ಆಕಸ್ಮಿಕವಾಗಿ ಪ್ರಣವ್ ಮಾಡಿದ ಅಪಘಾತದಲ್ಲಿ ಅವನಿಗೆ ವಿರುದ್ಧವಾಗಿ ನಿಖಿತಾ ಸಂತ್ರಸ್ತರಿಗೆ ಸಹಾಯ ಮಾಡಿ ಕಾರಣವಿಲ್ಲದೇ ಅವನ ದ್ವೇಷಕ್ಕೆ ಗುರಿಯಾದಳು. ಈ ಸೇಡಿನ ಮನೋಭಾವದಿಂದಾಗಿ ಬೇಕೆಂದೇ ಅವಳನ್ನು ಓಲೈಸಿ ಹೇಗೋ ಮದುವೆಯಾದ ಪ್ರಣವ್, ಮುಂದೆ ಅವಳು ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡಿದ. ಅತ್ತೆ ಮನೆಯಲ್ಲಿ ಆದರ್ಶ ಸೊಸೆಯಾದ ನಿಖಿತಾ, ಅವರ ಆದರದಿಂದಾಗಿ ಎಲ್ಲರ ಕಣ್ಮಣಿಯಾದಳು. ಮುಂದೆ ಮಗನನ್ನು ದಂಡಿಸಿದ ಮನೆಯವರು, ಮತ್ತೆ ಅವರಿಬ್ಬರು ಒಂದಾಗುವಂತೆ ಮಾಡಿದರು. ಆದರೆ ಈ ಸಂಗಮ ಕ್ಷಣಿಕವಾಯಿತು. ನಂತರ ಇವರ ಬದುಕಿನ ಭವಿಷ್ಯವೇನಾಯಿತು......?
ಮುಂದೆ ಓದಿ......
ಸೇಡು ತೀರಿಸಿಕೊಳ್ಳುವ ಮನೋಭಾವದಿಂದಲೇ ನಿಖಿತಾಳನ್ನು ಮದುವೆಯಾದ ಪ್ರಣವ್, ಮೊದಲಿನಿಂದಲೂ ಅವಳತ್ತ ದ್ವೇಷ ಸಾಧಿಸತೊಡಗಿದ. ಇದು ಮನೆಯವರಿಗೆ ಗೊತ್ತಾಗಿ ಅವರ ಕೋಪಕ್ಕೆ ತುತ್ತಾದ. ಆದರ್ಶ ಸೊಸೆಯಾಗಿ ನಿಖಿತಾ ಮನೆಯವರ ಮನ ಗೆದ್ದಂತೆ, ನಿಜ ಅರ್ಥದಲ್ಲಿ ಮುಂದೆ ಪತಿಯ ಮನದಲ್ಲಿ ಸ್ಥಾನ ಪಡೆಯಲು ಸಾಧ್ಯವಾಯಿತೇ......? ಅವರ ಅನನ್ಯ ಪ್ರೇಮ ಒಲವಿನ ದಾಂಪತ್ಯಾಯಿತೇ.....?
ಇತ್ತ ನಿಖಿತಾಳಿಗೆ ಪ್ರಣವ್ ಬಗ್ಗೆ ನಿಧಾನವಾಗಿ ಒಲವು ಮೂಡಲಾರಂಭಿಸಿತು. ದಿನ ಕಳೆದಂತೆ ಅದು ಮತ್ತಷ್ಟು ಗಟ್ಟಿಯಾಗತೊಡಗಿತು. ಪ್ರಣವ್ ನನ್ನು ತನ್ನ ಪ್ರೀತಿಯಿಂದ ಗೆಲ್ಲಬಹುದು. ತನ್ನ ಪ್ರೀತಿ ಅವನನ್ನು ಬದಲಾಯಿಸುತ್ತದೆ. ತಾವಿಬ್ಬರೂ ಪ್ರೀತಿಸುತ್ತಾ ಖುಷಿಯಿಂದ ಸಂಸಾರ ಮಾಡಬಹುದು, ಎಂದು ಕನಸು ಕಂಡಳು. ಪ್ರಣವ್ ಕೂಡ ತನ್ನನ್ನು ಪ್ರೀತಿಸುತ್ತಿದ್ದಾರೆ ಅದರಿಂದ ಈಗ ತನ್ನೊಂದಿಗೆ ಚೆನ್ನಾಗಿದ್ದಾರೆ ಎಂದು ಭಾವಿಸಿದಳು.
ಅವರ ಮದುವೆ ವಾರ್ಷಿಕೋತ್ಸವಕ್ಕೆ ಇನ್ನೊಂದು ವಾರವಿತ್ತು. ಅಂದು ಪ್ರಣವ್ ಗೆ ತನ್ನ ಮನದಲ್ಲಿ ಅವನ ಬಗ್ಗೆ ಇರುವ ಪ್ರೀತಿಯನ್ನು ಹೇಳಬೇಕು. ಆಮೇಲೆ ತಾವು ಖುಷಿಯಿಂದ ಇರಬಹುದು. ಪ್ರಣವ್ ತನಗೆ ಏನು ಉಡುಗೊರೆ ಕೊಡಬಹುದು, ಎಂದು ಯೋಚಿಸಿದಳು ನಿಖಿತಾ.
ಒಂದು ದಿನ ಪ್ರಣವ್ ತನ್ನ ಸ್ನೇಹಿತರೊಂದಿಗೆ ಹೋಟೆಲ್ ಗೆ ಹೋಗಿದ್ದಾಗ, ಅವನು ಹಿಂದೊಮ್ಮೆ ಕಾರಿನಲ್ಲಿ ಒಬ್ಬ ಅಜ್ಜಿಗೆ ಗುದ್ದಿದ್ದ ಅಜ್ಜಿಯ ಮಗ ಆತನ ಗೆಳೆಯರೊಡನೆ ಅದೇ ಹೋಟೆಲ್ ಗೆ ಬಂದಿದ್ದ. ಅವನು ಪ್ರಣವ್ ನನ್ನು ಗುರುತಿಸಿ, ಅವನ ಬಳಿ ಬಂದು ಅವನನ್ನು ಮಾತನಾಡಿಸಿ, ``ಅಜ್ಜಿ ಆರಾಮವಾಗಿ ಇದ್ದಾರೆ. ಅಂದಹಾಗೆ ಎಲ್ಲಿ ನಿಖಿತಾ ಮೇಡಂ? ಅವತ್ತು ಅವರು ಇಲ್ಲದೆ ಹೋಗಿದ್ದರೆ ದೊಡ್ಡ ಅನಾಹುತ ನಡೆಯುತ್ತಿತ್ತು. ನೀವು ಕೂಡ ಅರಾಮವಾಗಿ ಜಾರಿಕೊಂಡು ಬಿಡುತ್ತಿದ್ರಿ. ಮೇಡಂ ಧೈರ್ಯ ಮೆಚ್ಚಲೇ ಬೇಕು. ಎಷ್ಟು ಒಳ್ಳೆಯವರು ಅವರು. ಅಂತಹವರು ಲಕ್ಷಕ್ಕೆ ಒಬ್ಬರು. ನೀವು ಅವರನ್ನೇ ಮದುವೆ ಆದಿರಂತೆ. ಮೇಡಂ ನಿಮ್ಮನ್ನು ಅದು ಹೇಗೆ ಒಪ್ಪಿಕೊಂಡರೋ ಏನೋ.....?'' ಎಂದು ಆ ವ್ಯಕ್ತಿ ಹೇಳಿದಾಗ ಪ್ರಣವ್ ಗೆ ತುಂಬಾ ಅವಮಾನವಾಯಿತು.
ಪ್ರಣವ್ ನ ಸ್ನೇಹಿತರೆಲ್ಲಾ ಏನು ಎಂದು ವಿಚಾರಿಸಿದಾಗ ಅಜ್ಜಿಯ ಮಗ ಹಿಂದೆ ನಡೆದ ಘಟನೆಯನ್ನು ಸಂಪೂರ್ಣವಾಗಿ ವಿವರಿಸಿದ. ಅವನ ಸ್ನೇಹಿತರೆಲ್ಲರೂ, ``ನಿಖಿತಾ ಈಸ್ ಸೋ ಗ್ರೇಟ್. ಯೂ ಆರ್‌ಲಕ್ಕಿ!'' ಎಂದರು.