ಆಕಸ್ಮಿಕ ಜಗಳದ ಕಾರಣ ಪರಸ್ಪರ ಪರಿಚಿತರಾದ ನಿಖಿತಾ ಮತ್ತು ಪ್ರಣವ್, ಮುಂದೆ ತಮ್ಮದೇ ಧೋರಣೆಗಳಿಂದಾಗಿ ವಿರುದ್ಧ ಧ್ರುವಗಳಾಗಿ ಸಿಡಿದು ನಿಂತರು. ಹೀಗಿದ್ದರೂ ನಿಖಿತಾ ಪ್ರಣವ್ ನನ್ನೇ ಮದುವೆ ಆಗಬೇಕಾದ ಪರಿಸ್ಥಿತಿ ಎದುರಾದದ್ದು ಹೇಗೆ....? ಮುಂದೆ ಅವರ ದಾಂಪತ್ಯ ಏನಾಯಿತು...?
ನಿಖಿತಾ ಅಮ್ಮನ ಮುದ್ದಿನ ಮಗಳು, ತುಂಬಾ ಬುದ್ಧಿವಂತೆ, ಎಂ.ಬಿ.ಎನಲ್ಲಿ ಗೋಲ್ಡ್ ಮೆಡಲಿಸ್ಟ್, ಛಲವಾದಿ. ತನ್ನ ಸುತ್ತ ಏನಾದರೂ ತಪ್ಪು ನಡೆಯುತ್ತಿದ್ದರೆ ಅದನ್ನು ಸಹಿಸುತ್ತಿರಲಿಲ್ಲ. ನಿಖಿತಾಗೆ ತಂದೆ ಇರಲಿಲ್ಲ. ಅವಳಿಗೆ ಎರಡು ವರ್ಷ ಇರುವಾಗ ಅಪಘಾತದಲ್ಲಿ ನಿಧನರಾಗಿದ್ದರು. ಆಗಿನಿಂದ ತಾಯಿಯೇ ಒಂಟಿಯಾಗಿ ಸಾಕಿ ಬೆಳೆಸಿದರು. ಅವಳಿಗೆ ತಾಯಿ ಎಂದರೆ ಅಚ್ಚುಮೆಚ್ಚು. ನಿಖಿತಾಳ ತಾಯಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಾ ಮಗಳನ್ನು ಸಾಕಿ ಸಲಹಿದರು. ಅವಳು ಎಂದೂ ತನ್ನ ತಾಯಿಯನ್ನು ನೋಯಿಸುತ್ತಿರಲಿಲ್ಲ.
ಪ್ರಣವ್ ತುಂಬಾ ಶ್ರೀಮಂತ ಕುಟುಂಬದ ಒಬ್ಬನೇ ಮುದ್ದಿನ ಮಗ. ಅಪ್ಪ, ಅಮ್ಮ, ಚಿಕ್ಕಪ್ಪ, ಚಿಕ್ಕಮ್ಮ, ತಾತ, ಅಜ್ಜಿ, ಇಬ್ಬರು ತಂಗಿಯರು ಇರುವ ದೊಡ್ಡ ಕುಟುಂಬ ಅವನದು. ಅವನನ್ನು ತುಂಬಾ ಮುದ್ದಿನಿಂದ ಬೆಳೆಸಿದ್ದರು. ಅವನು ಏನು ಕೇಳಿದರೂ ಇಲ್ಲವೆನ್ನುತ್ತಿರಲಿಲ್ಲ. ಅದರಿಂದ ಅವನಲ್ಲಿ ದುಡ್ಡಿನ ಅಹಂಕಾರ ತುಂಬಿಕೊಂಡಿತು. ದುಡ್ಡು ಒಂದು ಇದ್ದರೆ ಏನು ಬೇಕಾದರೂ ಪಡೆಯಬಹುದು. ದುಡ್ಡೇ ಎಲ್ಲಾ ಎಂದು ಅವನ ಭಾವನೆಯಾಗಿತ್ತು. ಆದರೆ ತನ್ನ ಕುಟುಂಬ ಎಂದರೆ ಪ್ರಾಣ ಅವನಿಗೆ. ತನ್ನ ಪರಿವಾರದ ಜನರನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ. ತಂದೆಯ ದೊಡ್ಡ ಕಂಪನಿಯನ್ನು ತುಂಬಾ ಚಿಕ್ಕ ವಯಸ್ಸಿನಲ್ಲೇ ಯಶಸ್ವಿಯಾಗಿ ಮುನ್ನಡೆಸುತ್ತಿದ್ದ.
ಒಂದು ದಿನ ಪ್ರಣವ್ ಕಾರಿನಲ್ಲಿ ಬರುವಾಗ ಸ್ವಲ್ಪ ಹಿಡಿತ ತಪ್ಪಿ ಅಜ್ಜಿಯೊಬ್ಬರಿಗೆ ಡಿಕ್ಕಿ ಹೊಡೆದುಬಿಟ್ಟ. ಅಜ್ಜಿ ಕೆಳಗೆ ಬಿದ್ದುಬಿಟ್ಟರು. ಅಲ್ಲೇ ಹೋಗುತ್ತಿದ್ದ ನಿಖಿತಾ ಅಜ್ಜಿಯ ನೆರವಿಗೆ ಧಾವಿಸಿದಳು. ಸಧ್ಯ ಎಂದು ಗಾಡಿಯಿಂದ ಇಳಿದ ಪ್ರಣವ್, ಪೆಟ್ಟು ದೊಡ್ಡದೇನೂ ಆಗಲಿಲ್ಲ ಎಂದು ನಿಟ್ಟುಸಿರುಬಿಟ್ಟ ಕಾರಿನಿಂದ ಇಳಿದು ಬಂದ ಪ್ರಣವ್, ``ನೋಡಿಕೊಂಡು ಬರಬಾರದಾ...? ದುಡ್ಡಿಗಾಗಿ ಬೇಕೂ ಅಂತಲೇ ಅಡ್ಡ ಬಂದು ಹೀಗೆ ನಾಟಕ ಆಡ್ತೀರಾ....'' ಎಂದು ಅಜ್ಜಿಯ ಬಳಿ ಕಠೋರವಾಗಿ ಕೇಳಿದ.
ನಿಖಿತಾಗೆ ಎಲ್ಲಿಲ್ಲದ ಕೋಪ ಬಂದಿತು. ಅವಳು ನೇರವಾಗಿ ಅವನ ಬಳಿ ಬಂದು, ``ರೀ ಮಿಸ್ಟರ್, ತಪ್ಪು ನಿಮ್ಮದು! ಅದನ್ನು ಮುಚ್ಚಿಟ್ಟುಕೊಳ್ಳಲು ಹೀಗೆ ಅವರ ಮೇಲೆ ತಪ್ಪು ಹೇಳ್ತೀರಾ....? ನಿಮಗೆ ದುಡ್ಡಿನ ದುರಹಂಕಾರ.....'' ಎಂದು ಅವನೊಂದಿಗೆ ವಾಗ್ವಾದ ಮಾಡಿದಳು.
ಅಲ್ಲಿ ತುಂಬಾ ಜನ ಸೇರಿದರು. ಆಮೇಲೆ ಇನ್ನೂ ಸುಮ್ಮನೆ ದೊಡ್ಡ ರಂಪ ಆಗುತ್ತದೆ ಎಂದು ನೆನೆಸಿದ ಪ್ರಣವ್, ``ಸರಿ ಎಷ್ಟು ಬೇಕಾದರೂ ದುಡ್ಡು ಕೊಡ್ತೀನಿ ಬಿಟ್ಟುಬಿಡಿ,'' ಎಂದ.
ಅದಕ್ಕೆ ಒಪ್ಪದ ನಿಖಿತಾ,``ಗುದ್ದಿ ಅಜ್ಜಿಯನ್ನು ಕೆಳಗೆ ಬೀಳಿಸಿದ್ದೀರಾ.... ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಅವರಿಗೆ ಚಿಕಿತ್ಸೆ ಕೊಡಿಸಿ. ನಂತರ ಅವರನ್ನು ಅವರ ಮನೆಗೆ ಬಿಟ್ಟುಹೋಗಬೇಕು,'' ಎಂದಳು.
ಅದಕ್ಕೆ ಪ್ರಣವ್ ಒಪ್ಪಲಿಲ್ಲ. ಅದಕ್ಕೆ ನಿಖಿತಾ, ``ನೀವು ಒಪ್ಪದೇ ಇದ್ದರೆ ನಿಮ್ಮ ಕಾರಿನ ಮುಂದೆ ಕುಳಿತು ಪ್ರತಿಭಟನೆ ಮಾಡ್ತೀನಿ. ಮುಂದೆ ಹೋಗಲು ಬಿಡುವುದಿಲ್ಲ. ಮೀಡಿಯಾದವರಿಗೆ ಹೇಳ್ತೀನಿ,'' ಎಂದು ಪಟ್ಟುಹಿಡಿದು ಅವನು ಅಜ್ಜಿಯನ್ನು ಕರೆದುಕೊಂಡು ಹೋಗುವವರೆಗೂ ಬಿಡಲಿಲ್ಲ.