದಾರ್ಥದ ಸಮತೋಲನ ಕಾಯ್ದುಕೊಂಡು ಹೋಗಲು ನೆರವಾಗುತ್ತದೆ. ದೇಹದ ತಾಪಮಾನ ಸಾಮಾನ್ಯವಾಗಿಡಲು ಕೂಡ ಅದು ನೆರವಾಗುತ್ತದೆ.

ಸ್ನಾಯುಗಳಿಗೆ ಶಕ್ತಿ : ಸ್ನಾಯುಗಳಿಗೆ ಸೂಕ್ತ ಪ್ರಮಾಣದಲ್ಲಿ ನೀರು ದೊರೆಯದೇ ಇದ್ದರೆ, ಅವುಗಳಲ್ಲಿ ನೋವು ಹಾಗೂ ಹಿಡಿದುಕೊಂಡಂತೆ ಆಗುತ್ತದೆ. ಹೀಗಾಗಿ ಸ್ನಾಯುಗಳ ಆರೋಗ್ಯಕ್ಕೆ ನೀರು ಅತ್ಯವಶ್ಯ.

ಕಿಡ್ನಿಗೆ ನೀರು ಅತ್ಯವಶ್ಯ : ಸೂಕ್ತ ಪ್ರಮಾಣದಲ್ಲಿ ನೀರು ಕುಡಿಯದೇ ಇದ್ದರೆ ಕಿಡ್ನಿಯಲ್ಲಿ ಹರಳು ಉಂಟಾಗುವ ಇಲ್ಲವೇ ಅದಕ್ಕೆ ಸೋಂಕು ತಗುಲುವ ಸಾಧ್ಯತೆ ಇರುತ್ತದೆ. ತ್ವಚೆ ಮತ್ತು ಉಗುರುಗಳ ಆರೋಗ್ಯಕ್ಕೂ ನೀರು ಬೇಕೇಬೇಕು. ನೀರಿನಿಂದ ಹರಡುವ ಹೆಚ್ಚಿನ ರೋಗಗಳು ದೂಷಿತ ಅಥವಾ ಕೊಳಕು ನೀರಿನಿಂದ ಉಂಟಾಗುತ್ತವೆ.

ನೀರಿನಿಂದ ಹರಡುವ 10 ಸಾಮಾನ್ಯ ರೋಗಗಳು :

ಡೀಸೆಂಟ್ರಿ : ಇದರ ಮುಖ್ಯ ಲಕ್ಷಣವೆಂದರೆ ವಾಂತಿ, ಹೊಟ್ಟೆನೋವು ಮೇಲಿಂದ ಮೇಲೆ ಮಲ ವಿಸರ್ಜನೆಗೆ ಹೋಗಬೇಕಾಗಿ ಬರುತ್ತದೆ. ಗಂಭೀರ ಭೇದಿ ಅಥವಾ ಅಕ್ಯೂಟ್‌ ಡೀಸೆಂಟ್ರಿಯ ಸಂದರ್ಭದಲ್ಲಿ ಮಲದ ಜೊತೆ ರಕ್ತ ಕೂಡ ಬರಬಹುದು. ಕೆಲವೊಮ್ಮೆ ತೀವ್ರ ಜ್ವರ ಬರಬಹುದು.

ಡಯೇರಿಯಾ : ಕಲುಷಿತ ನೀರಿನಿಂದ ಉಂಟಾಗುವ ರೋಗಗಳಲ್ಲಿ ಡಯೇರಿಯಾ ಅತ್ಯಂತ ಸಾಮಾನ್ಯ ರೋಗ. ಇದು ನೀರಿನಿಂದ ಹರಡುವ ವೈರಸ್‌ನಿಂದ ಬರುತ್ತದೆ. ಇದರ ಮುಖ್ಯ ಲಕ್ಷಣವೆಂದರೆ, ನೀರಿನಂತೆ ಹೊರ ಬರುವ ಮಲ. ಆ ಕಾರಣದಿಂದ ವ್ಯಕ್ತಿಗೆ ನಿರ್ಜಲೀಕರಣದ ಸಮಸ್ಯೆ ಕಾಡುತ್ತದೆ. ಚಿಕ್ಕ ಮಕ್ಕಳಿಗೆ ಇದು ಅಪಾಯಕಾರಿಯಾಗಿ ಪರಿಣಮಿಸಬಹುದು.

ಕಾಲರಾ : ಇದು ಬ್ಯಾಕ್ಟೀರಿಯಾದಿಂದ ಉಂಟಾಗುವ ಸಮಸ್ಯೆ. ಯಾರು ತಮ್ಮ ಆಸುಪಾಸು ಸ್ವಚ್ಛತೆ ಕಾಯ್ದುಕೊಂಡು ಹೋಗುವುದಿಲ್ಲವೋ ಅವರಿಗೆ ಈ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚಿಗೆ ಇರುತ್ತದೆ. ಕೆಲವೊಮ್ಮೆ ಗಂಭೀರ ಡಯೇರಿಯಾ ಕೂಡ ಅದರ ಮುಖ್ಯ ಲಕ್ಷಣ.

ಟೈಫಾಯಿಡ್‌ : ಆಹಾರ ಹಾಗೂ ನೀರಿನಲ್ಲಿರುವ ಬ್ಯಾಕ್ಟೀರಿಯಾದ ಕಾರಣದಿಂದಾಗಿ ಟೈಫಾಯಿಡ್‌ ಉಂಟಾಗುತ್ತದೆ. ಒಳಚರಂಡಿ ಹಾಗೂ ಸ್ವಚ್ಛತೆ ವ್ಯವಸ್ಥೆ ಇರದ ಕಡೆ ಇದು ಉಂಟಾಗುತ್ತದೆ. ತೀವ್ರ ಜ್ವರ, ಹೊಟ್ಟೆ ನೋವು, ತಲೆನೋವು, ರಾಶೆಸ್‌, ಸ್ನಾಯುಗಳಲ್ಲಿ ನೋವು ಇದರ ಮುಖ್ಯ ಲಕ್ಷಣಗಳು. ಕೆಲವೊಂದು ಪ್ರಕರಣಗಳಲ್ಲಿ ಆಂತರಿಕ ರಕ್ತಸ್ರಾವ ಕೂಡ ಉಂಟಾಗಬಹುದು.

ಹೆಪಟೈಟಿಸ್‌ `ಎ’ : ಶೌಚಾಲಯಗಳಿಂದ ಹರಿದು ಬರುವ ನೀರಿನಿಂದ ಹೆಪಟೈಟಿಸ್‌ `ಎ’  ಉಂಟಾಗುತ್ತದೆ. ಈ ರೋಗದ ಲಕ್ಷಣಗಳೆಂದರೆ ಜ್ವರ, ದಣಿವು, ಡಯೇರಿಯಾ, ವಾಂತಿ, ಹಸಿವು ಆಗದೇ ಇರುವಂತಹ ಸಮಸ್ಯೆ, ಕಾಮಾಲೆ ಉಂಟಾಗಬಹುದು. ಕೆಲವು ಗಂಭೀರ ಪ್ರಕರಣಗಳಡಿ ಲಿವರ್‌ ಫೇಲ್ಯೂರ್‌ ಕೂಡ ಆಗಬಹುದು.

ಹುಕ್‌ವರ್ಮ್ : ಇದು ಎಂತಹ ಪರಜೀವಿ ಎಂದರೆ, ಇದು ಮಲದ ಮುಖಾಂತರ ಪಸರಿಸುತ್ತದೆ. ನೀರಿನ ಮುಖಾಂತರ ಅದು ತನ್ನ ಹೊಸ ಆತಿಥೇಯರನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಹೊಟ್ಟೆನೋವು, ಹಿಡಿದುಕೊಂಡಂತೆ ನುಲಿಯುವಿಕೆ, ಜ್ವರ, ಹಸಿವು ಆಗದೇ ಇರುವುದು, ರಾಶೆಸ್‌, ರಕ್ತ ಸಹಿತ ಮಲ ವಿಸರ್ಜನೆ ಇದರ ಮುಖ್ಯ ಲಕ್ಷಣಗಳು.

ಸ್ಟಮಕ್‌ ಫ್ಲ್ಯೂ : ಇದರಿಂದಾಗಿ ಹೊಟ್ಟೆ ಹಾಗೂ ಕರುಳಿನಲ್ಲಿ ಉರಿತ ಮತ್ತು ಊತ ಉಂಟಾಗುತ್ತದೆ. ಬ್ಯಾಕ್ಟೀರಿಯಾ ಅಥವಾ ವೈರಸ್‌ನಿಂದ ಇದು ಪಸರಿಸುತ್ತದೆ. ವಾಂತಿ ಹಾಗೂ ಭೇದಿ ಇದರ ಮುಖ್ಯ ಲಕ್ಷಣ. ಯಾವುದೇ ವಯಸ್ಸಿನವರಿಗೂ ಇದು ಉಂಟಾಗುತ್ತದೆ.

ಪೋಲಿಯೊ : `ಪೋಲಿಯೊಮೈಲಿಟಿಸ್‌’ನ್ನು ಸಾಮಾನ್ಯವಾಗಿ `ಪೋಲಿಯೊ’ ಎಂದು ಕರೆಯಲಾಗುತ್ತದೆ. ಕಲುಷಿತ ನೀರಿನಿಂದ ಇದು ಪಸರಿಸುತ್ತದೆ. ಕೇಂದ್ರ ನರಮಂಡಲದ ಮೇಲೆ ಪ್ರಭಾವ ಬೀರುತ್ತದೆ. ಜ್ವರ, ತಲೆನೋವು, ತಲೆ ಸುತ್ತುವಿಕೆ, ಇದರ ಮುಖ್ಯ ಲಕ್ಷಣಗಳು. ಕೊನೆಯಲ್ಲಿ ರೋಗಿ ಪ್ಯಾರಾಲಿಸಿಸ್‌ಗೆ ತುತ್ತಾಗುತ್ತಾನೆ.

ಲೆಡ್‌ ಪಾಯಿಸನಿಂಗ್‌ : ಸೀಸಯುಕ್ತ ನೀರನ್ನು ಕುಡಿಯುವುದರಿಂದ ಹೀಗಾಗುತ್ತದೆ. ಹಳೆಯ ಪೈಪ್‌ನಿಂದ ನೀರು ಹರಿದು ಅದು ಕಲುಷಿತಗೊಳ್ಳುತ್ತದೆ. ಮಕ್ಕಳಿಗೆ ಇದು ಅತ್ಯಂತ ಘಾತಕ ರೋಗ. ಇದು ಹಲವು ತೊಂದರೆಗಳಿಗೆ ಕಾರಣವಾಗುತ್ತದೆ. ಉದಾಹರಣೆಗೆ ಅಂಗಾಂಗಗಳಿಗೆ ತೊಂದರೆ, ನರಮಂಡಲದ ಮೇಲೆ ದುಷ್ಪರಿಣಾಮ, ರಕ್ತಹೀನತೆ, ಅತಿ ರಕ್ತದೊತ್ತಡ ಕಿಡ್ನಿ ಸಮಸ್ಯೆ.

ಈಕೋಲಿ : ಚಿಕ್ಕ ಮಕ್ಕಳಿಗೆ ಹಾಗೂ ವೃದ್ಧರಿಗೆ ಇದರ ಸೋಂಕುಂಟಾಗುವ ಸಾಧ್ಯತೆ ಹೆಚ್ಚು. ಮಾಂಸ ಸರಿಯಾಗಿ ಬೇಯದೇ ಇರುವುದು, ಪಾಶ್ಚರೀಕೃತ ಅಲ್ಲದ ಉತ್ಪನ್ನಗಳನ್ನು ಸೇವನೆ ಮಾಡುವುದರಿಂದ ಇದರ ಸಾಧ್ಯತೆ ಹೆಚ್ಚುತ್ತದೆ. ನೀರಿನಂತೆ ಮಲ ಹೋಗುವುದು, ಮಲದ ಜೊತೆ ರಕ್ತ  ಒಸರುವಿಕೆ, ಹೊಟ್ಟೆ ನೋವು ಇವು ಇದರ ಲಕ್ಷಣಗಳು. ಇಂತಹ ಸಂದರ್ಭದಲ್ಲಿ ತಕ್ಷಣವೇ ವೈದ್ಯರ ಸಲಹೆ ಪಡೆಯಬೇಕು.

– ಡಾ. ಭಾರತ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ