ಮಗಳ ಮನಸ್ಸು ನೋಯಿಸಬಾರದೆಂದು ಸೀತಾ ಅವಳನ್ನು ಕೆಲಸಕ್ಕೆ ಹೋಗಗೊಟ್ಟಳು. ಇದರಿಂದ ಸೀತಾಳ ಮನೆಯ ಕೆಲಸ ವಿಪರೀತ ಹೆಚ್ಚಿತು. ಕೊನೆಗೊಮ್ಮೆ ಅವರೆಲ್ಲ ತಮ್ಮ ಮನೆಗೆ ಹೊರಟಾಗ ನಡೆದದ್ದೇನು.......?
``ಅಮ್ಮಾ, ನನಗೆ ಪತ್ರಿಕೆಯ ಆಫೀಸಿನಲ್ಲಿ ಕೆಲಸ ಸಿಕ್ಕಿದೆ.... ಹೋಗ್ತೀನಿ!'' ಎಂದು ಮಗಳು ಹೇಳಿದಾಗ ಸೀತಾಳಿಗೆ ಅಚ್ಚರಿಯಾಯಿತು.
ಪುಟ್ಟ ಪುಟ್ಟ ಎರಡು ಮಕ್ಕಳು, ಎರಡನೆಯ ಮಗುವಿಗಂತೂ ಇನ್ನೂ ಎರಡು ವರ್ಷ ತುಂಬಿದೆ ಅಷ್ಟೇ. ಇವಳು ಕೆಲಸಕ್ಕೆ ಹೋದರೆ ಇಬ್ಬರು ಮಕ್ಕಳನ್ನು ಹೇಗೆ ನೋಡಿಕೊಳ್ಳುವುದು ಎಂದು ಸೀತಾಳ ಮನಸ್ಸಿಗೆ ಬಂತು. ಆದರೂ ಜರ್ನಲಿಸ್ಟ್ ಆಗುವುದು ಮಗಳ ಕನಸಾಗಿತ್ತು. ಇವಳ ಮದುವೆಯಾದ ಹೊಸತಿನಲ್ಲಿ ಆಗ ಕನ್ನಡದಲ್ಲಿ ನ್ಯೂಸ್ ಚಾನೆಲ್ ಗಳು ಹೊಸದಾಗಿ ಪ್ರಾರಂಭಾಗಿದ್ದವು.
ಮಗಳು ಸಂದರ್ಶನಕ್ಕೆ ಹೋಗಿ ಭೇಟಿ ನೀಡಿದಾಗ ಆ ಚಾನೆಲ್ ನವರಿಗೆ ಇವಳು ತಂಬಾ ಮೆಚ್ಚುಗೆಯಾಗಿದ್ದಳು. ಆದರೆ ಎಲ್ಲಕ್ಕೂ ಒಂದು ತೊಡಕಿರಲೇಬೇಕಲ್ಲ, ಇವಳ ಮಾವನರು ಬಿಲ್ ಕುಲ್ ಒಪ್ಪಲಿಲ್ಲ.
``ನಮ್ಮ ಮನೆಯ ಸೊಸೆಯನ್ನು ಟಿ.ವಿಯಲ್ಲಿ ಕೆಲಸಕ್ಕೆ ಕಳಿಸೋಲ್ಲಾ,'' ಎಂದು ಕರಾರುವಾಕ್ಕಾಗಿ ಹೇಳಿಬಿಟ್ಟರು.

ಮಗಳು ಅತ್ತು ಸುಮ್ಮನಾಗಿಬಿಟ್ಟಳು. ಈಗ ಯಾವುದೋ ಅವಕಾಶ ಸಿಕ್ಕಿದೆ. ಮಾಡಬೇಕೂಂತ ಆಸೆಪಡುತ್ತಾಳೆ. ತಾಯಿಯಾಗಿ ನಾನು ಸಹಕಾರ ನೀಡದಿದ್ದರೆ ಯಾರು ಮಾಡ್ತಾರೆ ಎಂದುಕೊಂಡಳು. ಆದರೂ ಆಸೆಯೇ ಬೇರೆ, ಕೆಲಸ ಮಾಡುವುದೇ ಬೇರೆ. ಅಂತೂ ಒಪ್ಪಿಕೊಂಡಳು. ಒಪ್ಪಿಕೊಳ್ಳದಿದ್ದರೆ ಮಗಳಾದರೂ ಬಿಡಬೇಕಲ್ಲ. ಮಗಳ ದಿನಚರಿ ಪ್ರಾರಂಭವಾಯಿತು.
ಬೆಳಗ್ಗೆ ಏಳು ಗಂಟೆಗೆ ಮನೆ ಬಿಡುತ್ತಿದ್ದಳು. ಅವಳಿಗೆ ತಿನ್ನಲು ಕೊಟ್ಟು ಡಬ್ಬಿ ಸಹ ಕಟ್ಟಿಕೊಡಬೇಕಿತ್ತು. ಗಂಡ ಕ್ಲಿನಿಕ್ ಗೆ ಹೋಗುನಷ್ಟರ ಹೊತ್ತಿಗೆ ಅವರಿಗೆ ತಿಂಡಿ ಸಿದ್ಧವಾಗಬೇಕಿತ್ತು. ಪುಣ್ಯಕ್ಕೆ ಮಕ್ಕಳಿಬ್ಬರೂ ಚೆನ್ನಾಗಿ ಮಲಗಿರುತ್ತಿದ್ದರು. ಗಂಡ ಹೋದ ಮೇಲೆ ಮಕ್ಕಳನ್ನು ಎಬ್ಬಿಸಿ, ಇಬ್ಬರಿಗೂ ಕುಡಿಯಲು ಹಾಲು ಕೊಟ್ಟು, ನಂತರ ಸ್ನಾನ ಮಾಡಿಸಿ ಬಟ್ಟೆ ಹಾಕಿ ತಿಂಡಿ ತಿನ್ನಿಸುತ್ತಿದ್ದಳು. ನಂತರ ಅವಳು ಸ್ನಾನ ಮಾಡಿ, ದೇವರಿಗೆ ದೀಪ ಹಚ್ಚಿಡುವಷ್ಟರಲ್ಲಿ ಅಡುಗೆಗೆ ಇಡುವ ಹೊತ್ತಾಗಿ ಬಿಡುತ್ತಿತ್ತು. ಅಡುಗೆಗೆ ಇಟ್ಟು ಅದನ್ನು ಮುಗಿಸು ಹೊತ್ತಿಗೆ ಕೆಲಸದವಳು ಬರುತ್ತಿದ್ದಳು. ಅವಳು ಕೆಲಸ ಮುಗಿಸಿ ಹೊರಡುವಷ್ಟರಲ್ಲಿ ಗಂಡ ಬರುತ್ತಿದ್ದರು. ಅಷ್ಟು ಹೊತ್ತಿಗೆ ಸೀತಾ ಮಕ್ಕಳಿಬ್ಬರನ್ನೂ ಕೂರಿಸಿಕೊಂಡು ಇಬ್ಬರಿಗೂ ಊಟ ಮಾಡಿಸಿಬಿಡುತ್ತಿದ್ದಳು.
ಸೀತಾ ಇಷ್ಟೆಲ್ಲಾ ಕಷ್ಟಪಟ್ಟು ಮಾಡುತ್ತಿದ್ದರೆ ಗಂಡನಿಗೆ ಕೋಪ, ಬೇಸರ. ಎಲ್ಲವನ್ನೂ ಇವಳು ತಲೆಗೆ ಹಚ್ಚಿಕೊಂಡು ಮಾಡ್ತಾಳೆ. ಮಗಳು ಈಗ ಕೆಲಸಕ್ಕೆ ಹೋಗಿ ಮಾಡಿ ಸಾಧಿಸುವುದಾದರೂ ಏನು? ಎನ್ನುವ ವಿಚಾರ, ಜೊತೆಗೆ ಹೆಂಡತಿಗೆ ಹೊರೆ ಕೆಲಸ ಮಾಡುವಂತೆ ಆಗುತ್ತಿದೆಯಲ್ಲಾ ಎನ್ನುವ ಅನುಕಂಪ. ಆದರೆ ಅದು ಕೋಪದಲ್ಲಿ ವ್ಯಕ್ತವಾಗುತ್ತಿತ್ತು.
ಮಗಳು ತಾನೇ ಎಷ್ಟು ದಿನ ಈ ಕೆಲಸ ಮಾಡಬಹುದು.... ಅವಳು ಗಂಡನ ಮನೆಗೆ ಹೋಗಲೇ ಬೇಕಲ್ಲವೇ? ಅಲ್ಲಿಗೆ ಹೋದ ಮೇಲೆ ಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ? ಅವಳು ಕೆಲಸವನ್ನು ಬಿಡಲೇಬೇಕು. ಆದರೂ ಮೊಮ್ಮಗಳ ಶಾಲೆ ಶುರುವಾಗುವ ಹೊತ್ತಿಗೆ ಅಲ್ಲಿಗೆ ಅತ್ತೆಯ ಮನೆಗೆ ಹೋಗಲೇಬೇಕು. ಆಗ ಕೆಲಸಕ್ಕೆ ತಿಲಾಂಜಲಿ ನೀಡಿದಂತೆಯೇ ಅಲ್ಲವೇ....? ಪಾಪ, ಅಲ್ಲಿಯವರೆಗೂ ಕಷ್ಟವಾದರೂ ಮಕ್ಕಳನ್ನು ನೋಡಿಕೊಂಡಾಗ, ಮಗಳಿಗೆ ಪತ್ರಿಕೆಯ ಆಫೀಸಿನಲ್ಲಿ ಕೆಲಸ ಮಾಡಿದ ಸಮಾದಾನ ನೀಡಬಹುದೆನ್ನುವ ಭಾವನೆ ಅಷ್ಟೇ.





