ಭರತನಾಟ್ಯ ಕಲಾವಿದೆಯಾಗಿದ್ದ ರಶ್ಮಿ, ತಾನು ಮಾಡೆಲ್ ಆಗಬೇಕೆಂದು ಕನಸು ಕಂಡಳು. ಉತ್ತಮ ಡಾಕ್ಟರ್ ವರ ಸಿಕ್ಕಿದನೆಂದು ಅವಳ ತಾಯಿ ತಂದೆ ದಿಢೀರ್ ಎಂದು ಅವಳ ಮದುವೆ ನಿಶ್ಚಯಿಸಿದಾಗ, ಅದನ್ನು ಧಿಕ್ಕರಿಸಲಾಗದೆ ಮದುವೆ ದಿನವೇ ಅವಳು ಎಲ್ಲರನ್ನೂ ಬಿಟ್ಟು ಗೆಳೆಯನನ್ನು ನಂಬಿ ಹೊರಟು ಹೋದಳು. ಮುಂದೆ ಅವಳ ಭವಿಷ್ಯ......?
ಕನ್ಸಲ್ಟೇಶನ್ ರೂಮಿನಲ್ಲಿ ಡಾ. ಸುದರ್ಶನ್ ಪೇಶೆಂಟ್ ಒಬ್ಬರನ್ನು ಪರೀಕ್ಷಿಸುತ್ತಿದ್ದರು. ರಿಸೆಪ್ಶನಿಸ್ಟ್ ಕಾಲ್ ಮಾಡಿ, ``ಗುಡ್ ಮಾರ್ನಿಂಗ್‌ಡಾಕ್ಟರ್, ಪ್ರಶಾಂತ್ ಅಂತ ನಿಮಗೆ ಕಾಲ್ ಮಾಡಿದ್ದಾರೆ ನೋಡಿ. ಲೈನ್ ಕನೆಕ್ಟ್ ಮಾಡ್ತೀನಿ,'' ಎಂದರು.
ಸುದರ್ಶನನ ಮಾವನ ಮಗ ಇನ್ ಸ್ಪೆಕ್ಟರ್ ಪ್ರಶಾಂತ್. ತನ್ನ ಮದುವೆಗೆ ಬರಲು ಸಾಧ್ಯವಿಲ್ಲ ಎಂದು ಹೇಳಿ ಡ್ಯೂಟಿಯಲ್ಲಿ ಇದ್ದ ಪ್ರಶು ಯಾವ ವಿಷಯಕ್ಕೆ ಫೋನ್ ಮಾಡ್ತಿದ್ದಾನೆ ಕೇಳೋಣ ಎಂದುಕೊಂಡ ಸುದರ್ಶನ್.
ಆ ಕಡೆಯಿಂದ ಪ್ರಶಾಂತ್, ``ವಿಷಯ ಗೊತ್ತಾಯ್ತು ಸುಧೀ.... ಅತ್ತೆ ಮೊನ್ನೆ ಹೇಳಿದರು. ಆದರೆ ನಾನು ಈಗ ಹೇಳಲಿರುವ ವಿಷಯವನ್ನು ನೀನು ಹೇಗೆ ರಿಸೀವ್ ಮಾಡ್ತಿಯೋ ಗೊತ್ತಿಲ್ಲ. ನಿನ್ನೆ ರಾತ್ರಿ ರೈಡ್ ಮಾಡಿದ್ದೆ, ನಮ್ಮ ಊರಿನ ಕ್ಯೂಟಿ ಹೋಟೆಲ್ ನಲ್ಲಿ ಪ್ರಾಸ್ಟಿಟ್ಯೂಷನ್ ರೇಡ್ ಮಾಡಬೇಕಾದರೆ ಅದೇ ಹೋಟೆಲ್ ನಲ್ಲಿ ನಿನ್ನ ಹೆಂಡತಿ ರಶ್ಮಿ ಕೂಡ ಇದ್ದರು. ವಾಟ್ಸ್ ಆ್ಯಪ್ ನಲ್ಲಿ ನೀನು ಕಳುಹಿಸಿದ್ದ ನಿನ್ನ ಮದುವೆ ಫೋಟೋದಿಂದ ಆಕೆಯನ್ನು ಗುರುತಿಸಿದೆ. ಆಕೆಯನ್ನು ಕೂಡ ಕರೆದುಕೊಂಡು ಬಂದೆ. ಆದರೆ ಸೆಲ್ ಗೆ ಹಾಕಿಲ್ಲ, ತುಂಬಾ ಅಳ್ತಾ ಇದ್ದಾರೆ. ಹೆಚ್ಚು ಹೊತ್ತು ಸ್ಟೇಷನ್ ನಲ್ಲಿ ಅವರನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ. ಆಕೆಗೆ ನಾನು ಯಾರು ಅಂತ ಗೊತ್ತಿಲ್ಲ. ಆದರೆ ನನಗೆ ಆಕೆ ಗೊತ್ತು. ಹಾಗಾಗಿ ನಿನಗೆ ಕಾಲ್ ಮಾಡಿದೆ. ರಶ್ಮಿ ತಂದೆ ಫೋನ್ ನಂಬರ್ ಕೊಡು,'' ಎಂದ ಪೊಲೀಸ್ ಇನ್ ಸ್ಪೆಕ್ಟರ್ ಪ್ರಶಾಂತ್.
``ಫೋನ್ ನಂಬರ್ ಕೊಡೋದೇನೂ ಬೇಡ.... ನಾನೇ ಮಾವನನ್ನು ಕರೆದುಕೊಂಡು ಅಲ್ಲಿಗೆ ಬರ್ತೀನಿ. ಈಗಲೇ ಹೊರಡ್ತೀನಿ,'' ಎಂದವರೇ ಅವಸರದಲ್ಲಿ ಫೋನಿಟ್ಟು ಶಿಳಿಗೆ ಕಾಲ್ ಮಾಡಿ ತನಗೆ ಎರಡು ದಿನ ಲೀವ್ ಬೇಕು ಎಂದು ಹೇಳಿ, ಬಾಕಿ ಉಳಿದಿದ್ದ ಇಬ್ಬರು ಪೇಶೆಂಟ್ ಗಳ ಕನ್ಸಲ್ಟೇಶನ್ ಮುಗಿಸಿ ಸುದರ್ಶನ್ ಆಸ್ಪತ್ರೆಯಿಂದ ಹೊರಬಂದ.
ವೆಸ್ಟ್ ಆಫ್ ಕಾರ್ಡ್ ರೋಡ್ ನಲ್ಲಿರುವ ಮಾನವರ ಮನೆಗೆ ಬಂದ. ಅವರ ಮನೆಯಲ್ಲಿ ಇನ್ನೂ ಯಾರು ತಿಂಡಿ ತಿಂದಿರಲಿಲ್ಲ. ಮದುವೆಯಾದ ದಿನವೇ ಮಗಳು, ಅಳಿಯನನ್ನು, ತಮ್ಮನ್ನು ಬಿಟ್ಟು ಓಡಿ ಹೋದ ಸಂಕಟ ಅವರಿಂದ ಜೀರ್ಣೀಸಿಕೊಳ್ಳಲು ಆಗಿರಲಿಲ್ಲ. ಸುದರ್ಶನ್ ದಿಢೀರ್‌ಎಂದು ಬಂದಿದ್ದನ್ನು ನೋಡಿ ಒಂದು ಕ್ಷಣ ಅವರಿಗೆ ಗಾಬರಿಯಾಯಿತು. ಏನು ಹೇಳಬೇಕೋ ಗೊತ್ತಾಗಲಿಲ್ಲ.
``ಅಳಿಯಂದ್ರೆ ಬನ್ನಿ, ತಿಂಡಿ ತಿನ್ನಿ,'' ಎಂದು ಮಾವ ರಾಜಶೇಖರ್ ಫಾರ್ಮಾಲಿಟಿಗಾಗಿ ಹೇಳಿದರು.
``ಮಾವ ಒಂದು ವಿಷಯ ಹೇಳಬೇಕಾಗಿದೆ, ರಶ್ಮಿ ಸಿಕ್ಕಿದ್ದಾರೆ. ಚಿತ್ರದುರ್ಗದಲ್ಲಿ ಇದ್ದಾರೆ. ನನ್ನ ಕಸಿನ್ ಪ್ರಶಾಂತ್ ಅಂತ, ಅಲ್ಲಿ ದುರ್ಗದಲ್ಲಿ ಪೊಲೀಸ್ ಇನ್ ಸ್ಪೆಕ್ಟರ್ ಆಗಿದ್ದಾನೆ. ಅವನಿಗೆ ಸಿಕ್ಕಿದ್ದಾರೆ,'' ಎಂದ.





